ಕವಿತೆಯನ್ನು ಜೀವದ ತುಣುಕುಗಳೇನೋ ಎಂಬಂತೆ ಎದೆಗೊತ್ತಿಕೊಳ್ಳುವ ನಾಗತಿಹಳ್ಳಿ ರಮೇಶ್ ನನಗೆ ಸಮುದ್ರ ಮತ್ತು ಮಳೆಯ ಕಾಲದಿಂದಲೂ ಗೊತ್ತು. ಗೊತ್ತು ಎನ್ನುವುದು ಪರಿಚಯ ಅನ್ನುವುದಕ್ಕಿಂತ ಸ್ವಲ್ಪ ಮುಂದಿನದ್ದು. ನಾನು ಜಮೀನನ್ನು ಮಾಡಲಿಕ್ಕೆ ಹೊರಟಾಗ ನನ್ನ ಜೊತೆ ನಿಂತು ಏನು ಮಾಡಬೇಕು ಎಂದು ಹೇಳಿದವರು, ನಮ್ಮ ಊರಿಗೂ ಬಂದರು, ಭೂಮಿಯನ್ನು ಬೆರಗಿಂದ ಕಂಡರು. ಕೆಲಸಗಾರರ ಜೊತೆ ಕೆಲಸ ಮಾಡುತ್ತಾ ಅವರೊಂದಿಗೊಂದಾಗಿ ಎಲೆ ಅಡಿಕೆ ಹಾಕಿ ದವಡೆಗೆ ಒತ್ತರಿಸಿಕೊಂಡ ನನ್ನನ್ನು ಚಿತ್ರವಾಗಿಸಿಕೊಂಡವರು. ಹೀಗಾಗಿ ನನ್ನ ಅವರದ್ದು ಮಣ್ಣಿನ ಸಂಬಂಧ.ಹಾಗಾಗಿ ಇದಕ್ಕೆ ಬಹುದೊಡ್ಡ ಅರ್ಥವಿದೆ.
- ಕಲಾಗ್ರಾಮದಲ್ಲಿ ಸ್ಪರ್ಶ ಮಕ್ಕಳ ನಾಟಕೋತ್ಸವ
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
ಎಲ್ಲ ಹುಟ್ಟುಗಳಿಗೂ ಮೂಲ ಭೂಮಿ.ಮಗು ಹುಟ್ಟಿದಾಗ ಮುಷ್ಟಿಯಲ್ಲಿ ಮಣ್ಣಿರುತ್ತೆ ಎನ್ನುತ್ತಾರೆ. ದೇವರು ನಿನ್ನ ಕೈಗಳಿರುವ ಮಣ್ಣನ್ನು ಭೂಮಿಗೆ ಚೆಲ್ಲಿ ನಿನ್ನ ಸಂಬಂಧವನ್ನು ದೀರ್ಘವಾಗಿಸಿಕೋ ಎಂದು ಹಿಡಿಯಲ್ಲಿ ಮಣ್ಣಿರಿಸುತ್ತಾನಂತೆ. ಸತ್ತಾಗ ಅದೇ ಕೈಗಳನ್ನು ಆಕಾಶಕ್ಕೆ ತೋರಿಸಿ ನೀನು ವಹಿಸಿಕೊಟ್ಟ ಕೆಲ ನಿರ್ವಹಿಸಿದ್ದೇನೆ ನೋಡು ಈಗ ನನ್ನ ಕೈಗಳಲ್ಲಿ ಮಣ್ಣಿಲ್ಲ ಎಂದು ಭೂಮಿಯ ಜೊತೆ ಕಳಚಿಕೊಂಡ ಸಂಬಂಧವನ್ನು ದೇವರಿಗೆ ತಿಳಿಸುತ್ತಾನಂತೆ. ಇದೊಂದು ಸೃಷ್ಟಿಯ ಚಕ್ರ. ಮನುಷ್ಯ ಇದರಲ್ಲಿ ಬಾರದೇ ಪೂರ್ಣನಾಗಲಾರ. ಮಣ್ಣಿನಾಳಕ್ಕೆ ಇಳಿದ ಯಾವುದೂ ಮತ್ತೆ ಹೊಸಹುಟ್ಟಿನಿಂದ ಎದ್ದು ಬರುತ್ತದೆ.
ರಮೇಶ್ ಮಣ್ಣ ಸಂಪರ್ಕ ಸಾಧಿಸುತ್ತಲೇ ಬದುಕು ಕಟ್ಟಿಕೊಂಡವರು – ಅವ್ವ ಕನಸಲ್ಲಿ ಬಂದು ಹೇಳಿದಳು ‘ತಳಕಚ್ಚಿರುವ ಈ ಬೆಳೆಯನ್ನು ಹಾಕು, ಫಲ ಬಂದೇ ಬರುತ್ತದೆ, ಬಂದ ಲಾಭದಲ್ಲಿ ಅರ್ಧ ಅಲ್ಲಿ ಕೂಲಿ ಮಾಡ್ದವ್ರಿಗೆ ಹಂಚಿ ಬಿಡು ಬೆಳೆ ನಿನ್ನ ಕೈ ಹಿಡೀತದೆ ‘ಅಂತ.
ಈ ಸಲ ಒಳ್ಳೆ ಲಾಭ ಬಂತು ಎನ್ನುವಾಗ ಮನಸ್ಸಿನಲ್ಲಿದ್ದ ಮಿಂಚು ಕಣ್ಣಿಗೂ ಹಾಯುತ್ತದೆ. ಕವಿತೆ ಬರೆಯುವಾಗ ಇರಲಿ ಮಾತಾಡುವಾಗಲೂ ಉಸಿರನ್ನೇ ಪದಗಳನ್ನಾಗಿಸುವ ಭಾವಜೀವಿ ಹೇಗಾದ ಎನ್ನುವ ಬೆರಗು ನನ್ನನ್ನು ಕಾಡುತ್ತದೆ.
ಹೆಣ್ಣುಗಳಲ್ಲಿ ಮಾತ್ರ ಇರುವ ಈ ತೀವ್ರತೆ ರಮೇಶ್ಗೆ ದಕ್ಕಿದ್ದು ಎಲ್ಲಿಂದ? ‘ನನ್ನವ್ವ ನನ್ನೊಳಗೇ ಇದ್ದಾಳೆ’ ಎಂದುಕೊಳ್ಳುತ್ತಲೇ ಕನಸಿಗೆ ಕಣ್ಣಾಗುವ ಕನಸಿಗೇ ಇನ್ನೊಂದು ಕನಸು ಹುಟ್ಟಿಸಿವ ರಮೇಶ್ ಕೆಡುಕಿನ ನೆರಳೂ ಸೋಕದ ಹಾಗೆ ತಮ್ಮ ವ್ಯಕ್ತಿತ್ವವನ್ನು ಕಾಪಿಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ನನಗೆ ಮಾನವೀಯತೆಯನ್ನು ಮೂಲಧರ್ಮವಾಗಿಸಿಕೊಂಡ ಅವರು ಕವಿತೆಯನ್ನು ಅದಕ್ಕಾಗಿ ದುಡಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಎದೆಯಲ್ಲಿ ಬರೆದ ಪದವಾಗಿ ಕವಿತೆಯನ್ನು ಕಾಣುತ್ತಾರೆ, ಅದನ್ನು ಪದೇ ಪದೆ ನೆನಪಿಸಿಕೊಳ್ಳುತ್ತಾರೆ, ಪಿಸುನುಡಿಯುತ್ತಾರೆ, ಧ್ಯಾನಿಸುತ್ತಾರೆ.
