ಪಂಚಾಯಿತಿ ಹ್ಯಾಕಾಥಾನ್
ಮಂಡ್ಯ: ಯಾವುದೇ ಸರ್ಕಾರಿ ಸೇವೆ, ಸೌಲಭ್ಯಗಳನ್ನು ಪಡೆಯಬೇಕೆಂದರೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು. ಅರ್ಜಿ ಹಾಕಲು, ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು, ಪ್ರತಿಯೊಂದಕ್ಕೂ ಸರ್ಕಾರಿ ಕಚೇರಿಗೆ ಎಡತಾಕಬೇಕು. ಆದರೆ ಯಾವುದೋ ಸಣ್ಣ ಹಳ್ಳಿಯಲ್ಲಿರುವ ದಿನದ ಕೂಲಿಯನ್ನೇ ನಂಬಿರುವ ಗ್ರಾಮೀಣ ಪ್ರದೇಶದ ವ್ಯಕ್ತಿ ಹೀಗೆ ತನ್ನ ಕೆಲಸವನ್ನು ಬದಿಗಿರಿಸಿ ಸರ್ಕಾರಿ ಕಚೇರಿಗೆ ಅಲೆದಾಡುವುದು ಸಾಧ್ಯವೆ?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇಂತಹದ್ದೊಂದು ಪ್ರಶ್ನೆ ಜನಪ್ರತಿನಿಧಿಗಳಲ್ಲಿ ಮೂಡಿದರೆ ಎಂತಹ ಬದಲಾವಣೆಯಾಗಬಹುದು ಎಂಬುದಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ, ‘ಪಂಚಾಯಿತಿ ಹ್ಯಾಕಥಾನ್’, ಅಂದರೆ ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮವೇ ಸಾಕ್ಷಿ.
ಹ್ಯಾಕಾಥಾನ್, ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಪದ. ಒಂದು ನಿರ್ದಿಷ್ಟ ಸಮಯದಲ್ಲಿ, ತಂತ್ರಜ್ಞಾನದ ವಿವಿಧ ಆಯಾಮಗಳಲ್ಲಿ ಅನುಭವ ಇರುವವರು ಒಂದೆಡೆ ಸೇರಿ, ಸಮಸ್ಯೆಗಳನ್ನು ಗುರುತಿಸಿ, ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಒಂದು ಕಾರ್ಯಕ್ರಮ. ತಂತ್ರಜ್ಞಾನ ಹಿನ್ನೆಲೆಯುಳ್ಳ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅದೇ ಮಾದರಿಯನ್ನು ಜನಸೇವೆಗೆ ಅಳವಡಿಸಿಕೊಂಡು ರೂಪಿಸಿದ ಕಾರ್ಯಕ್ರಮವೇ ಪಂಚಾಯಿತಿ ಹ್ಯಾಕಥಾನ್.
ತಾಲೂಕು ಮಟ್ಟದಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಒಂದೆಡೆ ಸೇರಿ, ಇಲಾಖೆಗಳಡಿಯಲ್ಲಿ ಲಭ್ಯವಿರುವ ಯೋಜನೆಗಳು, ಸೇವೆಗಳನ್ನು ಗ್ರಾಮಸ್ಥರಿಗೆ ಅವರದೇ ಮನೆ ಬಾಗಿಲಿಗೆ ಲಭ್ಯವಾಗುವಂತೆ ಮಾಡುವುದು ಈ ಪಂಚಾಯಿತಿ ಹ್ಯಾಕಥಾನ್‌ನ ಗುರಿ.
ಅಂಗನವಾಡಿ ಕಾರ್ಯಕರ್ತರ ಸಹಕಾರದೊಂದಿಗೆ ಗ್ರಾಮಸ್ಥರ ಸಮಸ್ಯೆಗಳು ಹಾಗೂ ಅಗತ್ಯವಿರುವ ಸೇವೆಗಳ ಮಾಹಿತಿ ಸಂಗ್ರಹಿಸುವುದು, ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಪಂಚಾಯಿತಿ ಕಚೇರಿಯಲ್ಲಿ 15 ದಿನಗಳ ಕಾಲ ಎಲ್ಲ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಕಾರ್ಯಕ್ರಮದ ಒಟ್ಟು ರೂಪ.
2024ರ ಜೂನ್ 13ರಂದು ಕ್ಷೇತ್ರದ ಕೆನ್ನಾಳು ಗ್ರಾಮ ಪಂಚಾಯಿತಿ, ಈ ವಿಶಿಷ್ಟ ಕಾರ್ಯಕ್ರಮ ಆರಂಭವಾಯಿತು. ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿತು. ನಂತರದಲ್ಲಿ ಜುಲೈ ತಿಂಗಳಲ್ಲಿ ದುದ್ದ ಹೋಬಳಿಯ ಚಂದಗಾಲು ಗ್ರಾಮ ಪಂಚಾಯಿತಿಯಲ್ಲಿ, ಆಗಸ್ಟ್ ತಿಂಗಳಲ್ಲಿ ಚಿನಕುರಳಿ ಹೋಬಳಿಯ ಬನ್ನಂಗಾಡಿ ಗ್ರಾಮ ಪಂಚಾಯಿತಿ, ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹಳೇಬೀಡು ಗ್ರಾಮ ಪಂಚಾಯಿತಿಯಲ್ಲಿ, ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪಾಂಡವಪುರ ತಾಲೂಕಿನ ಮಾಣಿಕ್ಯನ ಹಳ್ಳಿಯಲ್ಲಿ ಪಂಚಾಯಿತಿ ಹ್ಯಾಕಾಥಾನ್ ಇತ್ತೀಚೆಗೆ ನಡೆಯಿತು. ಈ ಪಂಚಾಯಿತಿ ವ್ಯಾಪ್ತಿಯಲ್ಲಿ 9 ಗ್ರಾಮಗಳಿದ್ದು, 1600ಕ್ಕೂ ಮನೆಗಳಿವೆ. ಮೊದಲು ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ಸಿಬ್ಬಂದಿ, ಕೃಷಿ ಸಖಿ-ಪಶುಸಖಿ ಹಾಗೂ ಇತರೆ ಸಿಬ್ಬಂದಿ ನೆರವಿನೊಂದಿಗೆ ಮನೆಮನೆಗೆ ತೆರಳಿ ಸರ್ವೆ ಕಾರ್ಯಕ್ರಮ ಮಾಡಿಸಲಾಯಿತು. ಜನರು ಹೊಲದಲ್ಲಿರಲಿ, ಮನೆಯಲ್ಲಿರಲಿ, ರಸ್ತೆಯಲ್ಲಿರಲಿ, ಅವರಿಂದ ಮಾಹಿತಿ ಸಂಗ್ರಹಿಸಲಾಯಿತು.
ನಂತರ ಶಾಸಕರ ನೇತೃತ್ವದಲ್ಲಿ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆ ಸೌಲಭ್ಯ ನೀಡಬೇಕಾದ ಫಲಾನುಭವಿಗಳ ವಿವರಗಳು ಹಾಗೂ ಇತರೆ ಸಮಸ್ಯೆಗಳ ಬಗ್ಗೆ ತಹಸೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಆಯಾ ಇಲಾಖಾಧಿಕಾರಿಗಳಿಗೆ ಅರ್ಜಿಗಳನ್ನು ವಿಂಗಡಣೆ ಮಾಡಿ ಕ್ರಮವಹಿಸುವಂತೆ ತಿಳಿಸಲಾಗಿತ್ತು. ಹದಿನೈದು ದಿನಗಳ ಸತತವಾಗಿ ನಡೆದ ಈ ಕಾರ್ಯಕ್ರಮದಿಂದಾಗಿ ಜನರಲ್ಲಿ ಸರ್ಕಾರಿ ಸೇವೆಯ ಬಗ್ಗೆ ಒಂದು ಹೊಸ ಆಶಾಭಾವನೆ ಮೂಡಿತು. ಇದನ್ನು ಸಾಧ್ಯವಾಗಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಬಗ್ಗೆ ಅಪಾರ ಅಭಿಮಾನವನ್ನು ಮೂಡಿಸಿತು.
ದೂರದ ಸರ್ಕಾರಿ ಕಚೇರಿಗಳಿಗೆ ಪ್ರಯಾಣಿಸುವುದು, ಸರ್ಕಾರಿ ಅಧಿಕಾರಿಗಳ ನೀತಿ ನಿಯಮಗಳನ್ನು ಅರಿಯದೇ ಸಂಕಷ್ಟ ಎದುರಿಸುವುದು, ಕಚೇರಿಗೆ ಓಡಾಡಲು ಹಣ ವಿನಿಯೋಗಿಸುವುದು ಎಲ್ಲವೂ ಗ್ರಾಮೀಣ ಜನರಿಗೆ ಸವಾಲೆ. ಇದನ್ನು ಅರಿತ ಶಾಸಕರು, ಸರ್ಕಾರಿ ಸೇವೆಯನ್ನು ಮನೆಯ ಬಾಗಿಲಿಗೇ ತಂದಿದ್ದು ಕ್ರಾಂತಿಕಾರಿ ಹೆಜ್ಜೆ ಎಂದು ಗ್ರಾಮಸ್ಥರು ಅಭಿಮಾನದಿಂದ ಹರಸಿದರು.
ಪಂಚಾಯಿತಿ ಹ್ಯಾಕಥಾನ್ ಪರಿಕಲ್ಪನೆಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಮಾಣಿಕ್ಯನಹಳ್ಳಿ ಗ್ರಾಮಸ್ಥರು, ದಶಕಗಳಿಂದ ನೆನೆಗುದಿಗೆ ಬಿದ್ದ ಕೆಲಸಗಳು ಕಾರ್ಯರೂಪಕ್ಕೆ ಬಂದವು ಎಂದು ಹರ್ಷ ವ್ಯಕ್ತಪಡಿಸಿದರು.
ಸಾಲು ಸಾಲು ಅಭಿವೃದ್ಧಿ ಕೆಲಸಗಳು: ಮಾಣಿಕ್ಯನಹಳ್ಳಿ ವ್ಯಾಪ್ತಿಯ ಚಿಟ್ಟನಹಳ್ಳಿ, ಬೆಳ್ಳಾಳೆ, ಸಿಂಗ್ರಿಗೌಡನ ಕೊಪ್ಪಲುಗಳಲ್ಲಿ ದಶಕಗಳಿಂದ ಸ್ಮಶಾನ ಇರಲಿಲ್ಲ. ಈ ಗ್ರಾಮಗಳಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ತೆರವುಗೊಳಿಸಿ, ಸ್ಮಶಾನಕ್ಕೆ ಸ್ಥಳವನ್ನು ಕಲ್ಪಿಸಿಕೊಡಲಾಯಿತು.
ಚಿಟ್ಟನಹಳ್ಳಿ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳ ಮರು ಜೋಡಣೆ ಮತ್ತು ಹೆಚ್ಚುವರಿ ಟಿ.ಸಿ ಅಳವಡಿಕೆಗೆ ಆದೇಶ ಮತ್ತು ಕುಡಿಯುವ ನೀರಿನ ಓವರ್ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳ ನಿಗದಿ ಮತ್ತು ನಿರ್ಮಾಣಕ್ಕೂ ನಿರ್ಧರಿಸಲಾಯಿತು.
ಶ್ರೀ ಕ್ಷೇತ್ರ ಮೇಲುಕೋಟೆ ತೊಟ್ಟಿಲು ಮಡು ಜಾತ್ರೆ ವೇಳೆ ಶ್ರೀ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಯನ್ನು ಗಿರಿ ಪ್ರದಕ್ಷಣೆ ಮಾಡಲಾಗುತ್ತದೆ. ಈ ಜಾಗ ಸುಮಾರು ದಶಕಗಳಿಂದ ಒತ್ತುವರಿಯಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು 3 ಕಿಲೋಮೀಟರ್ ಗಿರಿ ಪ್ರದಕ್ಷಣೆ ರಸ್ತೆಯ ಒತ್ತುವರಿಯನ್ನು ತೆರವು ಮಾಡಲಾಯಿತು. ಇದರಿಂದ ಮಾಣಿಕ್ಯನಹಳ್ಳಿ, ಜಕ್ಕನಹಳ್ಳಿ, ಮೇಲುಕೋಟೆಯ ಮೂರು ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಗ್ರಾಮೀಣ ಭಾಗದ ರೈತರ ವಿದ್ಯುತ್ ಸಮಸ್ಯೆ ನೀಗಿಸಲು ಮಾಣಿಕ್ಯನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಶೆಟ್ಟಹಳ್ಳಿ ಗ್ರಾಮದ ಸರ್ವೆ ನಂಬರ್ 3ರಲ್ಲಿನ 32 ಎಕರೆ ಸರ್ಕಾರಿ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವ ದಿಟ್ಟ ನಿರ್ಧಾರ ಕೈಗೊಳ್ಳಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿಯೂ ವಿಶೇಷ ಕಾರ್ಯಕ್ರಮ ಯಶಸ್ವಿಯಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿ ಹತ್ತು ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಪಾಸ್ ಬುಕ್ ವಿತರಣೆ ಮಾಡಲಾಯಿತು.
70ಕ್ಕೂ ಹೆಚ್ಚು ಫಲಾನುಭವಿಗಗಳಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್, ತೋಟಗಾರಿಕೆ ಯಾಂತ್ರೀಕರಣ, ಹನಿ ನೀರಾವರಿ ಸೌಲಭ್ಯಗಳನ್ನು ವಿತರಿಸಲಾಯಿತು.
ಹನ್ನೊಂದು ಫಲಾನುಭವಿಗಳಿಗೆ ಮೀನುಗಾರಿಕೆ ಇಲಾಖೆಯ ಮೀನುಕೊಳ, ಕೃಷಿ ಹೊಂಡ ಯೋಜನೆಯ ಸೌಲಭ್ಯಗಳನ್ನು ವಿತರಿಸಲಾಯಿತು. ಸಿಂಗ್ರಿಗೌಡನ ಕೊಪ್ಪಲಿನ ಪುಟ್ಟೇಗೌಡ ಅವರಿಗೆ ಜಿಲ್ಲಾಪಂಚಾಯತ್ ಯೋಜನೆಯಡಿ ಹಿಪ್ಪುನೇರಳೆ ನಾಟಿಗೆ ಸಹಾಯಧನ ನೀಡಲಾಯಿತು. 20ಕ್ಕೂ ಹೆಚ್ಚು ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಈ ಭಾಗದ ರೈತರಿಗೆ ಹೇಮಾವತಿ ಜೀವನಾಡಿ. ಎಡ ದಂಡೆಯ ನಾಲೆಯ ಹೂಳು ತೆಗೆಸುವ ಜೊತೆಗೆ ಸೇವಾ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಯಿತು. ಈ ಅಭಿವೃದ್ಧಿ ಕಾರ್ಯದಿಂದ ನೀರಿನ ಹರಿವಿಗೆ ಹಾಗೂ ಜಾನುವಾರುಗಳ ಓಡಾಟಕ್ಕೆ ಅನುಕೂಲಕವಾಗಿದೆ.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತ್ವರಿತಗತಿ ಕಾರ್ಯಪ್ರಗತಿಗೆ ಒತ್ತು ನೀಡಿದ ಶಾಸಕರು, ಕೇಂದ್ರದ ಜಲ್‌ಜೀವನ್ ಮಿಷನ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಂಡಿದ್ದಾರೆ. ಇನ್ನು ಶುದ್ಧ ಕುಡಿಯುವ ನೀರಿನ ಘಟಕ ಸ್ಥಳಾಂತರದ ಕಾರ್ಯ ಪ್ರಗತಿಯಲ್ಲಿದೆ.
ದಿವಂಗತ ಪ್ರಧಾನಿ ನೆಹರು ಅವರು ರಸ್ತೆಗಳು ದೇಶದ ನರನಾಡಿಗಳು ಎಂದಿದ್ದರು. ಗ್ರಾಮೀಣ ಪ್ರದೇಶಗಳು ನಗರಗಳೊಂದಿಗೆ ಬೆಸೆಯುವ ರಸ್ತೆಗಳು ನಿಜಕ್ಕೂ ಉತ್ತಮ ಸ್ಥಿತಿಯಲ್ಲಿದ್ದರೆ, ಅಭಿವೃದ್ಧಿಗೆ ಹೊಸ ಚೇತನ ತುಂಬಿದಂತಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಅತ್ಯಂತ ಹೆಚ್ಚಿನ ಒತ್ತು ನೀಡಿದರು. ಮೇಲು ಕೋಟೆ ರಸ್ತೆ, ಗೌಡಗೆರೆ – ಚಿಟ್ಟನಹಳ್ಳಿ ರಸ್ತೆ, ದೇವರಹಳ್ಳಿ ರಸ್ತೆ, ಬೆಳ್ಳಾಳೆ-ಸಿಂಗ್ರಿಗೌಡನಕೊಪ್ಪಲು ರಸ್ತೆ, ಸೇರಿದಂತೆ 20ಕ್ಕೂ ಹೆಚ್ಚು ರಸ್ತೆಗಳ ಅಭಿವೃದ್ಧಿಗೆ ಕಾರಣವಾದರು. ಈಗ ಈ ಭಾಗದ ಜನ ಸಂಚಾರ ಸುಲಭವೂ ಸುಗಮವೂ ಹಾಗೂ ಆರಾಮದಾಯಕವು ಆಗಿರುವುದರ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ. ಅಷ್ಟೇ ಏಕೆ ಅಭಿಮಾನದಿಂದ ಅವರದೇ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.
ಇ-ಸ್ವತ್ತು ಪಡೆಯುವುದು ಗ್ರಾಮದ ಜನರಿಗೆ ಒಂದು ಸವಾಲಿನ ಕೆಲಸವೇ ಆಗಿತ್ತು. ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಈ ಕೆಲಸವನ್ನು ಎಷ್ಟು ಸರಳವಾಗಿಸಿತೆಂದರೆ 407 ಅರ್ಜಿಗಳು ಬಂದವು. ಸರ್ಕಾರಿ ಅಧಿಕಾರಿಗಳ ಬೆಂಬಲದೊಂದಿಗೆ ಕಾರ್ಯಕ್ರಮದ ಅವಧಿಯಲ್ಲೇ 166 ಅರ್ಜಿಗಳಿಗೆ ಇ-ಸ್ವತ್ತು ವಿತರಿಸಲಾಯಿತು. ಉಳಿದ ಅರ್ಜಿಗಳ ಅನುಮೋದನೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಯಾವುದೇ ವ್ಯಕ್ತಿಯ ಸಾವಿಗೆ ಗೌರವಯುತ ವಿದಾಯ ಹೇಳುವುದು ಎಲ್ಲರ ಕರ್ತವ್ಯ. ಆದರೆ ಹಲವು ಕಾರಣಗಳಿಂದಾಗಿ ಕೆಲವು ಗ್ರಾಮಗಳಲ್ಲಿ ಸ್ಮಶಾನವೇ ಇರಲಿಲ್ಲ. ಶಾಸಕರು ಮಾಣಿಕ್ಯನಹಳ್ಳಿಯ ವ್ಯಾಪ್ತಿಯಲ್ಲಿರುವ 9 ಗ್ರಾಮಗಳಲ್ಲಿ ಸ್ಮಶಾನಗಳ ಗಡಿ ಗುರುತು ಮಾಡುವ ಜೊತೆಗೆ 5 ಗ್ರಾಮಗಳಲ್ಲಿ ಒತ್ತುವಾರಿಯಾದ ಜಾಗವನ್ನು ತೆರವುಗೊಳಿಸಿ ಸ್ಮಶಾನದ ಬೋರ್ಡ್ ಅಳವಡಿಸಲಾಯಿತು.
ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ರೀತಿಯ 200ಕ್ಕೂ ಅರ್ಜಿಗಳನ್ನು ಸ್ವೀಕರಿಸಿ, ಶೇ. 80 ಅರ್ಜಿಗಳ ವಿಲೇವಾರಿ ಮಾಡಲಾಗಿದ್ದು, ಉಳಿದ ಅರ್ಜಿಗಳ ವಿಲೇವಾರಿ ಪ್ರಗತಿಯಲ್ಲಿದೆ.
ಈ ಹದಿನೈದು ದಿನಗಳಲ್ಲಿ ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ನಡೆದವು ಎಂದರೆ ಉತ್ಪ್ರೇಕ್ಷೆಯ ಮಾತಲ್ಲ. ಜನರಿಂದ ಆರಿಸಿ ಬಂದ ಪ್ರತಿನಿಧಿ ಜನರಿಗಾಗಿ ಸಮಯ ಮೀಸಲಿಟ್ಟು, ಬದ್ಧತೆಯಿಂದ ದುಡಿದರೆ ಜನರ ಸಮಸ್ಯೆಗಳನ್ನು ಆಲಿಸುವುದಷ್ಟೇ ಅಲ್ಲ, ಪರಿಹಾರವನ್ನು ನೀಡಬಹುದು ಎಂಬುದಕ್ಕೆ ಈ ವಿನೂತನ ಕಾರ್ಯಕ್ರಮ ಸಾಕ್ಷಿ ಎಂಬುದು ಜನರ ಅಭಿಪ್ರಾಯವಾಗಿದೆ.
ಈ ವಿಶೇಷ ಕಾರ್ಯಕ್ರಮದಿಂದ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳು ಬಗೆಹರಿದಿವೆ. ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ, ಮೀನುಗಾರಿಕೆ, ಹೇಮಾವತಿ ಎಡದಂಡೆ ನಾಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಹಾಗೂ ಕಂದಾಯ ಇಲಾಖೆಗಳಿಗೆ ಹಲವು ಸಮಸ್ಯೆಗಳು ಪರಿಹಾರ ಕಂಡಿವೆ. ಫಲಾನುಭವಿಗಳಿಗೆ ಸೌಲಭ್ಯಗಳು ದೊರೆತಿವೆ.
ಇದು ಸೇವೆಯಲ್ಲ, ಕರ್ತವ್ಯ ಎಂಬ ಘೋಷಣೆಯಡಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಅವರು, ವಿಶ್ವಾಸದಿಂದ ಆಯ್ಕೆ ಮಾಡಿದ ಜನರ ಪರವಾಗಿ ದುಡಿಯುವುದು ನನ್ನ ಕರ್ತವ್ಯ ಎಂದೇ ದೃಢವಾಗಿ ನಂಬಿದ್ದಾರೆ. ಅವರ ಕೆಲಸಗಳು ಈ ನಂಬಿಕೆ ಸಾಕ್ಷಿಯಾಗುತ್ತಿವೆ.











