ನಿಮ್ಮ ದೈನಂದಿನ ಬದುಕಿನಲ್ಲಿ ನೂರಾರು ಮಂದಿಯನ್ನು ಭೇಟಿಯಾಗಬಹುದು, ಕೆಲವೊಮ್ಮೆ ಅದು ಮೊಟ್ಟಮೊದಲ ಭೇಟಿಯೂ ಆಗಿರಬಹುದು. ಇಂಥವರ ಪೈಕಿ ಬಹುತೇಕರು ಮೊದಲ ಭೇಟಿಗೇ ಇಷ್ಟವಾಗುತ್ತಾರೆ ಎಂದು ಹೇಳುವುದು ಸ್ವಲ್ಪ ಕಷ್ಟವೇ. ಆದರೆ ನಾಗತಿಹಳ್ಳಿ ರಮೇಶ್‌ರಂಥ ವ್ಯಕ್ತಿಗಳು ಈ ಮಾತಿಗೆ ಅಪವಾದ. ಕವಿತೆ ಕಟ್ಟುವಿಕೆ ಇರಬಹುದು, ಕಿರು ಚಿತ್ರಗಳ ನಿರ್ಮಾಣವೇ ಇರಬಹುದು, ಸಂಗೀತವಿರಬಹುದು, ರಾಜಕೀಯ ಮತ್ತು ಸಾಮಾಜಿಕ ಕಾರ್ಯಚಟುವಟೆಕೆಗಳು, ಕೃಷಿ, ಕಲೆ ಅಥವಾ ಸೌಂದರ್ಯೋಪಾಸನೆಗೆ ಸಂಬಂಧಿಸಿದ ಯಾವುದೇ ಬಾಬತ್ತು ಇರಬಹುದು – ಇಂಥ ಎಲ್ಲ ನೆಲೆಗಳಲ್ಲೂ ಉತ್ತಮಿಕೆ-ಪ್ರಾವೀಣ್ಯ-ಪ್ರೌಢಿಮೆ ತೋರುತ್ತ ಬಂದಿರುವುದು, ತನ್ಮೂಲಕ ಓರ್ವ ಯಶಸ್ವೀ ವ್ಯಕ್ತಿ ಎನಿಸಿಕೊಂಡಿರುವುದು ನಾಗತಿಹಳ್ಳಿ ರಮೇಶರ ಹೆಗ್ಗಳಿಕೆ. ಮೊದಲ ಭೇಟಿಗೇ ಅವರು ಎದುರಿನವರಿಗೆ ಇಷ್ಟವಾಗುವುದಕ್ಕೆ ಈ ಬಹುಮುಖ ಒಲವೇ ಕಾರಣವಿದ್ದಿರಲೂಬಹುದು.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಸಂವಹನೆಯ ವಿಷಯದಲ್ಲಿ ರಮೇಶ್ ಸರ್ವೋತ್ಕೃಷ್ಟರು ಎಂದರೆ ಅತಿಶಯೋಕ್ತಿಯಲ್ಲ. ಖ್ಯಾತ ಚಿಂತಕ ಮತ್ತು ಬರಹಗಾರ ಡಾ. ಜಿ.ರಾಮಕೃಷ್ಣ ಅವರ ಮಾತುಗಳೇ ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತವೆ. ರಮೇಶ್ ಅವರ ‘ಸಮುದ್ರ ಮತ್ತು ಮಳೆ’ ಎಂಬ ಕವನ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಡಾ. ರಾಮಕೃಷ್ಣ ಅವರು ರಮೇಶರ ಸಾಮರ್ಥ್ಯ ಮತ್ತು ಕರ್ತೃತ್ವಶಕ್ತಿಯ ಬಗ್ಗೆ ಮಾತನಾಡುತ್ತಾ, “ನಾಗತಿಹಳ್ಳಿ ರಮೇಶರ ಸಂವಹನಾ ಕೌಶಲಗಳು ಅವರ ವಿದ್ಯಾರ್ಥಿ ಜೀವನದ ಅವಧಿಯಲ್ಲೇ ಮನೆಮಾತಾಗಿದ್ದವು; ಕೇವಲ ಒಂದೇ ವರ್ಷದ ಅವಧಿಯಲ್ಲಿ, ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಕಾಲೇಜುಗಳಲ್ಲಿ ನಡೆದ ಮುಕ್ತ ಚರ್ಚಾಸ್ಪರ್ಧೆಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಮಡಿಲಿಗೆ ಹಾಕಿಕೊಳ್ಳುವ ಮೂಲಕ ರಮೇಶ್ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು” ಎಂದು ಮೆಲುಕುಹಾಕಿದ್ದಾರೆ. ಇಂಥ ಜಾಣ ಮಾತುಗಾರ ರಮೇಶ್ ಬಾಲ್ಯದಲ್ಲಿ ತಮಗಿದ್ದ ಉಗ್ಗುವಿಕೆಯ ಸಮಸ್ಯೆಯಿಂದಾಗಿ ಒಡನಾಡಿಗಳಿಂದ ಗೇಲಿಗೊಳಗಾಗುತ್ತಿದ್ದರು, ಅಪಹಾಸ್ಯದ ವಸ್ತುವಾಗಿದ್ದರು ಎಂಬ ಸಂಗತಿ ಅರಿವಾದರೆ ನಿಮಗೆ ಮಹತ್ತರ ಅಚ್ಚರಿಯಾಗುವುದರಲ್ಲಿ ಸಂದೇಹವಿಲ್ಲ!
ಕೈಹಾಕಿದ ಪ್ರತಿಯೊಂದು ಸೃಜನಶೀಲ ಬಾಬತ್ತಿನಲ್ಲೂ ತಮ್ಮ ಸಂವಹನಾ ಕೌಶಲಗಳನ್ನು ಆಳವಾಗಿ ಬೇರೂರಿಸಿದ್ದು ರಮೇಶರ ಹೆಚ್ಚುಗಾರಿಕೆ. ಈ ಕಾರಣದಿಂದಾಗಿಯೇ, ಶಿಕ್ಷಣ, ಪರಿಸರ, ಸಂಸ್ಕೃತಿ, ಭೂಮಾತೆಯ ಸಮರ್ಪಕ ಬಳಕೆ ಇತ್ಯಾದಿ ವಿಷಯಗಳ ಕುರಿತಾದ ಅವರ ಕಿರುಚಿತ್ರಗಳಿಗೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ದಕ್ಕಿರುವುದು ಅಚ್ಚರಿಯ ಸಂಗತಿಯೇನಲ್ಲ.
ರಮೇಶರ ಕವನಗಳಲ್ಲಿ ಅವರ ಕಳವಳ-ಕಾಳಜಿಗಳು ಮಡುಗಟ್ಟಿವೆ. ತಮ್ಮ ಒಂದೊಂದು ಕವನದಲ್ಲೂ ಈ ನೆಲದ ಗುಣದ, ವಾಸನೆಯ ಸ್ಪಂದನವನ್ನು ಕಟ್ಟಿಕೊಡುವ ಮೂಲಕ ಅಂತರಾಳದ ಭಾವತಂತುಗಳಿಗೆ ನಾಗತಿಹಳ್ಳಿ ರಮೇಶ್ ಸಾಣೆಹಿಡಿದಿದ್ದಾರೆ. ಈ ವಿಷಯದಲ್ಲಿ ಡಾ. ರಾಮಕೃಷ್ಣ ಅವರು ಬರೆಯುತ್ತಾ, “ರಮೇಶರ ಕವಿತೆಗಳಲ್ಲಿ ಹೊಮ್ಮುವ ಮತ್ತೊಂದು ಗಮನಾರ್ಹ ಚಿಂತನಾಲಹರಿಯೆಂದರೆ ಶ್ರಮಿಕವರ್ಗದ ಉದಾತ್ತ ಸ್ವರೂಪ. ಇದು ಜನಪದೀಯ ಪ್ರಸ್ತುತಿಗಳಲ್ಲಿ ಹರಳುಗಟ್ಟಿರುವ ಒಂದು ರೂಢಿಗತ ಭಾವಾಭಿವ್ಯಕ್ತಿಯೂ ಹೌದು. ಅಷ್ಟೇಕೆ, ಕೃಷಿ ಚಟುವಟಿಕೆಯೇ ಮೂಲಾಧಾರವಾಗಿರುವ ಪ್ರತಿಯೊಂದು ಸಮುದಾಯದ ವಿಷಯದಲ್ಲೂ ಇಂಥ ಭಾವಾಭಿವ್ಯಕ್ತಿ ಪ್ರಧಾನವಾಗಿರುತ್ತದೆ. ಇಂಥದೇ ಹಿನ್ನೆಲೆಯಿಂದ ಬಂದಿರುವ ರಮೇಶ್ ಅವರಿಗೆ ‘ಯಾರು ಈ ಭೂಮಿಯನ್ನು ಉತ್ತಿ-ಬಿತ್ತಿರುವನೋ ಅವನು ಪ್ರೇಮಕಾವ್ಯದ ವಿಷಯದಲ್ಲಿ ಓರ್ವ ಆಗರ್ಭ ಶ್ರೀಮಂತನೇ ಆಗಿರುತ್ತಾನೆ’ ಎಂದು ಇಲ್ಲಿ ಉತ್ಸಾಹಭರಿತವಾಗಿ ಘೋಷಿಸಲು ಸಾಧ್ಯವಾಗಿದೆ” ಎಂದಿದ್ದಾರೆ.
ರಮೇಶರ ಮೂಲವನ್ನು ಅರಸುತ್ತ ಹೋದಲ್ಲಿ ನಿಬ್ಬೆರಗಾಗಿಸುವಂಥ ಸಂಗತಿಗಳು ಅನಾವರಣಗೊಳ್ಳುತ್ತವೆ. ಸರಳ ಸ್ವಭಾವದ ಓರ್ವ ಹಳ್ಳಿಹುಡುಗ ತನಗೆ ತೀರಾ ಅಪರಿಚಿತವಾಗಿರುವ ನಗರಜೀವನದ ಸಂಕೀರ್ಣತೆಗಳಿಗೆ ಒಡ್ಡಿಕೊಂಡು ದಿಕ್ಕುಗಾಣದೆ ಅಂಡಲೆದಂಥ ಚಿತ್ರಣ ಕಣ್ಣಿಗೆ ರಾಚುತ್ತದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿ ಎಂಬ ಹಳ್ಳಿಯಲ್ಲಿ ೧೯೬೭ರ ಜೂನ್ ೧ರಂದು ಸ್ಥಿತಿವಂತ ಕುಟುಂಬವೊಂದರಲ್ಲಿ ಜನಿಸಿದ ರಮೇಶ್ ತಮ್ಮ ಬಾಲ್ಯದುದ್ದಕ್ಕೂ ಬಗೆಬಗೆಯ ಕೀಳರಿಮೆ ಅವಮಾನಗಳಿಗೆ ಒಡ್ಡಿಕೊಳ್ಳಬೇಕಾಗಿ ಬಂದುದು ಕಹಿಸತ್ಯ. ಹಾಗಂತ ಧೃತಿಗೆಡದ ಅವರು ನೋವುಗಳನ್ನೇ ಮೆಟ್ಟಿಲಾಗಿಸಿ ನಾಡಿನಲ್ಲೇ ಅತ್ಯುತ್ತಮ ಚರ್ಚಾಪಟುವಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಮತ್ತು ಕಾನೂನು ಪದವಿಗಳನ್ನೂ, ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿಯನ್ನೂ ಪಡೆದದ್ದು ಕರಿಮೋಡದಂಚಿನ ಆಶಾಕಿರಣಗಳು ಎನ್ನಬೇಕು. ಅಂತರಾಳದಲ್ಲಿ ಹೆಪ್ಪುಗಟ್ಟಿದ್ದ ಇಂಥ ಕೆಚ್ಚು, ದಿಟ್ಟತನಗಳ ಕಾರಣದಿಂದಾಗಿಯೇ ನಗರಜೀವನದ ಗೊಂದಲ – ಸಂಕೀರ್ಣತೆಗಳು, ಎದುರಿಸಬೇಕಾಗಿ ಬಂದ ಅಸ್ತವ್ಯಸ್ತತೆಗಳ ನಡುವೆಯೂ ಪ್ರಜ್ಞಾವಂತಿಕೆ ಮೆರೆಯಲು, ಬದುಕಿಗೊಂದು ಅರ್ಥ ಕಂಡುಕೊಳ್ಳಲು ಅವರಿಗೆ ಸಾಧ್ಯವಾಯಿತು. ಅವರು ಬುಟ್ಟಿಗಳಲ್ಲಿ ಹಣ್ಣು-ತರಕಾರಿಗಳನ್ನು ಹೊತ್ತು ಮಾರಿದ್ದೂ ಇದೆ, ದಿನಪತ್ರಿಕೆಗಳನ್ನು ಹಂಚುವ ಹುಡುಗನಾಗಿ ಹೊಟ್ಟೆಹೊರೆದುಕೊಂಡಿದ್ದೂ ಇದೆ. ಆದರೆ ಇಂಥ ಯಾವ ಕಷ್ಟ-ಕಾರ್ಪಣ್ಯವೂ ಅವರ ಸಾಧನೆಯ ಹಾದಿಗೆ ತಡೆಗೋಡೆಯಾಗಲಿಲ್ಲ; ಕರ್ನಾಟಕ ಸರ್ಕಾರದಿಂದ ಪಡೆದ ‘ರಾಜ್ಯಯುವ ಪ್ರಶಸ್ತಿ’, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಪಡೆದ “ಪರಿಸರ” ಪ್ರಶಸ್ತಿ ಹೀಗೆ ಸಾಧನಾಪಥದಲ್ಲಿ ದಾಪುಗಾಲು ಹಾಕುತ್ತಲೇ ಹೋದರು ರಮೇಶ್. ಈ ಪರಂಪರೆ ಮತ್ತೂ ಮುಂದುವರಿದು, ‘ಕಳಿಂಗ ವಿಶ್ವಚೇತನ’ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ-೨೦೧೯, ‘ಜೀವನದಿ’ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ-೨೦೧೯, ‘ವಿಶ್ವಾತ್ಮ’ ಪ್ರಶಸ್ತಿ, ‘ನೆಲದ ಸಿರಿ-ಜೀವನ್ಮುಖಿ’ ಪ್ರಶಸ್ತಿ, ‘ಜೀವಸಾಂಗತ್ಯ’ ಪ್ರಶಸ್ತಿ, ‘ಕುವೆಂಪು ಸಾಹಿತ್ಯ’ ಪ್ರಶಸ್ತಿ, ‘ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಜೀವಾಳ’ ಪ್ರಶಸ್ತಿ, ‘ಬಿ.ಎಂ.ಶ್ರೀ. ಕನ್ನಡದ ಕಣ್ವ’ ಪ್ರಶಸ್ತಿ, ‘ನಾಡಚೇತನ’, ಪ್ರಶಸ್ತಿ ‘ಕರ್ನಾಟಕ ಪ್ರಜಾರತ್ನ’ ಪ್ರಶಸ್ತಿ, ಕರ್ನಾಟಕದ ಸರ್ಕಾರದ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ವತಿಯಿಂದ ನೀಡಲಾದ ‘ನಾಡಪ್ರಭು ಕೆಂಪೇಗೌಡ’ ಪ್ರಶಸ್ತಿ ಪುರಸ್ಕಾರ ಹೀಗೆ ತಮ್ಮ ಸಾಧನೆಯ ಕಿರೀಟಕ್ಕೆ ಅವರು ಸಿಕ್ಕಿಸಿಕೊಂಡ ಗರಿಗಳು ಒಂದೆರಡಲ್ಲ. ಈಗ ಓರ್ವ ಮಹೋನ್ನತ ಕವಿಯಾಗಿ, ವೈವಿಧ್ಯಮಯ ಕಲೆಗಳ-ಕಲಾವಿದರ ಪಾಲಿನ ಓರ್ವ ಪೋಷಕ ಮತ್ತು ರಸಜ್ಞನಾಗಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ರಮೇಶ್ ಅವರು ಇಂಥದೊಂದು ಗಮ್ಯ ತಲುಪಲು ಸವೆಸಿದ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ ಎಂಬುದನ್ನು ಮರೆಯಲಾಗದು.
