ಪ್ರಿಯ ರಮೇಶ್,
ನಿಮ್ಮ ‘ಸಮುದ್ರ ಮತ್ತು ಮಳೆ’ ಸಂಕಲನ ಹಲವು ಕಾರಣಗಳಿಗಾಗಿ ನಮ್ಮನ್ನು ತಟ್ಟಿದ ಕೃತಿ. ಈಗ ನಿಮ್ಮ ‘ಬಯಲ ಕನ್ನಡಿ ಮತ್ತು ಮನದ ಮಿಂಚು’ ಕವಿತೆಗಳನ್ನು ಓದುಗರಿಗೆ ಕೊಟ್ಟಿರುವಿರಿ. ನಾಗತಿಹಳ್ಳಿರಮೇಶ ವಿಶ್ವಮಾನವತೆಯ ಬೆನ್ನತ್ತಿದ ಕವಿ. ಎಂದಾದರೊಂದು ದಿನ ಈ ಲೋಕ ಹಸನಾದೀತು, ಮಾನವೀಯತೆಯನ್ನು ಬಿತ್ತಿ ಬೆಳೆಯುವ ಫಲವತ್ತಾದ ತಾಯ್ನೆಲವಾದೀತು ಎನ್ನುವ ಗಾಢ ನಂಬಿಕೆ ಮತ್ತು ಮಾನವ ಪ್ರೀತಿ ನಿಮ್ಮ ಕಾವ್ಯದ ಮೂಲಧಾತುವಾಗಿದೆ. ಕಾವ್ಯವೆನ್ನುವುದನ್ನು ನೀವು ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮವಾಗಿಯೋ, ದಲಿತಲೋಕದ ಶೋಷಣೆಯ ಮತ್ತು ಹೋರಾಟದ ಮಾಧ್ಯಮವಾಗಿಯೋ ಮಾತ್ರ ನೋಡದೆ ಅದನ್ನು ಕಾಲದಿಂದ ಕಾಲಕ್ಕೆ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯಾಗಿಯೇ ಬೆಳೆಸಿಕೊಂಡು ಬಂದಿರುವುದನ್ನು ವಿಶೇಷವಾದ ಸಂಗತಿಯಾಗಿಯೇ ನೋಡಬೇಕು ಎನ್ನಿಸುತ್ತದೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಈ ಸಂಕಲನವು ನಿಮ್ಮ ಆರಂಭದ ಆಶಯಗಳನ್ನು ದಿನದಿಂದ ದಿನಕ್ಕೆ ಮಳೆ ಮತ್ತು ಸಮುದ್ರದ ವಿಸ್ತಾರಕ್ಕೆ ಹಬ್ಬಿಕೊಳ್ಳುತ್ತಿರುವುದರ ಸೂಚನೆಯಾಗಿದೆ.
ತಳಮೂಲ ಸಂಸ್ಕೃತಿಯೇ ಮೂಲತಃ ಜೀವಪರವಾದದ್ದು. ಅದು ಲೋಕ ಕಲ್ಯಾಣವನ್ನೂ ಕಲ್ಯಾಣ ರಾಜ್ಯವನ್ನೂ ತನ್ನ ಮಾದರಿಯಾಗಿ ಇರಿಸಿಕೊಂಡಿದೆ. ಇದಕ್ಕೆ ಇವರು ಸಮಸ್ತ ಪ್ರಕೃತಿಯನ್ನೇ ಅದು ತನ್ನ ಮೂಲಾಧಾರವಾಗಿ ಇರಿಸಿಕೊಂಡಿದೆ. ಮುದುಕಿಯಂಥ ನದಿ; ಮುಂಜಾನೆಯಂಥ ಮುತ್ತಾತ ಕವಿತೆಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು.
ಚಳಿಗಾಲದ ಒಂದು ಮುಂಜಾನೆ
ಮುತ್ತಾತ ಎದ್ದು ನೋಡುತ್ತಾನೆ
ಮನೆಯ ಸುತ್ತ ಮುಳುಗಿ ತೇಲುವ ಮೋಡಗಳು
ಮುತ್ತಾತನನ್ನು ಮುಂಜಾನೆಗೆ ಹೋಲಿಸುವ ಮೂಲಕ ಪ್ರಕೃತಿಯೊಂದಿಗೆ ಮಾನವ ಸಂಬಂಧಗಳನ್ನು ಹೊಂದಿಸುವ ಸಾವಯವ ನೆಲೆಯನ್ನು ಕಟ್ಟುವ ಪ್ರಯತ್ನ ಮಾಡುತ್ತಾರೆ. ನದಿಯನ್ನು ಮುದುಕಿಗೆ ಹೋಲಿಸುವುದೆಂದರೆ ನಮ್ಮ ಹಿಂದಣ ಹೆಜ್ಜೆಯನ್ನು ಇಂದಣ ಹೆಜ್ಜೆಗೆ ಬೆಸೆಯುವ ಆಶಯವಾಗಿದೆ. ಇದರ ಮೂಲಕ ನಾಳೆಯ ಮುಂಜಾನೆಯ ಕನಸನ್ನು ಕಾಣಬಹುದು ಎನ್ನುವುದು ಇವರ ಇರಾದೆಯಾಗಿದೆ.