ಸುಮ್ಮನೆ ಕುತೂಹಲದಿಂದ ‘ಸಮುದ್ರ ಮತ್ತು ಮಳೆ’ಯಿಂದ ‘ಬಯಲ ಕನ್ನಡಿ ಮತ್ತು ಮನದ ಮಿಂಚು ‘ಸಂಕಲದ ನಡುವೆ ಯಾವ ಬೆಳವಣಿಗೆ ಇದೆ ಎಂದು ನೋಡಿದೆ. ಅಗಾಧವಾದ ಸಮುದ್ರವನ್ನು ಮತ್ತಷ್ಟು ಅಗಾಧಗೊಳಿಸುವುದು ಮಳೆ. ಮಳೆ ಬಾರದೆ ಹೋದರೆ ಸಮುದ್ರ ಇರುವುದಿಲ್ಲವಾ? ಸಮುದ್ರ ಇಲ್ಲವಾಗಿದ್ದರೆ ಮಳೆ ಬರುತ್ತಿರಲಿಲ್ಲವಾ? ಯಾಕೆ ಹೀಗೆ ಒಂದರ ಪಕ್ಕ ಒಂದನ್ನಿರಿಸಿದ್ದಾರೆ? ಬಯಲ ಕನ್ನಡಿ ಮತ್ತು ಮನದ ಮಿಂಚುವಿನಲ್ಲೂ ಹಾಗೆ – ಬಯಲು ಅಗಾಧ ಮನದ ಮಿಂಚು ಸಂಚಾರಿ ಭಾವ. ಮಿಂಚು ಮತ್ತೆ ಮಳೆಯ ಜೊತೆಯ ಫಲಿತ. ರಮೇಶ್ ಏನನ್ನು ಹೇಳಲು ಹೊರಟಿದ್ದಾರೆ? ಈ ಸಂಕಲನದ ಉಪ ಶೀರ್ಷಿಕೆ’ ಕೂಡೋಣ ಕಟ್ಟೋಣ, ಬಾಳೋಣ ಬೆಳಗೋಣ’ ಎನ್ನುವುದು.
ಕುವೆಂಪು ಹೇಳುವ ಹಾಗೆ ಸಣ್ಣದರಲ್ಲಿನ ಸೌಂದರ್ಯವೂ ಅಗಾಧತೆಯಲ್ಲಿರುವ ಅನಂತತೆಯೂ ಸೇರಬೇಕು. ಹಾಗಾದಾಗ ಮಾತ್ರವೇ ಪೂರ್ಣತ್ವ ದೊರಕುವುದು. ಇಂಥ ಸತ್ಯಕ್ಕೆ ಎದುರಾದವರು, ಒಡಲಲ್ಲಿ ಧರಿಸಿದವರು, ಜೀರ್ಣ ಮಾಡಿಕೊಂಡವರ ಮಾತುಗಳು ಹೇಗಿರುತ್ತವೆ ಎನ್ನುವುದನ್ನು ಕೇಳಬೇಕೆಂದರೆ ರಮೇಶ್ ಅವರ ಕವಿತೆಗಳನ್ನು ಓದಬೇಕು. ಅನಂತಕ್ಕೊಂದು ಭಾಷ್ಯ ಬರೆವ ಹಂಬಲವೊಂದು ಎದ್ದುಕುಳಿತಂತೆ ಮಾತುಗಳು ಸಾಕ್ಷಾತ್ಕರಗೊಳ್ಳುತ್ತವೆ.
ಹಸಿದವನಿಗೆ ಬೇಕಿರುವುದು ಊಟ – ಚಳಿಯಲ್ಲಿ ನಡುಗುವವನಿಗೆ ಹೊದ್ದಿಕೆ. ಎರಡೂ ಮನುಷ್ಯನನ್ನು ಒಳ್ಳೆಯ ನಿದ್ದೆಯತ್ತ ಒಯ್ಯುತ್ತವೆ ಎನ್ನುವ ಅರಿವು ಗಾಢವಾದ್ದರಿಂದಲೇ ಎದೆ ಹಾಲ ಕುಡಿಸಿದ ತಾಯಿ ಜಗತ್ತಿನ ಸುಕ್ಷೇಮಕ್ಕಾಗಿ ಎಲ್ಲ ಹೆಣ್ಣುಗಳನ್ನೂ ತಾಯಿಯಾಗಿಸುತ್ತಾಳೆ. ಆದ್ದರಿಂದಲೇ ಈ ಕವಿತೆಗಳು ನೆಲದ ಬದುಕಿನ ಕಥೆಗಳು.
