ಕಳೆದ ಕಾಲದ ಮಿಂಚುಗಳನ್ನು ಹಿಡಿಯುತ್ತಾ

1 year ago

ನಾಗತಿಹಳ್ಳಿ ರಮೇಶ್ ಅವರು ಬಹುಕಾಲದ ನಂತರ ‌’ಬಯಲ ಕನ್ನಡಿ ಮತ್ತು ಮನದ ಮಿಂಚು’ ಎಂಬ ಹೊಸ ಸಂಕಲವನ್ನು ಪ್ರಕಟಿಸುತ್ತಿದ್ದಾರೆ.  ಒಂದೆರಡು ಮಾತುಗಳನ್ನು ಬರೆಯುವಂತೆ ಅವರಿಂದ ಕರೆ ಕೂಡ ಬಂದಿತ್ತು.  ಇತ್ತೀಚೆಗೆ ಮುನ್ನುಡಿ, ಬೆನ್ನುಡಿಗಳೆಂದರೆ ಕನಸಿನಲ್ಲೂ ಬೆಚ್ಚಿ ಬೀಳುವ ಮನಸ್ಥಿತಿ ನನ್ನದಾಗಿದೆ. ಇದರ ನಡುವೆಯೂ ಅವರ ಪ್ರೀತಿ ತುಂಬಿದ ಮಾತುಗಳನ್ನು ನಿರಾಕರಿಸಲಾಗದೆ ಸೋತು ನಾಲ್ಕು  ಸೊಲ್ಲುಗಳನ್ನು  ಬರೆಯುತ್ತಿದ್ದೇನೆ.

ಕವಿತೆ ಎನ್ನುವುದು ಕಾಮಧೇನುವಲ್ಲ, ಕಲ್ಪವೃಕ್ಷ ಮೊದಲೇ ಅಲ್ಲ. ಚಳಿಯಿಂದಾಗಿ ಹಿಮಗಟ್ಟುವ, ಬಿಸಿಲೇರಿದಾಗ ಕರಗಿ ನೀರಾಗುವ ಮನಸ್ಥಿತಿ  ಅದರದಲ್ಲ. ಯಾಕೆಂದರೆ ಕೇವಲ‌ ಪದಗಳ ರಾಶಿ, ಕೇವಲ‌ ಮಾತುಗಳ ಸುರಿಮಳೆ, ಗದ್ಯವನ್ನು ಮುರಿದುಕಟ್ಟಿ ಪದ್ಯವಾಗಿಸುವ ಕೆಲಸ‌ ಕವಿತೆಯನ್ನು ಕಟ್ಟಿಕೊಡಲಾರದು. ‘ಕಟ್ಟುವುದು’ ಎನ್ನುವ ಪದವನ್ನು‌ ಮತ್ತೆಮತ್ತೆ ಬಳಸುತ್ತಿರುತ್ತೇವೆ. ಅದಕ್ಕೆ ವಿರೋಧಿ ಪದವನ್ನಾಗಿ ‘ಒಡೆಯುವುದು’  ಎಂಬುದನ್ನು ಬಳಸುತ್ತಿರುತ್ತೇವೆ. ಕಟ್ಟುವುದು ಸೃಜನಶೀಲವಾದ ಪದ. ದ್ವಂಸಗೊಳಿಸುವುದು, ಕೆಡವುವುದು ಇವು ಮನುಷ್ಯ ವಿರೋಧಿ ಪದಗಳು. ದೇಶ ಕಟ್ಟುವುದು, ಮನೆ ಕಟ್ಟುವುದು- ಇಲ್ಲೆಲ್ಲಾ‌ ಈ ಪದ ಕೂಡಿಸುವುದು ಎನ್ನುವ ಸಾಮಾನ್ಯ ಅರ್ಥಕೊಡುತ್ತದೆ. ಕವಿತೆಯ ರಚನೆಯೂ ಅಷ್ಟೆ. ಕೇವಲ ಹೇರಳವಾದ ಪದಗಳನ್ನು ರಾಶಿರಾಶಿ ಬಳಸಿ ಅದು ಹೇಳಬೇಕಾದದನ್ನು ಹೇಳದೆ ಹೋದರೆ ಏನು ಪ್ರಯೋಜನ. ಬರೆದ ಕವಿತೆ ಮೊದಲು  ಬರೆದ ಕವಿಗೆ ಖುಷಿ ಕೊಡಬೇಕು. ತಾನು ಹೇಳಬೇಕಾದುದನ್ನು  ಹೇಳಲು ಸಾಧ್ಯವಾಗಿದೆ, ಅದಕ್ಕಾಗಿ ಬಳಸಿಕೊಂಡ‌ ಎಲ್ಲಾ ಲೌಕಿಕ  ಸಾಮಗ್ರಿಗಳು ಸಹ ತನ್ನ ತೆಕ್ಕೆಗೆ ಒದಗಿ ಬಂದಿದೆ ಎಂಬ ಪೂರ್ಣತೆಯ ಭಾವ ಬರೆದಾದ ಮೇಲೆ‌ ಮೂಡಬೇಕು.

