ಕರುಳ ಬಳ್ಳಿಯ ಕಾವ್ಯ ಜಗದ ಕಾಯಿಲೆಗೆ ಮದ್ದಾಗುವ ಬಗೆ

2 years ago

‘ಬಯಲ ಕನ್ನಡಿ ಮತ್ತು ಮನದ ಮಿಂಚು’ ನಾಗತಿಹಳ್ಳಿ ರಮೇಶ ಅವರ ಎರಡನೇ ಕಾವ್ಯಕೃತಿ. ಹದಿನಾರು ವರ್ಷಗಳ ಹಿಂದೆ ಪ್ರಕಟಗೊಂಡ ಅವರ ‘ಸಮುದ್ರ ಮತ್ತು ಮಳೆ’ ಸಂಕಲನದ ನಂತರ ಹೊರಬರುತ್ತಿರುವ ಈ ಕವಿತೆಗಳ ಕಟ್ಟಿನಲ್ಲಿ ಓದುಗರಾದ ನಾವೆಲ್ಲ ಮತ್ತೆಮತ್ತೆ ಮನನ ಮಾಡಿಕೊಳ್ಳಬೇಕಾದ ನೂರಾರು ಸಾಲುಗಳಿವೆ; ಅವೆಲ್ಲವೂ ಮಿಂಚಿನಂತೆ ಸುಳಿದು ಕಳೆದು ಹೋಗುವ ಸಾಲುಗಳಲ್ಲ; ಬದಲಿಗೆ ನಮ್ಮೊಳಗಿನ ದೀಪವನ್ನು ಹೊತ್ತಿಸಿ ಉರಿಯುವಂತೆ ಮಾಡಬಲ್ಲ ಜೀವಪದಗಳು. ಹಾಗಾಗಿಯೇ ನಾನು ಇಲ್ಲಿನ ಕವಿತೆಗಳನ್ನು ‘ಕರುಳ ಬಳ್ಳಿಯ ಕಾವ್ಯ ಜಗದ ಕಾಯಿಲೆಗೆ ಮದ್ದಾಗುವ’ ಪದಗುಚ್ಛಗಳು ಎಂದು ಕರೆಯಲು ಇಚ್ಛಿಸುತ್ತೇನೆ.

ನಾಗತಿಹಳ್ಳಿ ರಮೇಶ ಅವರು ತಮ್ಮ ಮೊದಲ ಸಂಕಲನ ‘ಸಮುದ್ರ ಮತ್ತು ಮಳೆ’ಯಲ್ಲಿ ಅವ್ವನನ್ನೇ ಕೇಂದ್ರೀಕರಿಸಿಕೊಂಡು, ಅವ್ವನನ್ನೇ ದಿಟ್ಟಿಬೊಟ್ಟಾಗಿಸಿಕೊಂಡು ಹಲವು ಪದಗಳೊಂದಿಗೆ ನುಡಿಯಾಡಿದ್ದರು. ಮೊದಲ ಸಂಕಲನದಲ್ಲಿ ಅವ್ವ ಗುಡಿಸಲಿನೊಳಗಿನ ಚಿತ್ರವಾಗಿ ಚಿತ್ರಿಸಲ್ಪಟಿದ್ದಳು. ಆದರೆ ಪ್ರಸ್ತುತ ಸಂಕಲನದಲ್ಲಿ ಅವಳು ಹೊರಗಿನ ಜಗತ್ತಿನೊಂದಿಗೂ ಒಡನಾಡುವವಳಾಗಿ ಕಾಣಿಸಿಕೊಳ್ಳುತ್ತಾಳೆ.

ಯಾರೋ ಕೆತ್ತಿದ ಶಿಲ್ಪದಲ್ಲಿ ನಿನ್ನ ರೂಪ ಕಾಣುವೆ
ಯಾರೋ ಬರೆದ ಕಾವ್ಯದಲ್ಲಿ
ನಿನ್ನ ನುಡಿಸಾಲುಗಳ ಹುಡುಕುವೆ
ಇನ್ಯಾರದೋ ಸ್ಪರ್ಶದಲ್ಲಿ ನಿನ್ನ ತಾಯ್ತನದ ಸುಖವ ಉಣುವೆ
(ಯಾರೋ ಬರೆದ ಚಿತ್ರದಲ್ಲಿ)
– ಹೀಗೆ ರಮೇಶ್ ಅವರು ತಮ್ಮ ಕಾವ್ಯದಲ್ಲಿ ಹೊಸದೊಂದು ವಿಸ್ತಾರವನ್ನು ಈ ಸಂಕಲನದಲ್ಲಿ ಕಂಡುಕೊಂಡಿದ್ದಾರೆ.