ಕವಿತೆ ಅವ್ವ ಕಟ್ಟಿದ ಜೋಕಾಲಿ. ಜೋಕಾಲಿಯಲ್ಲಿ ಮಲಗಿದ ಶಿಶುವಿಗೆ ಮೋಡಗಳು – ದೈವ ಹಿಡಿದ ಗಾಳಿಪಟ ಅದು – ಒಟ್ಟುಗೂಡುವಾಗಲೇ ಕಮ್ಮಾರ ನೇಗಿಲ ಕುಳವನ್ನು ಮಾಡುತ್ತಾನೆ. ನೆಲದ ಮೇಲೆ ಗೆರೆಯಾಗಿ ಮೂಡಿ ಅದರರೊಳಗೆ ಕಾಳುಬಿದ್ದು ಗಿಡವೊಂದು ಹುಟ್ಟುತ್ತದೆ. ಹಾಗೆ ಸಮುದ್ರದಲ್ಲಿ ಭೋರ್ಗರೆವ ನೀರು ಕವಿಯೊಳಗೆ ಜರಿಯಾಗಿ ಮರುಹುಟ್ಟು ಪಡಕೊಳ್ಳುತ್ತದೆ.
ಮತ್ತದು ಸಮುದ್ರವನ್ನು ಸೇರಲೇ ಬೇಕು. ಅಲೆ ಅಲೆಯಾಗಿ ಸಮುದ್ರದೆಯ ಮೇಲೆ ಮೊರೆಯಲೇ ಬೇಕು ಇಡೀ ಜಗತ್ತು ಹೀಗೆ ಅಭಿನ್ನವಾಗುತ್ತ ಹೋಗುತ್ತದೆ ಎನ್ನುವುದನ್ನು ತಮ್ಮ ಮಾತುಗಳಲ್ಲಿ ಕವಿತೆಯ ಬಗೆಗೆ ಹೇಳುತ್ತಾ ಬರೆದುಕೊಳ್ಳುತ್ತಾರೆ. ನರಸಿಂಹಸ್ವಾಮಿಯವರು ಕಾವು ಬೆಳಕಾದಾಗ ಕವಿತೆ ಹುಟ್ಟುತ್ತದೆ ಎಂದರೆ, ರಮೇಶ್ ಹಿಮಗರ್ಭದಲ್ಲಿ ಸುತ್ತಿಟ್ಟ ಬೆಂಕಿ, ಅದು ಸರಿಯಾದ ಓದುಗ ಸಿಕ್ಕರೆ ಪ್ರಕಟವಾಗುತ್ತದೆ ಎನ್ನುತ್ತಾರೆ. ಹೀಗೆ ತನ್ನ ಪರಂಪರೆಯ ಕವಿಗಳ ಮಾತುಗಳಿಗೆ ಇನ್ನೊಂದೆ ಮಾತನ್ನು ಕಟ್ಟುತ್ತಾ ಮೂರ್ತಕ್ಕಿಳಿಸುತ್ತಾರೆ.
