“Kindness in words creates confidence. Kindness in thinking creates profoundness. Kindness in giving creates love.”
– Lao Tzu
ಮಿತ್ರ ನಾಗತಿಹಳ್ಳಿರಮೇಶ್ ಅವರ ‘ ಬಯಲ ಕನ್ನಡಿ ಮತ್ತು ಮನದ ಮಿಂಚು’ ಹೊಸ ಕವನ ಸಂಕಲನದ ಬಗ್ಗೆ ಬರೆಯಲು ಆರಂಭಿಸುವಾಗ ದಾರ್ಶನಿಕ ಲಾ ವೋತ್ಸು ಹೇಳಿದ ಈ ಮಾತು ನನಗೆ ಯಾಕೋ ತಟ್ಟನೆ ನೆನಪಿಗೆ ಬಂತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಭಾವುಕತೆ ಕೇಂದ್ರದ ನೆಲೆಯಲ್ಲಿ ರಮೇಶ್ ಅವರ ಮಾತು, ಬರಹ, ಒಡನಾಟ ಸಂವೇದನೆಗಳು ತುಂಬಿ ಹರಿಯುತ್ತವೆ. ಈ ಅಭಿಪ್ರಾಯ ಅವರೊಂದಿಗೆ ಸಾಂಗತ್ಯ ನಡೆಸಿದ ಎಲ್ಲರ ಅನುಭವಕೆ ಬಂದಿರಲು ಸಾಕು.
ರಮೇಶ್ ಅವರ ‘ಬಯಲ ಕನ್ನಡಿ ಮತ್ತು ಮನದ ಮಿಂಚು’ ಸಂಕಲನದ ಕೆಲವು ಪದ್ಯಗಳಲ್ಲಿನ ನನ್ನ ಮನಕೆ ತಾಗಿದ ಸಾಲುಗಳು;
“ಬಿರುಗಾಳಿಗೆ ಅಡ್ಡವಾಗಿ ದೀಪವಿಡಿದು ನಿಂತವರೇ,
ಪಾಪದ ಗಾಳಿಯ ಮೂಲಕ ನಿಮ್ಮೊಳಗಿನ ಬೆಳಕು ಆರಿಹೋಗಲು ಬಿಟ್ಟಿರಿ…”,
ಮಣ್ಣ ಹಾಳೆಯ ಮೇಲೆ
ಎಳೆದ ಹೂವಿನ ತೇರು
ನಮ್ಮದೇ ಕನಸ ಸೊಂಪು
ನಿನ್ನೆದೆ ಗೂಡಿನ ತಂಪು,
ಅವ್ವ
ಒಡಲೊಳಗಿನ ಕಿಚ್ಚ
ಅಂಗೈಯಲ್ಲೇ ಅಮುಕುತ್ತಾ
ಮಕ್ಕಳ ಹೆತ್ತು ಹೊತ್ತು ಸಾಕಿ ಸಲಹುವಳು…
ಹೀಗೆ,
ಆಯ್ಕೆಗೆ ಕೊನೆಯಿಲ್ಲ ಹಾಗಾಗಿ ನೂರ ಹನ್ನೊಂದು ಪದ್ಯಗಳ ಕುರಿತು ಇಲ್ಲಿ ಹೆಚ್ಚು ಮಾತನಾಡಲಾರೆ. ಆದರೆ, ಇದರ ನೆಪದಲ್ಲಿ ರಮೇಶ್ ಅವರ ಈ ಪದ್ಯಗಳ ಹಿಂದೆ ತುಡಿದ ಮನಸ್ಸಿನ ತಳಮಳ, ಉದಾಸಿತನ ಮತ್ತು ವ್ಯಕ್ತಿತ್ವ, ಅಸ್ತಿತ್ವದ ಕುರಿತು ಅವರ ನಿಲುವಿನ ಬಗ್ಗೆ ನನಗೆ ಅನಿಸಿದ ನಾಲ್ಕು ಮಾತುಗಳಲ್ಲಿ ಹಂಚಿಕೊಳ್ಳಬಹುದು.
ಒಂದು ಅಸಂಗತ ಪದ್ಯದಂತೆ ಇರುವ ಅವರ ವ್ಯಕ್ತಿತ್ವ ನಿರ್ಲಿಪ್ತವಾಗಿರುವಂತೆ ಕಂಡರೂ ಗುಪ್ತಗಾಮಿನಿಯಾಗಿ ಎಲ್ಲವನ್ನೂ ಸುಮ್ಮನೆ ಗಮನಿಸುವ ಅವರೊಳಗಿನ ಪ್ರಜ್ಞೆ ಸದಾ ಚಲನಶೀಲವಾದದ್ದು. ಗಮನಿಸುವಿಕೆಯೇ ಇವರ ಎಲ್ಲ ಅಭಿವ್ಯಕ್ತಿಗಳ ಕೇಂದ್ರ. ತನ್ನ ಸುತ್ತಲಿನ ಚಲನೆಯನ್ನು ತನ್ನ ಭಾವಲೋಕದೊಳಗೆ ಆಹ್ವಾನಿಸುತ್ತ ಅದರ ಸೂಕ್ಷ್ಮಪದರ, ಪದರಗಳ ಸ್ಪರ್ಶಸುಖ ಅನುಭವಿಸುವಲ್ಲಿ ರಮೇಶ್ ಒಂದು ರೀತಿಯ ನಿರುಮ್ಮಳತೆ, ಆನಂದ, ಸಾಂತ್ವಾನವನ್ನು ಅನುಭವಿಸುತ್ತಾರೆ.
‘ಹೂತು ಹೋದ ಮುಖ’ ಗಳು, ಪ್ರೀತಿಗೆದುರಾದಾಗ, ಕರುಣೆಯ ಬುತ್ತಿ ಬಿಚ್ಚಿಕೊಂಡು, ಬೆಳಕಿನ ಬೀಜವ ಹುಡುಕುವ ಪರಿ,
ಕೊನೆಗೆ ಅವ್ವನ ಕಾಣ್ಕೆಯೊಳಗೆ ಕರಗುವ ಪ್ರಕ್ರಿಯೆಯೂ ನಿಜಕ್ಕೂ ಕಾವ್ಯಾಸಕ್ತರಲ್ಲಿ ವಿಸ್ಮಯ ಉಂಟುಮಾಡುವಂತಹದ್ದು.
ಬದುಕಿನೊಂದಿಗೆ ಪರಿಣಾಮಿಸುವ, ಕಾಲ-ದೇಶಗಳ ಪರಿಣಾಮಗಳನ್ನು ನಿರ್ಲಿಪ್ತವಾಗಿ ಎದುರಿಸುವ ಜೊತೆಗೇ ತನ್ನ ಜೀವನ ಗತಿಯ ಓಘವನ್ನು ಕಾಯ್ದುಕೊಳ್ಳುವಲ್ಲಿ ರಮೇಶ್ ಸಂಯಮಿಯಾಗಿ ನಡೆದುಕೊಳ್ಳುವುದನ್ನು ಅವರ ನಡೆನುಡಿಗಳ ಮೂಲಕ ಕಾಣಬಹುದು. ಕೆಲವೊಮ್ಮೆ ಹೊರಹೊಮ್ಮುವ ಉದ್ವೇಗದ, ಭಾವುಕವಾದ ಸೀಮಿತವಾದ, ಅವರ ತಾತ್ಕಾಲಿಕ ಅಭಿವ್ಯಕ್ತಿಯು ಸಾಪೇಕ್ಷವಾದ್ದರಿಂದ ಅವು ಎಂದು ಮಿತಿ ಮೀರಿದ, ಹತೋಟಿ ತಪ್ಪಿದ ನಡಾವಳಿಯಾಗಿ ಹೊಮ್ಮುವುದಿಲ್ಲ.