ಇತ್ತೀಚೆಗೆ ಕವಿತೆ ಓದುವುದೇ ಪ್ರಯಾಸದ ಕೆಲಸ ಎನ್ನುವ ಬಂಧನದ ಭಾವ ಕಾಡುತ್ತಿದೆ. ಹೀಗಾಗಿ ಬರೆವ ಕವಿಗೆ ಹುಡುಕಾಟವಿದ್ದಂತೆ ಓದುವ ಓದುಗರಿಗೆ ಸಹ ಹೊಸದರ ನಿರೀಕ್ಷೆಯಿರುತ್ತದೆ. ಇದು ಸಿಗಲಿಲ್ಲವೆಂದರೆ ಅದೊಂದು ವ್ಯರ್ಥದ ಓದಾಗಿ ಪರಿಣಮಿಸುತ್ತದೆ.

ನಾಗತಿಹಳ್ಳಿ ರಮೇಶ್ ಅವರ ‘ಸಮುದ್ರ ಮತ್ತು ಮಳೆ‌’ ಎಂಬ  ಹಿಂದಿನ ಸಂಕಲವನ್ನು‌ ಓದಿದ್ದೆ. ಅದೊಂದು ಮೇಲೆ ಹೇಳಿದ‌ ರೀತಿಯ ಕಟ್ಟುವ ಅನುಭವ ಒದಗಿಸುವ ಸಂಕಲನ. ಅವ್ವನನ್ನು‌ ಕುರಿತು ಎಷ್ಟು  ಹೇಳಿಕೊಂಡರೂ‌ ಸಾಲದು ಎನ್ನುವ ರೀತಿಯ ಸಂಕಲನವದು. ‘ನನ್ನವ್ವ ‘ ಎಂಬ ಎರಡು ಭಾಗಗಳಲ್ಲಿ ಬರೆದ ಒಂದು ಒಳ್ಳೆಯ ಕವಿತೆಯದು.

ಆವಳಿಲ್ಲದ ವೇಳೆ ಅವಳದೇ ಚಿಂತೆ
ನದಿಬಿಟ್ಟು ತಾಯಮೀನು
ಎತ್ತ ಈಜುವುದೋ ಏನೋ
ಅಂದುಕೊಳ್ಳುವಷ್ಟರಲ್ಲಿ ಮತ್ತೆ ಅವಳು ಕಣ್ಮುಂದೆ
                                              – ಅವ್ವ-2

ಅವ್ವನನ್ನು ಕುರಿತಾದ ಇಂತಹ ಹಲವಾರು ಒಳ್ಳೆಯ ಸಾಲುಗಳು  ಈ ಎರಡೂ ‘ಅವ್ವ’ನೆಂಬ  ಕವಿತೆಗಳಲ್ಲಿವೆ. ಇದೇ ಅವ್ವ ಸಮುದ್ರ ಮತ್ತು ಮಳೆಯಲ್ಲಿ ಸಂಕಲದಲ್ಲಿ ‘ಸಪ್ಪೆ ಅನಬ್ಯಾಡ ಒಂದ್ಕಲ್ ಉಪ್ಪಾಕನ್ನು ‘ ಎನ್ನುವ ತಾಯಿ ಈ ಹೊಸ ಸಂಕಲನ ‘ಬಯಲ ಕನ್ನಡಿ ಮತ್ತು ಮನದ ಮಿಂಚು’ವಿನಲ್ಲಿ ವಿಶ್ವಮಾತೆಯಾಗಿ ಬದಲಾಗಿದ್ದಾಳೆ.
‘ಕೂಡೋಣ ಕಟ್ಟೋಣ
ಬಾಳೋಣ ಬೆಳಗೋಣ ,
ಹೀಗೆ ಕವಿತೆ ವೈಯಕ್ತಿಕತೆಯನ್ನು ದಾಟಿ ಸಾರ್ವತ್ರಿಕತೆಯೆಡೆಗೆ ಸಾಗಲೇಬೇಕು.

ಲಿಂಗಭೇದವಿಲ್ಲದೆ ಜಗದ ತಾಯಂದಿರು
ಆತುಕೊಂಡರು ತಾಯೇ….
ತಾಯ್ತನವ ಕಂಡೆನವ್ವ ಕಂಡೆ… ಕಂಡೆನವ್ವ ಕಂಡೆ
ಹೆಣ್ಣಲ್ಲೂ ಕಂಡೆ ತಾಯ್ತನವನು
ಗಂಡಲ್ಲೂ ಕಂಡೆ ತಾಯ್ತನವನು
                   – ಅವ್ವನ ಕಾಣ್ಕೆ

ಹೆಣ್ಣಿನಲ್ಲಿರುವ ತಾಯ್ತನವನ್ನು ಮಾತ್ರವಲ್ಲ  ಗಂಡಿನಲ್ಲೂ ಇರಬಹುದಾದ ತಾಯ್ತನವನ್ನು ಗುರುತಿಸುವ ಪರಿ ಹೊಸದು. ನಾಗತಿಹಳ್ಳಿರಮೇಶ್ ಅವರ ಕಾವ್ಯದ ಓದು ಜಗತ್ತಿನ ಎಲ್ಲಾ ಬದಲಾಗುತ್ತಿರುವ ಮಾನವೀಯ ಲೋಕದ ಹಲವು ಮುಖಗಳನ್ನು ಚಿತ್ರಿಸುವಂತದ್ದಾಗಿದೆ. ನಡುನಡುವೆ ಅಪ್ಪಟ  ಕವಿ ಮನಸ್ಕನೊಬ್ಬನ ಚಿಂತನಾ ಲಹರಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಎಲ್ಲಾ ಅತ್ಯಾಧುನಿಕ ಸೌಲಭ್ಯಗಳ ನಡುವೆ ಜೀವಿಸುವ ಮನುಷ್ಯನಿಗೇಕೆ  ಇಲ್ಲಸಲ್ಲದ  ಅಸ್ತ್ವಿತ್ವದ ಪ್ರಶ್ನೆ ಕಾಡುತ್ತದೆ. ಎಲ್ಲಾ ಕವಿತೆಗಳಲ್ಲೂ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಕವಿಯೊಬ್ಬ ಇಲ್ಲಿನ ಕವಿತೆಗಳಲ್ಲಿ  ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಾನೆ.

ಈಗ ಮುಖ ಕಾಣಲು
ಮನೆಯ ಕನ್ನಡಿಯೆದುರು ನಿಂತರೆ
ನನ್ನ ಮುಖ ಮತ್ತು ಬರೀ  ವಸ್ತುಗಳೇ
ನಾನು ಒಂಟಿ
ಸದಾ ಒಬ್ಬಂಟಿ
                 – ಬಯಲ ಕನ್ನಡಿ

“ಬಯಲ‌ ಕನ್ನಡಿ ಮತ್ತು ಮನದ ಮಿಂಚು” ಎನ್ನುವ  ಈ ಸಂಕಲನದಲ್ಲಿ  ಕವಿ ಸತ್ಯದ ಅನ್ವೇಷಣೆಗೆ  ನಿರಂತರವಾಗಿ  ತೊಡಗಿದ್ದಾನೆ. ಸತ್ಯದ ಅನ್ವೇಷಣೆಯೆಂಬುದು ನಿರಂತರವಾಗಿದ್ದು  ಅದೇ ಜೀವಂತಿಕೆಯ ಲಕ್ಷಣ.  ಪ್ರಸ್ತುತ  ಈ ಸಂಕಲದಲ್ಲಿನ ಹಲವು ಕವಿತೆಗಳು ಈ ರೀತಿ ಕವಿಯನ್ನು ದಾಟಿ ಹೊಸಲೋಕದ, ಹೊಸಭಾವದ ಅನ್ವೇಷಣೆಗೆ ತೊಡಗುತ್ತವೆ. ಇಂತಹ ಹುಡುಕಾಟಗಳ ಹೊಸ ಸಂಕಲನ ‘ಬಯಲ ಕನ್ನಡಿ ಮತ್ತು ಮನದ ಮಿಂಚು’ ಹೊರ ತರುತ್ತಿರುವ ಈ ಸಂದರ್ಭದಲ್ಲಿ  ನಾಗತಿಹಳ್ಳಿ ರಮೇಶ್ ಗೆ ಈ ಮೂಲಕ ಶುಭಕೋರುತ್ತೇನೆ.

– ಎಚ್.ಎಲ್. ಪುಷ್ಪ, ಬೆಂಗಳೂರು

Leave a Reply