
ಚಿಕ್ಕಮಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಅಂತ್ಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ತಮ್ಮ ಗೆಲುವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮರು ಎಣಿಕೆಯ ಬಳಿಕ ಅವರ ಗೆಲುವಿನ ಅಂತರ ಇನ್ನಷ್ಟು ಹೆಚ್ಚಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಬಳಿಕ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ 279 ತಿರಸ್ಕೃತ ಅಂಚೆ ಮತಗಳ ಮರು ಪರಿಶೀಲನೆ ಮತ್ತು ಮರು ಎಣಿಕೆಗೆ ಆದೇಶ ನೀಡಿತ್ತು.
ಇಂದು ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಮರು ಎಣಿಕೆ ವೇಳೆ ಒಟ್ಟು 1,822 ಅಂಚೆ ಮತಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಲಾಯಿತು. ಈ ಪ್ರಕ್ರಿಯೆಯ ಬಳಿಕ ರಾಜೇಗೌಡ ಅವರ ಗೆಲುವಿನ ಅಂತರ 201ರಿಂದ 203ಕ್ಕೆ ಏರಿಕೆಯಾಗಿ, ಅಂತಿಮವಾಗಿ 203 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಶಾಲಿಯಾದರು.
ಮತ ಎಣಿಕೆ ಆರಂಭಕ್ಕೂ ಮುನ್ನ ಮತಪೆಟ್ಟಿಗೆಯ ಸೀಲ್ ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಲಕಾಲ ಗದ್ದಲವೂ ನಡೆಯಿತು. ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಏಜೆಂಟ್‌ಗಳು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಬಳಿಕ ಎಣಿಕೆ ಕಾರ್ಯ ಮುಂದುವರಿಯಿತು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರದ ಸುತ್ತ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.




