ಸುದ್ದಿ ಮಾಧ್ಯಮಗಳು ಇರುವಾಗ ಇವರೆಲ್ಲ ಏಕೆ ಬೇಕು?

8 months ago

ನ್ಯಾಯಾಲಯಗಳು, ನ್ಯಾಯಾಧೀಶರು, ಇನ್ವೆಸ್ಟಿಗೇಷನ್ ಸಂಸ್ಥೆಗಳು, ಇನ್ವೆಸ್ಟಿಗೇಷನ್ ಆಫೀಸರ್ಸ್, ಸರ್ಕಾರಗಳು, ಚುನಾಯಿತ ಪ್ರತಿನಿಧಿಗಳು, ವಿಜ್ಞಾನಿಗಳು, ಇತಿಹಾಸ ತಜ್ಞರು… ಏಕೆ ಬೇಕು?

ಅರ್ಧ ಗಂಟೆಯಲ್ಲಿ ಯಾವುದೇ ವಿಚಾರದಲ್ಲೂ ತೀರ್ಪನ್ನು ಕೊಡಬಲ್ಲ ಅಪಾರ ಕಾನೂನು ಜ್ಞಾನದ ಪಂಡಿತರು, ನಮ್ಮ ಸುದ್ದಿ ಮಾಧ್ಯಮಗಳಲ್ಲಿ ಇರುವಾಗ ನ್ಯಾಯಾಲಯಗಳು ನ್ಯಾಯಾಧೀಶರು ಏಕೆ ಬೇಕು?

ಯಾವುದೇ ಅಪರಾಧ, ಯಾವುದೇ ವಿಚಾರವಾಗಿರಲಿ, ಅರ್ಧ ಗಂಟೆಯಲ್ಲಿ ಚರ್ಚೆಯನ್ನ ಮಾಡಿ, ಅಂತಿಮವಾದಂತಹ ವರದಿಯನ್ನ ಮತ್ತು ತೀರ್ಪನ್ನು ಕೊಡುವಂತಹ ಮಹಾನ್ ಪಂಡಿತರು ನಮ್ಮ ಸುದ್ದಿ ಮಾಧ್ಯಮಗಳಲ್ಲಿ ಕುಳಿತಿರುವಾಗ ಸಿಬಿಐ, ಸಿಐಡಿ, ಇಡಿ, ಆದಾಯ ತೆರಿಗೆ ಅಧಿಕಾರಿಗಳು, ಪೊಲೀಸರು ಏಕೆ ಬೇಕು?

ಸರ್ಕಾರ ಹೇಗೆ ನಡೆಸಬೇಕು, ಸರ್ಕಾರ ಯಾವುದು ಮಾಡಿದರೆ ಸರಿ, ಯಾವುದು ಮಾಡಿದರೆ ತಪ್ಪು, ಎನ್ನುವುದನ್ನು ಅರ್ಧ ಗಂಟೆಯಲ್ಲಿ ನಮಗೆ ತಿಳಿಸಿಕೊಡುವಾಗ ಇನ್ನು ಸರಕಾರಗಳಿಗೆ ಏಕೆ ಬೇಕು ಮಂತ್ರಿಗಳು, ಶಾಸಕರು, ಯಾರು ಬೇಕಿಲ್ಲ  ನಮ್ಮ ಸುದ್ದಿ ಮಾಧ್ಯಮದಲ್ಲಿ ಕುಳಿತಿರುವ ಜನರ ಮುಂದೆ ಅವರು ಯಾರು?

ಯಾವ ಇತಿಹಾಸ ಬೇಕು, 200 ವರ್ಷ 300 ವರ್ಷ ಕಣ್ಣಿನಿಂದ ನೋಡಿದ ಅನುಭವ ಇವರಿಗೆದೆ. ಯಾವ ವೈಜ್ಞಾನಿಕ ಸಂಶೋಧನೆಯ ಅರಿವು ಇವರಿಗಿಲ್ಲ ಹೇಳಿ, ಯಾವ ವಿಚಾರದಲ್ಲಿ ಆಳವಾದ ಪಾಂಡಿತ್ಯ ಇಲ್ಲ ಹೇಳಿ, ಇವರುಗಳು ಇರುವಾಗ ನಮಗೇಕೆ ಬೇಕು ಇನ್ನು ಪುಸ್ತಕಗಳು, ನಮಗೇಕೆ ಬೇಕು ಬೇರೆ ವಿಶ್ಲೇಷಕರು, ವಿಜ್ಞಾನಿಗಳು, ಸಾಕು ಸುದ್ದಿ ಮಾಧ್ಯಮದಲ್ಲಿ ಕುಳಿತು ಹೇಳುವ ಮಹಾನ್ ಮೇಧಾವಿಗಳು ಏಕೆ ಬೇಕು?

ಸರ್ಕಾರಗಳು ಯಾವುದೇ ವರದಿಯನ್ನ ತಯಾರಿಸುವ ಮುನ್ನ, ವರದಿಯನ್ನ ಸರ್ಕಾರಕ್ಕೆ ಕೊಡುವ ಮುನ್ನ, ಕೇಳಬೇಕು ಇವರ ಸಲಹೆಯನ್ನ, ಇವರಿರುವಷ್ಟು ಸಾಮಾಜಿಕ ಜ್ಞಾನ, ಸಾಮಾಜಿಕ ಸಮಸ್ಯೆಗಳ ಅನುಭವ, ಯಾರಿಗೆ ಇದೆ ಮುಂದಿನ ದಿನಗಳಲ್ಲಿ ನಮ್ಮ ಸುದ್ದಿ ಮಾಧ್ಯಮದಲ್ಲಿ ಕುಳಿತು ಮಾತನಾಡುವ ಮೇಧಾವಿಗಳ ಸಲಹೆಯನ್ನ ಪಡೆಯದೆ ಏನನ್ನು ಮಾಡಬೇಡಿ.

ನಿಮ್ಮ ಕಿವಿ ಎಷ್ಟೇ ಕಿವುಡಾಗಿದ್ದರು ಸರಿ ಇವರು ಮಾತನಾಡುವ ಎತ್ತರದ ಧ್ವನಿಗೆ ಎಂಥವರಿಗು ಕೇಳಿಸುತ್ತದೆ. ಒಂದು ಪದವನ್ನ ಅಥವಾ ಒಂದು ವಾಕ್ಯವನ್ನು ಅರ್ಧ ಗಂಟೆ ವಿಶ್ಲೇಷಣೆ ಮಾಡುವಂತಹ ಪಾಂಡಿತ್ಯ ಯಾರಿಗಾದರೂ ಇದ್ದರೆ ಅದು ನಮ್ಮ  ಮಾಧ್ಯಮದ ಮಿತ್ರರಿಗೆ. ಅದರಲ್ಲೂ, ನಮ್ಮ ಸುದ್ದಿ ಮಾಧ್ಯಮದವರಿಗೆ, ನಿಮಗೇನಾದರೂ  ಊರಿನಲ್ಲಿ ನೆಮ್ಮದಿಯಿಂದ ಜನ ಬದುಕಿದ್ದರೆ ಕ್ಷಣಮಾತ್ರದಲ್ಲಿ ಶಾಂತಿಯ ಕೆಡಸುವ, ಧರ್ಮದ , ಜಾತಿಯ ಜ್ಯೋತಿಯನ್ನ ಹಚ್ಚಿ ಕೆಂಪಾಗಿಸುವ ಶಕ್ತಿ ಇವರಿಗಿದೆ.

ಒಟ್ಟಾರೆ ನಾವೇ ಪುಣ್ಯವಂತರು, ನಮ್ಮ ಕಾಲದಲ್ಲಿ ಸುದ್ದಿ ಮಾಧ್ಯಮದಲ್ಲಿ ಇಂತಹ ವ್ಯಕ್ತಿಗಳನ್ನ ನೋಡುವ, ಇವರ ಮಾತುಗಳನ್ನ ಕೇಳುವ ಸುವರ್ಣ ಅವಕಾಶ ಭಗವಂತ ನಮಗೆ ಕಲ್ಪಿಸಿ ಕೊಟ್ಟಿದ್ದಾರೆ ಇದಕ್ಕಾಗಿ ಭಗವಂತನಿಗೆ ಮತ್ತೆ ಧನ್ಯವಾದಗಳು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply