ಬೆಂಗಳೂರು: ಬರುವ ಆಗಸ್ಟ್ – ಸೆಪ್ಟೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ನಡೆಯಲಿವೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿರುವ ಬೆನ್ನಲ್ಲೇ ಗೃಹ ಸಚಿವ ಜಿ ಪರಮೇಶ್ವರ್ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಧ್ಯರಾತ್ರಿ ವೇಳೆ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಪರಮೇಶ್ವರ್ ಸುದೀರ್ಘ ಅವಧಿಯವರೆಗೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಎರಡುವರೆ ವರ್ಷಗಳ ಅಧಿಕಾರ ಮುಗಿಸಿದ ಸಿಎಂ ಸಿದ್ದರಾಮಯ್ಯ ಆನಂತರ ತಮ್ಮ ಹುದ್ದೆಯನ್ನು ತೆರವು ಮಾಡಲಿದ್ದಾರೆ ಎಂದು ಒಂದು ವರ್ಗ ಹೇಳುತ್ತಿರುವ ನಡುವೆ, ಇನ್ನೊಂದು ಬಣ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ತಮ್ಮ ಸ್ಥಾನ ತೊರೆಯುವುದಿಲ್ಲ. ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸುತ್ತಾರೆ ಎಂದು ವಾದಿಸುತ್ತಿದೆ.
ಇದರ ನಡುವೆ ಪರಮೇಶ್ವರ್ ಮತ್ತು ಡಿ ಕೆ ಶಿವಕುಮಾರ್ ನಡುವೆ ನಡೆದಿರುವ ಮಾತುಕತೆ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿ ಕೆ ಶಿವಕುಮಾರ್, ತಮ್ಮ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್ ಅವರೊಂದಿಗೆ ಹಲವಾರು ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಆದರೆ ಅಧಿಕಾರ ಹಂಚಿಕೆ ಕುರಿತಾಗಿ ಈ ವೇಳೆ ಯಾವುದೇ ಮಾತುಕತೆ ನಡೆದಿಲ್ಲ ಎಂದರು.
ಗೃಹ ಸಚಿವರು ನನ್ನ ಜೊತೆ ಪಕ್ಷ ಸಂಘಟನೆ ಕುರಿತು ಚರ್ಚೆ ಮಾಡಿದ್ದಾರೆ. ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಅಧಿಕಾರ ಹಂಚಿಕೆ ಕುರಿತಾಗಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುರ್ಜೇವಾಲ ಭೇಟಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಬೆಳವಣಿಗೆಗಳ ಕುರಿತಂತೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸೋಮವಾರ ಪಕ್ಷದ ಎಲ್ಲಾ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಲಿರುವ ಅವರು ಸರ್ಕಾರ ಮತ್ತು ಪಕ್ಷದ ನಡುವೆ ಉಂಟಾಗಿರುವ ಸಮನ್ವಯದ ಕೊರತೆಯನ್ನು ನಿವಾರಿಸಲು ಪ್ರಯತ್ನಿಸಲಿದ್ದಾರೆ ಎಂದು ಹೇಳಲಾಗಿದೆ.
ಆನಂತರ ಕೆಲವು ಮಂತ್ರಿಗಳು ಮತ್ತು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಿರುವ ಅವರು ಹೈಕಮಾಂಡ್ ನೀಡಿರುವ ಸೂಚನೆ ಅನ್ವಯ ಕೆಲವು ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಉತ್ತಮ ಸಂಬಂಧ ಏರ್ಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸುವ ಸಾಧ್ಯತೆ ಇದ್ದು, ಪ್ರಣಾಳಿಕೆ ಅನುಷ್ಠಾನ ಕುರಿತಂತೆ ಸಮಿತಿಯೊಂದನ್ನು ರಚಿಸಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.




