ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ ಪ್ರಿಯಾಂಕ್ ಖರ್ಗೆ

3 months ago

ಬೆಂಗಳೂರು: ಅಧಿಕಾರ ಹಸ್ತಾಂತರ ಕುರಿತಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಭಾವಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಮೇಲೂ ಅನುಮಾನ ಪಡುವ ಅಗತ್ಯ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಪಕ್ಷದಲ್ಲಿ ಎಲ್ಲರಿಗೂ ಅವಕಾಶ ನೀಡುವುದು ಪ್ರಮುಖ ಆಶ್ರಯವಾಗಿದೆ. ಅಧಿಕಾರವಧಿ ಪೂರ್ಣಗೊಳಿಸುವುದು, ಬಜೆಟ್‌ ಮಂಡನೆ ಸೇರಿದಂತೆ ಎಲ್ಲ ವಿಚಾರವಾಗಿಯೂ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅದರ ಮೇಲೆ ನಾವು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರು ಗಟ್ಟಿಯಾಗಿದ್ದರೆ ಮಾತ್ರ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿರುವುದಕ್ಕೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಕಾಂಗ್ರೆಸ್‌‍ ಪಕ್ಷದಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದರು.

ಕಾಂಗ್ರೆಸ್‌‍ ಪಕ್ಷ ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ನಮಲ್ಲಿ ಜಾತಿ ಆಧಾರಿತವಾದ ರಾಜಕಾರಣಕ್ಕೆ ಆದ್ಯತೆ ಇಲ್ಲ. ಸಮುದಾಯದ ಆಶಯಕ್ಕೆ ಅನುಗುಣವಾಗಿ ಸಮಾನ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದರು.

ನಾಯಕತ್ವ ಹಾಗೂ ಪ್ರಗತಿ ನಿಂತ ನೀರಲ್ಲ. ಹಿಂದೆ ದೇವರಾಜ್‌ ಅರಸ್‌‍ ಅವರು ಮುಖ್ಯಮಂತ್ರಿಯಾಗಿದ್ದರು. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್‌‍ ನಲ್ಲಿ ಜವಾಹರ್ಲಾಲ್‌ ನೆಹರು, ಮಹಾತಗಾಂಧಿಜೀಯವರು ಪ್ರಭಾವಿ ನಾಯಕರಾಗಿದ್ದರು. ಈಗ ಅದೇ ತತ್ವ ಸಿದ್ಧಾಂತದ ಮೇಲೆ ರಾಹುಲ್‌ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಚಿತ್ತಾಪುರದಲ್ಲಿ ನಾನೇ ಸಾಯುವವರೆಗೂ ಶಾಸಕನಾಗಿ ಇರಲು ಸಾಧ್ಯವೇ? ಮುಂದಿನ ನಾಯಕತ್ವ ಬೆಳೆಸುವ ಜವಾಬ್ದಾರಿಯು ನಮ್ಮ ಮೇಲಿದೆ ಎಂದರು.

ನಮ್ಮಿಂದಲೇ ಪಕ್ಷ ಎಂದು ಯಾರಾದರೂ ಭಾವಿಸಿಕೊಂಡಿದ್ದರೆ ಅದು ಭ್ರಮೆ ಮಾತ್ರ. ಕಾಂಗ್ರೆಸ್‌‍ ಪಕ್ಷ ಯಾವುದೇ ವ್ಯಕ್ತಿಯ ಆಧಾರಿತವಾಗಿ ನಿಂತಿಲ್ಲ. ವ್ಯಕ್ತಿಗಾಗಿ ಅಥವಾ ವ್ಯಕ್ತಿಯಿಂದ ಕಾಂಗ್ರೆಸ್‌‍ ಇಲ್ಲ. ಕಾರ್ಯಕರ್ತರಿಗಾಗಿ ಕಾಂಗ್ರೆಸ್‌‍ ಪಕ್ಷವಿದೆ ಎಂದರು.

ಕೆಲವರು ಕಾಂಗ್ರೆಸ್‌‍ ವಿರುದ್ಧವಾಗಿ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌‍ ಪಕ್ಷದ ಬಿ-ಫಾರಂ ಬೇಕು. ಚುನಾವಣೆಯಲ್ಲಿ ಪ್ರಚಾರಕ್ಕೆ ಕಾಂಗ್ರೆಸ್‌‍ ನಾಯಕತ್ವ ಬೇಕು, ಕಾಂಗ್ರೆಸ್ಸಿನ ತತ್ವ ಸಿದ್ಧಾಂತಗಳು ಬೇಕು. ಗೆದ್ದ ಮೇಲೆ, ಅಧಿಕಾರ ಅನುಭವಿಸುವಾಗ ಕಾಂಗ್ರೆಸ್‌‍ ಪಕ್ಷ ಯಾವುದು ಎಂದು ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು.

Leave a Reply