ದೇವೇಗೌಡರು ಜೀವರಾಜ್ ಆಳ್ವಾರನ್ನು ಕಂಡಾಗಲೆಲ್ಲ, “ನೀನು ನಮ್ ಹುಡ್ಗ ಕಣಪ್ಪ. ನೀನ್ ಬೆಳೀಬೇಕು” ಎಂದು ಬೆಣ್ಣೆ ಹಚ್ಚುತ್ತಿದ್ದರಂತೆ. ಆದರೆ, ದೇವೇಗೌಡರು ತಾವು ಮುಖ್ಯಮಂತ್ರಿಯಾಗಲು ಹಾಗೆ ಪೂಸಿ ಹೊಡೆಯುತ್ತಿದ್ದಾರೆ ಎಂದು ಸ್ಪಷ್ಟವಾಗಿ ಅರಿತಿದ್ದ ಜೀವರಾಜ್ ಆಳ್ವಾ ಮಾತ್ರ ಕೊನೆಯವರೆಗೂ ಅವರ ರಾಜಕೀಯ ಎದುರಾಳಿಯಾದ ರಾಮಕೃಷ್ಣ ಹೆಗಡೆಯವರ ಗುಂಪಿನಲ್ಲೇ ಉಳಿದರಂತೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈ ಕತೆಯಲ್ಲಿನ ಪಾತ್ರಧಾರಿಗಳಾದ ದೇವೇಗೌಡ ಹಾಗೂ ಜೀವರಾಜ್ ಆಳ್ವಾರ ಜಾಗದಲ್ಲಿ ಸಿದ್ದರಾಮಯ್ಯ ಹಾಗೂ ನಿಮ್ಮ ಪಾತ್ರಗಳು ಸೂಕ್ತವಾಗಿ ಹೊಂದಾಣಿಕೆಯಾಗುತ್ತವೆ. ಒಂದೇ ವ್ಯತ್ಯಾಸವೆಂದರೆ, ಜೀವರಾಜ್ ಆಳ್ವಾರಿಗೆ ದೇವೇಗೌಡರ ಒಳಾಸೆಯ ಬಗ್ಗೆ ಇದ್ದ ಎಚ್ಚರಿಕೆ ನಿಮಗಿಲ್ಲದಿರುವುದು.
ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ನೀವು 2013-18ರವರೆಗೆ ಬೃಹತ್ ನೀರಾವರಿ ಸಚಿವರಾಗಿದ್ದಾಗ ಬರದ ನಾಡಾಗಿದ್ದ ವಿಜಾಪುರದಲ್ಲಿ ನೀರಿನ ಚಿಲುಮೆ ಉಕ್ಕುವಂಥ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ, ಖ್ಯಾತ ಜಲತಜ್ಞ ರಾಜೇಂದ್ರ ಪ್ರಸಾದ್‌ರಿಂದಲೇ ಭೇಷ್ ಅನ್ನಿಸಿಕೊಂಡವರು. ಇಂತಹ ನೀವು ಅಂದಿನಿಂದಲೂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದೀರಿ. ನಿಮ್ಮ ಈ ನಿಷ್ಠೆಯ ಕಾರಣಕ್ಕೆ ವೀರಶೈವ-ಲಿಂಗಾಯತ ಸಮುದಾಯಗಳೆರಡಲ್ಲೂ ತೀವ್ರ ವಿರೋಧವಿದ್ದರೂ, ಕಳೆದ ಬಾರಿ ಸಿದ್ದರಾಮಯ್ಯನವರು ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸನ್ನು ತರಾತುರಿಯಲ್ಲಿ ಕೇಂದ್ರಕ್ಕೆ ರವಾನಿಸಿದ್ದರು. (ನಿಮ್ಮ ಪ್ರತ್ಯೇಕ ಲಿಂಗಾಯತ ಹೋರಾಟದ ಹಿಂದೆ ನಿಮ್ಮ ಎಜುಕೇಶನ್ ಲಾಬಿಯ ಹಿತಾಸಕ್ತಿ ಅಡಗಿತ್ತು ಎಂಬ ಗಂಭೀರ ಆರೋಪವೂ ಇದೆ) ಇದು ನಿಮ್ಮ ವಿರುದ್ದ ಎಂಥ ಆಕ್ರೋಶದ ಭುಗಿಲು ಸೃಷ್ಟಿಸಿತೆಂದರೆ, ನಿಮ್ಮ ಸ್ವಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸಬೇಕಾಯಿತು.
ಹೀಗಿದ್ದೂ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪನವರಿಗೆ ಹೋಲಿಸಿದರೆ, ಲಿಂಗಾಯತ ಸಮುದಾಯಕ್ಕೆ ವೈಚಾರಿಕ ಹಾಗೂ ರಾಜಕೀಯ ನಾಯಕತ್ವ ನೀಡುವ ಎಲ್ಲ ಅರ್ಹತೆ ಇರುವುದು ನಿಮಗೆ ಮಾತ್ರ. ಆದರೆ, ಆ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕಿದ್ದ ನೀವು ಆಲದಮರ ವ್ಯಕ್ತಿತ್ವದ ಸಿದ್ದರಾಮಯ್ಯನವರ ಸಖ್ಯದಲ್ಲೇ ಸುಖ ಅನುಭವಿಸಲು ಬಯಸುತ್ತಿರುವುದು ನಿಮ್ಮ ಪಾಲಿಗೆ ಬಹು ದೊಡ್ಡ ದುರಂತವಾಗುವುದು ನಿಶ್ಚಿತ. (ಆಲದ ಮರ ತನ್ನ ಬಳಿಗೆ ಬರುವ ಎಲ್ಲರಿಗೂ ಆಶ್ರಯ ನೀಡುತ್ತದೆಯೇ ಹೊರತು, ಒಂದು ಗರಿಕೆ ಹುಲ್ಲೂ ಸ್ವತಂತ್ರವಾಗಿ ಬೆಳೆಯಲು ಅವಕಾಶ ನೀಡುವುದಿಲ್ಲ)
ವೀರೇಂದ್ರ ಪಾಟೀಲರ ನಂತರ ರಾಜ್ಯದಲ್ಲಿ ಇದುವರೆಗೆ ಲಿಂಗಾಯತ ಸಮುದಾಯದ ಯಾವೊಬ್ಬ ಕಾಂಗ್ರೆಸ್ ನಾಯಕನೂ ಮುಖ್ಯಮಂತ್ರಿಯಾಗಿಲ್ಲ. ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದರಿಂದ ಕುಪಿತಗೊಂಡ ಲಿಂಗಾಯತ ಸಮುದಾಯ ಸಾರಾಸಗಟಾಗಿ ಬಿಜೆಪಿಯನ್ನು ಅಪ್ಪಿಕೊಂಡಿದ್ದರಿಂದ ಸೃಷ್ಟಿಯಾಗಿರುವ ನಿರ್ವಾತವಿದು. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಲಿಂಗಾಯತರನ್ನು ಕಾಂಗ್ರೆಸ್ ಪರ ಸಂಘಟಿಸಿ, ಲಿಂಗಾಯತ ಸಮುದಾಯದ ಮತ್ತೊಬ್ಬ ಬಲಿಷ್ಠ ನಾಯಕರಾಗಿ ಹೊರಹೊಮ್ಮುವ ಪ್ರಯತ್ನ ಮಾಡಬೇಕಿದ್ದ ನೀವು, ಕೇವಲ ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯರ ಬೆಂಬಲಿಗರಾಗಿಯೇ ಉಳಿದು ಬಿಟ್ಟಿರುವುದು ನಿಜಕ್ಕೂ ದುರಂತ.
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಹಾಗೂ ಕುರುಬ ಮತದಾರರದ್ದು ಡೆಡ್ಲಿ ಕಾಂಬಿನೇಷನ್ ಎಂಬುದು ಸತ್ಯ. ಹೀಗಾಗಿಯೇ ನೀವು, ಶಿವಾನಂದ ಪಾಟೀಲ್‌ರಂಥ ಮೂಲ ಕಾಂಗ್ರೆಸ್ ನಾಯಕರೆಲ್ಲ ಸಿದ್ದರಾಮಯ್ಯರ ಓಲೈಕೆ ನಡೆಸುತ್ತಿದ್ದೀರಿ ಎಂಬುದೂ ಸತ್ಯ. ಆದರೆ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ-ಮಾದಿಗ ಮತದಾರರದ್ದೂ ಡೆಡ್ಲಿ ಕಾಂಬಿನೇಷನ್ ಎಂಬುದನ್ನು ನೀವೆಲ್ಲ ಪ್ರಜ್ಞಾಪೂರ್ವಕವಾಗಿ ಮರೆತಿದ್ದೀರಿ. ಈ ಡೆಡ್ಲಿ ಕಾಂಬಿನೇಷನ್ ಬಲದಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗಿ ಬೇರು ಬಿಟ್ಟಿರುವುದು ಎಂಬ ಸತ್ಯವನ್ನೂ ಕೂಡಾ.
ಹೀಗಾಗಿ, ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಸಿದ್ಧಾಂತದ ಭಾಗವಾಗಿ ಜಾರಿಯಾಗಲೇಬೇಕಾದ ಒಳ ಮೀಸಲಾತಿಯ ಪರ ಸಂಪುಟ ಸಭೆಯಲ್ಲಿ ಧ್ವನಿ ಎತ್ತಿ, ಅದರ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಸಾಕು, ಸಿದ್ದರಾಮಯ್ಯರನ್ನು ಓಲೈಸುವ ಕರ್ಮದಿಂದ ಸುಲಭವಾಗಿ ಪಾರಾಗಬಹುದು ಹಾಗೆಯೇ ಲಿಂಗಾಯತ ಸಮುದಾಯದಿಂದ ಮುಖ್ಯಮಂತ್ರಿಯ ಪ್ರಬಲ ದಾವೆದಾರರಾಗಿಯೂ ಹೊರ ಹೊಮ್ಮಬಹುದು.
ದಯವಿಟ್ಟು ಈ ದಿಕ್ಕಿನಲ್ಲಿ ಯೋಚಿಸಿ, ಕಾರ್ಯಪ್ರವೃತ್ತರಾಗಿ ಎಂದು ನನ್ನ ಕಳಕಳಿಯ ಮನವಿ.
– ಸದಾನಂದ ಸಿ. ಗಂಗನಬೀಡು