ಒಟ್ಟು ನೂರಾ ಹನ್ನೊಂದು ಪದ್ಯಗಳಿರುವ ಈ ಸಂಕಲನದಲ್ಲಿ ಎರಡು ಭಾಗಗಳು – ಬಯಲ ಕನ್ನಡಿ ಒಂದು, ಇನ್ನೊಂದು ಮನದ ಮಿಂಚು. ಬಯಲ ಕನ್ನಡಿ ಶೀರ್ಷಿಕೆಯ ಕೆಳಗೆ ‘ತಡವುತ್ತಾ’ ಎನ್ನುವ ಉಪಶೀರ್ಷಿಕೆಯನ್ನು ಕೊಡುತ್ತಾರೆ. ಬಯಲ ಕನ್ನಡಿಯನ್ನು ಸ್ಪರ್ಷಿಸುವುದು ಅಸಾಧ್ಯ ಎಂದಾಗ ಅದನ್ನು ನೇವರಿಸುವುದು ಹೇಗೆ? ಆದರೆ ಕವಿಯ ಹಂಬಲ ಎಲ್ಲವನ್ನು ತನ್ನ ಸ್ಪರ್ಷದ ಸುಖಕ್ಕೆ ದಕ್ಕಿಸಿಕೊಳ್ಳಬೇಕೆನ್ನುವುದು. ಆದ್ದರಿಂದ ಮನೆಯ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳಲು ಇಷ್ಟವಿಲ್ಲದೆ ಸದಾ ಜೀವಂತವಿರುವ ಕೆರೆಯ ಮೊರೆ ಹೋಗುತ್ತಾ, ತಾನು ಈ ನಿಸರ್ಗದಲ್ಲಿ ಒಂಟಿಯಲ್ಲ, ತನ್ನೊಡನೆ ಇರುವ ಎಲ್ಲ ಜೀವರಾಶಿಗಳ ಜೊತೆ ಇರುವ ಸೌಖ್ಯಭಾವವನ್ನು ಅನುಭವಿಸುತ್ತಾರೆ. ಹಾಗೆ ಗೋಡೆಗಂಟಿದ ಕನ್ನಡಿಯ ಸೀಮಿತತೆಯನ್ನು ಮೀರುತ್ತಾರೆ. ಮರಕ್ಕೆಲ್ಲಿದೆ ಗೂಡು ಎನ್ನುತ್ತಾ ಜೀವಕಾರುಣ್ಯವನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಸ್ವರ್ಗದಲ್ಲಿ ಜೀವಂತಿಕೆ ಇಲ್ಲ ಅದು ಬೇಡವೇ ಬೇಡ ಎನ್ನುತ್ತಾ ಮತ್ತೆ ಮಣ್ಣಿನ ಕಡೆಗೆ ಹೊರಳುತ್ತಾರೆ. ಇದನ್ನೆ ಮತ್ತೆ ಧರ್ಮಕ್ಕೂ ವಿಸ್ತರಿಸುತ್ತಾರೆ. ಮಾನವತೆ ಸತ್ತಾಗಲೆಲ್ಲಾ ಶಿವ, ಏಸು, ಬುದ್ಧ, ಅಲ್ಲಾಹು ಹುಟ್ಟಿ ಬರುತ್ತಾರೆ. ನೆಲದಲ್ಲಿ ಎರೆಹುಳು ತನ್ನ ಹಾದಿಯ ಹಿಡು ಉಳಿವಂತೆ ಮಾನವತ್ವವನ್ನು ಉಳಿಸುತ್ತಾರೆ. ಇಲ್ಲಿ ಬರುವ ಎರೆಹುಳು ಮಣ್ಣ ಫಲವತ್ತತೆಯ ಸಂಕೇತವೇ ಆಗಿದೆ. ಯಾರು ತನ್ನನ್ನು ತಾನೇ ಗೆದ್ದು ದಾಸ್ಯದ ಅರಿವಿಂದ ಬದುಕನ್ನು ಮುಕ್ತಗೊಳಿಸಿಕೊಳ್ಳುವವ ಕವಿಯ ಪಾಲಿನ ದೈವವಾಗುತ್ತಾನೆ. ಸಮಾನತೆಯ ಕನಸು ಕಾಣುತ್ತಲೇ ಪ್ರಕೃತಿಗೆ ದಕ್ಕಿದ ಸ್ಥಿತಿ ನಮಗೆ ದಕ್ಕುವುದು ಯಾವಾಗ? ಎನ್ನುವ ಗಾಢ ವಿಷಾದಕ್ಕೆ ಒಳಗಾಗುತ್ತದೆ. ಬಣ್ಣವಿಲ್ಲದ ಸಹಜ ಚೆಲುವಿಕೆಯಲ್ಲಿ ಅರಳಿ ಬಾಳಬೇಕಿರುವ ಜರೂರತ್ತುಗಳನ್ನು ಹೇಳುತ್ತಾರೆ. ಮನುಷ್ಯತ್ವ ಮರೆತ ಜಗತ್ತು ತಮಗಾಗಿ ದುಡಿದವರಿಗೆ ಕನಿಷ್ಠ ಬದುಕನ್ನೂ ಕೊಡದ ತಾರತಮ್ಯದಲ್ಲಿ ಉಳಿದದ್ದನ್ನು ವ್ಯಂಗ್ಯವಾಡುತ್ತಾರೆ. ಬೆವರಿಂದ ಹುಟ್ಟಿದ ಮೋಡ ಭೂಮಿಯನ್ನು ಹಸನುಗೊಳಿಸುತ್ತವೆ. ಬೆವರು ಗಟ್ಟಿಗೊಳಿಸಬೇಕಾದ ಸಂಬಂಧದ ಉಪ್ಪನ್ನು ಮರೆತುಬಿಡುತ್ತದೆ. ಸ್ವಾರ್ಥಪರತೆಯನ್ನು ದಾಟದೆ ಹೊಸಜಗತ್ತನ್ನು ಕಟ್ಟಲಾಗದು. ಅದಕ್ಕೆ ಶಿವನ ದೈವದಂಥಾ ಕಣ್ಣುಬೇಕು ಎನ್ನುವ ಆಶಯದಲ್ಲಿ ಪ್ರಕಟವಾಗುತ್ತದೆ.
ಎರಡನೆಯ ಭಾಗದಲ್ಲಿ ಮಣ್ಣ ಜೀವಗಳಾದ ನಮ್ಮನ್ನು ಸೆಳೆವ ಅನಂತ ಶಕ್ತಿಯೊಂದರ ಹುಡುಕಾಟ ಕಾಣುತ್ತದೆ. ಹಾಲಾಹಲವನ್ನೆಲ್ಲಾ ಕುಡಿದ ಶಿವ ನಂಜುಂಡನಾದ. ಆದರೆ ಅವನ ಪಾಲನೆಯ ಗುಣ ಎಲ್ಲಿದೆ ಎಂದರೆ ಹಾಲನ್ನು ತಾಯಂದಿರ ಎದೆಯಲ್ಲಿ ಇಡುವಲ್ಲಿ. ಭೌತಿಕವಾದ ಸಂಗತಿಗಳಿಗೆ ಈ ದೇಹ ಹೊಂದಿಕೊಂಡಿದೆ. ಆದರೆ ತಾನ್ಯಾರು ಎನ್ನುವ ಅರಿವು ಮೂಡದೆ ಪ್ರಾರ್ಥನೆಯಂಥಾ ಅನೇಕ ಸಂಗತಿಗಳಿಗೆ ಕಾರಣ ಆಗುವುದು ಸಾಧ್ಯವೇ ಇಲ್ಲ. ಇಷ್ಟೆಲ್ಲಾ ಆಗಿಯೂ ಸಾವೆನ್ನುವುದು ತಮ್ಮದೇ ಉಸಿರಿನ ರೆಕ್ಕೆಗಳನ್ನು ಬಿಚ್ಚುವ ಗರುಡ ಸರ್ಪವ ಹೊತ್ತೊಯ್ಯುವಂತೆ ಹೊತ್ತೊಯ್ಯುತ್ತದೆ. ಆದರೆ ಮತ್ತೆ ಪ್ರಾರ್ಥನೆ ಇದು ಸಹಜವೇ. ಆದರೆ ಈ ಹುಟ್ಟು ಸಾವಿನ ಮಧ್ಯೆ ಕರುಣೆಯ ಬುತ್ತಿಯಲ್ಲಿ ಎಲ್ಲರಿಗೂ ಒಂದೊಂದು ತುತ್ತು ಸಿಗಲಿ ಎನ್ನುವ ಆಪೇಕ್ಷೆ.
