ಅರವತ್ತಾದರೂ ಕೆಲವರು ಯುವಕರಂತೆ ಕಾಣುತ್ತಾರೆ. ಮತ್ತೆ ಕೆಲವರು ತುಂಬಾ ಕೃಶರಾದಂತೆ ಕಾಣುತ್ತಾರೆ. ಅಂತೂ ದೇಹಕ್ಕೆ ವೇಗವಾಗಿಯೋ, ತಡವಾಗಿಯೋ ವಯಸ್ಸಾಗುತ್ತದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಯಸ್ಸಿಗೆ ತಕ್ಕಂತೆ ನಮ್ಮ ಶರೀರ ಹಾಗೂ ಮನಸ್ಸು ಮಾಗುತ್ತವೆ. ಲೈಂಗಿಕ ಬದುಕನ್ನು ಸಂತೋಷವಾಗಿ ಅನುಭವಿಸಿದ ಪರಿಣಾಮವಾಗಿ ಕಾಮದ ಬಯಕೆ ಕಾಡುವುದಿಲ್ಲವೀಗ. ಶರೀರವೆಂಬುದು ಮೂಳೆ ಮಾಂಸದ ತಡಿಕೆ ಅನಿಸುತ್ತದೆ.
ತಿನ್ನುವ ವಿಚಾರದಲ್ಲಿ ಈಗ ಮಿತಿಯಿದೆ. ಸವಿಯಾದ ಜೀರ್ಣಿಸಿಕೊಳ್ಳಲು ಸಾಧ್ಯವಾಗುವ ಸರಳ ಆಹಾರ ಸಾಕೆನಿಸುತ್ತದೆ. ದಿನಕ್ಕೆರಡು ಬಾರಿ ಊಟ ಸಾಕು. ಮಧ್ಯದಲ್ಲೊಮ್ಮೆ ಯಾವುದಾದರೂ ತಾಜಾ ಹಣ್ಣು ಸೇವನೆ ಇನ್ನು ಟೀ ಕುಡಿಯಬೇಕೆನಿಸಿದರೆ ದಿನದಲ್ಲಿ ಒಮ್ಮೆ ಕುಡಿದರೆ ಸಾಕು. ಈಗ ಅದು ಬೇಕು, ಇದು ಬೇಕು ಎಂದೆಲ್ಲಾ ಬಡಿದಾಡವ ಹುಚ್ಚಿಲ್ಲ. ಇರುವುದರಲ್ಲೇ ತೃಪ್ತಿ ಇದೆ.
ಈಗ ಯಾರಾದರೂ ಮನಸ್ಸಿಗೆ ನೋವು ಮಾಡುವರಾದರೆ ಅವರಿಂದ ಬೇಗ ದೂರವಿದ್ದು ಬಿಡಬೇಕು ಅನಿಸುತ್ತದೆ. ಹೃದಯಕ್ಕೆ ಮೊದಲಿನಂತೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ. ಮತ್ತೊಬ್ಬರ ಮೆಚ್ಚಿಸುವ ಅವಶ್ಯಕತೆಯೂ ಇಲ್ಲ.
ಬಾಲ್ಯದಲ್ಲಿನ, ಹರೆಯದಲ್ಲಿನ ಅದೆಷ್ಟೋ ಸಂಗತಿಗಳು ಈಗ ಬಾಲಿಶವಾಗಿ ಕಾಣಿಸುತ್ತವೆ. ಮತ್ತೊಬ್ಬರ ಮೇಲೆ ಕೋಪಿಸಿಕೊಂಡದ್ದು, ಅಸಹನೆಯಿಂದ ವ್ಯವಹರಿಸಿದ್ದು…
ಈಗ ಯಾರೊಂದಿಗೂ ಸ್ಪರ್ಧಿಸುವ ಮನಸ್ಸಿಲ್ಲ. ಸ್ಪರ್ಧೆಯೇ ಇಲ್ಲದ ಮೇಲೆ ಮತ್ತೊಬ್ಬರ ಶ್ರೇಯಸ್ಸನ್ನು ಕಂಡು ಅಸೂಯೆ ಬರುವುದಾದರೂ ಹೇಗೆ?
ಸಹಾನುಭೂತಿ ತುಂಬಿದ ಪ್ರೇಮ ಮೂಡುವ ಈ ವಯೋಮಾನದಲ್ಲಿ ಮಕ್ಕಳಂತೆ ಮುಗ್ಧತೆಯಿಂದ ಇರುವ ಸ್ನೇಹಿತರು ಬೇಕೆನಿಸುತ್ತದೆ.
ನಿನ್ನೆ ವಿಜಯ ಸಂಜೆ ಪದವಿ ಪೂರ್ವ ಕಾಲೇಜಲ್ಲಿ ಈ ಕಾಲೇಜಲ್ಲಿ ಕೆಲಸ ಮಾಡಿ ತಮ್ಮ ವೃತ್ತಿ ಬದುಕಿನಿಂದ ನಿವೃತ್ತರಾಗಿರುವ ಬೋಧಕ, ಬೋಧಕೇತರ ಸಿಬ್ಬಂದಿಗೆ ಔತಣಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಒಂದೆಡೆ ಹಲವು ವರ್ಷ ಕೆಲಸ ಮಾಡಿದಾಗ ಅಲ್ಲೊಂದು ಸ್ನೇಹ ಬಾಂಧವ್ಯ ಬೆಳೆದಿರುತ್ತದೆ. ಅದು ಗಟ್ಟಿಯಾಗಿ ಉಳಿದಿರುತ್ತದೆ. ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಹಿರಿಯರು ಈ ಸ್ನೇಹಕೂಟದಲ್ಲಿ ಭಾಗಿಯಾಗಿದ್ದೆವು.
ಕೆಲವರನ್ನು ಹಲವು ವರ್ಷಗಳ ನಂತರ ಭೇಟಿಯಾಗುವ ಸದವಕಾಶ ಸಿಕ್ಕಿತು. ನನಗಿಂತಲೂ ಹಿರಿಯರಾದವರು ಹರಸಿದರು. ಪ್ರೀತಿಯಿಂದ ಮಾತಾಡಿದರು.
ವೃದ್ಧಾಪ್ಯ ಬದುಕಿನ ಅಂತ್ಯವೇನೋ ಸರಿ. ಆದರೆ ಅದೂ ಕೂಡ ಸುಂದರವಾದ ಅನುಭವವಾಗಬಹುದು. ನಿನ್ನೆಯ ಕಾರ್ಯಕ್ರಮದಲ್ಲಿ ಇದು ನನಗೆ ಕಂಡದ್ದು. ಹೃದಯಸ್ಪರ್ಶಿಯಾಗಿದ್ದ ಈ ಕಾರ್ಯಕ್ರಮ ನನ್ನ ಮಧುರ ನೆನಪುಗಳ ಬಟ್ಟಲಿಗೆ ಸೇರ್ಪಡೆಯಾಯ್ತು. ಈ ಕಾರ್ಯಕ್ರಮವನ್ನು ಆಯೋಜಿಸಿದ ಆತ್ಮೀಯರಾದ ಶ್ರೀಮಂಜುನಾಥ್ ಸರ್ ಹಾಗೂ ಶ್ರೀಚಂದ್ರಶೇಖರ ಸರ್ ಅವರಿಗೆ ಧನ್ಯವಾದಗಳನ್ನು ಹೇಳಬೇಕು.
– ಎಂ.ಎಸ್.ಶಿವಕುಮಾರ್, ನಿವೃತ್ತ ಉಪನ್ಯಾಸಕರು








