ದರ ಏರಿಕೆ ಮಾಡಿದ ಸರ್ಕಾರಕ್ಕೆ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ: ಆರ್‌.ಅಶೋಕ

2 hours ago

ಬೆಂಗಳೂರು: ಹಾಸನಾಂಬೆಯ ದರ್ಶನಕ್ಕೆ ಹೋದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಜನರೇ ಮಂಗಳಾರತಿ ಮಾಡಿ ಕಳುಹಿಸಿದ್ದಾರೆ. ದರ ಏರಿಕೆ ಮಾಡಿರುವುದರ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ಕ್ರಮಗಳ ವಿರುದ್ಧ ಬಿಜೆಪಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರಕ್ಕೆ ಬಂದ ನಂತರ ಏನಾದರೂ ಉತ್ತಮ ಕೆಲಸ ಮಾಡಿದ್ದಾರಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹಾಸನಾಂಬೆ ದೇವಾಲಯದ ದರ್ಶನಕ್ಕೆ ಮುಖ್ಯಮಂತ್ರಿ ಹೋದಾಗ, ಜನರು ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದ್ದರು. ಜನರು ಕಾಂಗ್ರೆಸ್‌ ನಾಯಕರ ಮುಂದೆಯೇ ಆಕ್ರೋಶ ಹೊರಹಾಕಿದ್ದರು. ಈಗ ದೇವರು ಕೂಡ ಡಿ.ಕೆ.ಶಿವಕುಮಾರ್‌ಗೆ ಆಶೀರ್ವಾದ ಮಾಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಕೆಆರ್‌ಎಸ್‌ ತುಂಬಿತ್ತು. ಈಗ ಪೂರ್ತಿ ಬರಿದಾಗಿದೆ. ತಮಿಳುನಾಡು ಸರ್ಕಾರ ಕೇಳದಿದ್ದರೂ ಕಾಂಗ್ರೆಸ್‌ ಸರ್ಕಾರ ನೀರು ಬಿಡುತ್ತಿದೆ. ಈಗ ಡೀಸೆಲ್‌ ಹಾಕಲೂ ಹಣವಿಲ್ಲ ಎಂದಿದ್ದಾರೆ. ಮುಂದೆ ನೀರು ಕೂಡ ಇರುವುದಿಲ್ಲ ಎಂದರು.

ಕಾಕಾ ಪಾಟೀಲ್‌, ಮಹದೇವಪ್ಪನ ಹೆಂಡತಿಗೂ ಬಸ್‌ ಫ್ರೀ ಎಂದು ಚುನಾವಣೆಯ ಸಮಯದಲ್ಲಿ ಹೇಳಿದ್ದರು. ಮುಂದಿನ ಬಜೆಟ್‌ನಲ್ಲಿ ಅವರ ಮೊಮ್ಮಕ್ಕಳ ತಲೆ ಮೇಲೆ ತಲಾ ಒಂದೂವರೆ ಲಕ್ಷ ರೂ. ಹೊರೆ ಬರಲಿದೆ. ಎಲ್ಲರಿಗೂ ತೆರಿಗೆ ಹೇರಿರುವ ಸರ್ಕಾರ ಜನರ ಪಾಲಿಗೆ ಸತ್ತುಹೋಗಿದೆ. ನಾನು ಸಾರಿಗೆ ಸಚಿವನಾಗಿದ್ದಾಗ ಸಾರಿಗೆ ನಿಗಮಗಳಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಹೆಚ್ಚು ಲಾಭದಲ್ಲಿತ್ತು. ಅಂತಹ ನಿಗಮಗಳನ್ನು ಕಾಂಗ್ರೆಸ್‌ ಸರ್ಕಾರ ನಷ್ಟದಲ್ಲಿ ಮುಳುಗಿಸಿಬಿಟ್ಟಿದೆ. ಕಬ್ಬು ಬೆಳೆಗಾರರ ಜೊತೆ ನಡೆಸಿದ ಸಭೆಯಲ್ಲಿ ಬೊಕ್ಕಸದಲ್ಲಿ ಹಣವೇ ಇಲ್ಲ ಎಂದು ಸಿಎಂ ಹೇಳಿದ್ದರು. ಮಹಿಳೆಯರಿಗೆ 2,000 ರೂ. ನೀಡುತ್ತೇವೆಂದು ಹೇಳಿ, ಈಗ ತೆರಿಗೆ ಪಾವತಿಸಿ ಎನ್ನುತ್ತಿದ್ದಾರೆ ಎಂದರು.

ಸಿಎಂ ಡಿ.ಕೆ.ಶಿವಕುಮಾರ್‌ಗೆ ಆಡಳಿತದ ಅನುಭವವೇ ಇಲ್ಲ. ಆದರೆ ಅವರಿಗೆ ಕಲೆಕ್ಷನ್‌ನಲ್ಲಿ ಮಾತ್ರ ಅನುಭವ ಇದೆ. ಅಧಿವೇಶನದಲ್ಲಿ ನಾನು ಆರ್ಥಿಕ ಇಲಾಖೆಯ ಪತ್ರದ ಬಗ್ಗೆ ಪ್ರಸ್ತಾಪ ಮಾಡಿದರೆ ಅದನ್ನು ಕಳುಹಿಸಿದ್ದು ಏಕೆಂದು ಸಿಎಂ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಂದರೆ ಅವರಿಗೆ ಅಧಿಕಾರಿಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಪೊಲೀಸ್‌ ಇಲಾಖೆ ಸಂಪೂರ್ಣವಾಗಿ ಭ್ರಷ್ಟವಾಗಿದೆ. ಯಾವುದೇ ಕಾಮಗಾರಿಗೂ ಸಚಿವರಿಗೆ 12% ಕಮಿಶನ್‌ ಕೊಡಬೇಕು. ಅಧಿಕಾರಿಗಳಿಗೆ 50% ಕೊಡಬೇಕು. ಸಿಎಂ ಡಿ.ಕೆ.ಶಿವಕುಮಾರ್‌ ಅವರ ಬೆಲೆಯೇ 60 ಪರ್ಸೆಂಟ್‌ ಆಗಿದೆ ಎಂದರು.

ಪೆಟ್ರೋಲ್‌ನಲ್ಲಿ ಹೆಚ್ಚು ಎಥೆನಾಲ್‌ ಮಿಶ್ರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಸಚಿವರು ಆರೋಪ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನವರಿಗೆ ಸ್ವಲ್ಪವೂ ಜ್ಞಾನವಿಲ್ಲ. ಪೆಟ್ರೋಲ್‌ಗಿಂತ ಎಥೆನಾಲ್‌ನ ದರ ಹೆಚ್ಚಿದೆ. ಅಮೆರಿಕ, ಇಟಲಿ ಮೊದಲಾದ ದೇಶಗಳಲ್ಲಿ 80% ಎಥೆನಾಲ್‌ ಮಿಶ್ರಣ ಮಾಡಲಾಗುತ್ತಿದೆ. ರೈತರಿಗೆ ಆದಾಯ ಸಿಗಲಿ ಎಂಬ ಉದ್ದೇಶದಿಂದ ಇಂತಹ ಕ್ರಮ ಜಾರಿಯಾಗಿದೆ. ಕೇಂದ್ರ ಸರ್ಕಾರ 20% ಎಥೆನಾಲ್‌ ಮಿಶ್ರಣ ಮಾಡಲು ಆದೇಶಿಸಿದ್ದು, ಅದರಿಂದ ರೈತರ ಆದಾಯ ಹೆಚ್ಚಿದೆ. ಅದಕ್ಕೂ ಕಾಂಗ್ರೆಸ್‌ ಸರ್ಕಾರ ಕಲ್ಲು ಹಾಕುತ್ತಿದೆ ಎಂದರು.

ಕಾಂಗ್ರೆಸ್‌ನ ವಿರುದ್ಧ ಜನರು ಹಾಗೂ ಬಿಜೆಪಿ ಹೋರಾಟ ಮಾಡುತ್ತಿದೆ. ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗ ವಿಷಯಾಂತರ ಮಾಡಲು ಕಾಂಗ್ರೆಸ್‌ ಸಚಿವ ರಿಜ್ವಾನ್‌ ಅರ್ಷದ್‌ ಎಥೆನಾಲ್‌ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶ, ತೆಲಂಗಾಣ, ಕೇರಳದಲ್ಲೂ ಎಥೆನಾಲ್‌ ಮಿಶ್ರಣ ಮಾಡಲಾಗುತ್ತಿದೆ. ಅಲ್ಲಿ ಇಲ್ಲದ ಸಮಸ್ಯೆ ನಮ್ಮಲ್ಲಿ ಇದೆ ಎಂದರೆ ಇವರೇ ಅಕ್ರಮವಾಗಿ ಮಿಶ್ರಣ ಮಾಡಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಪೆಟ್ರೋಲ್‌ ಬಂಕ್‌ಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅದನ್ನು ಪರೀಕ್ಷೆ ಮಾಡಲಾಗಿದೆ ಎಂದರು.

ರೈತರಿಗೆ 7 ರೂ. ಹಾಲಿನ ಪ್ರೋತ್ಸಾಹಧನ ನೀಡಲು ಹಾಲಿನ ದರ ಏರಿಕೆ ಮಾಡಿರುವುದಾಗಿ ಕಾಂಗ್ರೆಸ್‌ ಸರ್ಕಾರ ಹೇಳಿದೆ. ಆದರೆ ನಂದಿನಿ ತುಪ್ಪ, ಮೊಸರಿನ ದರವನ್ನೂ ಏರಿಸಲಾಗಿದೆ. ಇದರಲ್ಲಿ ರೈತರಿಗೆ ಎಷ್ಟು ಸಿಗಲಿದೆ ಎಂದು ಹೇಳಿಲ್ಲ. ಇಂತಹ ಮೋಸವನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. 2028 ಕ್ಕೆ ಜನರು ಕಾಂಗ್ರೆಸ್‌ಗೆ ಜನರು ಮಂಗಳಾರತಿ ಮಾಡುವುದು ಗ್ಯಾರಂಟಿ. 20 ಸೀಟು ಕೂಡ ಕಾಂಗ್ರೆಸ್‌ಗೆ ಸಿಗುವುದಿಲ್ಲ. ಮುಖ್ಯಮಂತ್ರಿಗೆ ಹಾಸನಾಂಬೆ ದರ್ಶನ ನೀಡಿಲ್ಲ. ಜನರು ತಮ್ಮ ಕಾಳಿ ರೂಪವನ್ನು ತೋರಿಸಿದ್ದಾರೆ ಎಂದರು.

Leave a Reply