ದಾವಣಗೆರೆ ದಕ್ಷಿಣದ ಜನರಿಗೆ ಸರ್ಕಾರದ ಉತ್ತರವೇನು?: ಅಪ್ಸರ್ ಕೊಡ್ಲಿಪೇಟೆ

49 minutes ago

ಚುನಾವಣೆ ಗೆಲ್ಲಲು ₹100 ಕೋಟಿ ಘೋಷಣೆ, ಈಗ ಅನುದಾನವೇ ಬಿಡುಗಡೆಯಾಗಿಲ್ಲ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ 2026–27ನೇ ಸಾಲಿನಲ್ಲಿ ₹100 ಕೋಟಿ ಮೂಲಸೌಕರ್ಯ ಅನುದಾನ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ಈಗ ಆ ಅನುದಾನ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಉಪಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ದಾವಣಗೆರೆಯಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ದರು. ಈ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ₹100 ಕೋಟಿ ಅನುದಾನ ಘೋಷಿಸಿರುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಲಾಗಿತ್ತು. ಆದರೆ, ಚುನಾವಣೆಯ ನಂತರ ಆ ಭರವಸೆಯ ಗತಿಯೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದರು.

ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ 17-08-2026ರಂದು ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ದಾವಣಗೆರೆ ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು 05-10-2026ರಂದು ನೀಡಿರುವ ಉತ್ತರದಲ್ಲಿ, “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 2026–27ನೇ ಸಾಲಿನಲ್ಲಿ ₹100 ಕೋಟಿ ಮೂಲಸೌಕರ್ಯ ಅನುದಾನ ದಾವಣಗೆರೆ ಮಹಾನಗರ ಪಾಲಿಕೆಗೆ ಬಿಡುಗಡೆಯಾಗಿರುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ ಎಂದರು.

ಮಹಾನಗರ ಪಾಲಿಕೆಯ ಅಧಿಕೃತ ಉತ್ತರದ ಹಿನ್ನೆಲೆಯಲ್ಲಿ, ಚುನಾವಣೆಯ ಸಂದರ್ಭದಲ್ಲಿ ನೀಡಿದ ₹100 ಕೋಟಿ ಅನುದಾನದ ಭರವಸೆಯ ಕುರಿತು ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳಿಗೆ ಈಗ ಹೊಣೆಗಾರರು ಯಾರು? ಎಂದು ಪ್ರಶ್ನಿಸಿದರು.

ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರವೂ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಈ ಅನುದಾನವನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಾಗೂ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಬಳಸಬೇಕೆಂದು ನೂತನ ಶಾಸಕ ಶಾಮನೂರು ಸಮರ್ಥ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗಿರುವುದರ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.

ಎಸ್‌ಡಿಪಿಐ ಕೇಳುವ ನೇರ ಪ್ರಶ್ನೆಗಳು:
ಉಪಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ₹100 ಕೋಟಿ ಅನುದಾನ ಇನ್ನೂ ದಾವಣಗೆರೆ ಮಹಾನಗರ ಪಾಲಿಕೆಗೆ ಬಿಡುಗಡೆಯಾಗದಿರಲು ಕಾರಣವೇನು?
ಅನುದಾನ ಬಿಡುಗಡೆಯಾಗಿದೆ ಎಂದು ಘೋಷಿಸಿದ್ದರೆ, ಅದರ ಅಧಿಕೃತ ಆದೇಶ ಎಲ್ಲಿದೆ?
ಈ ಅನುದಾನ ಬಿಡುಗಡೆಯಾಗಿದ್ದರೆ, ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ ಮತ್ತು ಯಾವ ಕಾಮಗಾರಿಗಳಿಗೆ ಬಳಸಲಾಗಿದೆ?
ಕ್ಷೇತ್ರದ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಜವಾಬ್ದಾರಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಾಲಿ ಶಾಸಕರಿಗಿಲ್ಲವೇ?
ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಲಿ.
ಮೊನ್ನೆ ಪಕ್ಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಉಪ ಚುನಾವಣೆಯನ್ನು ಗೆಲ್ಲುವ ದೃಷ್ಟಿಯಿಂದ ಮತ್ತದೇ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುವ ಭರವಸೆಯನ್ನು ನೀಡಿ ಹೋಗಿರುವ ಮುಖ್ಯಮಂತ್ರಿ
ದಾವಣಗೆರೆ ದಕ್ಷಿಣ ಕ್ಷೇತ್ರದ ಜನರಿಗೆ ನೀಡಿದ ₹100 ಕೋಟಿ ಅನುದಾನದ ಭರವಸೆಯ ಕುರಿತು ಡಿಕೆ ಶಿವಕುಮಾರ್ ಅವರು ಕೂಡಲೇ ಸ್ಪಷ್ಟನೆ ನೀಡಬೇಕು. ಅನುದಾನ ಬಿಡುಗಡೆಯಾಗದಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ಸರ್ಕಾರ ಅಧಿಕೃತವಾಗಿ ತಿಳಿಸಬೇಕು. ಅನುದಾನ ಬಿಡುಗಡೆಯಾಗಿದ್ದರೆ, ಅದರ ಮಂಜೂರಾತಿ ಆದೇಶ, ಹಣ ಹಂಚಿಕೆ ಮತ್ತು ಕಾಮಗಾರಿಗಳ ಸಂಪೂರ್ಣ ವಿವರಗಳನ್ನು 15 ದಿನಗಳೊಳಗೆ ಸಾರ್ವಜನಿಕಗೊಳಿಸಬೇಕು.
ಜೊತೆಗೆ, ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಚುನಾವಣೆಯ ಸಂದರ್ಭದಲ್ಲಿ ವೇದಿಕೆಗಳ ಮೇಲೆ ಘೋಷಣೆ ಮಾಡುವುದು ಸುಲಭ; ಆ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ನಿಜವಾದ ಹೊಣೆಗಾರಿಕೆ. ಜನರಿಗೆ ನೀಡಿದ ಭರವಸೆಗಳು ಕೇವಲ ಚುನಾವಣಾ ಭಾಷಣಗಳಿಗೆ ಸೀಮಿತವಾಗಬಾರದು.
ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯಾಗಿ ಹಾಗೂ ಕ್ಷೇತ್ರದ ಜನರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವ ಜವಾಬ್ದಾರಿಯುತ ರಾಜಕೀಯ ಪ್ರತಿನಿಧಿಯಾಗಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಇದು ಯಾವುದೇ ರಾಜಕೀಯ ಲಾಭಕ್ಕಾಗಿ ಕೇಳುತ್ತಿರುವ ಪ್ರಶ್ನೆಯಲ್ಲ; ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಣದ ಪಾರದರ್ಶಕ ಬಳಕೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ.
₹100 ಕೋಟಿ ಅನುದಾನದ ಭರವಸೆಯ ಬಗ್ಗೆ ಸರ್ಕಾರ ಉತ್ತರಿಸಲೇಬೇಕು. ದಾವಣಗೆರೆ ದಕ್ಷಿಣದ ಜನರಿಗೆ ಸ್ಪಷ್ಟನೆ ನೀಡಲೇಬೇಕು. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವವರೆಗೆ ಈ ಪ್ರಶ್ನೆಯನ್ನು ನಾವು ಮುಂದಿಡುತ್ತೇವೆ.

ಪತ್ರಿಕಾ ಗೋಷ್ಠಿಯಲ್ಲಿ ತಾಹೀರ್ ಹುಸೇನ್, ಜಿಲ್ಲಾಧ್ಯಕ್ಷ, ರಿಯಾಜ್ ರಿಜ್ವಿ, ಜಿಲ್ಲಾ ಉಪಾಧ್ಯಕ್ಷ, ಮೊಹಮ್ಮದ್ ಮೊಹ್ಸಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಮೀರ್ ಅಹಮದ್, ಜಿಲ್ಲಾ ಸಮಿತಿ ಸದಸ್ಯ, ಮೊಹಮ್ಮದ್ ಅಶ್ರಫ್ ಹಾಜರಿದ್ದರು.

Leave a Reply