ಚಿತ್ರ ಹಾಕಿದ ಮಾತ್ರಕ್ಕೆ ಚಿತ್ತ ಬದಲಾಗುವುದಿಲ್ಲ

1 year ago

ಚಿತ್ರ ಹಾಕಿದ ಮಾತ್ರಕ್ಕೆ ಚಿತ್ತ ಬದಲಾಗುವುದಿಲ್ಲ

ಸದನದಲ್ಲಿ ಅನುಭವ ಮಂಟಪದ ತೈಲ ಚಿತ್ರ ಹಾಕಿದ ಮಾತ್ರಕ್ಕೆ ಅಲ್ಲಿರುವವರ ಚಿತ್ತ ಬದಲಾಗುವುದಿಲ್ಲ.

ಅಲ್ಲಿ ಬಸವಣ್ಣನಿದ್ದ, ಅಲ್ಲಮನಿದ್ದ, ಅಕ್ಕಮಹಾದೇವಿಯ ತಾಯಿಯ ಕಣ್ಣಿನಿಂದ ನೋಡುವ ವಚನಕಾರರಿದ್ದರು.

ಇಲ್ಲಿ ಬಸವಣ್ಣನು ಇಲ್ಲ, ಹಣೆಯ ಮೇಲೆ ವಿಭೂತಿಯ ಧರಿಸಿದವರಷ್ಟೇ ಇಲ್ಲಿರುವವರು, ಇಲ್ಲಿ ಅಲ್ಲಮನಿಲ್ಲ ನಿಷ್ಠೆಯಿಂದ, ನಿಷ್ಟೂರವಾಗಿ ತೀರ್ಪು ಕೊಡುವವರು ಇಲ್ಲ, ಅಕ್ಕಮಹಾದೇವಿಯನ್ನ ತಾಯಿಯಂತೆ ಕಾಣುವಂತಹ ಕಣ್ಣುಗಳು ಇಲ್ಲ.

ದುರ್ಯೋಧನನ ಆಸ್ಥಾನದಲ್ಲಿ ದುಶ್ಯಾಸನ ದ್ರೌಪದಿಗೆ ಅವಮಾನ ಮಾಡಿದಾಗ ಕಣ್ಮುಚ್ಚಿ ಕುಳಿತ ರೀತಿಯಲ್ಲಿ ಇಲ್ಲಿಯೂ ಮಹಿಳೆಯರಿಗೆ ಅಪಮಾನವಾಗುವಾಗ ಕಿವಿಯನ್ನ ಕಿವುಡಾಗಿಸಿಕೊಂಡವರು, ಕಣ್ಣು ಮಂಜು ಮಾಡಿಕೊಂಡವರು, ಮಾತನಾಡದೆ ಮೌನಕ್ಕೆ ಶರಣಾದವರು ಇದ್ದರು.

ಕಾವಿಧಾರಿಯೊಬ್ಬ ಆಶ್ರಯ ಬಯಸಿ ಬಂದ ಪುಟ್ಟಪುಟ್ಟ ಮಕ್ಕಳ ತನ್ನ ರಕ್ಕಸ ಕೈಗಳಿಂದ ಹಿಂಸಿದಾಗಲೂ ಧ್ವನಿಯೆತ್ತದ ಮಂದಿ ನಮ್ಮೊಡನೆ ಇದ್ದಾರಲ್ಲವೇ?

ತರಬೇತುದಾರನೊಬ್ಬ ತರಬೇತಿಗೆ ಬಂದ ಮಹಿಳಾಕ್ರೀಡಾಪಟುಗಳಿಗೆ ಕಿರುಕುಳ ಕೊಟ್ಟಾಗಲು ಅದರ ವಿರುದ್ಧ ಧ್ವನಿಯೆತ್ತದವರು ನಮ್ಮೊಡನೆ ಇದ್ದಾರಲ್ಲವೇ?

ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯರ ಚರಿತ್ರೆ ಹರಣ ಮಾಡಿ ಪಟ್ಟಿಗಳ ಕಟ್ಟಿದಾಗ ಜಾತಿಯ, ಧರ್ಮದ, ಆತ್ಮೀಯತೆಯ ಕಾರಣಕ್ಕೆ ಪ್ರತಿಭಟಿಸದೆ ಮನೆಗಳಲ್ಲಿ ಸೇರಿಕೊಂಡವರು ನಮ್ಮೊಡನೆ ಇದ್ದಾರಲ್ಲವೇ?

ಅತ್ಯಾಚಾರಿಗಳು, ಹೆಣ್ಣು ಪೀಡಕರು, ಮಾನವ ವಿರೋಧಿಗಳು, ರಾಕ್ಷಸ ಮನಸ್ಸಿನವರು ಜಾಮೀನು ಪಡೆದಾಗ, ಹಾರತುರಾಯಿ ಹಾಕಿ ಹೂವಿನ ಮಳೆ ಸುರಿಸಿ, ಸಾಧಕರಂತೆ ಸನ್ಮಾನಿಸುವ ದುಶ್ಯಾಸನನ ಮನಸ್ಥಿತಿಯ ಮಂದಿ ತುಂಬಿರುವವರಲ್ಲ ನಮ್ಮೊಡನೆ ಇದ್ದಾರಲ್ಲವೇ?

ಇಲ್ಲಿ ಸಿಗುವುದಿಲ್ಲ ಮಹಿಳೆಗೆ ನ್ಯಾಯ, ಮತ್ತೆ ಮತ್ತೆ ಹೇಳಬೇಕಿದೆ ಇಲ್ಲಿ ಬಸವಣ್ಣನಿಲ್ಲ, ಅಲ್ಲಮನೂ ಇಲ್ಲ, ಚಿತ್ರ ಹಾಕಿದ ಮಾತ್ರಕ್ಕೆ, ಚಿತ್ತ ಬದಲಾಯಿಸದ ಮನಸ್ಥಿತಿಯುಳ್ಳವರ ನಡುವೆ ತುಂಬಿರುವ ಸಭೆಗಳ ಕರೆಯುತ್ತಿದ್ದೇವೆ, ಪಂಡಿತ ಪಾಮರರ, ಬುದ್ಧಿವಂತರ, ಮೇಧಾವಿಗಳ, ಅನುಭವಿಗಳ ಮಂಟಪವೆಂದು ನಾಚಿಕೆ ಇಲ್ಲದೆ.

ಸಾರ್ಥಕವಾಯಿತು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ ಸದನ, ಸಾರ್ಥಕವಾಯಿತು ಸಾಹಿತಿಗಳು ಮಾತನಾಡಿದ ಮಂಟಪ, ಕವಿಗಳು ಕಾವ್ಯ ಓದಿದ ಸ್ಥಳ, ಅನುಭವಸ್ಥರು ಅನುಭವದ ಅಮೂಲ್ಯ ಮಾತುಗಳಾಡಿದ ಮಂಟಪ ಈಗ ಸಾರ್ಥಕವಾಯಿತು.

ಬೇಕಿದೆ ಬಚ್ಚಲು ತಿಕ್ಕುವ ಒಂದಷ್ಟು ಬ್ರಷ್ ಗಳು ಬಹಳಷ್ಟು ಮಂದಿಯ ನಾಲಿಗೆಗಳ ಶುದ್ಧಗೊಳಿಸಲು, ಬೇಕಿದೆ ಬಾಯಿ ಶುದ್ಧಗೊಳಿಸಲು ಯಾವುದಾದರೂ ಶುದ್ಧೋದಕ ಕೆಲವರ ಬಾಯಿ ಸ್ವಚ್ಛಗೊಳಿಸಲು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply