ತಾಯಂದಿರಿಗೆ ಮಾತ್ರವೇ ಗೊತ್ತಿರುತ್ತದೆ ಹೆರಿಗೆಯ ನೋವು

1 year ago

ಹೆಣಗಳನ್ನು ಸಂರಕ್ಷಿಸುವ ಘಟಕಗಳು ಹೆಚ್ಚಾಗುತ್ತಿರುವ ಕಾಲದಲ್ಲಿ

ಇತ್ತೀಚಿನ ದಿನಗಳಲ್ಲಿ ಹೆಣಗಳನ್ನು ಸುರಕ್ಷಿತವಾದ ಘಟಕಗಳಲ್ಲಿ ಇಡುವಂತಹ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆ ಬರುತ್ತವೆ. ಆಸ್ಪತ್ರೆಗಳಲ್ಲಿ ಬರುವಂತಹ ಹೆಣಗಳ ಸುರಕ್ಷಿತವಾಗಿಡಲು ಜಾಗವು ಸಾಲುತ್ತಿಲ್ಲ. ಬಹಳಷ್ಟು ಮನೆಯ ಮಂದಿ ಓದಿ ವಿದ್ಯಾವಂತರಾಗಿ ಕೈ ತುಂಬಾ ಹಣವನ್ನು ಸಂಪಾದಿಸುತ್ತ, ವಿದೇಶಗಳಲ್ಲಿ ನೆಲೆಸಿದ್ದಾರೆ.

ತಮ್ಮ ಮನೆಯ ಮಾತಾಪಿತೃಗಳು ಇಲ್ಲವೇ ಹತ್ತಿರದ ಬಂಧುಗಳು ನಿಧನರಾದರೆ, ದೂರದ ದೇಶಗಳಿಂದ ಬರಲು ಹಲವಾರು ದಿನಗಳು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸತ್ತವರ ದೇಹಗಳು ಕೆಡದಂತೆ ಸಂರಕ್ಷಿಸುವಂತಹ ಘಟಕಗಳು ಆಸ್ಪತ್ರೆಗಳಲ್ಲಿ ತುಂಬಿ ತುಳುಕುತ್ತಿವೆ. ಇಂತಹ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿ ಎನ್ನುವ ಉಪದೇಶಗಳು ಬೇರೆ ದೊರೆಯುತ್ತಿದೆ.

ಇಲ್ಲಿ ಬೇಕಿರುವುದು ಹೆಚ್ಚು, ಹೆಚ್ಚು ಮಕ್ಕಳಲ್ಲ ಹೆತ್ತವರನ್ನು ಕಾಯುವಂತಹ ಮನಸ್ಸುಳ್ಳ ಮಂದಿ. ಮಕ್ಕಳನ್ನು ಬೇಡಿಕೆಗೆ ಅನುಗುಣವಾಗಿ ಹೆತ್ತುಕೊಡಲು ಹೆಣ್ಣು ಮಕ್ಕಳು ಯಂತ್ರಗಳಲ್ಲ, ಇದರ ಅರಿವು ಇರಲಿ.

ಬದುಕಿನಲ್ಲಿ ಅನೇಕ ರೀತಿಯ ಒತ್ತಡಗಳಿವೆ. ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವುದು ಸಾಧಾರಣವಾದ ಕೆಲಸವಲ್ಲ. ಯಾವ ಶಾಲೆಗಳು ಲಕ್ಷಲಕ್ಷಗಳ ಕಡಿಮೆಗೆ ಪ್ರವೇಶವನ್ನು ನೀಡುವುದಿಲ್ಲ. ಇನ್ನು ಆಸ್ಪತ್ರೆಗಳಲ್ಲಿ ಹೆರಿಗೆಗೆ ಹೋದಾಗ ಲಕ್ಷಲಕ್ಷ ಹಣಗಳನ್ನ ನೀಡಬೇಕಾಗಿದೆ. ಇವುಗಳನ್ನ ಕೊಡುವುದು ಎಲ್ಲಿಂದ ಸಾಧ್ಯವಾಗುತ್ತದೆ.

