ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸುವ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರ ಸ್ವಕ್ಷೇತ್ರದಲ್ಲೇ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಅವರೇ ಮುಂದಿನ ಸಿಎಂ ಎಂಬ ಘೋಷಣೆ ಕೂಗು ಕೇಳಿ ಬಂದಿದೆ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುತ್ತಿದ್ದು, ಉಭಯ ಬಣಗಳು ವಿಭಿನ್ನ ಕಾರ್ಯತಂತ್ರಗಳ ಮೂಲಕ ಸಂದೇಶ ರವಾನಿಸುವ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಪರ ಬಸವರಾಜ್ ಶಿವಗಂಗಾ ಹೇಳಿಕೆಗಳನ್ನು ನೀಡುವ ಮೂಲಕ ಸಂದೇಶ ರವಾನೆ ಮಾಡುತ್ತಿದ್ದಾರೆ. ಇವರದೇ ಸ್ವಕ್ಷೇತ್ರವಾದ ಚನ್ನಗಿರಿಯಲ್ಲಿ ಇದೀಗ ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪರ ಅವರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಇನ್ನು ನಾಯಕತ್ವ ಬದಲಾವಣೆಯ ಪ್ರಸ್ತಾಪವೇ ಇಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಬಣಕ್ಕೆ ಸಿಎಂ ಸಿದ್ದರಾಮಯ್ಯ ಬಣ ತಿರುಗೇಟು ನೀಡುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ವಿರಕ್ತಮಠ ಪಾಂಡೋಮಟ್ಟಿಯಲ್ಲಿ ಆಯೋಜಿಸಲಾದ ಪರಮಪೂಜ್ಯ ಲಿಂ. ಶ್ರೀ ಶ್ರೀ ಸಂಗಮನಾಥ ಮಹಾಸ್ವಾಮಿಗಳ 64ನೇ ಸ್ಮರಣೋತ್ಸವ, ಪರಮಪೂಜ್ಯ ಲಿಂ. ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿಗಳ 19ನೇ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನವನ್ನು ವಿವಿಧ ಮಠಗಳ ಮಠಾಧೀಶರ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಸತೀಶ್ ಜಾರಕಿಹೊಳಿ ಮಾತನಾಡಿದರು.
ಈ ವೇಳೆ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಜನ ಪ್ರೀತಿಯಿಂದ ಈ ರೀತಿಯ ಘೋಷಣೆಗಳನ್ನು ಕೂಗುತ್ತಾರೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಸದ್ಯಕ್ಕೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಕುರ್ಚಿ ಖಾಲಿ ಇಲ್ಲ. ಈ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ. 2028ರ ವಿಧಾನಸಭೆ ಚುನಾವಣೆಯಲ್ಲಿ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಆಗಿರುವುದಾಗಿ ಪುನರುಚ್ಚರಿಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಈ ಅವಧಿಯಲ್ಲಿ ನಾಯಕತ್ವ ಬದಲಾವಣೆಯಾಗಬೇಕು. ತಮಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದರ ಸಾಧ್ಯಾಸಾಧ್ಯತೆಗಳ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಡಿ ಕೆ ಶಿವಕುಮಾರ್ ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರು. ಆದರೆ ನಿರೀಕ್ಷಿತ ಫಲಿತಾಂಶ ಸಿಗದೆ ವಾಪಸಾಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸುವ ಸಾಧ್ಯತೆಗಳು ಇಲ್ಲ.




