ಬೆಂಗಳೂರು: ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಮುಂದೆ ಒಪ್ಪಂದಕ್ಕೆ ಬರಲಾಗಿದೆ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಅಧಿಕಾರ ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿ ಕೆ ಶಿವಕುಮಾರ್, ನಮ್ಮ ನಡುವೆ ಯಾವುದೋ ಒಂದು ಒಪ್ಪಂದ ಆಗಿದೆ. ಪಕ್ಷದ ಮಟ್ಟದಲ್ಲಿ ನಡೆದಿರುವ ಈ ಒಪ್ಪಂದದ ಬಗ್ಗೆ ಬಹಿರಂಗವಾಗಿ ನಿಮಗೆ ಹೇಳಲು ಸಾಧ್ಯವಿಲ್ಲ ಎಂದಿದ್ದರು.
ತಾವು ಪಕ್ಷದ ಶಿಸ್ತಿನ ಸಿಪಾಯಿ ಹೈಕಮಾಂಡ್ ಹೇಳಿದಂತೆ ಕೇಳುವ ಕಾರ್ಯಕರ್ತ. ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿರುವುದು ನಿಜ ಎಂದಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ರೀತಿಯ ಒಪ್ಪಂದ ನಡೆದಿರುವುದು ತಮಗೆ ಗೊತ್ತಿಲ್ಲ. ಯಾವುದೇ ಅಧಿಕಾರ ಹಂಚಿಕೆ ಸೂತ್ರ ರಚನೆಯು ಆಗಿಲ್ಲ ಎಂದರು.
ಹೈಕಮಾಂಡ್ ಮುಂದೆ ಇಂತಹ ಒಪ್ಪಂದ ನಡೆದಿರುವುದು ತಮಗೆ ಗೊತ್ತೇ ಇಲ್ಲ. ವಿಸ್ತರಣೆ ಅಥವಾ ಪುನರ್ರಚನೆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಇಲ್ಲ ಎಂದರು.
ಇದಾದ ನಂತರ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸತ್ಯ ಎಂದರು.
ಮುಖ್ಯಮಂತ್ರಿಗಳು ನಮ್ಮ ನಾಯಕರು. ಅವರು ಒಪ್ಪಂದ ಆಗಿಲ್ಲ ಎಂದು ಹೇಳಿದರೆ ಅದು ಸತ್ಯ. ಅದನ್ನು ನಾನು ಅನುಮೋದಿಸುತ್ತೇನೆ. ನಾನೆಂದಿಗೂ ಕುರ್ಚಿಗೆ ಮತ್ತು ಅಧಿಕಾರಕ್ಕೆ ಅಂಟಿ ಕುಳಿತುಕೊಂಡ ವ್ಯಕ್ತಿ ಅಲ್ಲ. ಒಬ್ಬ ಪಕ್ಷದ ಶಿಸ್ತಿನ ಸಿಪಾಯಿ ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಅಥವಾ ಯಾವುದೋ ಅಧಿಕಾರ ಹಂಚಿಕೆ ದೆಹಲಿಯಲ್ಲಿ ಒಪ್ಪಂದಗಳಾಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ದೆಹಲಿಯಲ್ಲಿ ಏನು ಮಾತುಕತೆಯಾಗಿದೆ ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಒಪ್ಪಂದಗಳಾಗಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಆರು ತಿಂಗಳ ಹಿಂದೆಯೇ ನಾನು ಈ ಹೇಳಿಕೆ ನೀಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಖಾಸಗಿ ಸಂದರ್ಶನದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಸುಳಿವು ನೀಡಿರುವುದು ಹೊಸದೇನಲ್ಲ ಎಂದರು.
ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಯಾವ ರೀತಿ ಮಾತುಕತೆಗಳಾಗಿವೆ ಎಂಬುದು ಇಲ್ಲಿನ ನಾಯಕರ್ಯಾರಿಗೂ ವಿಚಾರ ಗೊತ್ತಿಲ್ಲ ಹಾಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಮಾತುಕತೆಯಾಗಿದ್ದು, ಹೈಕಮಾಂಡ್ ಗೆ ಮಾತ್ರ ವಿಚಾರ ತಿಳಿದಿರುತ್ತದೆ ಎಂದರು.
ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ನಾವಷ್ಟೇ ಅಲ್ಲ, ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಹೇಳಿದ್ದಾರೆ. ಹಾಸನದಲ್ಲಿ ಸಮಾವೇಶ ನಡೆಯುವ ಹಂತದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವುದರ ಉದ್ದೇಶ ನಮಗೆ ಗೊತ್ತಿಲ್ಲ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟನೆ ನೀಡಬೇಕು ಎಂದರು.
ಸಿಎಂ, ಡಿಸಿಎಂ ಸೇರಿದಂತೆ ಯಾವುದೇ ಅಧಿಕಾರಗಳ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಈವರೆಗೆ ದೆಹಲಿಯಿಂದ ಯಾವುದೇ ಮಾಹಿತಿ ಇಲ್ಲ ಎಂದರು.
2028 ಕ್ಕೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ. ಆ ಸಂದರ್ಭದಲ್ಲಿ ನಮ್ಮೊಂದಿಗೆ ಮತ್ತಷ್ಟು ಮಂದಿ ಪ್ರತಿಸ್ಪರ್ಧಿಗಳು ಬರುವ ಸಾಧ್ಯತೆಯಿದೆ. ಎಲ್ಲರಿಗೂ ಅಭಿಲಾಷೆ ಸಹಜ. ಆಗಿನ ಸಂದರ್ಭ, ಸನ್ನಿವೇಶ ಕುರಿತಂತೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದೆ. ಏನೇ ಆದರೂ ಸಮಾವೇಶದ ಮೂಲ ಉದ್ದೇಶ ಪಕ್ಷ ಬಲವರ್ಧನೆ. ಆ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಡಾ ಪ್ರಕರಣದಲ್ಲಿ ನ್ಯಾಯೋಚಿತ ತನಿಖೆ ನಡೆಯುತ್ತಿದೆ. ಸೂಕ್ತ ಕ್ರಮ ಕೈಗೊಳ್ಳುತ್ತದೆ. ಬಿಜೆಪಿಯವರು ಅನಗತ್ಯವಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುತ್ತಾರೆ. ನ್ಯಾಯಾಂಗದ ಹೋರಾಟದ ಮೂಲಕ ಅದಕ್ಕೆ ಉತ್ತರ ನೀಡಲಾಗುವುದು ಎಂದರು.