ಪ್ರತಿಯೊಂದರಲ್ಲೂ ದೈವತ್ವದ ಕನಸನ್ನು ಕಾಣುತ್ತಾ ಅನೇಕ ಸಂಗತಿಗಳ ಜೊತೆ ಆಡುತ್ತಾ ಮಾತಾಡುತ್ತಾ ಸಾಗುವ ನಾಗತಿಹಳ್ಳಿ ರಮೇಶ್ ಗೆ ಜಗದ ಒಳಿತಿಗಾಗಿ ಪ್ರಾರ್ಥಿಸುವುದರಲ್ಲಿ ನಂಬಿಕೆ ಹೆಚ್ಚು. ಮಂಜಿನ ಚಾಕುವಿನಲ್ಲಿ ಚುಚ್ಚಿ ವಿದ್ರೋಹದ ಸಂಗತಿಗಳಿಗೆ ಗುರುತೂ ಉಳಿಸದ ಮನುಷ್ಯನ ಕ್ರೂರತ್ವವನ್ನು ವಿರೋಧಿಸುತ್ತಲೇ, ಇಡೀ ಸೃಷ್ಟಿ ದೈವದ ಸೃಷ್ಟಿ ಜಗತ್ತಿನ ಎಲ್ಲವೂ ದೈವದ ಕಂದ. ಇಂಥಾ ಬೆರಗಿಗೆ ಕಾರಣೀಭೂತವಾದ ಆ ಬೆಳಕಿನ ಬೀಜವನ್ನು ಹುಡುಕುತ್ತಾ ದಣಿವರಿಯದೆ ಕವಿತೆಗಳ ಜೊತೆ ಪಯಣಿಸುತ್ತಾರೆ. ಒಳಿತಿನ ಬೆಳಕು ನೀನಾಗು ಎನ್ನುತ್ತಾ ಜಗತ್ತನ್ನು ಒಳಿತಿನ ಜೊತೆ ಕೊಂಡೊಯ್ಯುವತ್ತ ಸಾಗುತ್ತಾರೆ.
ನೂರಾ ಹನ್ನೊಂದು ಪದ್ಯಗಳಲ್ಲಿ ಕೆಲವು ಪುನರಾವರ್ತನೆ, ಬಿಡಬಹುದಿತ್ತು ಅನ್ನಿಸುತ್ತದೆ. ಆದರೆ ಮೊದಲ ಪದ್ಯದಲ್ಲಿ ಕಂಡ ನಿಷ್ಠೆ ಕೊನೆಯವರೆಗೂ ಉಸಿರಿನ ಹಾಗೆ ಹಿಡಿದು ಬಿಡುತ್ತಾ ಕಾವ್ಯಗಂಧವನ್ನು ಹರಡುತ್ತದೆ. ಕೆಲ ರೂಪಕಗಳು ಉಪಮೆಗಳನ್ನು ಹೊಸದಾಗಿ ಕಟ್ಟುತ್ತಾರೆ. ಇರುವೆಗೆ ಇಕ್ಕಳವ ಹಿಡಿದರೆ ಹರಿವ ನೀರಾಗಿತ್ತು ಎನ್ನುವ ಉಪಮೆ ಹೊಸದೆನ್ನಿಸುತ್ತದೆ, ಮುದುಕಿಯಂಥ ನದಿ ಮುಂಜಾವಿನಂಥ ಮುತ್ತಾತ ಎಂದು ಆಪ್ತವಾಗುವ ಜಾಡನ್ನು ಸೃಷ್ಟಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಗಾಢವಾದ ಅನುಭವವನ್ನು ನೀಡುತ್ತಾ ಪುಸ್ತಕವನ್ನು ಮುಚ್ಚುವಾಗ ನಾಗತಿಹಳ್ಳಿರಮೇಶರ ಜಗತ್ತಿನಲ್ಲಿ ನಾವೂ ಒಂದಾಗುತ್ತೇವೆ. ಓದುಗ ಮತ್ತು ಕವಿ ಒಂದಾಗುವ ಈ ಕ್ಷಣ ಮತ್ತೊಂದು ಒಳಿತಿಗೆ ಕಾರಣವಾಗುತ್ತದೆ. ಓದಿನ ಸುಖಕ್ಕಾಗಿ ನಾಗತಿಹಳ್ಳಿ ರಮೇಶರಿಗೆ ನನ್ನ ನಮಸ್ಕಾರಗಳು.
– ಡಾ.ಪಿ.ಚಂದ್ರಿಕ, ಕವಯಿತ್ರಿ




