ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ರಜೆಗಳು ಮತ್ತು ಭಾನುವಾರದ ದಿನಗಳಲ್ಲಿ ರೋಗಿಗಳು ದಾಖಲಾದರೆ ಅವರ ಚಿಕಿತ್ಸೆ ಆರಂಭವಾಗುವುದು ರಜಾ ಕಳೆದ ಮಾರನೇ ದಿನ ಇಲ್ಲವೇ ಸೋಮವಾರ! ಕಾರಣವೇನೆಂದರೆ, ರಜಾ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಡ್ಯೂಟಿ ಡಾಕ್ಟರ್ ಮಾತ್ರವೇ ಇರುತ್ತಾರೆ. ಉಳಿದಂತೆ ನುರಿತ ವೈದ್ಯರು ರಜೆಯಲ್ಲಿರುತ್ತಾರೆ. ಹೀಗಾಗಿ ರೋಗ ಬಂದವರು ರಜಾ ದಿನಗಳಲ್ಲಿ ತಮ್ಮ ದೇಹದಲ್ಲಿನ ಬಾಧೆಗಳಿಗೆ ನರಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಆರೋಗ್ಯ ಇಲಾಖೆಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರಜಾ ದಿನಗಳಲ್ಲಿ ಮತ್ತು ಭಾನುವಾರದಂದು ಎಲ್ಲಾ ವೈದ್ಯರು ರಜಾ ಪಡೆದುಕೊಳ್ಳುವ ಬದಲಿಗೆ ಕಾರ್ಖಾನೆಗಳಲ್ಲಿ ಮತ್ತು ಕೆಲವು ಕಂಪನಿಗಳಲ್ಲಿ ನೀಡುವಂತೆ ಒಂದಷ್ಟು ಮಂದಿಗೆ ಒಂದೊಂದು ದಿನಗಳನ್ನು ನಿಗದಿಪಡಿಸಿದರೆ ಆಸ್ಪತ್ರೆಗಳಲ್ಲಿ ವೈದ್ಯರ ಅಲಭ್ಯದಿಂದ ರೋಗಿಗಳು ಹಿಂಸೆಯನ್ನು ಅನುಭವಿಸುವುದನ್ನು ತಪ್ಪಿಸಬಹುದು ಮತ್ತು ಸಕಾಲದಲ್ಲಿ ಚಿಕಿತ್ಸೆ ದೊರೆತು ಹಲವಾರು ರೀತಿಯ ಅಪಾಯದಿಂದ ಪಾರಾಗಬಹುದು.
ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸ್ಥಿತಿಗತಿಗಳನ್ನು ನೋಡಿಕೊಂಡು ನುರಿತ ವೈದ್ಯರನ್ನು ದೂರವಾಣಿ ಮಾಡಿ ಕರೆಸಿಕೊಂಡು ತುರ್ತುಚಿಕಿತ್ಸೆಯನ್ನು ಮಾಡುತ್ತಾರೆ. ಇಂತಹ ಅವಕಾಶಗಳು ಕಡಿಮೆ ಇರುತ್ತವೆ.
ಒಟ್ಟಾರೆಯಾಗಿ ಸರ್ಕಾರಿ ಆಸ್ಪತ್ರೆಗಳಲ್ಲಂತೂ ರಜಾ ದಿನಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತದೆ. ಆದುದರಿಂದ ರಜಾ ದಿನಗಳಂದು ಕಾಯಿಲೆಗಳು ನಮ್ಮ ದೇಹವನ್ನು ಬಾಧಿಸದಿರಲಿ ಎಂದು ಭಗವಂತನಲ್ಲಿ ಬೇಡಬೇಕಾಗಿರುವುದೊಂದೆ ಉಳಿದಿರುವ ಮಾರ್ಗ. ಕಾಯಿಲೆಗಳಲ್ಲಿ ರಜಾ ದಿನದಂದು ಯಾರನ್ನು ಬಾಧಿಸಬಾರದೆಂದು ತಿಳುವಳಿಕೆ ಇರುವುದಿಲ್ಲ.
– ಕೆ.ಎಸ್. ನಾಗರಾಜ್, ಬೆಂಗಳೂರು