ಶಿವನ ಕಣ್ಣು ಕೂಡ ಇವರ ಕಲ್ಯಾಣ ಪ್ರಜ್ಞೆಯ ಹಾಗೂ ಶೂದ್ರಪ್ರಜ್ಞೆಯ ಅನಾವರಣವೇ ಆಗಿದೆ.
ಅನಾಥ ಕೂಸೊಂದು ಅಳುತ್ತಾ ಕೂತಿದೆ
ನಾಲ್ಕು ದಿಕ್ಕಿಂದ ನಾಲ್ಕು ಜನರು ಬಂದರು
…….
ನಾವು ಕಲಾಪ್ರಕಾರಗಳನ್ನೆಲ್ಲ ಅರೆದು ಕುಡಿದವರು
ಈ ಘನತೆಯಿಂದಲೇ ನಾವು ಶಿವನನ್ನು
ಕಾಣುತ್ತೇವೆ ಎಂದರು
ಶಿಷ್ಟ ಪರಂಪರೆಯ ಧಿಮಾಕಿನ ಎದುರು ಅನಾಥವಾದ ಕೂಸು ಹೇಳುತ್ತದೆ
ಬನ್ನಿ ನಾನು ಶಿವನ ತೊಡೆಯ ಮೇಲೆ ಕೂತಿರುತ್ತೇನೆ
ಚಂದ್ರ, ಹಾವು, ಡಮರುಗ, ಜಡೆಗಳೊಂದಿಗೆ
ಆಟವಾಡುತ್ತಿರುತ್ತೇನೆ
ಕಲೆ ಮತ್ತು ಶೂದ್ರ ಜಗತ್ತುಗಳ ನಡುವಿನ ಕರುಳಬಳ್ಳಿಯ ಸಂಬಂಧವನ್ನು ಈ ಕವಿತೆ ಹೇಳುತ್ತಿದೆ. ಶಿವ ಶೂದ್ರರ ದೈವ ಮಾತ್ರವಲ್ಲ ಅವನು ಕಲೆಯ ದೈವವೂ ಹೌದು. ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದ ಅಥವಾ ಆತ್ಮವಿಶ್ವಾಸಕ್ಕೆ ಇವರು ಯೋಗ್ಯರೇ ಅಲ್ಲವೆನ್ನುವಂತೆ ನಡೆಸಿಕೊಂಡಿದ್ದ ಲೋಕಕ್ಕೆ ತಾವು ಆತ್ಮವಿಶ್ವಾಸದಲ್ಲಿ ಮಾತ್ರವಲ್ಲ ದೈವದ ಜೊತೆಗೂ ಇವ ನಮ್ಮವ ಇವ ನಮ್ಮವ ಎನ್ನುವಂತಹ ಗಾಢ ಸಂಬಂಧವನ್ನು ಹೊಂದಿರುವುದನ್ನು ಹೇಳುತ್ತಾ ಘನವಾದ ಸತ್ಯವೊಂದರ ಎದುರಿಗೆ ನಮ್ಮನ್ನು ನಿಲ್ಲಿಸುತ್ತದೆ. ದೈವವಾದರೂ ಕರುಣೆ ಮತ್ತು ಪ್ರೀತಿಯನ್ನು ತೋರಿಸುವುದು ಶ್ರಮವಾಣಿಗಳಿಗೆ, ಅಪ್ಪಟ ಮನುಷ್ಯರಿಗೆ. ಕುವೆಂಪು ಅವರ ಜಲಗಾರ , ಶೂದ್ರತಪಸ್ವಿ ಕೃತಿಗಳನ್ನು ಇದು ನೆನಪಿಸುತ್ತದೆ.
ಮನದ ಮಿಂಚು ಭಾಗದ ಬಹುತೇಕ ಕವಿತೆಗಳು ತಾಯಿಪ್ರಜ್ಞೆಯ ಮತ್ತು ಅದನ್ನೇ ದೈವವಾಗಿ ಸಾಕ್ಷಾತ್ಕರಿಸಿಕೊಳ್ಳಬಹುದಾದ ಸಾಧ್ಯತೆಯ ಶೋಧವಾಗಿರುವಂತೆ ಭಾಸವಾಗುತ್ತದೆ. ಅವ್ವಂದಿರ ನೆನಪು, ಅವ್ವ ಜಗದ ಬೆಳಕು ಮೊದಲಾದ ಕವಿತೆಗಳು ಇದಕ್ಕೆ ಪುರಾವೆ ಒದಗಿಸುತ್ತವೆ.
ಈ ಕವಿತೆಗಳ ಮೊದ ಮೊದಲ ಓದುಗಳಾಗುವ ಸವಲತ್ತನ್ನು ನನಗೆ ನೀಡಿದ್ದಕ್ಕಾಗಿ ವಂದಿಸುವೆ.
ರಮೇಶ್ , ನಿಮ್ಮ ಕವಿತೆಯ ಜೊತೆಗಿನ ಸಂಬಂಧ ಇನ್ನೂ ಗಾಢವಾಗಲಿ .
– ಡಾ. ಆಶಾದೇವಿ ಎಂ ಎಸ್, ಪ್ರಾಧ್ಯಾಪಕರು