ಪೌಷ್ಟಿಕಾಂಶದ ಕೊರತೆಯಿಂದ ಸೂಕ್ತವಾದಂತಹ ಆರೈಕೆ ಇಲ್ಲದೆ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ವರ್ಷ ತುಂಬುವುದರ ಒಳಗಾಗಿ ಮಕ್ಕಳು ಮಣ್ಣು ಸೇರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೌಷ್ಟಿಕಾಂಶದ ಆಹಾರಗಳನ್ನು ತಾಯಿತನವನ್ನು ಹೊರುವ ಮಂದಿಗೆ ಕೊಡುವವರು ಯಾರು?

ಹೆರುವ ಮಕ್ಕಳಿಗೆ ಉಚಿತವಾದಂತಹ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ, ಪೌಷ್ಟಿಕಾಂಶವುಳ್ಳ ಆಹಾರದ ಕಿಟ್ ಗಳನ್ನು ಕೊಡುವವರು ಯಾರಾದರೂ ಇದ್ದರೆ, ಆನಂತರ ಉಪದೇಶ ಮಾಡಿ.

ಹಲವಾರು ಮಕ್ಕಳಿದ್ದರೂ, ನೋಡಿಕೊಳ್ಳುವವರಿಲ್ಲದೆ ಆಶ್ರಮಗಳನ್ನು ಆಶ್ರಯಿಸಿರುವ ಹೆತ್ತವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದುರಂತವೆಂದರೆ ಆಶ್ರಮಗಳ ಸಂಖ್ಯೆ ಬೆಳೆಯುತ್ತಿದೆ. ಹೊಟ್ಟೆ ಬಟ್ಟೆ ಕಟ್ಟಿ ಕಣ್ಣಲ್ಲಿ ಕಣ್ಣಿಟ್ಟು ಮಕ್ಕಳನ್ನು ಬೆಳೆಸಿದಂತಹ ಹೆತ್ತವರಿಗೆ ಪ್ರೀತಿಯಿಂದ ಮಾತನಾಡಿಸುವವರು ಇಲ್ಲ. ಬೇಕಿರುವುದು ಪ್ರೀತಿಸುವ ಮನಸ್ಸುಳ್ಳ ಮಕ್ಕಳು ಕೇವಲ ಸಂಖ್ಯೆಗಳಲ್ಲ.

ಓದಿದವರಿಗೆ ವಿದೇಶದ ಹುಚ್ಚು ಕಡಿಮೆಯಾಗಿ, ಹಣದ ಸಂಪಾದನೆಯ ಆಸೆಯೂ ಕಡಿಮೆಯಾದರೆ, ಇರುವ ಮಕ್ಕಳುಗಳೇ ಸಾಕು ಹೆತ್ತವರ ಸಾಕಲು, ಸಮಾಜಕ್ಕೆ ಸೇವೆ ಮಾಡಲು, ದೇಶ ರಕ್ಷಿಸಲು.

ತಾಯಂದಿರಿಗೆ ಮಾತ್ರವೇ ಗೊತ್ತಿರುತ್ತದೆ ಹೆರಿಗೆಯ ನೋವು. ಪ್ರತಿಯೊಂದು ಬಾರಿಯೂ ಹೆರಿಗೆಯ ಸಮಯದಲ್ಲಿ ಮರು ಹುಟ್ಟು ಪಡೆಯುತ್ತಾರೆ. ಹೇಳುವವರಿಗೆ ಏನಾಗಬೇಕಾಗಿದೆ ಯಾರೋ ಒಂದಷ್ಟು ಜನ ಚಪ್ಪಾಳೆ ಹೊಡೆಯುತ್ತಾರೆ, ಇದಕ್ಕಾಗಿ ಮಾತುಗಳನ್ನು ಆಡುತ್ತಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply