‘ಪಾಟೀಲ’ ಪದಕ್ಕೆ ರಾಜಕೀಯ ನಾಯಕರ ಕಿತ್ತಾಟ

11 months ago

ಅಭಿವೃದ್ಧಿಪರ ಮಾತುಗಳನ್ನಾಡಬೇಕಾದ ವಿಜಾಪುರ ಜಿಲ್ಲೆಯ ನಾಯಕರು ‘ಪಾಟೀಲ’ ಮನೆತನದ ಹೆಸರಿನ ಹಿಂದೆ ಬಿದ್ದು, ರಾಜ್ಯದ ಸಾರ್ವಜನಿಕರಿಗೆ ಮನರಂಜನೆ ನೀಡುತ್ತಿರುವುದು ಇತ್ತೀಚಿನ ದಿನಗಳ ಮತ್ತೊಂದು ವಿಶೇಷ.

 “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ” ಎಂದು ನುಡಿದ ಬಸವನಾಡಿನ ಶಾಸಕರು ಮತ್ತು ಬಸವಣ್ಣನವರ ಹೆಸರನ್ನೇ ಹೊಂದಿರುವ ವಿಜಾಪುರ ನಗರ ಶಾಸಕರು ಈ ಸಂಪೂರ್ಣ ವಚನದ ಅರ್ಥವನ್ನಾಗಲಿ ಅಥವಾ  ಒಂದು ಪದವಾದ ‘ಕಳಬೇಡ’ ಶಬ್ದದ ಭಾವಾರ್ಥವಾಗಲಿ ಅರಿಯದೆ ಇರುವುದು ಇಡೀ ಬಸವನಾಡಿನ ದುರಂತ.

‘ಪಾಟೀಲ’ ಶಬ್ದಕ್ಕೇಕೆ ಇಷ್ಟೊಂದು  ಮಹತ್ವ? ಇಂದು ‘ಪಾಟೀಲ’ ಅಡ್ಡ ಹೆಸರು ಕುದುರೆ ಇಲ್ಲದ ‘ಕುದುರೆಯಥಡಿ’ (saddle) ದಂತಾಗಿದೆ. ಕುದುರೆಯನ್ನೇ ಕಳೆದುಕೊಂಡ ಪಾಟೀಲರು ಕುದುರೆಯ ಥಡಿಗಾಗಿ ಹೊಡೆದಾಡುತ್ತಿರುವುದನ್ನು ಜನ ನೋಡಿ ನಗುವಂತಾಗಿದೆ.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ರಾಜರೇ ಮರೆಯಾಗಿರುವಾಗ, ದೇಸಾಯಿಗಳ ದೇಸಗತಿ, ಸರನಾಡಗೌಡರ ಗೌಡಕಿ tenancy Actನಲ್ಲಿ ಕೊಚ್ಚಿಕೊಂಡು ಹೋಗಿರುವಾಗ, ಸರ್ಕಾರಗಳು ‘ಗೌಡರ ಧಪ್ತರ’ ಗಳನ್ನು ಕಿತ್ತುಕೊಳ್ಳುವಾಗ ಹೋರಾಡಬೇಕಾದ ಪಾಟೀಲರು ಊರನ್ನು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲಿನ ಕೀಲಿಕೈಗಾಗಿ ಹೋರಾಡುವಂತಿದೆ.