ಮೊದಮೊದಲಿಗೆ ಅವರ ಕಾವ್ಯದ ಕೆಲ ಸಾಲುಗಳನ್ನು ಉದ್ಧರಿಸಿ ಕೆಲವು ಮಾತುಗಳನ್ನು ಹೇಳಲು ಬಯಸುವೆ:
ಎಲ್ಲೋ ಬೀಸಿದ ಗಾಳಿಯು
ಇನ್ನೆಲ್ಲೋ ಹಚ್ಚಿದ
ದೀಪವ ಆರಿಸಿದರೆ ಗಾಳಿಯ ಉಸಿರಿಗೇನು ಅರ್ಥ?
(ರೂಪವ ಕಾಣಲು ಹೋದರೆ)
ಡೋಲು ತಮಟೆಯ ಸದ್ದಿನೊಂದಿಗೆ
ಸಾವಿನ ಸದ್ದಡಗಿ
ಉಟ್ಟ ಬಟ್ಟೆಯ ಬಿಚ್ಚಿ
ಇಂಗುವೆವು ನೆಲದೊಳಗೆ ಕಾಣಿರಾ…
(ಗಾಳಿ ಬೆಳಕು ಯಾರ ಸೊತ್ತು)
ಸಾವೆಂಬ ನೆನಪು
ಉಳ್ಳವರ ಉರುಳು
ಈ ಇರುವೆ ಕಾಣದು
ಆ ಸಾವ ನೆರಳು
(ಘಮಲು)
ಕೆಂಪೇರಿದ ನದಿಯ
ಪರಚಿದ ಮೈಯ ಕಂಡವರಾರೋ
ತಳದಿ ಈಸುವ
ಮೀನಿನ ಕಣ್ಣೀರ ಕಂಡವರಾರೋ..
(ತೂಗು ಸೇತುವೆ ಕೆಳಗೆ)
– ಈ ಸಾಲುಗಳನ್ನು ಮೊದಲಿಗೆ ಓದುವ ಓದುಗ ನಾಗತಿಹಳ್ಳಿ ರಮೇಶ ಅವರನ್ನು ‘ವಿಷಾದ ಗೀತೆಯ ಗೀತಕಾರ’ನೆಂಬ ಗುಂಪಿಗೆ ಸೇರಿಸಿಬಿಡಬಹುದು. ಆದರೆ ರಮೇಶ್ ಅವರು ಈ ಎಲ್ಲ ಸಂಕಟದ ಸಂಕಗಳನ್ನೂ ದಾಟಿ ತಾತ್ವಿಕತೆಯತ್ತ ಹೊರಳುತ್ತಾರೆ; ಅದರೊಟ್ಟಿಗೇ ಕಾವ್ಯರೂಪವನ್ನು ಕಾಣಿಸುತ್ತಾರೆ:
ಬಿರುಗಾಳಿ ಬೀಸಿರಲು
ಗುಡಿಸಲು, ಮೆದೆ ಹಾರಿರಲು
ಮರದ ಕೊಂಬೆಯಲಿ ಅಲುಗದೆ ಉಳಿದ
ಪುಟ್ಟ ಜೇನುಮೆದೆ
ನನ್ನೊಳಗಿನ ಶಿವ ಬುದ್ಧ ಅಲ್ಲಾಹು
(ಶಿವ ಬುದ್ಧ ಅಲ್ಲಾಹು)
ಮನುಷ್ಯನ ವಿಕಾರಗಳು ಪ್ರಕೃತಿಗೂ ಅಂಟಿಕೊಂಡರೆ?- ಈ ನೋವು ಕವಿಯನ್ನು ಕಾಡಿದೆ;
ಕಾಡು ಕಡಲು
ತನ್ನ ತಾನೆ ಸಿಂಗರಿಸಿಕೊಂಡರೆ
ನಿಜ ಸೌಂದರ್ಯವು
ಕಳೆಯುವುದಿಲ್ಲವೆ?
(ಹೂತುಹೋದ ಮುಖಗಳು)
‘ಚಂದ್ರನ ಬೆಳಕೆಷ್ಟು ದೂರ?’, ‘ಮುದುಕಿಯಂತಹ ನದಿ ಮುಂಜಾನೆಯಂತಹ ಮುತ್ತಾತ’, ಹೀಗೊಂದು ಸಂಗಿತ ಗಾಥಾ’ದಂತಹ ಕವಿತೆಗಳಲ್ಲಿ ಬೇರೆಬೇರೆ ಆಯಾಮಗಳ ಬದುಕನ್ನು ಮನಗಾಣಿಸಲು ಕವಿ ಯತ್ನಿಸುತ್ತಾರೆ. ಇಂತಹ ದೀರ್ಘ ಕವಿತೆಗಳಲ್ಲಿ ಕುಲಕಥನವಿದೆ, ಪ್ರಕೃತಿಯ ಶೋಕಗೀತೆ ಇದೆ-ಇಲ್ಲೆಲ್ಲ ಕವಿ ತಮ್ಮ ಕಾವ್ಯದ ದಿಕ್ಕುಗಳ ಎಲ್ಲೆ ಹುಡುಕತೊಡಗುತ್ತಾರೆ.

ಒಂದು ವ್ಯಕ್ತಿಚಿತ್ರಣವಾಗಿ ಮಾತ್ರ ಕಳೆದುಹೋಗಬಹುದಾಗಿದ್ದ ‘ಕಾವ್ಯ(ಕ)ಮಂಡಲದ ಗುರು’ ಕವಿತೆ ಮನುಷ್ಯತ್ವವೆಂಬುದು ಅಂತರಂಗದಿಂದ ಬಾನಂಗಳಕ್ಕೆ ಚಾಚಿಕೊಳ್ಳುವ ಹರಹನ್ನು ಹೊಂದಿದೆ.
ಪದಾರ್ಥವ ಕಡೆಗಣಿಸಿ
ಪ್ರಸಾದಕ್ಕೆ ಕೈ ಚಾಚಿ ನಿಂತವರು
` ಸಾಲು ಪಂಕ್ತಿಯಲಿ ಕೊನೆಯವರು
ಚಿನ್ನದ ತಟ್ಟೆಗಿಂತ ಮುತ್ತುಗದ ಎಲೆಯ
ಪ್ರೀತಿಸಿದವರು
– ಎಂಬ ಸಾಲುಗಳು ಅಸಾಮಾನ್ಯ ಚಿಂತಕನೊಬ್ಬ ಶ್ರೀಸಾಮಾನ್ಯರ ಸಾಲಿನಲ್ಲಿ ಕಾಣಿಸಿಕೊಂಡು ಸನ್ಮಾನ್ಯರೆನಿಸಿಕೊಳ್ಳುವ ಘನತೆಯನ್ನು ಸೂಚಿಸುತ್ತವೆ. ಇಂತಹ ದೀರ್ಘ ಕವಿತೆಗಳಲ್ಲಿ ಒಟ್ಟಾರೆ ಬದುಕನ್ನು ಮನಗಾಣಿಸಲು ಹೊರಡುವ ಕವಿ ಪುಟ್ಟಪುಟ್ಟ ಪದ್ಯಗಳಲ್ಲಿ ಹೆಚ್ಚಿನ ಅನುಭವಗಳ ಕಿಡಿ ಹೊಮ್ಮಿಸುತ್ತಾರೆ:
ಹೃದಯ ಬೆಂಕಿಯ ಜ್ವಾಲೆಯಲಿ
ಕಡೆದ ದೋಣಿ ತೇಲಿದೆ
ತೈಲದ ಕಡಲಲ್ಲಿ
ಆ ದಡದಲ್ಲಿ
ಕೈಬೀಸಿ ಕರೆವ ಸಖಿ
ಪುಟ್ಟ ಹೃದಯದೊಳಗೆ ಎದ್ದಿವೆ
ಅಲೆಗಳ ರಂಗೋಲಿ
(ರಂಗೋಲಿ)
ಇದೊಂದು ಪೇಂಟಿಂಗ್ ಮಾದರಿಯ ಪುಟಾಣಿ ಕವಿತೆ. ಆದರೆ ಇದರ ಪರಿಣಾಮ ಓದುಗರ ಹೃದಯವನ್ನು ಜ್ವಲಿಸುವಂತಹುದು.  ಇಂತಹ ಕಿರುಪದ್ಯಗಳಲ್ಲಿಯೇ ನಾಗತಿಹಳ್ಳಿ ರಮೇಶ ಅವರು ಪರಿಣಾಮಕಾರಿ ಸಾಧ್ಯತೆಗಳನ್ನು ತೋರಿಸುತ್ತಾರೆ. ಅಂತಹ ಸಾಧ್ಯತೆಗಳಿಗೆ ಕೆಳಗಿನ ಕವಿತೆಗಳು ಉದಾಹರಣೆಯಂತಿವೆ:
ಹಾಲಾಹಲವನ್ನೆಲ್ಲ ಕುಡಿದ ಶಿವ
ನಂಜುಂಡನಾಗಿಬಿಟ್ಟ
ಹಾಲನ್ನು ತಾಯಂದಿರ
ಎದೆಯೊಳಗೆ ಇಟ್ಟ!
(ಎದೆ ಹಾಲು)
ಪ್ರೀತಿ, ಪ್ರೇಮ, ಕಾಮ, ಸತ್ಯ
ನಮ್ಮೊಳಗಿನ ಜೀವನದಿಗಳು
ಅವುಗಳನ್ನು ನಾವೇ ಸೃಷ್ಟಿಸಿದ
ಪಂಜರಗಳಲಿ ಬಂಧಿಸಿಡಬಹುದೆ?
(ಜೀವನದಿ)
ಬದುಕಲಿ ಕಠಿಣ ಮುರಿವುದು
ಮೆದು ಬಾಳುವುದು.
ಎತ್ತರದ ಮೂಲ ತಗ್ಗಲ್ಲವೆ?
(ತಗ್ಗು)
ಕಣ್ಣೀರಿಲ್ಲದೆ
ದಿವ್ಯ ಕಾಣದು
(ತ್ಯಾಗ)
‘ಮಣ್ಣ ಹಾಳೆಯ ಮೇಲೆ’ ಕವಿತೆಯಲ್ಲಿ
ಮಣ್ಣ ಹಾಳೆಯ ಮೇಲೆ
ಎಳೆದ ಹೂವಿನ ತೇರು
* * * *
ಮರದಲ್ಲಿ ತೂಗಿವೆ ಕೆಂಪು ಹಣ್ಣು
ತಳದಲ್ಲಿ ತೆರೆದಿವೆ ಜಲದ ಕಣ್ಣು
ಕಣ್ಣಲ್ಲಿ ಬಣ್ಣಗಳು ಸೆರೆಸೆರೆಯಾಗಿವೆ
-ಎಂಬ ಹೊಸದೊಂದು ಪ್ರಕೃತಿಗೀತೆಯನ್ನು ಕಟ್ಟಿಕೊಡುತ್ತಾರೆ.
‘ನಿನ್ನ ಹಂಬಲಿಸುವಿಕೆ ಅದೊಂದು ಪ್ರಾರ್ಥನೆ’ ಕವಿತೆಯೊಳಗೆ ಹಲವು ಕವಲೊಡೆದ ಅಂತರಂಗದ ಸೆಳವುಗಳಿವೆ:
ಸಾಗಿದೆ ದಾರಿ
ಹಗಲೊಳಗೆ ತಲೆಯಿಟ್ಟು
ಇರುಳೊಳಗೆ ಕಾಲು ಚಾಚಿ
ಸಾಗಿದೆ ದಾರಿ
ಬಾಯಾರಿ ದಾಹವಾಗಿದೆ
ಇದೆಯಾ ಮೊಲೆ ಹಾಲು?
ಪ್ರೀತಿ ಪ್ರೇಮ ಕಾರುಣ್ಯಕೆ
ತನುವು ತುಡಿವುದು, ಮನವು ಮಿಡಿವುದು
ನಿನ್ನ ಹಂಬಲಿಸುವಿಕೆ ಅದೊಂದು ಪ್ರಾರ್ಥನೆ
ಒಪ್ಪಿಸುವೆ ನಿನಗೆ
ನನ್ನೊಡಲ ಧನ್ಯತೆಯ
-ಇಲ್ಲಿಯ ಪ್ರೇಮಿಯೊಳಗೆ ತಾಯಿಯೂ, ತಾಯಿಯೊಳಗೆ ಪ್ರೇಮಿಯೂ ಏಕೀಭವಿಸಿದ್ದಾರೆ. ಪ್ರಾರ್ಥನೆಯ ನಿವೇದನೆ ಒಳಗಿನದ್ದು ಮಾತ್ರವಲ್ಲ ‘ಹೊರಗೆ ಸಾಗಿರುವ ದಾರಿ’ಯದ್ದೂ ಕೂಡ. ಹಾಗಾಗಿಯೇ ಈ ಕವಿತೆಗೆ ಹಲವು ದಿಕ್ಕಿನ ಸೆಳೆತಗಳಿವೆ.
ಬದುಕು ಮಾಗುವ ಗಳಿಗೆ ಬಲು ನೋವಿನದ್ದು ಎಂಬುದನ್ನು ಕವಿ ಒಳಿತಿನ ಮೂಲಕವೇ ಸಾಧಿಸಬೇಕು ಎಂದು ಬಯಸುತ್ತಾರೆ:
ಓ ಜೀವದ ಜೀವವೇ
ಒಳಿತು ಗಾಲಿಯ ತಿರುಗಿಸು
ಆಲಯವನು ಅರಳಿಸು
ಬಯಲ ಕನ್ನಡಿಯನು
ಗಿಡವಾಗಿಸು, ಮರವಾಗಿಸು
ಹಣ್ಣಾಗಿಸು, ನೆರಳಾಗಿಸು
ಮಾಗಿಸು, ನನ್ನ ಮಾಗಿಸು
(ಓ ಜೀವದ ಜೀವವೇ)
ಇದೇ ಅಂತರಂಗ ಶುದ್ಧಿ; ಇದೇ ಬಹಿರಂಗ ಶುದ್ಧಿ-ಬಸವಣ್ಣನವರ ಪ್ರಸಿದ್ಧ ಸಾಲುಗಳಿವು. ಈ ಸಾಲುಗಳನ್ನು ನೆನಪಿಸುವ ಕವಿತೆ ‘ನಮ್ಮೊಳಗೆ ಸೂರ್ಯನಿಲ್ಲದ ಮೇಲೆ’:
ಈ ಪುಟ್ಟ ಕಣ್ಣುಗಳಲ್ಲಿ
ಸೂರ್ಯನ ಕಾಣುವುದಾದರೂ ಹೇಗೆ?
ನಮ್ಮೊಳಗೆ ಚಂದ್ರನಿಲ್ಲದ ಮೇಲೆ
ಈ ಪುಟ್ಟ ಕಣ್ಣುಗಳಲ್ಲಿ
ಚಂದ್ರನ ಕಾಣುವುದಾದರೂ ಹೇಗೆ?
ಸೂರ್ಯ ಚಂದ್ರ ಗ್ರಹ ತಾರೆಗಳು
ನಮ್ಮೊಳಗೆ ಇಲ್ಲದ ಮೇಲೆ
ನಾವು ಕಾಣುವುದಾದರೂ ಹೇಗೆ ಈ ಪುಟ್ಟ ಕಣ್ಣುಗಳಲ್ಲಿ?
ಇದು ಮತ್ತೆ ಮತ್ತೆ ನಮ್ಮನ್ನು ಅಂತರಗನ್ನಡಿಯಲ್ಲಿ ನೋಡಿಕೊಳ್ಳುವಂತೆ ಮಾಡುವ ಕವಿತೆ.

ಎಂದು ನಮ್ಮೊಳಗಿನ ಮಗುವ ನಗುವ ಮುಗ್ಧತೆ
ಕುತೂಹಲ, ಬೆರಗು, ಸೊಬಗು, ಸೌಂದರ್ಯವ
ಕಳೆದುಕೊಂಡೆವೋ
ಅಂದಿನಿಂದ ನಾವು ಸಾಯುತ್ತಿರುವ ಮನುಷ್ಯರು!
-ಎನ್ನುವ ಸಾಲುಗಳು ನಾವು ಕಳೆದುಕೊಳ್ಳುತ್ತಿರುವ ‘ಮಗುತನದ ಪರಿಣಾಮ ನಮ್ಮದು ಸಾವಿನೆಡೆಗೆ ಹೆಜ್ಜೆ ಎಂಬ ಎಚ್ಚರಿಕೆಯನ್ನು ನೀಡುತ್ತಿವೆ. ಆದರೆ
ನಗು ಮುಗ್ಧತೆ ಬೆರಗು ಸೌಂದರ್ಯ
ಕಣ್ಣ ಕುತೂಹಲಗಳೊಳಗೆ
ಆ ದಿವ್ಯ ಬೆಳಕಿನ ಕುಡಿ ಇದೆ!
ಅದನ್ನೀಗ ನಮ್ಮೊಳಗೆ ಹೊತ್ತಿಸಿಕೊಳ್ಳಬೇಕು!
-ಎಂಬ ಸಾಲುಗಳು ನಾವು ಮರಳಿ ‘ಮಗುತನ’ವನ್ನು ಗಳಿಸಿಕೊಳ್ಳಬಹುದು ಎಂಬುದನ್ನು ಸೂಚಿಸುತ್ತಿವೆ.
ನಾಗರಿಕತೆ
ಎಲ್ಲದಕ್ಕೂ ಹತ್ತಿರವಾಗುವುದರಿಂದ
ಆರಂಭ.
-ಈ ಸಾಲುಗಳು ನಿಜವಾದ ನಾಗರಿಕ ಮನುಷ್ಯನ ‘ಕೂಡುಬಾಳ್ವೆಯ ಮಹತ್ವವನ್ನು ಹೇಳುತ್ತವೆ. ಎಲ್ಲರಿಗೂ, ಎಲ್ಲವಕ್ಕೂ ಹತ್ತಿರವಾಗುವುದು ನಿಜವಾದ ನಾಗರಿಕತೆ ಎಂಬುದನ್ನು ಈ ಸಾಲುಗಳು ಉಸುರುತ್ತವೆ. ಈ ನಾಲ್ಕು ಪದಗಳ ಒಟ್ಟಾರೆ ಆಶಯವೇ ಈ ಸಂಕಲನದ ‘ಕೂಡೋಣ ಕಟ್ಟೋಣ ಬಾಳೋಣ ಬೆಳಗೋಣ’ ಎಂಬ ಧ್ಯೇಯ ಸಾಲುಗಳಾಗಿವೆ.
ಹಾಗೆಂದು ರಮೇಶ್ ಅವರು ಕೇವಲ ಒಳಿತನ್ನೇ ಧ್ಯಾನಿಸುವ, ಆಶಿಸುವ ಭಾವುಕ ಕವಿಯಲ್ಲ. ಸಮಾಜದ ಸುತ್ತಲಿನ ಅನ್ಯಾಯ, ಕಪಟ, ಅಂತರಂಗ-ಬಹಿರಂಗಗಳ ನಡುವಿನ ಸಂಘರ್ಷಗಳನ್ನು, ಕಾರಣವೇ ಇಲ್ಲದೆ ಕುಸಿದು ಬೀಳುವ ಮನುಷ್ಯನ ನೈತಿಕತೆಯನ್ನು, ನೀಚತನವನ್ನು ಹತ್ತಿರದಿಂದ ಬಲ್ಲವ ಅವರು ಅವೆಲ್ಲಕ್ಕೂ ತಮ್ಮ ಕಾವ್ಯದ ಕನ್ನಡಿಯನ್ನು ಒಡ್ಡುತ್ತಾರೆ. ಹಾಗಾಗಿಯೇ ಅವರ ಕಾವ್ಯ ಎಲ್ಲವನ್ನು ಹೊರಗೆಳೆಯುವ ‘ಬಯಲ ಕನ್ನಡಿ’. ಇದಕ್ಕೆ ಉದಾಹರಣೆಯಾಗಿ ಇಲ್ಲಿನ ಹಲವಾರು ಕವಿತೆಗಳ ಸಾಲುಗಳನ್ನು ಗಮನಿಸಬಹುದು:
ಈ ಜಾತ್ರೆಯ ನಡುವೆ
ಹೊಟ್ಟೆಗಿಲ್ಲದ ಬಟ್ಟೆಗಿಲ್ಲದ ಜನ
ಇನ್ನು ಮಲಗಲು ತಾವೆಲ್ಲಿ?
ಬೇಗುದಿಯಲಿ ಬೆಂದವರ ಕಣ್ಣೀರಲ್ಲೇ
ಬಣ್ಣದೋಕುಳಿಯ
ಜಲಕ್ರೀಡೆಯಾಡುವ ಆಸೆ
ಮನೆಯಲಿ ಕುದಿವ ಎಣ್ಣೆಗೆ ಹಾಕಿದ
ಒಗ್ಗರಣೆ ಸಾಸಿವೆ ಚಟಪಟನೆ
ತೆರೆದ ಕಣ್ಣಿಗೆ ಸಿಡಿಯಿತು!
-ಎಂಬಲ್ಲಿ ಶೋಷಕರು-ಶೋಷಿತರು ಮರೆಯಲ್ಲಿಯೇ ಮೋಸವೆಸಗುವ ಕ್ರಿಯೆಯನ್ನು ರಮೇಶ್ ಅವರು ವಿವರಿಸುತ್ತಾರೆ. ಕಾಣದ ಕೈಗಳು ಹೊಟ್ಟೆಗಿಲ್ಲದ, ಬಟ್ಟೆಗಿಲ್ಲದ ಜನರನ್ನು ಮರೆಮೋಸದಲ್ಲಿ ವಂಚಿಸುವ ಪರಿ ಇದು.
ಪ್ರಕೃತಿಯನ್ನು ಇನ್ನಿಲ್ಲದಷ್ಟು ಹಾಳುಗೆಡವುವ, ಪ್ರಕೃತಿಯ ಮೇಲೆ ಮತ್ತೆ ಮತ್ತೆ ಅನ್ಯಾಯವೆಸಗುವ ಮನುಷ್ಯನ ಕ್ರೂರತನ, ಕುರುಡುತನವನ್ನು ಕಂಡು ಕನಲುವ ಪರಿ ಈ ಸಾಲುಗಳಲ್ಲಿದೆ:
ಕಡಲ ತಾಯಿ ಮುಕ್ಕಳಿಸಿದ ಉಗಿತಕ್ಕೆ
ಮುಳುಗಿದವು ನಗರ ಪಟ್ಟಣಗಳು,
ಹಸಿದ ಹೊಟ್ಟೆಪೊಟ್ಟಣಗಳು
ಮೈಕೈಗೆ ಸಿಕ್ಕ ಎಲ್ಲ ಎಲ್ಲವೂ
ಮನುಷ್ಯರು ‘ಸುನಾಮಿ’ ಎಂದೊಂದು ಸತ್ತ ಪದವಿಟ್ಟು
ತಮ್ಮ ನಿಘಂಟಿನಲ್ಲಿ ಬರೆದುಕೊಂಡರು !