ತಮ್ಮಂತೆಯೇ ಗ್ರಾಮೀಣ ಮೂಲದಿಂದ ಬಂದಿರುವ ಯುವಹೃದಯಗಳ ಮಹತ್ವಾಕಾಂಕ್ಷೆಗಳಿಗೆ ಒಂದಿಷ್ಟು ನೀರೆರೆಯಲೆಂದು ‘ಸ್ಪರ್ಧಾ ಪ್ರಪಂಚ’ ಎಂಬ ನಿಯತಕಾಲಿಕವೊಂದನ್ನು ಹುಟ್ಟುಹಾಕಿದ ರಮೇಶ್, ಈ ಸಾಹಸಕ್ಕೆ ಒದಗಿದ ಎಲ್ಲ ಬಗೆಯ ಅಡೆತಡೆಗಳನ್ನೂ ಮೆಟ್ಟಿನಿಂತು ಯಶಸ್ಸಿನ ಹಾದಿಯಲ್ಲಿ ಹೆಜ್ಜೆಹಾಕಿದ್ದು ಉಲ್ಲೇಖನೀಯ. ಕೇವಲ ಒಂದೇ ವಸ್ತು-ವಿಷಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವೈವಿಧ್ಯಮಯ ಬಾಬತ್ತುಗಳಿಗೆ ಮುಕ್ತವಾಗಿ ತೆರೆದುಕೊಂಡಿದ್ದು ರಮೇಶರ ವೈಶಿಷ್ಟ್ಯ. ಪರಿಸರ ಸಂಬಂಧಿತವಾಗಿ ಮಾತ್ರವಲ್ಲದೆ, ವಿಶಾಲದೃಷ್ಟಿಯ ವ್ಯಾಪಕ ಓದು, ಸಂಗೀತ, ನಾಟಕ, ಕಿರುಚಿತ್ರ ನಿರ್ಮಾಣದಂಥ ಕನಸು-ಕನವರಿಕೆಗಳಿಗೆ ಅವರು ನೀರೆರೆದದ್ದು ಈ ಮಾತಿಗೆ ಸಾಕ್ಷಿ. ವೈಎಂಸಿಎ ಮತ್ತು ಕರ್ನಾಟಕ ರಾಜ್ಯ ಶಾಂತಿ ಮತ್ತು ಸೌಹಾರ್ದತಾ ಸಂಘಟನೆಗಳ ಸಂಚಾಲಕರಾಗಿ, ‘ಪರಸ್ಪರ ಸ್ನೇಹ ಸೌಹಾರ್ದ ವೇದಿಕೆ’ಯ ಸಂಸ್ಥಾಪಕ, ‘ಸ್ಪಂದನ ಯುವಜನ ಕೇಂದ್ರ’ದ ಸಂಸ್ಥಾಪಕ ಅಧ್ಯಕ್ಷರಾಗಿ ಮತ್ತು ‘ಪರಸ್ಪರ ಸಾಮಾಜಿಕ ಸಂಸ್ಥೆ’ಯ ಉಪಾಧ್ಯಕ್ಷ- ಹೀಗೆ ಹಲವು ಹೊಣೆಗಾರಿಕೆಗಳ ನೊಗ ಹೊತ್ತಿರುವ ದಾಖಲೆಯೂ ಇವರ ಖಾತೆಯಲ್ಲಿವೆ.
ವೈವಿಧ್ಯಮಯ ಕ್ಷೇತ್ರಗಳಲ್ಲಿನ ತಮ್ಮ ಅನುಭವವನ್ನು ಹಂಚಿಕೊಳ್ಳುವ ಸಲುವಾಗಿ ಭಾರತಯಾತ್ರೆ ಮತ್ತು ವಿದೇಶಯಾತ್ರೆಗಳನ್ನು ವ್ಯಾಪಕವಾಗಿ ಕೈಗೊಂಡಿರುವ ರಮೇಶ್, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್, ಸಿಂಗಾಪುರ, ಮಲೇಷ್ಯಾ, ಹಾಂಕಾಂಗ್, ಭೂತಾನ್, ಕಾಂಬೋಡಿಯಾ, ಥಾಯ್ಲೆಂಡ್, ವಿಯೆಟ್ನಾಂ, ಲಾವೋಸ್, ದುಬೈ, ಇಂಗ್ಲೆಂಡ್, ಯುರೋಪ್, ಚೀನಾ, ಭೂತಾನ್, ಇಸ್ರೇಲ್, ಪ್ಯಾಲೆಸ್ತೀನ್, ಜೋರ್ಡಾನ್, ಈಜಿಪ್ಟ್, ಇಂಡೋನೇಷ್ಯಾ ಹಾಗೂ ಇನ್ನೂ ಮುಂತಾದ ಅನೇಕ ದೇಶಗಳಿಗೆ ಈಗಾಗಲೇ ಭೇಟಿನೀಡಿದ್ದಾರೆ.
ಬದುಕೆಂಬುದು ವೈವಿಧ್ಯಮಯ ಚಟುವಟಿಕೆಗಳ ದಟ್ಟಣೆಯಲ್ಲಿದ್ದರೂ, ತಮ್ಮ ‘ಸೃಷ್ಟಿ ಪ್ರಕಾಶನ’ದ ಮೂಲಕ ಪುಸ್ತಕಗಳ ಪ್ರಕಟಣೆ ಮಾಡುವ, ಆಡಿಯೋ ಕ್ಯಾಸೆಟ್‌ಗಳನ್ನು ಬಿಡುಗಡೆ ಮಾಡುವ ಕೈಂಕರ್ಯಗಳಿಗೆ ರಮೇಶ್ ಸಮಯ ಕಂಡುಕೊಳ್ಳುತ್ತಾರೆ ಮತ್ತು ‘N2 ಪ್ರೊಡಕ್ಷನ್ಸ್’ ಎಂಬ ತಮ್ಮ ನಿರ್ಮಾಣಸಂಸ್ಥೆಯ ಮೂಲಕ ಗಣನೀಯ ಸಂಖ್ಯೆಯಲ್ಲಿ ಕಿರುಚಿತ್ರಗಳನ್ನು, ಹಾಡುಗಳ ಧ್ವನಿ ಅಡಕ ಪೆಟ್ಟಿಗೆಗಳನ್ನು ನಿರ್ಮಿಸಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ.
ಕಿರುಚಿತ್ರಗಳ ನಿರ್ಮಾತೃವಾಗಿ, ನಿರ್ದೇಶಕರಾಗಿ ಅವರು ತಮ್ಮ ವೃತ್ತಿಜೀವನದ ಮಾರ್ಗವನ್ನು ಕೊನೆಗೂ ಕಂಡುಕೊಂಡಂತಿದೆ. ಹಾಗಂತ ಅವರೇನೂ ಇದರಲ್ಲಿ ಬೇಕಾಬಿಟ್ಟಿಯಾಗಿ ಅಥವಾ ವಿಶೇಷ ಆಸಕ್ತಿಯಿಲ್ಲದೆ ತೊಡಗಿಸಿಕೊಂಡವರಲ್ಲ; ಅವರು ಗೆದ್ದ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳೇ ಈ ಕ್ಷೇತ್ರದಲ್ಲಿನ ಅವರ ತಪಸ್ಸಿಗೆ ಪ್ರಮಾಣಪತ್ರಗಳಾಗಿವೆ. ಚಿತ್ರನಿರ್ಮಾಣಕ್ಕೆ ಅವರು ಅನುಸರಿಸುವ ಮಾರ್ಗವು ಬಹುತೇಕವಾಗಿ ಕವನವೊಂದನ್ನು ಚಲನಚಿತ್ರ ಮಾಧ್ಯಮಕ್ಕೆ ರೂಪಾಂತರಿಸುವ ರೀತಿಯಲ್ಲಿರುತ್ತದೆ ಎನ್ನಲಡ್ಡಿಯಿಲ್ಲ. ಇಂಥ ವೇಳೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ, ಕೃತಿಯನ್ನು ತಲೆಮೇಲೆ ಹೊತ್ತು ಮೆರೆಸುವ ಠೀವಿ ಇತ್ಯಾದಿಗಳಿಗೆ ಅವರಿಗೆ ಅವರೇ ಸಾಟಿ. ಅವರ ಚಿತ್ರಗಳಿಗೆ ಅನೇಕ ಅಂತಾರಾಷ್ಟ್ರೀಯ ಪುರಸ್ಕಾರಗಳು ದಕ್ಕುವಂತಾಗಿರುವುದಕ್ಕೆ ಇದೇ ಕಾರಣ ಎನ್ನಬಹುದು. ರಮೇಶರ ಕಲ್ಪನೆಯಲ್ಲಿ ಮೂಡಿಬಂದಿರುವ ‘ಬೇರುಗಳತ್ತ’ (ಇಂಗ್ಲಿಷ್‌ನಲ್ಲಿ ‘The Roots’) ಎಂಬ ಕಿರುಚಿತ್ರಗಳು ಈ ಪೈಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂಥದ್ದು ಎನ್ನಲಡ್ಡಿಯಿಲ್ಲ.
