ಬಿಜೆಪಿಯವರಿಗೆ ದೇಶಪ್ರೇಮವೆಂದರೆ ಮೋದಿಯವರನ್ನ ಹೊಗಳುವವರು, ಮೋದಿಯವರನ್ನು ಪ್ರಶ್ನಿಸುವವರು ದೇಶ ವಿರೋಧಿಗಳು ಎನ್ನುವ ಅಭಿಪ್ರಾಯವನ್ನು ಹೊಂದಿರುವ ಕಾರಣದಿಂದಲೇ ಪದೇಪದೇ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಎಲ್ಲರನ್ನೂ ದೇಶ ವಿರೋಧಿಗಳು ಹಾಗೂ ಪಾಕಿಸ್ತಾನದ ಏಜೆಂಟ್ ಗಳು ಎಂದು ಅತ್ಯಂತ ಹಗುರವಾಗಿ ಟೀಕಿಸುವುದು ಪ್ರಜಾಪ್ರಭುತ್ವದಲ್ಲಿ ಯಾರು ಸಹ ಒಪ್ಪಿಕೊಳ್ಳುವಂತಹ ಮಾತುಗಳಾಗಿರುವುದಿಲ್ಲ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಈ ದೇಶದಲ್ಲಿ 1947 ರಿಂದ ಎಲ್ಲ ಸಂದರ್ಭದಲ್ಲಿ ದೇಶದ ಜನತೆ ಹೊರಗಿನ ಶಕ್ತಿಗಳಿಂದ ದೇಶಕ್ಕೆ ತೊಂದರೆಯಾಗುವ ಎಲ್ಲಾ ಸಂದರ್ಭಗಳಲ್ಲಿ ಜಾತಿ, ಮತ, ಧರ್ಮಗಳನ್ನ ಮರೆತು ಪಕ್ಷಾತೀತವಾಗಿ ಒಗ್ಗಟ್ಟಾಗಿ ದೇಶದ ಜೊತೆಯಲ್ಲಿ ನಿಂತಿದ್ದಾರೆ. ಪ್ರತಿಯೊಂದು ಸಂದರ್ಭದಲ್ಲಿ ನಮ್ಮ ಸೈನಿಕರ ಸಾಹಸವನ್ನು, ಅವರ ಸ್ಥೈರ್ಯವನ್ನು, ಅವರ ಹೋರಾಟವನ್ನು, ಅವರ ಸಾಧನೆಗಳನ್ನು, ಮುಕ್ತ ಕಂಠದಿಂದ ಪ್ರಶಂಸಿಸಿ ವಿಜಯದ ಸಂಭ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡಿದ್ದಾರೆ.
ಬಿಜೆಪಿಯವರಿಗೆ ದೇಶಪ್ರೇಮವೆಂದರೆ ಕೇವಲ ಮೋದಿಯವರನ್ನು ಹೊಗಳುವುದು, ಮೋದಿಯವರನ್ನು ಪ್ರಶ್ನಿಸುವವರೆಲ್ಲರೂ ದೇಶ ವಿರೋಧಿಗಳು ಎನ್ನುವ ರೀತಿಯಲ್ಲಿ ಹಗುರವಾಗಿ ಮಾತನಾಡುತ್ತಾರೆ. ದೇಶಪ್ರೇಮದ ದೃಢೀಕರಣ ಪತ್ರವನ್ನು ನೀಡಲು ಬಿಜೆಪಿಯವರಿಗೆ ಯಾರೂ ಸಹ ಪೇಟೆಂಟ್ ಕೊಟ್ಟಿಲ್ಲ. ದೇಶಪ್ರೇಮವೆಂಬುದು ಪ್ರತಿಯೊಬ್ಬ ಭಾರತೀಯರ ರಕ್ತದಲ್ಲಿ ಅಡಗಿದೆ.
ಈ ಹಿಂದೆಯೂ ದೇಶದಲ್ಲಿ ಅನೇಕ ಸರ್ಕಾರಗಳಿತ್ತು, ಅನೇಕರು ಪ್ರಧಾನ ಮಂತ್ರಿಗಳಾಗಿದ್ದರು ಅವರನ್ನು ಟೀಕಿಸುತ್ತಿದ್ದರು ಮತ್ತು ಅವರ ಕಾರ್ಯಕ್ರಮಗಳನ್ನು ನಡವಳಿಕೆಗಳನ್ನು ಪ್ರಶ್ನಿಸುತ್ತಿದ್ದರು. ಹಾಗೆಂದ ಮಾತ್ರಕ್ಕೆ ನೆಹರುರವರು ತಮ್ಮನ್ನು ಟೀಕಿಸುವವರನ್ನು ಎಂದೂ ಸಹ ದೇಶ ವಿರೋಧಿಗಳು ಎಂದು ಅಭಿಪ್ರಾಯ ಪಡಲೇ ಇಲ್ಲ. ಬದಲಾಗಿ ಅವರ ಸಲಹೆಗಳನ್ನು ಗೌರವದಿಂದ ಸ್ವೀಕರಿಸುತ್ತಿದ್ದರು, ಟೀಕೆಗಳನ್ನು ಸಹ ತಾಳ್ಮೆಯಿಂದ ಆಲಿಸುತ್ತಿದ್ದರು.
ಶ್ರೀಮತಿ ಇಂದಿರಾ ಗಾಂಧಿರವರು ಸಹ ತಮ್ಮ ವಿರೋಧಿಗಳನ್ನು ಎಂದೂ ದೇಶದ್ರೋಹಿಗಳು ಎಂದು ಕರೆಯಲಿಲ್ಲ. ಇಂದು ಪ್ರಧಾನಿಗಳಾಗಿರುವ ಮೋದಿಯವರು ಡಾ. ಮನಮೋಹನ್ ಸಿಂಗ್ ರವರ ಸರ್ಕಾರದ ಅವಧಿಯಲ್ಲಿ ನಡೆದಂತಹ ಕೆಲವು ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಕೇಂದ್ರ ಸರ್ಕಾರವನ್ನು ಮತ್ತು ಕೇಂದ್ರ ಸರ್ಕಾರದ ಭದ್ರತೆಯ ವಿಚಾರವನ್ನು ಕೇಂದ್ರ ಸರಕಾರದ ಇಲಾಖೆಯನ್ನು ಟೀಕಿಸಿದ್ದಾರೆ ಎನ್ನುವುದನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ.
ಭಯೋತ್ಪಾದಕರ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ನಡೆಯುವಂತಹ ಮತ್ತು ನಡೆಸಿದಂತಹ ಎಲ್ಲ ಹೋರಾಟಗಳಲ್ಲಿ ಪಕ್ಷಾತೀತವಾಗಿ ಎಲ್ಲರೂ ಸಹ ದೇಶದ ಜೊತೆಯಲ್ಲಿ ನಿಂತಿದ್ದಾರೆ. ನಮ್ಮ ಸೈನಿಕರ ಸಾಹಸವನ್ನ ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ರಾಜ ತಾಂತ್ರಿಕ ನಿಲುವುಗಳನ್ನು ಸಹ ಎಲ್ಲರೂ ಬೆಂಬಲಿಸಿದ್ದಾರೆ.
ವಾಸ್ತವ ಸಂಗತಿಗಳನ್ನು ಕೇಂದ್ರ ಸರ್ಕಾರದೊಂದಿಗೆ ಪ್ರಸ್ತಾಪಿಸಿದ ತಕ್ಷಣವೇ ಬಿಜೆಪಿ ನಾಯಕರಿಗೆ ಪ್ರಶ್ನಿಸುವವರೆಲ್ಲರೂ ದೇಶದ್ರೋಹಿಗಳಾಗುತ್ತಾರೆ ಎನ್ನುವುದಾದರೆ ಇನ್ನು ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ?
ದೇಶಪ್ರೇಮ ಯಾರೋ ಒಬ್ಬರ ಆಸ್ತಿಯಲ್ಲ, ದೇಶಪ್ರೇಮಿಗಳು ಎಂದು ದೃಢೀಕರಣ ಪತ್ರವನ್ನು ನೀಡಲು ಯಾರಿಗೂ ಅಧಿಕಾರವನ್ನು ನೀಡಿಲ್ಲ, ಬಿಜೆಪಿಯವರು ಹೇಳಿದ ಮಾತ್ರಕ್ಕೆ ದೇಶಪ್ರೇಮಿಗಳ ಆಗುವುದಿಲ್ಲ. ಅವರು ಟೀಕಿಸಿದ ಮಾತ್ರಕ್ಕೆ ದೇಶ ವಿರೋಧಿಗಳು ಆಗುವುದಿಲ್ಲ.
ಯಾರು, ಈ ದೇಶದ ಬಾವುಟದ ಅಡಿಯಲ್ಲಿ, ಈ ದೇಶದ ಭೂಪಟದ ಒಳಗಡೆ, ಸಂವಿಧಾನವನ್ನು ಒಪ್ಪಿ ಬದುಕುತ್ತಾರೋ, ಅವರೆಲ್ಲರೂ ದೇಶಪ್ರೇಮಿಗಳು.
ದೇಶವೆಂದರೆ ಒಂದು ವ್ಯಕ್ತಿಯಲ್ಲ, ದೇಶವೆಂದರೆ ಒಂದು ಪಕ್ಷವು ಅಲ್ಲ, ದೇಶವೆಂದರೆ 140 ಕೋಟಿ ಜನತೆ ಎಂಬುದನ್ನ ಅರಿತು ಟೀಕೆಗಳನ್ನು ಮಾಡುವುದು ಒಳ್ಳೆಯದು.
ಈ ದೇಶದಲ್ಲಿ ಭಯೋತ್ಪಾದನೆ ಆರಂಭವಾದದ್ದು 1990ರ ನಂತರ.ಷಅಲ್ಲಿಯ ತನಕ ಭಯೋತ್ಪಾದಕರ ಚಟುವಟಿಕೆಗಳು ದೇಶದಲ್ಲಿ ಇರಲಿಲ್ಲ. ಇದನ್ನು ಬಿಜೆಪಿಯವರು ಅರಿತು ಮಾತನಾಡಲಿ. ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ 1948, 1965, 1971ರಲ್ಲಿ ಮೂರು ಬಾರಿ ಪಾಕಿಸ್ತಾನದ ವಿರುದ್ಧ ನಿರ್ಣಾಯಕವಾದ ರೀತಿಯಲ್ಲಿ ಯುದ್ಧವನ್ನು ಮಾಡಿ ಅವರ ಮೂಳೆಯನ್ನು ಮುರಿದಿದೆ. ದೇಶ ರಕ್ಷಣೆಯ ಬಗ್ಗೆ ಬಿಜೆಪಿ ಮಾತನಾಡುವ ಮುನ್ನ ಕೆಲವು ಸಂಗತಿಗಳು ಅವರ ಗಮನದಲ್ಲಿರಲಿ.
ಇಂದು ದೇಶದಲ್ಲಿ ದೇಶದ ರಕ್ಷಣೆಗಾಗಿ ಇರುವಂತಹ ಬಹಳಷ್ಟು ಸಂಸ್ಥೆಗಳನ್ನ ಸ್ಥಾಪಿಸಿದ್ದು ನೆಹರೂರವರ ಕಾಲದಲ್ಲಿ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಲ್ಲಿ. ಹಾಗೆಯೇ ಎನ್ಐಎ ಸ್ಥಾಪನೆಯಾದದ್ದು ಮನಮೋಹನ್ ಸಿಂಗ್ ರವರ ಕಾಲದಲ್ಲಿ, ಅಣು ಒಪ್ಪಂದಕ್ಕೆ ಸಹಿಯಾಗಿದ್ದು ಮನಮೋಹನ್ ಸಿಂಗ್ ರವರ ಕಾಲದಲ್ಲಿ, 1974 ರಲ್ಲಿಯೇ ಶ್ರೀಮತಿ ಇಂದಿರಾ ಗಾಂಧಿ ರವರು ಪೋಕ್ರಾನ್ ಇಲ್ಲಿ ಅಣು ಪರೀಕ್ಷೆಯನ್ನು ಮೊದಲ ಬಾರಿಗೆ ದೇಶದಲ್ಲಿ ಮಾಡಿದ್ದಾರೆ. ಈ ವಿಚಾರವನ್ನು ರಾಜನಾಥ್ ಸಿಂಗ್ ರವರು ಮರೆತಂತಿದೆ.
ದೇಶದ ರಕ್ಷಣೆಯ ವಿಚಾರದಲ್ಲಿ, ದೇಶದ ಭದ್ರತೆ, ಐಕ್ಯತೆಯ ವಿಚಾರದಲ್ಲಿ, ಕಾಂಗ್ರೆಸ್ ಪಕ್ಷ ನಡೆಸಿರುವ ಹೋರಾಟಗಳು ಅದಕ್ಕಾಗಿ ಸ್ಥಾಪಿಸಿರುವ ಸಂಸ್ಥೆಗಳು ಎಲ್ಲವೂ ಇತಿಹಾಸದ ಪುಟದಲ್ಲಿ ದಾಖಲಾಗಿವೆ. ಚರಿತ್ರೆಯ ಅರಿವಿಲ್ಲದ ಬಿಜೆಪಿಯ ಕೆಲವು ಹೊಗಳುಭಟ್ಟರು ಮಾತನಾಡಿದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಸಾಧ್ಯವಿಲ್ಲ.
ಯಶಸ್ಸನ್ನು ತನ್ನದೆಂದು ಅಪ್ಪಿ ಮುದ್ದಾಡುವರು ವಿಫಲತೆಯನ್ನು ಒಪ್ಪಿಕೊಳ್ಳುವ ಎದೆಗಾರಿಕೆಯನ್ನು ತೋರಿಸಬೇಕಾಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