ಭೂತಾಯಿಗೆ ರಕ್ತ ಹೀರುವ ಜಿಗಣೆಗಳಂತೆ
ಮೆತ್ತಿಕೊಂಡ ಮನುಜರೇ,
ಒಂದಿಷ್ಟು ಪಿಸುಮಾತುಗಳ ಆಡಲೇಬೇಕಿದೆ.
ಎತ್ತರೆತ್ತರದ ಗಾಜಿನಿಂದ ನೋಡಿದರೆ
ಸಮುದ್ರ ಸೇರುತ್ತಿರುವ ನದಿ.
ಕುಂಟಾಬಿಲ್ಲೆಯಾಡುವ ಹುಡುಗಿ
ಗೆರೆ ನೆಗೆಯಬಹುದಾದಷ್ಟು ಅಗಲದ ನದಿ
ತೆವಳುತ್ತಿದೆ ಬಳಲಿದ ಮುದುಕಿಯಂತೆ;
ಒಳಚರಂಡಿಗಳ ಕಸ, ಜನರ ಹೊಟ್ಟೆಯ ವಿಷ
ವಿಸರ್ಜನೆಗೊಳ್ಳುತ್ತಿವೆ ನದಿಯ ಬಾಯಿಗೆ.
ಕೂದಲುಂಡೆ, ಹೇಲುಂಡೆ, ಸತ್ತ ಜೀರುಂಡೆ
ತೇಲುತ್ತಿವೆ ನದಿಯ ಮೈಮೇಲೆ!
ದುಡಿದುಣ್ಣುವ ಬೀದಿ ಬದಿಯ ಜನರ ಕೇಳುವವರಾರು? ಅವರ ಬದುಕೊಂದು ಮುಳ್ಳಿನ ಮೇಲಿನ ನಿತ್ಯ ನಡಿಗೆಯ ಸೋಜಿಗ. ಇಂತಹ ಜನರನ್ನು ಕಂಡು ಕವಿಹೃದಯ ಮಿಡಿಯುತ್ತದೆ:
ಉರಿವ ಒಡಲ ಕಟ್ಟಿಕೊಂಡು
ದುಡಿಯಲಿಕ್ಕೆ ಹುಟ್ಟಿದೆವು
ಕಲ್ಲು ಮಣ್ಣಿನಲ್ಲಿ ಕರಗಿ
ನಾವು ಭೂಮಿಯಾದೆವು.
ತೋಳು ತೊಡೆಯ ಇಟ್ಟಿಗೆ ಮಾಡಿ
ಮನೆಯ ಕಟ್ಟಿದೆವು
ನೆತ್ತಿಗಿಷ್ಟು ನೆರಳಿಲ್ಲದೆ
ಬೀದಿಯಲ್ಲೇ ಉಳಿದೆವು.
ರೈತರನ್ನು ಕುರಿತ ವಿಷಾದ ಗಾಥೆ’ಯಂತಿರುವ ‘ನೋವುಂಡ ಬಿದಿರು’ ಕವಿತೆ ರೈತಬದುಕನ್ನು ಕಂಬನಿದುಂಬಿದ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ. ಒಣಗಿದ ಬಿದಿರಿಗೆ ರೈತನ ಒಡಲನ್ನು ಉರಿ ಬದುಕನ್ನು ವಿವರಿಸುವ ರಮೇಶ್ ಅವರ ನಿತ್ಯದ ಪಡಿಪಾಟಲನ್ನು ಹೊಸ ಹೊಸ ರೂಪಕಗಳಲ್ಲಿ ತೆರೆದಿಡುತ್ತಾರೆ:
ಮೊದಮೊದಲು ಬಿದಿರಾಗಿ ನೋವುಂಡು ಕೊಳಲಾಗಿ
ಕೊಳಲು ಕದ್ದವರ ಎದೆಯ ಹಾಡಾಗಿರುವೆವು
ನೆಲದ ಆಕಾಶದೊಳಗಿನ ಹೊಲದೊಳಗೆ
ಬೆದರು ಬೊಂಬೆಗಳಾಗಿ ಕಾಯುತ್ತ ನಿಂತಿರುವೆವು
ನಿನ್ನನೇ ತಾಯೇ…
ನಮ್ಮೆದೆಯ ಮರಗಳ ಮೇಲೆ ಹಕ್ಕಿಗಳು ಗೂಡುಗಳ ಹೂಡಿ,
ಸಂಸಾರ ಮಾಡಿಲ್ಲಿ, ಹಲವು ವಸಂತಗಳ ಸಂಭ್ರಮಿಸಿ ಹೋದವು
ಹಗಲಿರುಳು ಮಳೆ ಚಳಿ ಬಿಸಿಲೆನ್ನದೆ ಕಾಯುತ್ತಿರುವೆವು
ನಿನ್ನನೇ ತಾಯೇ…
-ನಿತ್ಯ ನೇಗಿಲ ಗೆರೆಯ ಕೊರೆಯುವ ರೈತರ ಪ್ರಾರ್ಥನೆ ಇದು.
ಒಳಿತುಗಳ ಆಶಯ, ಸಾಮಾಜಿಕ ಕಷ್ಟಗಳ ಕುರಿತ ಕಳವಳ ಇವುಗಳ ಜೊತೆಗೆ ನಾಗತಿಹಳ್ಳಿ ರಮೇಶ ಅವರ ಕವಿತೆಗಳಲ್ಲಿ ಆಧ್ಯಾತ್ಮ, ಅಂತರಂಗದ ಹುಡುಕಾಟವೂ ಇದೆ. ಆಗಾಗ್ಗೆ ಸುಳಿದು ಹೋಗುವ ‘ಮನದ ಮಿಂಚು’ ಓದುಗನಲ್ಲಿ ಹೊಸ ಉದ್ಗಾರಗಳನ್ನುಂಟು ಮಾಡುವಂತಿದೆ. ಬುದ್ಧ ತತ್ವದ ಕಾರುಣ್ಯದ ಜೊತೆಜೊತೆಗೇ ಏಕಾಂತದ ಅನುಭೂತಿಯನ್ನು ಅರಸುವ ಹಂಬಲವೂ ಇಲ್ಲಿನ ಹಲವು ಕವಿತೆಗಳಲ್ಲಿದೆ. ಅಲ್ಲಲ್ಲಿ ಮಿಂಚಿ ಹೋಗುವ ಸಾಲುಗಳು ಓದುಗನನ್ನು ಆಲೋಚನೆಗೆ ಹಚ್ಚುತ್ತವೆ. ಈ ಸಾಲುಗಳಲ್ಲಿ ಆಧ್ಯಾತ್ಮದ ಅರಸುವಿಕೆ, ಅಂತರಂಗದಲ್ಲೇ ಆಗಾಗ್ಗೆ ಲೀನವಾಗುವ ತನ್ಮಯತೆ ಕಂಡುಬರುತ್ತದೆ. ಅಂತಹ ಕೆಲವು ಸಾಲುಗಳು ಇಲ್ಲಿವೆ:
ಜಿಂಕೆಯ ಕಾಲ್ಗಳಲಿ ಹುಲಿಯ ಗುರುತು
ಮನುಜನ ಹೃದಯದಲಿ ನಾಟಿದೆ
ಪರಚಿದ ಗುರುತು.

ನಿಶೆ ಎಲ್ಲ ಹುಡುಕಾಟಗಳ ಕೇಂದ್ರ ಬಿಂದು
ಹುಡುಕಿದ್ದು ಸಹಜವಾದರೂ
ಹುಲಿ ಹುಲ್ಲೆ ಎಂಬ ಎರಡು ಪದಗಳ
ಅಕ್ಷರ ವ್ಯತ್ಯಾಸದಷ್ಷೇ ಹತ್ತಿರ ಆಧ್ಯಾತ್ಮ!

ಒಂದಾನೊಂದು ಕಾಲದಲ್ಲಿ
ಯಾತನಾ ಶಿಬಿರದಲ್ಲಿ ಮಲಗಿದ್ದೆ .
ಈಗ
ನಾ ನಡೆವ ಹಾದಿಗಳಲ್ಲೆಲ್ಲಾ
ತಂಪೆರೆವ ಝರಿಗಳ ಸಾಲು…

ಒಂದೊಂದೇ ಕಡ್ಡಿ, ಪುರಲೆಗಳನ್ನು ಹೆಕ್ಕಿ ತಂದು ಗುಬ್ಬಿ ಗೂಡು ಕಟ್ಟುವ ಹಾಗೆ ತಮ್ಮ ಸಂಕಲನದ ಕವಿತೆಗಳನ್ನು ರಮೇಶ್ ಕಟ್ಟುತ್ತಾ ಬಂದಿದ್ದಾರೆ. ಒಂದು ರೀತಿಯಲ್ಲಿ ಇದು ಕಾವ್ಯವನ್ನು ಅವರು ಧ್ಯಾನಿಸುತ್ತಾ ಬಂದ ಬಗೆ. ಹಾಗಾಗಿಯೇ ಇಲ್ಲಿನ ಸಂಕಲನದಲ್ಲಿ ಮೂರೇ ಸಾಲುಗಳ ಗುಬ್ಬಿ ಗೂಡಿನಂತಹ ಪುಟ್ಟ ಪದ್ಯಗಳಿರುವ ಹಾಗೆಯೇ ನದಿಯ ಹರವಿನಂತಹ ಸುದೀರ್ಘ ಕವಿತೆಗಳು, ಕಾವ್ಯಕಥನಗಳೂ ಇವೆ. ಅಂತೆಯೇ ಇಲ್ಲಿನ ಕವಿತೆಗಳಿಗೆ ಮಗುವಿನ ಪುಟ್ಟ ಅಂಗಾಲಿನ ಕಿಂಚಿತ್ ಸ್ಪರ್ಶದಂತಹ ಮೆದು ಇರುವಂತೆಯೇ ನದಿಯ ಭೋರ್ಗರೆತವೂ ಇದೆ; ಕಳ್ಳಿ ಹಾಲಿನ ಗಟ್ಟಿತನ, ಕಾಡಿನ ಪರಿಮಳ ಇರುವಂತೆಯೇ ಕಟುಮಧುರ ಜೇನಿನ ಒಗರುಸಿಹಿಯೂ ಇದೆ.
ಅಂತೆಯೇ
ಎಲ್ಲೋ ಹುಟ್ಟಿದ ಬಿದಿರು
ಒಣಗಿ ಕೊಳಲಾಗಿ, ನಾದವಾಗಿ
ಅಲೆವುದು ಅನಂತದೆಡೆಗೆ…
ಎಂಬ ನೆಲಮೂಲದ ಆಧ್ಯಾತ್ಮದ ಹುಡುಕಾಟವಿದೆ.

ಇಲ್ಲಿನ ಕವಿತೆಗಳು ಒಂದು ಬಗೆಯಲ್ಲಿ ‘ಜೀವ ಪದಗಳು’ ಕೂಡ. ಇವುಗಳನ್ನು  ʼಹಾಡುತಟ್ಟೆʼಯ ಮೂಲಕ ಆಲಿಸಿದಾಗ ಜೀವಸಂಗೀತದ ದೋಣಿಗೆ ಕಾಲಿಟ್ಟಂತೆ ನೆನಪು. ಎಲ್ಲಿಯೋ ಕಳೆದುಹೋಗಿದ್ದು ಇಂದಷ್ಟೇ ಕೈಗೆ ಸಿಕ್ಕಿದ ʼಅವ್ವʼನ ಕಮಟು ಸೀರೆಯ ಮಡಿಲ ಕನವರಿಕೆ.

ಈ ಜೀವಪದಗಳ ಝಲಕುಗಳನ್ನು ಆಲಿಸುತ್ತಲೇ ಹಿಂದೊಮ್ಮೆ ಈ ಹಾಡುಗಳ ಬಗ್ಗೆ ಗುರುಗಳಾದ ಕಿ.ರಂ. ನಾಗರಾಜ್ ಸಾರ್ ಹೇಳಿದ್ದು ನೆನಪಾಯಿತು. ಸಂಗೀತ ಮಾಂತ್ರಿಕ ಎಸ್. ಆರ್. ರಾಮಕೃಷ್ಣ ʼಅವ್ವʼನ ಜೋಗುಳವನ್ನೇ ಆವಾಹಿಸಿಕೊಂಡಂತೆ ರೂಪಿಸಿದ ರಾಗಗಳನ್ನು ಕೇಳಿದ ಕಿ.ರಂ. ʼಲೋ ನಿಜವಾಗಿಯೂ ರಾಮು ತಪಸ್ಸಿನಂತೆಯೇ ತಾಯಿಲೋಕವನ್ನು ಮರುಸೃಷ್ಟಿಸಿದ್ದಾನೆʼ ಎಂದಿದ್ದರು. ಮತ್ತೆ ಈ ಹಾಡುಗಳನ್ನು ಕೇಳುವಾಗ ಇದು ನಿಜವೆನ್ನಿಸುತ್ತದೆ.