ನಾನೂ ಕೂಡ ಒಂದೂರಿನ ‘ಗೌಡ’ನಾದರೂ, ಚಿಕ್ಕಂದಿನಲ್ಲಿ ಗೌಡರ ಪ್ರಾಮುಖ್ಯತೆಯನ್ನು ಅನುಭವಿಸಿದವನಾದರೂ ಇಂದು ಇದೊಂದು ‘ಗೌರವ ಸೂಚಕ ಪದ’ ವೆಂದು ಕನಿಷ್ಠ ನಾನು ಮಾತ್ರ ಪರಿಗಣಿಸುತ್ತಿಲ್ಲ. ಆದರೆ ಒಬ್ಬರು ಇಂದಿನ ಸಚಿವರು, ಇನ್ನೊಬ್ಬರು ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಘೋಷಣೆ ಮಾಡಿದ ರಾಜಕೀಯ ನಾಯಕರೇಕೇ ‘ಗೌಡ’ ಪದದ ಹಿಂದೆ ಬಿದ್ದಿದ್ದಾರೆಂದು ತಿಳಿಯಲು  ಇತಿಹಾಸದ ಮೊರೆ ಹೊಕ್ಕೆ. ಅಲ್ಲಿ ನನಗೆ ಉತ್ತರ ಸಿಕ್ಕಿತು. ಸಿಕ್ಕ ಇತಿಹಾಸವನ್ನು ಸಂಕ್ಷಿಪ್ತವಾಗಿ ತಮ್ಮೆದುರು ತೆರೆದಿಡಲು ಬಯಸುತ್ತೇನೆ.

ಮೌರ್ಯರ ಭಾರತದಲ್ಲಿ ಗೌಡನಿಗೆ ‘ಗ್ರಾಮಿಕ’ ನೆಂದರೆ, ಮನು (ಮನುಶಾಸ್ತ್ರದ ರಚಕ) ಗೌಡನನ್ನು ‘ಗ್ರಾಮಿಣಿ’ ಎನ್ನುತ್ತಾನೆ. ಇವನನ್ನು ಕರ್ನಾಟಕದ ಮೊದ ಮೊದಲ ಶಾಸನಗಳಲ್ಲಿ ‘ಗಾಮಿಗ’ ಮತ್ತು  ‘ಗಾಮಿ’ ಎಂದು ಬಳಸಲಾಗಿದೆ. ಗಾಮಿಯು ಕಾಲಾಂತರದಲ್ಲಿ ‘ಗಾವುಂಡ’ ‘ಗಾಮುಂಡ’, ‘ಗೌಂಡ’ ಎಂದು ದಾಖಲಿಸಲಾಗಿದೆ. ಇವೆ ಶಬ್ದಗಳು ಮುಂದೆ ಗೌಡನೆಂದು ಪರಿವರ್ತನೆ ಹೊಂದುತ್ತವೆ. ಗೌಡನು ಗ್ರಾಮಾಧಿಕಾರಿಯೆಂದು ಇತಿಹಾಸ ತಿಳಿಸುತ್ತದೆ. ಕ್ರಿ.ಶ. ಎರಡನೆಯ ಶತಮಾನದ ಮ್ಯಾಕದೋನಿ ಶಾಸನದ ಕುಮಾರದಾಸನೆಂಬ ‘ಗುಮಿಕ’ನ (ನಾಯಕ) ಉಲ್ಲೇಖವೂ ಕಂಡುಬಂದಿದೆ. ಬಾದಾಮಿಯ ಚಾಲುಕ್ಯರ ದೊರೆ ವಿನಯಾದಿತ್ಯನ ಬಳ್ಳಿಗಾವೆ ಶಾಸನದಲ್ಲಿ ‘ಗಾಮುಂಡ’ ಶಬ್ದ ಕಾಣಸಿಗುತ್ತದೆ. ಕೆಲವು ಬಾರಿ ಗೌಡನಿಗೆ ‘ಒಡೆಯ’ ಮತ್ತು ‘ಪ್ರಭು’ ಎಂಬ ಉಲ್ಲೇಖವೂ ಇದೆ.

ಇಂದು ಈ ನಾಯಕರ ಜಗಳಕ್ಕೆ ಮೂಲವಾದ ‘ಪಾಟೀಲ’ ಪದದ ಐತಿಹಾಸಿಕತೆ ಹುಡುಕುತ್ತ ಹೋದಲ್ಲಿ ಗ್ರಾಮಾಧಿಕಾರಿಗೆ ‘ಪಾಟೀಲ’ ಎಂದು ಸಂಭೊದಿಸಿದ ಹಿಂದಿ, ಉರ್ದು ಮತ್ತು ಗುಜರಾತಿ ಭಾಷೆಗಳಲ್ಲಿ ಉಲ್ಲೇಖ ಸಿಗುತ್ತದೆ. ಇವನನ್ನು ಗುಜರಾತಿನಲ್ಲಿ ‘ಪಟೇಲ’ನೆಂದೂ ಮರಾಠಿಯಲ್ಲಿ ‘ಪಾಟೀಲ’ನೆಂದೂ ಕರೆಯಲಾಗಿದೆ. ಗ್ರಾಮಾಧಿಕಾರಿ ಎಂಬರ್ಥದ ‘ಪಟ್ಟಕಿಲ’ಎಂಬ ಶಬ್ದದಿಂದ ‘ಪಟೇಲ’ ಅಥವಾ ‘ಪಾಟೀಲ’ ಶಬ್ದ ಬಂದಿದೆ. ಈ ಶಬ್ದದ ಐತಿಹಾಸಿಕ ಮಹತ್ವ ತಿಳಿಯಲು ಇನ್ನಷ್ಟು ಆಳಕ್ಕಿಳಿದರೆ ಇದು ಹನ್ನೆರಡನೆಯ ಶತಮಾನದಿಂದ ಮಾತ್ರ ಬಳಕೆಯಲ್ಲಿರುವ ವಿಷಯವು ಬಹಿರಂಗವಾಗುತ್ತದೆ. ಜಬಲಪೂರ ಮತ್ತು ಭೋಪಾಲಗಳಲ್ಲಿ  ದೊರೆತಿರುವ ಶಾಸನಗಳಲ್ಲಿ ‘ಪಟೇಲ’ ಮತ್ತು ‘ಪಾಟೀಲ’ ಶಬ್ದದ ಐತಿಹಾಸಿಕ ಮಾಹಿತಿ ದೊರಕುತ್ತದೆ. ಮೇಲಾಗಿ ಕನ್ನಡದ ‘ಗೌಡ’ ನು  ಹಿಂದಿ ಉರ್ದು ಮತ್ತು ಗುಜರಾತಿ ಭಾಷೆಗಳ ‘ಪಟೇಲ’ ಅಥವಾ ಮರಾಠಿಯ ‘ಪಾಟೀಲ’ರು ಗ್ರಾಮದ ಆಡಳಿತಾಧಿಕಾರಿಗಳಾಗಿದ್ದರೆಂದು ತಿಳಿದು ಬರುತ್ತದೆ. ಮೇಲಾಗಿ ‘ಪಾಟೀಲ’ ಶಬ್ದವು ಕೇವಲ ಉತ್ತರ ಕರ್ನಾಟಕದ ಅವಿಭಾಜ್ಯ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ವಿಜಾಪುರ ಮತ್ತು ಸ್ವಲ್ಪ ಮಟ್ಟಿಗೆ  ಕಲಬುರ್ಗಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಕಾಣಸಿಗುತ್ತದೆ. ಇದಕ್ಕೆ ಕಾರಣ ಈ ಪ್ರದೇಶಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮರಾಠಿ  ಭಾಷೆಯನ್ನಾಡುವ ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದವು. ಆದರೆ ‘ಗೌಡ’ ಎಂಬ ಕನ್ನಡ ಶಬ್ದ ಕನ್ನಡ ನಾಡಿನಾಧ್ಯಂತ ಪ್ರಚಲಿತವಾಗಿದೆ.

ವಿ.ಸೂ.ಓದುಗರು ಹೆಚ್ಚು ಬರೆದರೆ ಓದಲಾರರು ಎಂದು ಸಂಕ್ಷಿಪ್ತಗೊಳಿಸಲಾಗಿದೆ.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply