ಚಾಮರಾಜನಗರ: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಸಲಹೆ ನೀಡಿದರು.
ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ರಂಗವಾಹಿನಿ ಸಂಸ್ಥೆ, ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಚಾಮರಾಜನಗರ ಇವರ ಸಹಯೋಗದಲ್ಲಿ ಕವಿ ಬಿ.ಆರ್.ಲಕ್ಷ್ಮಣರಾವ್ ಅವರೊಂದಿಗೆ ನಡೆದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಟಕ, ವಿಮರ್ಶೆ, ಕವನ ಸಂಕಲನ, ಕಾದಂಬರಿ, ಪ್ರವಾಸ ಕಥನಗಳನ್ನು ಓದಬೇಕು. ಆಗ ನೀವು ಕೂಡ ಕವಿಗಳಾಗಬಹುದು ಎಂದರು.
ನಾನು ವಿದ್ಯಾರ್ಥಿಯಾಗಿದ್ದಾಗ ನಿಮ್ಮ ಹಾಗೇ ಕುತೂಹಲದಿಂದ ಕವಿಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆ ಸಂದರ್ಭ ಹೆಸರಾಂತ ಕವಿಗಳು ನಮಗೆ ಸ್ಫೂರ್ತಿಯಾಗಿದ್ದಾರೆ. ನಮ್ಮ ಸರ್ಕಾರಿ ಶಾಲೆಗೆ ಬೇಂದ್ರೆ, ಜಿ.ಪಿ.ರಾಜರತ್ನಂ ಬಂದಿದ್ದರು. ಆ ನೆನಪು ಇಂದು ಮರುಕಳಿಸಿತು ಎಂದರು.
ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನನ್ನ ಪತ್ನಿ ಗಿರಿಜಾ ನನ್ನ ಕವಿತೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಇದು ನನಗೆ ಮರೆಯಲಾಗದ ದಿನ ಎಂದು ಸಂತೋಷಪಟ್ಟರು.
ವಿದ್ಯಾರ್ಥಿಗಳು ಅನೇಕ ಪ್ರಶ್ನೆಗಳನ್ನು ಲಕ್ಷ್ಮಣರಾವ್ ಅವರಿಗೆ ಕೇಳಿದರು. ನಿಮ್ಮ ಭಾವಗೀತೆಯಾದ ‘ಅಮ್ಮ ನಿನ್ನ ಎದೆಯಾಳದಲ್ಲಿ’ ಈ ಗೀತೆ ಬರೆಯಲು ಕಾರಣವೇನು ? ನಿಮ್ಮನ್ನು ಪ್ರೇಮಕವಿ ಎನ್ನಲು ಕಾರಣವೇನು? ನಿಮ್ಮನ್ನು ಸಿಟ್ರಿಕ್ ಕವಿ ಎನ್ನುತ್ತಾರಲ್ಲ ಏಕೆ ? ನಿಮ್ಮ ಕವಿತೆಗಳು ವೈವಿಧ್ಯ್ಯಮಯವಾಗಿರುವುದರಿಂದ ನಿಮ್ಮನ್ನು ವೈವಿಧ್ಯಯ ಕವಿ ಎಂದು ಕರೆಯಬಹುದೆ ? 10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಮ್ಮ ಸಲಹೆ ಏನು. ನಿಮ್ಮ ಕವಿತೆಗಳಿಗೆ ಸ್ಫೂರ್ತಿ ಯಾರು ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದರು.
ಅಮ್ಮ ನಿನ್ನ ಎದೆಯಾಳದಲ್ಲಿ ಎಂಬ ಭಾವಗೀತೆ ಭೂತಾಯಿ ಮತ್ತು ತಾಯಿಯ ಬಗ್ಗೆ ಬರೆದೆ. ಅದು ಇಂದು ಜನಪ್ರಿಯವಾಗಿದೆ. ಸಿಟ್ರಿಕ್ ಕವಿ ಎನ್ನುವುದಕ್ಕೆ ಕಾರಣ ನಿಂಬೆಗಿಡ ಎಂಬ ಪದ್ಯ ಬರೆದಿದ್ದೆ. ಪ್ರೀತಿ ಎಂಬುದು ನಿಂಬೆ ಗಿಡದ ತರ ನೋಡುವುದಕ್ಕೆ ಗಿಡ ಚೆನ್ನಾಗಿದೆ. ನಿಂಬೆ ಹೂ ಕೂಡ ರುಚಿಯಾಗಿದೆ. ಆದರೆ ನಿಂಬೆ ಹಣ್ಣು ಹುಳಿ ಮತ್ತು ಕಹಿಯಾಗಿದೆ. ಅಂದರೆ ಪ್ರೇಮವೆಂಬುದು ನೋಡುವುದಕ್ಕೆ ಚಂದ. ಅದಕ್ಕೆ ಸಿಟ್ರಿಕ್ ಕವಿ ಎನ್ನುತ್ತಾರೆ. ನನ್ನ ಕವಿತೆಗಳಿಗೆ ಸ್ಫೂರ್ತಿ ಸುಬ್ಬಾಭಟ್ಟರ ಮಗಳು ನನ್ನ ಹೆಂಡತಿ ಗಿರಿಜಾ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಸುಬ್ಬಭಟ್ಟರ ಮಗಳೇ, ಹೇಳಿ ಹೋಗು ಕಾರಣ, ನಿಂಬೆಗಿಡ ಭಾವಗೀತೆಗಳನ್ನು ಹಾಡಿ ರಂಜಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನರ್ಜನೆಗಾಗಿ ಕಲಿಕೆಯೊಂದನ್ನು ನೆಚ್ಚಿಕೊಂಡರೆ ಸಾಲದು, ನಿರಂತರ ಓದುವಿಕೆ ಮುಖ್ಯ. ಇದರಿಂದ ನಮ್ಮ ಸುತ್ತಮುತ್ತ ನಡೆಯುವ ದಿನನಿತ್ಯದ ಆಗುಹೋಗುಗಳನ್ನು ತಿಳಿಯಲು ಸಾಧ್ಯ. ನಮ್ಮ ಸರ್ಕಾರಿ ಪಬ್ಲಿಕ್ ಶಾಲೆಗೆ ನಾಡಿನ ಪ್ರಖ್ಯಾತಕವಿ ಬಿ.ಆರ್.ಲಕ್ಷ್ಮಣರಾವ್ ಅವರು ಭೇಟಿ ನೀಡಿರುವುದು ನಿಜಕ್ಕೂ ಒಂದು ಅವಿಸ್ಮರಣೀಯ ದಿನ. ಇದಕ್ಕೆ ಅವಕಾಶ ಮಾಡಿಕೊಟ್ಟ ರಂಗವಾಹಿನಿ ಸಂಸ್ಥೆಯ ಸಿ.ಎಂ. ನರಸಿಂಹಮೂರ್ತಿ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅರುಣ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ ಎಂದರು.
ಪಬ್ಲಿಕ್ ಶಾಲೆಯ ವೃಂದ ಹಾಗೂ ಶಾಲಾ ವಿದ್ಯಾರ್ಥಿಗಳು ಬಿ.ಆರ್.ಲಕ್ಷ್ಮಣರಾವ್ ಮತ್ತು ಅವರ ಪತ್ನಿ ಗಿರಿಜಾ ಅವರಿಗೆ ಹುಟ್ಟುಹಬ್ಬದ ನೆನಪಿನಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಬಿಇಓ ಕಾಂತರಾಜು, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಗೋಪಾಲಕೃಷ್ಣ ಅಡಿಗರ ಸೊಸೆ ಸುಧಾ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ, ಪಬ್ಲಿಕ್ ಶಾಲೆ ಪ್ರಾಂಶುಪಾಲ ನಂಜುಂಡಯ್ಯ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ವಿಜಯ್, ಶಿವಾಲಂಕಾರ್, ಲಿಂಗರಾಜು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಮೈಸೂರಿನ ಜಗ್ಗು ಜಾದೂಗಾರ್ ಜಾದು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.




