ಬೆಂಗಳೂರು: ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದು ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳಿಗೆ ಸಭಾದ್ಯಕ್ಷರು ಏರ್ಪಡಿಸಿರುವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಿ. ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ದವಾಗಿ ಸದನದ ಮುಂದೆ ಮಂಡಿಸಬಹುದು ಎಂದರು.
ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾನೂನು-ಕಾಯ್ದೆಗಳನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಶಾಸನ ರಚನೆಗೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ಸಂವಿಧಾನದ ಮೌಲ್ಯ ಅರಿತುಕೊಳ್ಳಿ ಎಂದು ಮುಖ್ಯಮಂತ್ರಿ ಮನವರಿಕೆ ಮಾಡಿಸಿದರು.
ನಾನು ಮೊದಲ ಬಾರಿ ಹಣಕಾಸು ಸಚಿವನಾದಾಗ “ನೂರು ಕುರಿ ಎಣಿಸಲು ಬಾರದವನು ಬಜೆಟ್ ಹೇಗೆ ಮಾಡ್ತಾರೆ?” ಎಂದು ಪತ್ರಿಕೆಯೊಂದು ಟೀಕಿಸಿತ್ತು. ಟೀಕೆಯನ್ನು ನಾನು ಸವಾಲಾಗಿ ಸ್ವೀಕರಿಸಿ ನಿರಂತರ ವಿಷಯ ತಜ್ಞರ ಜತೆ ಚರ್ಚಿಸಿ ಬಜೆಟ್ ಮಂಡಿಸಿದೆ. ಮರುದಿನ “THE HINDU” ಪತ್ರಿಕೆ ನನ್ನ ಬಜೆಟ್ ಅನ್ನು ಅತ್ಯುತ್ತಮ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಹೀಗಾಗಿ ಜ್ಞಾನ ದಾಹ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಿ ಎಂದು ತಮ್ಮದೇ ಉದಾಹರಣೆ ಮೂಲಕ ಶಾಸಕರಿಗೆ ತಿಳಿ ಹೇಳಿದರು.
ಶಾಸಕರು ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ವಿವರಿಸಿದರು.
ಈಚಿನ ವರ್ಷಗಳಲ್ಲಿ ಚುನಾವಣೆಗಳು ದುಬಾರಿಯಾಗುತ್ತಿವೆ. ಅರ್ಹರು, ಪ್ರಾಮಾಣಿಕರು ಆಯ್ಕೆಯಾಗುವುದು ವಿರಳವಾಗುತ್ತಿದೆ. ಚುನಾವಣೆಗೆ ಹಣಬೇಕು. ಆದರೆ, ಅದೇ ಪ್ರಧಾನವಾಗಬಾರದು ಎಂದು ಹೇಳಿದರು.
ಒಮ್ಮೆಯಾದರೂ ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎಂದು ಎಷ್ಟೋ ಜನರು ಕನಸು ಕಾಣುತ್ತಾರೆ. ಆದರೆ, ಕನಸು ನನಸಾದಾಗ ಕಲಾಪಗಳಿಗೆ ಬರುವುದಿಲ್ಲ. ಇಂತಹ ಮನೋಭಾವ ಹೋಗಬೇಕು. ಉತ್ತಮ ಸಂಸದೀಯ ಪಟುಗಳಾಗಬೇಕು ಎಂದರು
ವಾಟಾಳ್ ನಾಗರಾಜ್ ಅವರು ಒಬ್ಬ ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಿ ಎಂದು ಸೂಚಿಸಿದರು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಸತಿ ಸಚಿವ ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಉಪಸ್ಥಿತರಿದ್ದರು.