ಮನುಷ್ಯ ತನ್ನ ಇರುವಿಕೆಯನ್ನು ಲೋಕಕ್ಕೆ ತೋರಲು ಅನೇಕ ರೀತಿಯ ಸಾಹಸಗಳ, ಸಾಧನೆಗಳ ಮೂಲಕ ತನ್ನ ಪ್ರಯತ್ನ ಮಾಡುತ್ತಲೇ ಇರುತ್ತಾನೆ.
ಈ ಎಲ್ಲ ಹಂತಗಳು ದಾಟಿ ತನ್ನ ಅಸ್ಮಿತೆ ಕಂಡುಕೊಂಡ ನಂತರ ಕೊನೆಗೆ ಉಳಿಯುವುದು ನಿರ್ವಾತ ಅಥವಾ ಖಾಲಿ ಎನ್ನುವ ಸತ್ಯದ ಅರಿವು ಹೊಳೆಯಬಹುದು.
ಪರಿಪಕ್ವತೆ ಪಡೆದ ಇಂತಹ ವ್ಯಕ್ತಿತ್ವಕ್ಕೆ ಲೋಕ ಸತ್ಯದ ದೃಷ್ಟಿ ಮತ್ತು ಏಕಾಂತ – ಲೋಕಾಂತ ಅನುಸಂಧಾನಗೊಳಿಸುವ ಜೀವನ ದರ್ಶನ ಒದಗಿಬರಬಹುದು.
ಭಾವ ಶಿಖರದ ಪಯಣದ ಹಾದಿಯಲ್ಲಿ ಸಾಗುತ್ತಿರುವ ರಮೇಶ್ ಅವರ ಹಂಬಲಿಕೆ, ಕಾವ್ಯ ವ್ಯಾಮೋಹ ಸಕಾರಣವಾದದ್ದು ಮತ್ತು ಅವರೊಳಗೆ ಬೇರೂರಿರುವ ಜೀವನ ಪ್ರೀತಿಯ ಉತ್ಕಟತೆಯಿಂದ ವ್ಯಕ್ತಗೊಂಡಿದೆ. ಅವರ ಪದ್ಯಗಳನ್ನು ಓದಿದವರಿಗೆ ರಮೇಶ್ ಅವರ ಕಾವ್ಯಕೃಷಿಗೆ ಕಾರಣ ಬದುಕಿನ ಪ್ರೀತಿಯೆ ಹೊರತು ಇನ್ಯಾವುದೇ ಪರೋಕ್ಷವಾದ ನಿರೀಕ್ಷೆಗಳು ಇವೆ ಎಂದು ಅನಿಸುವುದಿಲ್ಲ.
ಅನಕ್ಷರದ ವೃತ್ತಿಯ ಕಲಾವಿದನಾಗಿ ಅಕ್ಷರದ ಪದ್ಯಗಳ ಬಗ್ಗೆ ವಿಮರ್ಶಾತ್ಮಕ ಬರಹ ನನ್ನಿಂದ ಸಾಧ್ಯವಾಗಬಹುದೆಂಬ ವಿಶ್ವಾಸ ನನಗಿಲ್ಲ. ಆದರೆ, ಕಾವ್ಯದ ಆಸಕ್ತ ಓದುಗನಾಗಿ ನನ್ನ ಅರಿವಿನ ಮಿತಿಯಲ್ಲೇ ಮಿತ್ರ ರಮೇಶ ಪ್ರೀತಿಯ ಒತ್ತಾಯಕ್ಕೆ ಅವರ ನೂರ ಹನ್ನೊಂದು ಪದ್ಯಗಳ ನನ್ನ ಓದಿನ ಅನುಭವನ್ನು ಅಕ್ಷರಕ್ಕೆ ತರಲು ಪ್ರಯತ್ನಿಸಿದ್ದೇನೆ. ಅವರ ವಿಶ್ವಾಸ, ಪ್ರೀತಿಯ ಕಾರಣ ನನ್ನಿಂದ ಇಷ್ಟು ಬರೆಸಿದೆ. ಮಿತ್ರ ರಮೇಶ ಅವರಿಗೆ ಶುಭವಾಗಲಿ.
– ಎಂ.ಎಸ್.ಮೂರ್ತಿ, ಕಲಾವಿದರು