ನಾಗತಿಹಳ್ಳಿ ರಮೇಶ್ ಅವರ ಯಾವತ್ತಿನ ಸ್ಥಾಯಿಧ್ಯೇಯವಾದ ಅವರ ಅವ್ವ ʼನೀಲಗಿರಿ ಪದದ ಕೆಂಪಕ್ಕʼನ ʼಸಪ್ಪೆ ಅನ್ಬೇಡ ಒಂದ್ಕಲ್ ಉಪ್ಪಾಕನ್ನುʼ ಎನ್ನುವ ಮೂರು ಸಾಲುಗಳ ಪದಗಳೊಂದಿಗೆ ಆರಂಭಗೊಳ್ಳುವ ʼಅವ್ವʼನ ಹಾಡುಗಳು ತಾಯಿಯ ಮಮತೆ, ಸಂಕಟ, ಕರುಳ ತುಡಿತ, ದುಡಿತಗಳನ್ನು ನಮ್ಮೊಳಗೆ ಕಳಿಸಲು ಆಲಾಪಿಸುತ್ತವೆ. ಇಲ್ಲಿನ ಹಾಡುಗಳ ಒಂದೊಂದು ಭಾವಗಳೂ ಧ್ವನಿಸುವ ಅರ್ಥಗಳಲ್ಲಿ ಆಳಕಡಲ ವೇದನೆ-ಸಂವೇದನೆ ಇದೆ; ಜೊತೆಜೊತೆಯಲ್ಲೇ ತಾಯಿ ಎನ್ನುವ ಘನಚೇತನದ ನೆನಪುಗಳಿವೆ. ಲಂಕೇಶ್ ತಮ್ಮ ʼಎಲ್ಲಿಂದಲೋ ಬಂದವರುʼ ಚಿತ್ರಕ್ಕಾಗಿ ತಮ್ಮನುಭವದಲ್ಲಿ ಅದ್ದಿ ಬರೆದಂತಹ ʼ ಎಲ್ಲಿದ್ದೆ ಇಲ್ಲಿ ತಂಕ, ಎಲ್ಲಿಂದ ಬಂದ್ಯವ್ವʼ ನೆನಪಾಗುತ್ತದೆ.

ಇಲ್ಲಿನ ಹಾಡುಗಳಲ್ಲಿ ನಾಗತಿಹಳ್ಳಿ ರಮೇಶ್ ಅವರ ಸಾಹಿತ್ಯದ ʼಅಪರಿಚಿತ ದನಿಯೊಂದುʼ ಎಂಬ ಹಾಡು ಕಟ್ಟಿಕೊಡುವ ಜೀವಭಾವತನ್ಮಯತೆ ಅನುಗಾಲ ಕಾಡುತ್ತದೆ. ಎಲ್ಲೋ ಕಳೆದುಹೋದ ಮಗುಜೀವವೊಂದು ಇನ್ನೆಲ್ಲೋ ಕುಂತ ತನ್ನವ್ವನನ್ನು ನೆನೆದು ಗದ್ಗಗಿಸುವ ದಿವ್ಯಚಿತ್ರವೊಂದನ್ನು ಈ ಹಾಡು ಕಣ್ಮುಂದೆ ತಂದು ನಿಲ್ಲಿಸಿದಂತಾಗುತ್ತದೆ.
ಈ ವ್ಯಾಖ್ಯಾನವನ್ನು ಇಷ್ಟಕ್ಕೇ ಸೀಮಿತಗೊಳಿಸಿದರೆ ರಮೇಶ ಅವರ ಕಾವ್ಯ ಗಂಭೀರತೆಯನ್ನು ಮೊಟಕುಗೊಳಿಸಿದಂತಾಗುತ್ತದೆ. ‘ಅವ್ವ’ನ ಆಲಾಪಗಳನ್ನು ಆಲಿಸುತ್ತಲೇ ಆ ಸಂವೇದನೆಯನ್ನು ದಾಟುತ್ತಲೂ ವಿಸ್ತರಿಸುತ್ತಲೂ ಇವೆ ಅವರ ಇತ್ತೀಚೆಗಿನ ಅವರ ಕವಿತೆಗಳು ಎಟುಕಿಸಿಕೊಳ್ಳಲು ಯತ್ನಿಸುತ್ತಿರುವ ದಿಕ್ಕಿನಲ್ಲಿ ಆಧ್ಯಾತ್ಮಿಕ ಮಿಡುಕಾಟ, ತಡಕಾಟ, ಹುಡುಕಾಟಗಳಿವೆ. ಅವರ ಆರಂಭಿಕ ಕವಿತೆಗಳು ಅವ್ವನ ನೆಲದವುಗಳಾದರೆ ಇತ್ತೀಚಿನವು ದಿವ್ಯತನದ ಚಾಚುವಿಕೆಗೆ ಹಂಬಲಿಸುವಂತಹವು. ಈ ನೆಲವನ್ನು, ಈ ಯುಗವನ್ನು ನೂರಾರು ನೆಲೆಗಳಲ್ಲಿ ಪ್ರಭಾವಿಸುತ್ತಿರುವ ಬುದ್ಧ, ಯೇಸು, ಶಿವ, ಅಲ್ಲಾಹು, ಅಲ್ಲಮ, ಬಸವಣ್ಣ-ಇವೇ ಮುಂತಾದ ಕಾರುಣ್ಯಪ್ರಭೆಗಳಿಗೆ ‘ ಜೀವಗನ್ನಡಿ’ ಹಿಡಿಯುವಂತಹವು. ಇದರೊಡನೆಯೇ ನಿಸರ್ಗ ಪ್ರೇಮದ ಸೌಹಾರ್ದ, ಚೆಲುವು, ವಿಸ್ಮಯಗಳನ್ನು ‘ಸಪ್ರೇಮ ಬಿಂಬ’ದ ಮೂಲಕ ಸೆರೆ ಹಿಡಿಯುವಂತಹವು.
ಒಂದು ರೀತಿಯಲ್ಲಿ ಅವ್ವನ ನೆಲವನ್ನೂ ಕಾರುಣ್ಯಪ್ರಭೆಗಳ ಆಕಾಶವನ್ನೂ ಬೆಸೆಯುವ ದಿಕ್ಕಿನಲ್ಲಿ ಬೆಳೆಯುತ್ತಿದೆ ಅವರ ಕಾವ್ಯಮಾರ್ಗ.
ಸಹನೆ, ತಾಳ್ಮೆಯಿಂದ ಕಾವ್ಯ ಕಟ್ಟುವ ನಾಗತಿಹಳ್ಳಿ ರಮೇಶ ಅವರ ಇತ್ತೀಚಿನ ಕವಿತೆಗಳು, ಪುಟ್ಟ ಪುಟ್ಟ ಹೊಳಹುಗಳು ಕನ್ನಡ ಕಾವ್ಯ ಸಂವೇದನೆಗೆ ಹೊಸ ರುಚಿ, ಸ್ಪರ್ಶ, ಗಂಧಗಳನ್ನು ಸೇರಿಸುತ್ತಿವೆ…
ಅವರ ಈ ಕವಿತೆಗಳ ಹಾದಿಯನ್ನೊಮ್ಮೆ ಗಮನಿಸಿದರೆ ಇದು ಅರಿವಾಗಬಹುದು….

ಅವ್ವ
ತನು ಮನದ ಮಿಂಚು
ಅವ್ವ
ಒಡಲೊಳಗಿನ ಕಿಚ್ಚ
ಅಂಗೈಯಲ್ಲಿ ಅಮುಕುತ್ತಾ
ಮಕ್ಕಳಾ
ಹೆತ್ತು ಹೊತ್ತು ಸಾಕಿ ಸಲಹುವಳು
ಬೆಳೆದ ಮಕ್ಕಳು
ಕರುಳ ಬಳ್ಳಿಯ ಕಮರಿಸಿ
ಒಲವ ಮುರಿದು ದೂರ ಸರಿವಾಗ
ಸುಮ್ಮನೆ ನೋಡುತ್ತಾಳೆ
ತನ್ನದೇ ತುಳುಕಿದ ರಕ್ತ ಮಾಂಸದ ತುಣುಕು ದೂರ ಚಿಮ್ಮಿ
ಹೊರ ಹೋಗುತ್ತಿರುವುದನ್ನು
ಕೈ ಚಾಚುತ್ತಾಳೆ
ಆ ಕೈ ಬೆಳೆಯದು
ಮೆಲ್ಲಮೆಲ್ಲನೆ ಹೊಕ್ಕಳ ಸವರುವಳು
ಕಣ್ಣುಗಳಿವೆ ಸುಮ್ಮನೆ
ಬತ್ತದ ಬಾವಿಯಂತೆ
ಸದಾ ನೀರಾಡುತ್ತಾ
ಹರಿಯುತ್ತಿದೆ ಝರಿ
ಅವಳ ಕಣ್ಗಳೀಗ
ಮಂದ ಉರಿವ ಸೊಡರು
ಆ ಮಬ್ಬು ಮುಸುಕಿದ ಬೆಳಕಿನಲ್ಲಿ
ಅಸ್ವಷ್ಟ ಆಕೃತಿಗಳಾಗಿ
ಕಷ್ಟವ ಅಡಮಾನವಾಗಿಸಿ ಕೊಂಡಂತೆ
ಈ ಜಗತ್ತು ಚಲಿಸುತ್ತಿದೆ
ಆದರೂ
ಅವ್ವ
ಒಡಲೊಳಗಿನ ಕಿಚ್ಚ
ಅಂಗೈಯಲ್ಲೇ ಹಿಚುಕುತ್ತಾ
ಹರಿದ ಕರುಳ ಹುರಿಯ ನೋವಿಗೆ
ತನಗೆ ತಾನೆ ಸಂತೈಸಿಕೊಳುವಳು
ಮತ್ತ್ತೆ ಮಕ್ಕಳಾ ಹಡೆವಳು
ಕರುಳ ಕುಡಿಯ ಕಡೆವಳು
ಕೂಡಿ ಕುಣಿವಳು
ಹಾಡಿ ನಲಿವಳು
ಬಾಳು ಬೆಳೆವಳು
ಜಗವ ಬೆಳಗುವಳು
………………………
ನೀನು ಯಾರು ?
ನಾನು ಯಾರು?
ಆ ಕಾಲದಿಂದಲೂ
ಇರುವುದು ನೀನು ನಾನೇ
ಕಡಲು ಮಳೆಹನಿ ಅಳೆಯವುದಾರೂ ಹೇಗೆ?
ನೀರು
ನೀರು ಹರಿದೀತು ಎಲ್ಲಿಗೆ
ಭೂತ ವರ್ತಮಾನದಲಿ ಏನೆಲ್ಲಾ ಹರಿದು ಬಿಟ್ಟಿತು
ನನ್ನ ನಿನ್ನ ನಡುವೆ
ಕಣ್ಣುಗಳ ಜೊತೆ ಜಾಲಾಡುವ ಕನಸು
ನಿಜಕ್ಕೆ ನೈಜತೆಯೂ ಸಿಗುತ್ತಿಲ್ಲ
ಒಳಗೊಳಗೆ ಉಳಿದ ದುಃಖವು
ಕಡಲ ಹರಳು
ಮಳೆಯ ಸೇರಿ ಬೀಳುವುದು
…………………

ನೆಲಕ್ಕೆ ಎಣ್ಣೆಯ ಸುರಿದು
ಉರಿ ಹಚ್ಚಿದಾಗ
ಸಾವಿರಾರು ಹಾದಿಯಲೊಂದು
ದಾರಿಯ ಹಿಡಿದು
ಬದುಕುಳಿಯುವ ಎರೆಹುಳು
ನನ್ನೊಳಗಿನ ಶಿವ, ಬುದ್ಧ, ಯೇಸು,ಅಲ್ಲಾಹು

ಎಳೆಚಿಗುರ ಬೆರಗು
ಹಣ್ಣೆಲೆಯ ಸೊಬಗು
ನನ್ನೊಳಗಿನ ಶಿವ, ಬುದ್ಧ, ಯೇಸು ,ಅಲ್ಲಾಹು
ತಾಯ್ತನದಿ ಜಗವ ಆತುಕೊಳುವ
ಸೂರ್ಯ ಚಂದ್ರಾದಿಯ ಬೆಳಗು
ನನ್ನೊಳಗಿನ ಶಿವ, ಬುದ್ಧ, ಯೇಸು,ಅಲ್ಲಾಹು
ಇವನೀಗ ನನ್ನ ನೆಲಮಯಿ ಶಿವ
ಇವನೀಗ ನನ್ನ ಅವ್ವಮಯಿ ಬುದ್ಧ
ಇವನೀಗ ನನ್ನ ಪ್ರೇಮಮಯಿ ಯೇಸು
ಇವನೀಗ ನನ್ನ ದಯಾಮಯಿ ಅಲ್ಲಾಹು…
…………

ಕಾವ್ಯವನ್ನು ಬೇಟೆಯಾಡುವ ‘ಕಟುಬೇಟೆಗಾರ’ರಿಗಿಂತ ,‘ಕಾವ್ಯ ಬಾಣಸಿಗ’ರಿಗಿಂತ ನಿಜದ ನೆಲೆಗಳನ್ನು, ಕರುಳ ಬಳ್ಳಿಯ ತೇವವನ್ನು, ಕರುಳ ನೋವನ್ನು ನೇವರಿಸಿ ಮದ್ದು ಕೊಡುವ ‘ಕಾವ್ಯಾಲಿಂಗನ ಮೋಹಿ’ಗಳು ಕನ್ನಡ ಕಾವ್ಯದಲ್ಲಿ ಹೆಚ್ಚಾಗಬೇಕಿದೆ. ಅಂತಹ ‘ಮದ್ದು ಕವಿ’ಗಳಲ್ಲಿ ನಾಗತಿಹಳ್ಳಿ ರಮೇಶ ಅವರು ಮೊದಲಿಗರಾಗಿ ನಿಲ್ಲುತ್ತಾರೆ. ಕವಿತೆಯ ಪಯಣ ದಣಿವರಿಯದ ಹಾದಿ, ಅದು ಕಣ್ಣು ಕೋರೈಸುವ ಅಗ್ನಿ ನಕ್ಷತ್ರ, ಕಣ್ಣೆದುರಿಗಿದ್ದರೂ ಕೈಗೆಟುಕದ ದಿವ್ಯಚಿತ್ರ-ಇಂತಹ ಗುಣಗಳ ಕಾವ್ಯದ ನಡೆ ಈ ಸಂಕಲನದ್ದು; ಅದರೆಲ್ಲ ಶ್ರೇಯಸ್ಸು ಪ್ರೀತಿಯ ನಾಗತಿಹಳ್ಳಿ ರಮೇಶ್ ಅವರದ್ದು.

– ಮಂಜುನಾಥ್ ಲತಾ

Leave a Reply