ನಾಗತಿಹಳ್ಳಿ ರಮೇಶರನ್ನು ‘ಪ್ರಕೃತಿಯ ತೊಟ್ಟಿಲಲ್ಲಿ ನಲಿದಾಡುತ್ತಿರುವ ಶಿಶು’ ಎಂದು ಕರೆದರೆ ಉತ್ಪ್ರೇಕ್ಷೆ ಆಗಲಾರದು. ಕನ್ನಡ ಕಾವ್ಯಲೋಕದ ವಿಮರ್ಶಕರು ರಮೇಶರ ಕಾವ್ಯಕೃತಿಗಳಿಂದ ಪ್ರಭಾವಿತರಾಗಿ ಅತೀವ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಪ್ರಕೃತಿ ಕುರಿತಾದ ರಮೇಶರ ಹಾತೊರೆತ ಅಥವಾ ಕಟ್ಟಕ್ಕರೆಗಳು ಅವುಗಳಲ್ಲಿ ಹಾಸುಹೊಕ್ಕಾಗಿರುವುದೇ ಕಾರಣವೆನ್ನಬಹುದು. ಸಾಕಷ್ಟು ಸಂಖ್ಯೆಯ ಗೀತಸಂಪುಟಗಳು ರಮೇಶರ ಖಾತೆಯಲ್ಲಿ ದಾಖಲಾಗಿವೆ. ಈ ಪೈಕಿ ಎದ್ದುಕಾಣುವಂಥದ್ದು ೨೦೧೩ರಲ್ಲಿ ರೂಪುಗೊಂಡ ಮತ್ತು ಬಾಪು ಪದ್ಮನಾಭ ಅವರ ಸಂಗೀತ ಸಂಯೋಜನೆಯ ‘ತಿಳಿ’ (ಇಂಗ್ಲಿಷ್‌ನಲ್ಲಿ ‘Pure’)ಸಂಗೀತ ಸಂಪುಟ. ಇದರಲ್ಲಿ ಅಡಕವಾಗಿರುವ ‘ನನ್ನವ್ವ’, ‘ನೆಲದವ್ವನಿಗೆ’, ‘ಅವ್ವನ ಮಕ್ಕಳು’, ‘ನೀರು ಮತ್ತು ಬೆಂಕಿ’ ಮೊದಲಾದ ಜೀವ-ಭಾವಗೀತೆಗಳು ತಮ್ಮಲ್ಲಿ ಸ್ಥಾಯಿಯಾಗಿರುವ ಅಕ್ಕರೆಯ ಗುಣದಿಂದಾಗಿ ಈಗಲೂ ಹಲವರ ನೆನಪಲ್ಲುಳಿದಿವೆ. ರಮೇಶರ ಮತ್ತಿತರ ಗಮನಾರ್ಹ ಹೃದಯಸ್ಪರ್ಶಿ ಜೀವಗೀತ ಸಂಪುಟಗಳಲ್ಲಿ ಎಸ್.ಆರ್. ರಾಮಕೃಷ್ಣ ಸಂಗೀತ ಸಂಯೋಜನೆಯ ಕನ್ನಡದ ‘ಜೀವ ಜೀವದ ಹಾಡು’, ಇಂಗ್ಲಿಷ್‌ನ ‘Song of every life’, ತಮಿಳಿನ ‘ಉಯಿರಿನ್ ಉಯಿರು ಪಾಟ್ಟು’ (ತಮಿಳು ಅನುವಾದ: ನಲ್ಲತಂಬಿ), ‘ಬಯಲ ಕನ್ನಡಿ’, ‘ಮನದ ಮಿಂಚು’, ‘ಒಳಿತು’, ‘ಮಳೆಕಾವು’ (ಸಂಗೀತ ಸಂಯೋಜನೆ: ಮ್ಯಾಂಡೊಲಿನ್ ಪ್ರಸಾದ್; ವಾದ್ಯ ಸಂಯೋಜನೆ : ಕಿಶನ್ ಮೂರ್ತಿ) ಸೇರಿವೆ.
ನಾಗತಿಹಳ್ಳಿ ರಮೇಶರ ಪ್ರಸ್ತುತಿಯಲ್ಲಿ ಮೂಡಿಬಂದಿರುವ ‘ಆಕಾಶ ವಾರ್ತೆಗಳು’ ಎಂಬ ವಿಡಂಬನೆಯು ನಮ್ಮ ಸುದ್ದಿಲೋಕವನ್ನು ಮತ್ತು ವಾರ್ತಾವಾಚಕರನ್ನು ಕುರಿತಾದ ಒಂದು ಹಾಸ್ಯಭರಿತ ಅನುಕರಣೆಯಾಗಿದ್ದು ಅನೇಕರನ್ನು ಈಗಾಗಲೇ ಖುಷಿಪಡಿಸಿದೆ. ಪತ್ರಿಕೋದ್ಯಮಕ್ಕೂ ಕಾಲಿಟ್ಟ ರಮೇಶ್, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉತ್ಸುಕರಾಗಿರುವ ವಿದ್ಯಾರ್ಥಿಗಳು ಹಾಗೂ ಇತರರಿಗಾಗಿ ‘ಸ್ಪರ್ಧಾಪ್ರಪಂಚ’ ಎಂಬ ದ್ವೈಮಾಸಿಕ ಪತ್ರಿಕೆಯನ್ನು ಹುಟ್ಟುಹಾಕಿದ್ದು, ಅದು ಬಹುತೇಕರಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಿದ್ದು, ಅತೀವ ಜನಪ್ರಿಯತೆ ದಕ್ಕಿಸಿಕೊಂಡಿದ್ದು ಈಗ ಇತಿಹಾಸ.
ಮಿಕ್ಕಂತೆ, ರಮೇಶರ ಬಹುಮುಖಿ ಸಾಹಸಗಳಲ್ಲಿ, ಜನರ ಯೋಗಕ್ಷೇಮಕ್ಕೆ ಸಂಬಂಧಿಸಿದ ಹಾಗೂ ಪ್ರಕೃತಿ ಸಂರಕ್ಷಣೆಯ ಕುರಿತಾಗಿ ಅರಿವನ್ನು ಹುಟ್ಟುಹಾಕುವ ಧ್ಯೇಯವನ್ನು ಒಳಗೊಂಡ ಚಟುವಟಿಕೆಗಳು ಸೇರಿವೆ. ತಾವು ತೊಡಗಿಸಿಕೊಳ್ಳುವ ಯಾವುದೇ ಕ್ಷೇತ್ರದ ಬಾಬತ್ತಿನಲ್ಲಿ ಸೃಜನಶೀಲ ಹಾಗೂ ಪರೋಪಕಾರಿ ಅಂಶಗಳನ್ನು ಹದವಾಗಿ ಮಿಳಿತಗೊಳಿಸುವುದು ರಮೇಶರ ವೈಶಿಷ್ಟ್ಯ. ಅವರ ಕವಿತೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಒಂದು ಕಾಲಕ್ಕೆ ರಮೇಶ್ ಅವರು ಅನುಭವಿಸಿದ ದುಗುಡ-ದುಮ್ಮಾನಗಳಂಥ ಭಾವತೀವ್ರತೆಗಳಲ್ಲೇ ಸ್ವತಃ ಹಾದುಹೋದಂತೆ ಆದ ರೀತಿಯಲ್ಲಿ ಸದರಿ ಕವಿತೆಗಳೊಂದಿಗೆ ನೀವು ಗುರುತಿಸಿಕೊಳ್ಳುತ್ತೀರಿ. ಅಂಥದೊಂದು ಕಡುಸಂಕಟ, ಬೇಗುದಿ ಆ ಕ್ಷಣಕ್ಕೆ ಸ್ಫುರಿಸುವಂತಾಗುವ ಅಥವಾ ಅನುರಣಿಸುವಂತಾಗುವ ರೀತಿಯಲ್ಲಿ ಅವುಗಳ ‘ಪದ-ಚಮತ್ಕಾರ’ ಇರುತ್ತದೆ. ರಮೇಶರ ಕಲಾನೈಪುಣ್ಯ ಇರುವುದು ಇಲ್ಲೇ. ಅನೇಕ ಭಾರತೀಯ ಭಾಷೆಗಳಿಗೆ ಹಾಗೂ ವಿದೇಶಿ ಭಾಷೆಗಳಿಗೆ ಭಾಷಾಂತರಗೊಂಡಿರುವ ರಮೇಶರ ಕವಿತೆಗಳು, ಕೆಲವೊಂದು ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲೂ ಸ್ಥಾನ ಗಿಟ್ಟಿಸಿಕೊಂಡಿವೆ. ಕನ್ನಡದ ‘ಸಮುದ್ರ ಮತ್ತು ಮಳೆ’ ಕವನ ಸಂಕಲನವು ಇಂಗ್ಲಿಷ್‌ನಲ್ಲಿ ‘The Sea and The Rain’ (ಅನುವಾದ: ಅಂಕುರ್ ಬೆಟಗೇರಿ), ಹಿಂದಿಯಲ್ಲಿ ‘ಸಾಗರ್ ಔರ್ ಬಾರಿಷ್’ (ಅನುವಾದ: ಗಿರೀಶ್ ಜಕಾಪುರೆ) ಹೆಸರಿನಲ್ಲಿ ಅನುವಾದಗೊಂಡಿವೆ. ಅನುಕಂಪ ಅಥವಾ ಕಕ್ಕುಲತೆ ಎಂಬ ಸಮುದ್ರದೊಳಗೆ ಜಿಗಿದು, ಕಪ್ಪೆಚಿಪ್ಪಿನೊಳಗೆ ಸೇರಿಕೊಂಡ ಮಣ್ಣಿನಕಣವು ಮುತ್ತಾಗಿ ರೂಪುಗೊಳ್ಳುವುದನ್ನು ಕಂಡ ಈಜುಗಾರನೊಬ್ಬನ ಭಾವ ಈ ಕೃತಿಯಲ್ಲಿ ಸ್ಥಾಯಿಯಾಗಿದೆ.
ಕನ್ನಡದ ಬಹುರೂಪಿ ವಿದ್ವಾಂಸ, ವಚನಗಳ ವಿಶಿಷ್ಟ ವ್ಯಾಖ್ಯಾನಕಾರರಾಗಿದ್ದ ಎಲ್. ಬಸವರಾಜು ಅವರು ಸೃಜನ ಸಂವೇದನೆಯ ಕವಿಯೂ ಆಗಿದ್ದರ ಜತೆಗೆ ಹೊಸ ತಲೆಮಾರಿನ ಲೇಖಕರನ್ನು ಕಂಡು ಮುದಗೊಳ್ಳುತ್ತಿದ್ದರು. ಮಗುವಿನಂಥ ಮುಗ್ಧಮನಸ್ಸು ಹೊಂದಿದ್ದ ಅವರು ನಾಗತಿಹಳ್ಳಿ ರಮೇಶರ ‘ಸಮುದ್ರ ಮತ್ತು ಮಳೆ’ ಓದಿದ ನಂತರ ಹೀಗೆ ಹೃದಯತುಂಬಿ ಬರೆಯುತ್ತಾರೆ- “ಶ್ರೀಯುತ ನಾಗತಿಹಳ್ಳಿ ರಮೇಶರೇ, ‘ಸಮುದ್ರ ಮತ್ತು ಮಳೆ’ ಎಂಬ ನಿಮ್ಮದೊಂದು ಕವಿತಾ ಸಂಕಲನವನ್ನು ನನಗೆ ನೀವು ಅಂಚೆ ಮೂಲಕ ಕಳಿಸಿರುವಿರೆಂದು ದೂರವಾಣಿಯ ಮೂಲಕ ತಿಳಿದು ನನ್ನದೂ ಒಂದು ಕವಿತಾ ಸಂಕಲನವನ್ನು ನಿಮಗೆ ಮುಯ್ಯಿಗೆ ಮುಯ್ಯಾಗಿ ಕಳಿಸಿ ಶಬ್ಬಾಸ್ ಗಿರಿಯನ್ನು ಪಡೆಯೋಣವೆಂದು ಸ್ಪರ್ಧಾತ್ಮಕ ಪ್ರೀತಿಯಿಂದಲೇ ನಿರ್ಣಯಿಸಿದೆ. ಆದರೆ ಅಂಚೆಯ ಮೂಲಕ ಬಂದ ಆ ನಿಮ್ಮ ಕವಿತಾ ಸಂಕಲನವನ್ನು ಓದಿ ಬಾಯಿ ಚಪ್ಪರಿಸಿದ ಮೇಲೆ ಆ ನನ್ನದೆಂಬ ಕವನ ಪುಸ್ತಕವನ್ನು ನನ್ನದಲ್ಲ ಅಲ್ಲಾ ಅಲ್ಲಾ ಎನ್ನುತ್ತಾ ಹಳೆಯ ಪುಸ್ತಕಗಳನ್ನು ಒಟ್ಟಿದ್ದ ಅಟ್ಟದ ಮೇಲಕ್ಕೆ ಎಸೆದು ಆ ಮುಗ್ಗಲು ವಾಸನೆ ಹೋಗಲೆಂದು ನಿಮ್ಮ ಆ ‘ಸಮುದ್ರ ಮತ್ತು ಮಳೆ’ಯಲ್ಲಿ ಕೈ ತೊಳೆದು ಒರೆಸಿಕೊಂಡೆ! ಸಮುದ್ರರಾಜ ನೀವು- ನಿಮ್ಮ ಕಡೆಯಿಂದ ಬರುವ ಮಳೆಗಾಗಿ ಬಿತ್ತಿದ ಹೊಲದಂತೆ ಕಾಯುತ್ತಿರುತ್ತೇನೆ- ಮತ್ತೆ ಮತ್ತೆ!…”
ಇಂಥ ಆಶಾವಾದಿ ಕವಿಯೂ ಒಂದೊಮ್ಮೆ ಅಸಾಹಾಯಕತೆಯಲ್ಲಿ ನೊಂದು ಬೆಂದು ರೋಸಿ ಹೋಗಿದ್ದಿದೆ. ಯಾತನಾ ಶಿಬಿರದಲ್ಲಿ ಮಲಗಿದ ಪರಿಣಾಮ ಆತ್ಮಹತ್ಯೆಯ ಆಲೋಚನೆ ಮನದಲ್ಲಿ ಸುಳಿದು ಈ ಕವಿ ಜೀವವನ್ನು ಕೊನೆಗಾಣಿಸಿಕೊಳ್ಳಲು ರೈಲುಕಂಬಿಗಳ ಮೇಲೆ ಮಲಗಿದ್ದುಂಟು! ಆದರೆ ರೈಲುಸಂಚಾರದ ವೇಳಾಪಟ್ಟಿಗಳಲ್ಲಿ ಕಾಣಬರುವ ತಡವಾಗಿ ಬರುವ ವೈಪರೀತದಿಂದಾಗಿ ಅವರ ಬಯಕೆ ಈಡೇರಲಿಲ್ಲ; ಸಕಾಲಕ್ಕೆ ಆಗಮಿಸಬೇಕಿದ್ದ ರೈಲು ಬರದೆ ರಮೇಶ್ ಆತ್ಮಹತ್ಯೆಯನ್ನು ಮುಂದೂಡಿಕೊಂಡು ಬದುಕುಳಿದರು! ಇಂಥ ಘಟನೆಗಳನ್ನು ಮೆಲುಕುಹಾಕುತ್ತ ರಮೇಶ್ ಅವರೇ ಒಂದೆಡೆ ಹೀಗೆ ಹೇಳಿಕೊಂಡಿದ್ದಾರೆ- “ನನ್ನ ಬದುಕು ಒಂದು ರೀತಿಯಲ್ಲಿ ಅನೇಕ ಪಥಗಳಾಗಿ ಒಡೆದುಹೋದ ಒಂದು ರಸ್ತೆಯಂತಿದೆ. ನಾನು ಹುಟ್ಟಿದಾಗಿನಿಂದಲೂ, ನನ್ನ ಕಟ್ಟಾಸೆ, ವೈಫಲ್ಯಗಳು, ಕೀಳರಿಮೆ, ಹತಾಶೆ, ಏಕಾಂಗಿತನ, ಅನಾಥಪ್ರಜ್ಞೆ ಅಥವಾ ತಬ್ಬಲಿತನ ಹಾಗೂ ಆತ್ಮಹತ್ಯೆಯ ಪ್ರಯತ್ನಗಳು ಈ ಎಲ್ಲವುಗಳಿಂದ ನಾನು ಅದೆಷ್ಟು ಹತಾಶನಾಗಿದ್ದೆನೆಂದರೆ, ಕೆಸರುಮಣ್ಣಿನಲ್ಲಿ ಮುಳುಗಿ ಹೂತುಹೋಗುತ್ತಿರುವ ಇರುವೆಯಂತೆ ಆಗಿಬಿಟ್ಟಿದ್ದೆ….”.
ಇಂಥ ಅನೇಕ ಸಂದರ್ಭಗಳಲ್ಲಿ ಅವರನ್ನು ಕೆಲವೊಂದು ಪ್ರಶ್ನೆಗಳು ಪದೇಪದೇ ಕಾಡುತ್ತಿದ್ದವು. ರಮೇಶರೇ ಒಂದೆಡೆ ಅವನ್ನು ಹೀಗೆ ಉಲ್ಲೇಖಿಸಿದ್ದಾರೆ- “ಜನರ ಪ್ರೀತಿ ಮತ್ತು ಕಾಳಜಿಗಳು ಎಲ್ಲಿಯವರೆಗೆ, ಯಾವ ಮಟ್ಟದವರೆಗೆ ಹರಿಯಲು ಸಾಧ್ಯ? ಪಟ್ಟುಬಿಡದೆ ಹೆಣಗಾಡಿದವರು ಮತ್ತು ಬವಣೆಗಳಿಗೆ ಈಡಾದವರು ಮಾತ್ರವೇ ಜನರ ಮಧ್ಯೆ ಆಶ್ರಯ ಪಡೆಯುತ್ತಾರೆ ಎಂಬುದು ನಿಜವಾ? ಜೀವನದಲ್ಲಿ ನಾವು ಅನುಭವಿಸಿದ ನೋವು ನಮ್ಮ ಮುಖದ ಮೇಲೆ ತನ್ನ ಗುರುತುಗಳನ್ನು ಉಳಿಸಿಬಿಡುತ್ತದಾ? ಹೀಗೆ ಪ್ರಶ್ನೆಗಳು ಕಾಡುತ್ತಿದ್ದವು. ಕಾಲೇಜು ಶಿಕ್ಷಣ ಮುಗಿಸಿ ಅಲ್ಲಿಂದ ತೆರಳಬೇಕಾಗಿ ಬಂದಾಗ ‘ಮುಂದೇನು?’ ಎಂಬ ಪ್ರಶ್ನೆ ನನ್ನ ಮುಂದೆ ಪೆಡಂಭೂತವಾಗಿ ನಿಂತಿತು. ಏಕೆಂದರೆ ನನ್ನ ಬಳಿಯಿದ್ದುದು ಒಂದೇ ಷರಾಯಿ, ಒಂದೇ ಅಂಗಿ, ಹಾಗೂ ಕಾಲೇಜು ದಿನಗಳಲ್ಲಿ ಗೆದ್ದಿದ್ದ ಪ್ರಶಸ್ತಿ ಪತ್ರಗಳು ಮತ್ತು ಬಹುಮಾನಗಳನ್ನು ಜೋಳಿಗೆಯಲ್ಲಿ ತುಂಬಿಸಿಕೊಂಡ ಒಂದು ಚೀಲ. ಹೊಟ್ಟೆಪಾಡಿಗಾಗಿ ಕೆಲಸವನ್ನು ಹುಡುಕುತ್ತಾ ಬೆಂಗಳೂರಿನ ಬೀದಿಬೀದಿಗಳಲ್ಲಿ ಅಂಡಲೆಯಬೇಕಾದ ಸಂದರ್ಭ ಬಂದಾಗ, ಕಡೇಪಕ್ಷ ದಿನದಲ್ಲಿ ಒಂದಿಷ್ಟು ಚಹಾವನ್ನಾದರೂ ಕುಡಿದು ಜೀವವುಳಿಸಿಕೊಳ್ಳುವ ದೃಷ್ಟಿಯಿಂದ ಕಾಲೇಜು ದಿನಗಳಲ್ಲಿ ನಾನು ಸಂಪಾದಿಸಿದ್ದ ಪ್ರಶಸ್ತಿ-ಪಾರಿತೋಷಕಗಳನ್ನೇ ಮಾರಿಕೊಳ್ಳಬೇಕಾಯಿತು. ಇಂಥದೇ ಒಂದು ಸಂದರ್ಭದಲ್ಲಿ ನನ್ನ ಕಾಲೇಜು ಮಿತ್ರ ಬಿ. ವೆಂಕಟರಂಗ ಸಿಕ್ಕರು. ‘ದವಸ-ಧಾನ್ಯಗಳು ಮತ್ತು ಕಾಳು-ಕಡ್ಡಿಗಳು ಮುಗಿಯುವ ಹೊತ್ತಿಗೆ ಮಳೆ ಶುರುವಾಯಿತು’ ಎಂಬ ನಾಣ್ನುಡಿಯ ಸಾಕಾರರೂಪವೆಂಬಂತೆ ಅಂದು ಅವರು ದಕ್ಕಿದ್ದರು. ಹೋಟೆಲ್ ಒಂದಕ್ಕೆ ನನ್ನನ್ನು ಕರೆದೊಯ್ದ ಅವರು ಪುಷ್ಕಳವಾಗಿ ಉಣಬಡಿಸಿದರು. ನಂತರ ತಮ್ಮ ಹೆತ್ತವರ ಬಳಿ ಕರೆದೊಯ್ದು, ನನ್ನ ದುರವಸ್ಥೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು (ಪ್ರಾಸಂಗಿಕವಾಗಿ ಹೇಳುವುದಾದರೆ, ಕಾಲೇಜು ದಿನಗಳ ಅವಧಿಯಲ್ಲಿ ನನಗೆ ವಿದ್ಯಾರ್ಥಿವೇತನ ಒದಗಿಸುವ ಮೂಲಕ ವೆಂಕಟರಂಗ ಅವರ ತಂದೆ ಅಷ್ಟುಹೊತ್ತಿಗಾಗಲೇ ನನ್ನ ಪೋಷಕರಾಗಿದ್ದರು)”.
ಒಡಿಶಾ ಸರ್ಕಾರದ ವತಿಯಿಂದ ‘ಕಳಿಂಗ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ’ ಪಡೆದ ಜೀವಪದದ ಕವಿ, ಒಡನಾಡಿ ನಾಗತಿಹಳ್ಳಿ ರಮೇಶ್ ಅವರ ಕುರಿತು, ಅವರ ಸೃಜನಶೀಲತೆಯ ಕುರಿತು ಒಡಿಶಾದ ಹಿರಿಯ ಕವಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಪದ್ಮವಿಭೂಷಣ ಸೀತಾಕಾಂತ ಮಹಾಪಾತ್ರ ಅವರ ನುಡಿಗಳಿವು:- “ಒಡಿಶಾ ಸರ್ಕಾರ ಹಾಗೂ ಕಳಿಂಗ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ಕಳಿಂಗ ವಿಶ್ವಚೇತನ ಪುರಸ್ಕಾರ’ದಿಂದ ಪುರಸ್ಕೃತರಾದುದಕ್ಕೆ ನಲ್ಮೆಯ ರಮೇಶ್ ನಿಮಗಿದೋ ಹೃದಯಪೂರ್ವಕ ಅಭಿನಂದನೆಗಳು, ಶುಭಕಾಮನೆಗಳು. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ನೀವು ಸಲ್ಲಿಸಿದ ಸೇವೆಗೆ, ಜೀವಮಾನ ಸಾಧನೆಗಳಿಗೆ ಸಂದಿರುವ ಈ ಗೌರವವು ನಮ್ಮ ಒಡಿಶಾ ರಾಜ್ಯಕ್ಕೂ, ನಿಮ್ಮ ಕರ್ನಾಟಕ ರಾಜ್ಯಕ್ಕೂ ಹೆಮ್ಮೆ ತರುವಂಥ ಸಂಗತಿಯಾಗಿದೆ. ಅಖಿಲ ಭಾರತ ಮಟ್ಟದಲ್ಲಿನ ಸಾಹಿತ್ಯಕ ಉತ್ಕೃಷ್ಟತೆಗೆ, ಮಾನವ ಸಂವೇದನೆಗಳ ಏಕೀಕೃತ ಹುಮ್ಮಸ್ಸಿಗೆ, ಧೀರಪ್ರವೃತ್ತಿಗೆ, ಒಂದಿಡೀ ಭಾರತದ ಸೃಜನಶೀಲತೆ, ಸಾಂಸ್ಕೃತಿಕ ಬೇರುಗಳು ಮತ್ತು ಪ್ರಾದೇಶಿಕ ಸಮೃದ್ಧತೆಗೆ ನೀವೊಂದು ಸಂಕೇತವೇ ಆಗಿದ್ದೀರಿ! ನಿಮಗೆ ಶುಭ ಹಾರೈಸುತ್ತೇನೆ. ಒಂದು ವೇಳೆ ನಮ್ಮ ಜನರು ನಿಮ್ಮ ಪ್ರತಿಭಾ ಸಾಮರ್ಥ್ಯಗಳನ್ನು, ನಿಮ್ಮ ಕವನಗಳಲ್ಲಿ ಕೆನೆಗಟ್ಟಿರುವ ಬಹುಮುಖಿ ಆಯಾಮಗಳನ್ನು, ನಿಮ್ಮದೇ ಒಳನೋಟಗಳನ್ನು ಆಪ್ಯಾಯಮಾನವಾಗಿಯೂ ಸಾಮಾಜಿಕವಾಗಿ ಪ್ರಸ್ತುತವೆನಿಸುವ ರೀತಿಯಲ್ಲಿಯೂ ಸಂಗೀತಮಯವಾಗಿ ಸಾದರಪಡಿಸುವಲ್ಲಿನ ನಿಮ್ಮ ಜಾಣ್ಮೆ-ಗುಣ-ಸಾಮರ್ಥ್ಯಗಳನ್ನು ನಿಜವಾಗಿಯೂ ಗ್ರಹಿಸಿದ್ದೇ ಆದಲ್ಲಿ ಮತ್ತು ನಿಮ್ಮ ಯೋಗ್ಯತೆಗೆ ಸರಿಯಾದ ಬೆಲೆಕಟ್ಟಿದ್ದೇ ಆದಲ್ಲಿ ಒಂದಲ್ಲಾ ಒಂದು ದಿನ ನೀವು ಜ್ಞಾನಪೀಠ ಪುರಸ್ಕಾರವನ್ನು ಸ್ವೀಕರಿಸುತ್ತೀರಿ ಎಂಬ ಭರವಸೆ ನನಗಿದೆ! ಮುಂಬರುವ ವರ್ಷಗಳಲ್ಲಿನ/ದಶಕಗಳಲ್ಲಿನ ನಿಮ್ಮ ಸೃಜನಶೀಲ ಧ್ಯೇಯೋದ್ದೇಶಗಳಿಗೆ, ಸಾಹಸಗಳಿಗೆ ಶುಭ ಹಾರೈಸುತ್ತೇನೆ…”.
ತಮ್ಮನ್ನು ತಾವು ಓರ್ವ ಆದರ್ಶವಾದಿ ಸುಧಾರಕನಾಗಿ ಗುರುತಿಸಿಕೊಳ್ಳಲು ಅಥವಾ ಹಾಗೆಂದು ಕರೆಸಿಕೊಳ್ಳಲು ರಮೇಶ್ ಎಂದಿಗೂ ಬಯಸುವುದಿಲ್ಲ. ಬದುಕಿನ ಕುರಿತಾದ ಅವರ ನಿಲುವು ತೀರಾ ಸರಳ- “ಇದುವರೆಗಿನ ಜೀವನದಲ್ಲಿ ನನ್ನ ಮೇಲೆ ಪ್ರೀತಿಯ ಮಳೆಗರೆದು ಸಾಕಿ-ಸಲಹಿ ನನ್ನ ಜೀವವುಳಿಸಿದ ಅನೇಕ ಮಂದಿಯಿರುವಾಗ, ಇತರರಿಗಾಗಿ ನನ್ನ ಜೀವನವನ್ನು ತ್ಯಾಗ ಮಾಡುವುದು ನನಗೆ ಸಾಧ್ಯವಾಗುವುದಿಲ್ಲವೇ?” ಎಂದೇ ರಮೇಶ್ ಪ್ರಶ್ನಿಸುತ್ತಾರೆ. ಒಂದು ಕಾಲದಲ್ಲಿ ತಾವಿದ್ದ ಅದೇ ದುಸ್ಥಿತಿಯಲ್ಲಿ ಇರುವಂಥ ಜನರಿಗಾಗಿ ತಮ್ಮ ಹೃದಯದಲ್ಲಿ ಹಾಗೂ ಮನೆಯಲ್ಲಿ ಒಂದಿಷ್ಟು ಸ್ಥಳಾವಕಾಶ ಮಾಡಿಕೊಡುವುದಕ್ಕೆ ಈ ನಿಲುವೇ ರಮೇಶರಿಗೆ ಸಾಕಷ್ಟು ಬಲ ನೀಡಿದೆ, ಸಕಾರಣವಾಗಿದೆ ಎನ್ನಬೇಕು. ಆಶ್ರಯವನ್ನಷ್ಟೇ ಅಲ್ಲ, ಹೇರಳವಾಗಿ ಪ್ರೀತಿಯ ಮಹಾಪೂರವನ್ನೇ ಹರಿಸುವುದು ರಮೇಶರ ವ್ಯಕ್ತಿತ್ವದ ಒಂದು ಭಾಗವೇ ಆಗಿದೆ ಎನ್ನಲಡ್ಡಿಯಿಲ್ಲ. ರಮೇಶ್ ಅವರ ಕುರಿತಾಗಿ ಸಾರಸಂಗ್ರಹವಾಗಿ ಏನಾದರೂ ಹೇಳಬೇಕೆಂದರೆ, ಅವರದೇ ಕವನದ ಈ ಸಾಲುಗಳೇ ಅದಕ್ಕೆ ದಾರಿ ತೋರಬಲ್ಲವು:
ಸಪ್ಪೆ ಅನ್ಬೇಡ,
ಒಂದ್ ಕಲ್ ಉಪ್ಪಾಕನ್ನು
——————
ಹೊಸ ಬೆಳಕಲಿ
ಹರಿದು ಬರುವ ಕಾಲವೇ
ಬಾ ನಮ್ಮೀ ಬಾಳಿಗೆ
ಅನುದಿನದ ಅನುಕ್ಷಣದ
ಜಗದ ಗೋಳಿಗೆ.
————————–
ಎಲ್ಲೋ ಬೀಸಿದ ಗಾಳಿಯು
ಇನ್ನೆಲ್ಲೋ ಹಚ್ಚಿದ
ದೀಪವ ಆರಿಸಿದರೆ
ಗಾಳಿಯ ಉಸಿರಿಗೇನು ಅರ್ಥ?
—————————-
ಕಡಿವಾಣ ಹಲ್ಲುಗಳ ನಡುವೆ
ನಾಲಗೆ ಬಾಳುತ್ತಲೇ ಇದೆ
ಮೊಲೆ ಕೂಡ ಕಾಣಾ !
……
ಕೂಡೋಣ
ಕಟ್ಟೋಣ
ಬಾಳೋಣ
ಬೆಳಗೋಣ
ಇವೆಲ್ಲಕ್ಕಿಂತ ಮಿಗಿಲಾಗಿ, ರಮೇಶ್ ಅವರು ತಮ್ಮ ತಾಯಿಯ ಚಿಂತನೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ, ಅವರನ್ನು ಆದರ್ಶ- ಅನುಭಾವಿಕತೆಯ ಸಂತಳಾಗಿ ಪರಿಭಾವಿಸಿದ್ದಾರೆ.
ರಮೇಶರ ತಾಯಿ ‘ಪದದ ಕೆಂಪಕ್ಕ’ ಅವರ ಪಾಲಿನ ಓರ್ವ ಗೆಳತಿ, ದಾರ್ಶನಿಕರು ಮತ್ತು ಮಾರ್ಗದರ್ಶಿ ಮಾತ್ರವೇ ಅಲ್ಲ; ಅವರ ಜೀವದ ಉಸಿರೇ ಆಗಿದ್ದಾರೆ. ರಮೇಶರ ಪಾಲಿಗೆ ಆಕೆ ‘ಸಂತಯೋಗ್ಯ ಸ್ಥಿತಿ’ ತಲುಪಿದ ಅಥವಾ ‘ಸಂತಪದವಿ’ ದಕ್ಕಿಸಿಕೊಂಡಿರುವ, ಈ ಪ್ರಪಂಚದ ಹಾಗೂ ಮತ್ತೊಂದು ಲೋಕದ ಎಲ್ಲ ಪ್ರಜ್ಞೆಯನ್ನೂ ಮರೆತಿರುವ ಒಂದು ಅಪೂರ್ವಜೀವ. ಯೇಸುಕ್ರಿಸ್ತನ ರೀತಿಯಲ್ಲಿ ಆಕೆ ಒಬ್ಬ ದಾನಿಯೂ ಹೌದು, ಒಬ್ಬ ಯಾಚಕಿಯೂ ಹೌದು. ‘ಸಿರಿ-ಸಂಪತ್ತು ಎಂಬುದು ಮೇಲಿನಿಂದ ಕೆಳಗೆ ಹರಿದುಬರಬೇಕು’ ಎಂಬುದು ಆಕೆಯ ಧ್ಯೇಯವೂ ಹೌದು. ರಮೇಶರ ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಅವರ ತಾಯಿಯ ಉಸಿರಾಟ ಮಿಳಿತಗೊಳ್ಳದೇ ಇದ್ದಿದ್ದರೆ ಹಾಗೂ ಇತರರಿಗೆ ಸಹನೀಯವಾಗಿ, ಅರ್ಥಪೂರ್ಣವಾಗಿ ಪರಿಣಮಿಸುವಂತೆ ರಮೇಶರ ಜೀವನವನ್ನು ಆಕೆ ರೂಪಿಸದೇ ಇದ್ದಿದ್ದರೆ, ನಾವೀಗ ಕಾಣುತ್ತಿರುವ ಪರಿಯಲ್ಲಿ ರಮೇಶರನ್ನು ಕಾಣಲಾಗುತ್ತಿರಲಿಲ್ಲ. ರಮೇಶರ ಪಾಲಿಗೆ ಆಕೆಯೇ ಬುದ್ಧ, ಶಿವ, ಕ್ರಿಸ್ತ, ಅಲ್ಲಾಹು, ಬಸವಣ್ಣ, ಗಾಂಧಿ, ಅಂಬೇಡ್ಕರ್ ಎಲ್ಲಾ. ಅವರೆಲ್ಲರ ವ್ಯಕ್ತಿತ್ವ ಹದವಾಗಿ ಮಿಳಿತಗೊಂಡು ರೂಪುಗೊಂಡ ವ್ಯಕ್ತಿತ್ವವೇ ಈ ತಾಯಿ ಎಂಬುದು ರಮೇಶರ ಪರಿಗಣನೆ. ರಮೇಶರ ಸೃಜನಶೀಲತೆಯ ಮೇಲೆ ಪ್ರಭಾವ ಬೀರಿದ ಮತ್ತಿತರ ವ್ಯಕ್ತಿ-ಶಕ್ತಿಗಳಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಸೂಳೆ ಸಂಕವ್ವ, ಬಸವಣ್ಣ, ಟಾಲ್‌ಸ್ಟಾಯ್, ರೂಮಿ, ಚಾಪ್ಲಿನ್, ಗಿಬ್ರಾನ್, ಗಾರ್ಕಿ, ನೆರೂಡ, ಟ್ಯಾಗೋರ್, ಕುವೆಂಪು, ಬೇಂದ್ರೆ, ಕಾರಂತ, ಅಡಿಗ, ಲಂಕೇಶ್, ಕೆ.ಎಸ್. ನರಸಿಂಹಸ್ವಾಮಿ, ಪು.ತಿ.ನ, ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ ಮುಂತಾದವರು ಸೇರಿದ್ದಾರೆ ಹಾಗೂ ಆಧುನಿಕ ಕಾಲಘಟ್ಟಕ್ಕೆ ಬಂದರೆ ಸೂಫಿ ಕವಿತೆಗಳು ಸೇರಿವೆ. ಇನ್ನು, ರಾಜಕೀಯ ದೃಷ್ಟಿಕೋನದ ವಿಷಯಕ್ಕೆ ಬಂದರೆ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಶಾಂತವೇರಿ ಗೋಪಾಲಗೌಡ, ಎಚ್.ಜಿ. ಗೋವಿಂದೇಗೌಡ, ಕೆ.ಎಚ್. ರಂಗನಾಥ್, ನಜೀರ್ ಸಾಬ್, ವಾಜಪೇಯಿ ಇತ್ಯಾದಿ ಧೀಮಂತರೆಡೆಗೆ ನಾಗತಿಹಳ್ಳಿ ರಮೇಶರ ನಿಷ್ಠೆಯಿದೆ.
ಬಹಳಷ್ಟು ನಿರೀಕ್ಷೆಗಳಿರುವ ಇವರ ಇನ್ನೊಂದು ಕವಿತಾ ಸಂಕಲನ “ಬಯಲ ಕನ್ನಡಿ” ಸಿದ್ಧವಾಗಿದ್ದು ಮೂರು ಭಾಷೆಗಳಲ್ಲಿ ಸದ್ಯದಲ್ಲಿಯೇ ಲೋಕಾರ್ಪಣೆಯಾಗಲಿದೆ.
ರಮೇಶರಂಥ ವ್ಯಕ್ತಿಗಳು ಸಿಗುವುದೇ ಅಪರೂಪ ಎನ್ನಬೇಕು. ಹೀಗಾಗಿ ‘ಇಂಥವರ ಸಂತತಿ ಹೆಚ್ಚಲಿ, ಎಲ್ಲೆಡೆ ಹಬ್ಬಲಿ’ ಎಂದು ಹರಸೋಣ, ಹಾರೈಸೋಣ.
ಇಂಗ್ಲಿಷ್ ಮೂಲ: ಅರವಿಂದ್ ಮೆನನ್
(ಖ್ಯಾತ ಲೇಖಕರು, ಚಿಂತಕರು ಮತ್ತು ವಿಮರ್ಶಕರು)
ಕನ್ನಡಕ್ಕೆ: ಯಗಟಿ ರಘು ನಾಡಿಗ್
ನಾಗತಿಹಳ್ಳಿ ರಮೇಶ್ ಅವರನ್ನು ಸಂಪರ್ಕಿಸಬಯಸುವವರಿಗೆ ಇಲ್ಲಿವೆ ಮಾರ್ಗಗಳು:
ಇ-ಮೇಲ್: nagathihalliramesh@gmail.com
ಫೇಸ್‌ಬುಕ್: https://www.facebook.com/nagathihalli.ramesh
ಯೂಟ್ಯೂಬ್: https://youtube.com/user/nagathihalliramesh
* ಅರವಿಂದ್ ಮೆನನ್
ಇ-ಮೇಲ್: govind.aravind@gmail.com
* ಯಗಟಿ ರಘು ನಾಡಿಗ್
ಇ-ಮೇಲ್: naadigru@gmail.com




One Response
Wonderful ♥️