ಟ್ಯಾಬ್ ಹೈಬ್ರಿಡ್ ಕಲಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

2 months ago

ಮೇಲುಕೋಟೆ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ

ಸುತಾರ್‌ ಲರ್ನಿಂಗ್ ಫೌಂಡೇಶನ್ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಟ್ಯಾಬ್ ಆಧಾರಿತ ಕಲಿಕಾ ಯೋಜನೆಗೆ ಚಾಲನೆ

‌ಮಂಡ್ಯ: ಮೇಲುಕೋಟೆ ವಿಧಾನಸಭೆ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಲ್ಲಿ ಡಿಜಿಟಲ್ ಕೌಶಲ್ಯ ಹಾಗೂ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು (FLN) ಉತ್ತಮಪಡಿಸುವ ನಿಟ್ಟಿನಲ್ಲಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ, ಸುತಾರ್‌ ಲರ್ನಿಂಗ್ ಫೌಂಡೇಶನ್ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್ ಜಂಟಿ ಸಹಯೋಗದೊಂದಿಗೆ ಮೇಲುಕೋಟೆ ತಾಲೂಕಿನ ಆಯ್ದ 10 ಸರ್ಕಾರಿ ಶಾಲೆಗಳಲ್ಲಿ ವಿನೂತನ “ಟ್ಯಾಬ್ ಬೇಸ್ಡ್ ಲರ್ನಿಂಗ್” (Tab-based Learning) ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ಸಣಬದಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿಂಪಲ್ ಟಿವಿ – ಟ್ಯಾಬ್ ಹೈಬ್ರಿಡ್ ಕಲಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ.  

ಶಾಲೆಗಳ ವಿವರ

1. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಣಬದಕೊಪ್ಪಲು

2. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚೆಲುವರಸನ ಕೊಪ್ಪಲು

3. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಂಭೂನಹಳ್ಳಿ

4. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆ ಬೆಟ್ಟಹಳ್ಳಿ

5. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಡಾಮಡಹಳ್ಳಿ

6. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಗಶೆಟ್ಟಹಳ್ಳಿ

7. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹರಳಹಳ್ಳಿ

8. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆನ್ನಾಳು

9. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಎಲೆಕೆರೆ

10. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಟಿ ಎಸ್ ಛತ್ರ

ಒಂದನೇ ತರಗತಿಯಿಂದ ಪ್ರೈಮರಿ ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿರುವ ಈ ಕಾರ್ಯಕ್ರಮ, ಮುಂದಿನ ದಿನಗಳಲ್ಲಿ ಇಡೀ ಮೇಲುಕೋಟೆ ತಾಲೂಕು ಹಾಗೂ ಮಂಡ್ಯ ಜಿಲ್ಲೆಯಾದ್ಯಂತ ವಿಸ್ತರಣೆಯಾಗುವ ಗುರಿ ಹೊಂದಿದೆ.

ಗೇಮಿಫೈಡ್ ಕಲಿಕೆ: ಆಟದ ಮೂಲಕ ಪಾಠ: ಶಿಕ್ಷಕರು ಬೋರ್ಡ್ ಮೇಲೆ ಬರೆದು ಕಲಿಸುವ ಸಾಂಪ್ರದಾಯಿಕ ವಿಧಾನದೊಂದಿಗೆ, ಮಕ್ಕಳು ಆ ಕಲಿಕೆಯನ್ನು ಮತ್ತಷ್ಟು ಸುಲಭವಾಗಿ ಗ್ರಹಿಸಲು ‘ಚಿಂಪಲ್’ (Chimple) ಎಂಬ ವಿಶೇಷ ಆ್ಯಪ್ ಅನ್ನು ಬಳಸಲಾಗುತ್ತಿದೆ. ಈ ಆ್ಯಪ್ ರಾಜ್ಯ ಪಠ್ಯಕ್ರಮ (State Syllabus) ಮತ್ತು ಕೇಂದ್ರ ಸರ್ಕಾರದ ‘ನಿಪುಣ್ ಭಾರತ್’ (Nipun Bharat) ಯೋಜನೆಯ ಸಿಲಬಸ್ ಅನ್ನು ಒಳಗೊಂಡಿದೆ. ಇಲ್ಲಿ ಸಂಪೂರ್ಣ ಪಠ್ಯವನ್ನು ಗೇಮಿಫೈಡ್ (Gamified) ಮಾದರಿಯಲ್ಲಿ ಅಂದರೆ ಆಡಿಯೋ, ವಿಡಿಯೋ ಮತ್ತು ಆಟಗಳ ಮುಖಾಂತರ ವಿನ್ಯಾಸಗೊಳಿಸಲಾಗಿದೆ. ಇದರಿಂದ ಮಕ್ಕಳು ಸ್ವಯಂ ಕಲಿಕೆಯಲ್ಲಿ (Self-learning) ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕಲಿತ ವಿಷಯಗಳು ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತವೆ.

ಹೋಮ್ ಲರ್ನಿಂಗ್ ಹಾಗೂ ಸಮುದಾಯದ ಭಾಗಿತ್ವ: ಶಾಲಾ ಅವಧಿಯ ನಂತರವೂ ಮಕ್ಕಳು ಮನೆಯಲ್ಲಿ ಕಲಿಯಲು ‘ಹೋಮ್ ಲರ್ನಿಂಗ್’ ವ್ಯವಸ್ಥೆಯನ್ನು ಮಾಡಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳ ಪೋಷಕರು ಮತ್ತು ಸ್ಥಳೀಯ ಸಮುದಾಯದವರು ಶಾಲೆಗೆ ಬಂದು, ತಮ್ಮ ಮಕ್ಕಳು ಹೇಗೆ ಕಲಿಯುತ್ತಿದ್ದಾರೆ ಹಾಗೂ ಓದುತ್ತಿದ್ದಾರೆ ಎಂಬುದನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಲು ಈ ಯೋಜನೆ ಪ್ರೇರೇಪಿಸುತ್ತದೆ.

ಜಾಗತಿಕ ಮಟ್ಟದ ಮಾನ್ಯತೆ: ಸುತಾರ್‌ಲರ್ನಿಂಗ್ ಫೌಂಡೇಶನ್’ 2015 ರಲ್ಲಿ ಪ್ರಾರಂಭವಾದ ಒಂದು ಲಾಭರಹಿತ ಸಂಸ್ಥೆಯಾಗಿದ್ದು (NGO), ಜಾಗತಿಕ ಮಟ್ಟದ ಪ್ರತಿಷ್ಠಿತ ‘ಗ್ಲೋಬಲ್ ಎಕ್ಸ್ ಪ್ರೈಸ್’ (Global XPRIZE) ಪ್ರಶಸ್ತಿಯ ಫೈನಲಿಸ್ಟ್ ಆಗಿದೆ. ದಕ್ಷಿಣ ಆಫ್ರಿಕಾ ಮತ್ತು ತಾಂಜೇನಿಯಾದಂತಹ ದೇಶಗಳ ಕಾಡುಗಳ ಮಧ್ಯೆ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಕಡೆಗಳಲ್ಲಿ ಟ್ಯಾಬ್‌ಗಳನ್ನು ವಿತರಿಸಿ, ಮಕ್ಕಳ ಸ್ವಯಂ ಕಲಿಕೆಯ ಸಾಮರ್ಥ್ಯವನ್ನು ಸಾಬೀತುಪಡಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ. ಪ್ರಸ್ತುತ ಈ ಜಾಗತಿಕ ಮಾದರಿಯನ್ನು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಕರ್ನಾಟಕ ಹಾಗೂ ದೇಶಾದ್ಯಂತ ವಿಸ್ತರಣೆ: ಕರ್ನಾಟಕದ ಚಾಮರಾಜನಗರದ ‘ಹನೂರು’ ಭಾಗದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಅನುಷ್ಠಾನಗೊಂಡ ಈ ಯೋಜನೆ, ಪ್ರಸ್ತುತ ರಾಜ್ಯದ 8 ಜಿಲ್ಲೆಗಳ ರಾಮನಗರ, ದೇವನಹಳ್ಳಿ, ವಿಜಯಪುರ, ಬೆಳಗಾವಿ, ರಾಯಚೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುಮಾರು 340 ಸರ್ಕಾರಿ ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಇದರೊಂದಿಗೆ ದೆಹಲಿ ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್‌ನ 380 ಶಾಲೆಗಳಲ್ಲಿಯೂ ಈ ಡಿಜಿಟಲ್ ಕಲಿಕಾ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಮೇಲುಕೋಟೆಯಲ್ಲಿ ಆರಂಭವಾಗುತ್ತಿರುವ ಈ ಯೋಜನೆಯು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.

ದಿನಾಂಕ: 24 ಜುಲೈ 2026

ಸಮಯ: ಬೆಳಿಗ್ಗೆ 9:30 

ಸ್ಥಳ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಣಬದಕೊಪ್ಪಲು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ

Leave a Reply