ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರ್ಕಾರ ಅನೇಕ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದೆ. ಅದೇ ರೀತಿಯಲ್ಲಿ ಹಲವಾರು ಜಿಲ್ಲೆಗಳಲ್ಲಿ ನೂತನವಾಗಿ ಆಸ್ಪತ್ರೆಗಳನ್ನು ನಿರ್ಮಿಸಲು ಹಾಲಿ ಇರುವ ಆಸ್ಪತ್ರೆಗಳ ವಿಸ್ತರಣೆ ಮಾಡಲು ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ವತಿಯಿಂದ ಕಟ್ಟಡಗಳನ್ನು ಕಟ್ಟಬಹುದು, ವೈದ್ಯಕೀಯ ಸಲಕರಣೆಗಳನ್ನು ಒದಗಿಸಬಹುದು, ಆಯಾಗಳನ್ನು ಮತ್ತು ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಬಹುದು. ಆದರೆ ವೈದ್ಯರ ಸಂಖ್ಯೆ ಆಸ್ಪತ್ರೆಗಳಿಗೆ ತಕ್ಕಹಾಗೆ ದೊರಕುತ್ತಿಲ್ಲ. ನಮ್ಮ ರಾಜ್ಯದಲ್ಲಿ ಸಿ.ಇ.ಟಿ. ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ನೀಟ್ ಮೂಲಕ ಸಾವಿರಾರು ಜನ ವೈದ್ಯರಾಗುತ್ತಾರೆ. ಇದರಲ್ಲಿ ವಿಶೇಷವಾಗಿ ರೇಡಿಯೋಲಜಿ, ನ್ಯೂರೋ ಸರ್ಜನ್ ಮತ್ತು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸರ್ಜನ್‌ಗಳು ಪರಿಣಿತ ವೈದ್ಯರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಹೋಗಿ ನೆಲೆಸುತ್ತಾರೆ. ಇಲ್ಲದಿದ್ದರೆ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣಕ್ಕಾಗಿ ದುಡಿಯುತ್ತಾರೆ. ರಾಜ್ಯ ಸರ್ಕಾರ ಹೆಚ್ಚಿನ ಸಂಬಳವನ್ನು ಕೊಡಲು ಮುಂದಾದರು ಸರ್ಕಾರಿ ಆಸ್ಪತ್ರೆಗಳಿಗೆ ಯಾರು ಬರುತ್ತಿಲ್ಲ. ಇದರಿಂದಾಗಿ ವೈದ್ಯರ ಕೊರತೆ ಹೆಚ್ಚಿನ ಪ್ರಮಾಣದಲ್ಲಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವ ವೈದ್ಯರುಗಳ ಸಂಖ್ಯೆ ಬಹಳಷ್ಟು ಕ್ಷೀಣಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ನಾಗರೀಕರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರ ಕೊರತೆ ಎದ್ದು ಕಾಣುತ್ತಿದೆ.
ದೇಶಪ್ರೇಮವೆಂದರೆ ತನಗೆ ಜನ್ಮ ನೀಡಿದ ಭೂಮಿಯ ಋಣವನ್ನು ತೀರಿಸುವ ಕರ್ತವ್ಯ ಎನ್ನುವ ಭಾವನೆ ಬಹಳಷ್ಟು ಮಂದಿಯಲ್ಲಿಲ್ಲ. ವಿದೇಶಗಳಲ್ಲಿ ನೆಲೆಸಿ ಅಲ್ಲಿ ಕ್ರಿಕೆಟ್ ಪಂದ್ಯಗಳು ನಡೆದರೆ ಇಲ್ಲವೇ ನಮ್ಮ ದೇಶದ ಪ್ರತಿಷ್ಠಿತ ನಾಯಕರು ಭೇಟಿಕೊಟ್ಟ ಸಂದರ್ಭದಲ್ಲಿ ಭಾರತದ ಬಾವುಟವನ್ನು ಹಿಡಿದು ಸಂಭ್ರಮದಿಂದ ಹಾರಾಡಿಸಿದರೆ ನಮ್ಮ ದೇಶಕ್ಕೇನು ಲಾಭವಿಲ್ಲ. ಈ ಹಿನ್ನೆಲೆಯಲ್ಲಿ ನೀಟ್ ವ್ಯವಸ್ಥೆಯಲ್ಲಿ ಪ್ರವೇಶವನ್ನು ಪಡೆದು ಮುಂದೆ ಎಂ.ಬಿ.ಬಿ.ಎಸ್. ಪದವಿಯನ್ನು ಮುಗಿಸಿ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಮೂಲಕ ಸ್ನಾತಕೋತ್ತರ ಪದವಿಗಳನ್ನು ಪಡೆಯುವವರಿಗೆ ಕನಿಷ್ಠ 5 ವರ್ಷಗಳ ಕಾಲ ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ಒಂದು ವೇಳೆ ಅವರು ಸೇವೆ ಸಲ್ಲಿಸಲು ಒಪ್ಪದಿದ್ದರೆ ಇವರ ವಿದ್ಯಾಭ್ಯಾಸಕ್ಕೆ ಸರ್ಕಾರ ಮಾಡಿರುವ ಖರ್ಚಿನ ಲೆಕ್ಕವನ್ನಾಕಿ ಅವರಿಂದ ಮರಳಿ ಪಡೆದ ನಂತರವೇ ಅವರಿಗೆ ವಿದೇಶಕ್ಕೆ ತೆರಳಲು ನಿರಾಪೇಕ್ಷಣಾ ಪತ್ರಗಳನ್ನು ನೀಡಬೇಕು. ಈ ರೀತಿಯ ಕ್ರಮಗಳನ್ನು ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯ ಕಟ್ಟಡಗಳಲ್ಲಿ ವೈದ್ಯರಿರುವುದಿಲ್ಲ. ಸರ್ಕಾರ ಖರೀದಿಸುವ ವೈದ್ಯಕೀಯ ಸಲಕರಣೆಗಳ ನಿರ್ವಹಣೆ ಮಾಡುವವರು ತಾಂತ್ರಿಕ ನಿಪುಣರು ಇಲ್ಲದೆ ಎಲ್ಲವೂ ತುಕ್ಕು ಹಿಡಿದು ಮೂಲೆ ಸೇರುತ್ತವೆ.
- ಕೆ.ಎಸ್.ನಾಗರಾಜ್, ಬೆಂಗಳೂರು




