ಬೆಂಗಳೂರು: ರಾಜ್ಯಾದ್ಯಂತ ಕಂದಾಯ ನ್ಯಾಯಾಲಯಗಳಲ್ಲಿ ವರ್ಷಾನುವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಆಂದೋಲನ ಮಾದರಿಯಲ್ಲಿ ತ್ವರಿತವಾಗಿ ವಿಲೆಮಾಡಿ ಜನ ಕಛೇರಿಗಳಿಗೆ ಅಲೆದಾಡುವುದಕ್ಕೆ ವಿರಾಮ ನೀಡುವ ಪ್ರಯತ್ನ ವೇಗವಾಗಿ ನಡೆದಿದೆ. ಇದರ ಮುಖಾಂತರ ಹಿಂದೆಂದೂ ಆಗದೇ ಇದ್ದ ಹತ್ತಾರು ಸಾವಿರ ಪ್ರಕರಣಗಳನ್ನು ರಾಜ್ಯಾದ್ಯಂತ ವಿಲೇಮಾಡಿ, ವಿಳಂಬವನ್ನು ನಿವಾರಿಸಿ, ಆಡಳಿತ ಸುಧಾರಣೆ ತರಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಬೆಂಗಳೂರುಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಪ್ರಗತಿಪರಿಶೀಲನೆ ಸಭೆಯನ್ನು ನಡೆಸಿದ ಅವರು, ವಿಶೇಷ ನ್ಯಾಯಾಲಯಗಳು ಹೆಚ್ಚು ಸಂಖ್ಯೆಯಲ್ಲಿ ವಿಚಾರಣೆ ನಡೆಸಲು ಬೇಕಾದ ನ್ಯಾಯಾಲಯ ಸಭಾಂಗಣ, ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಸೂಚಿಸಿದರು.
ಹಾಲಿ ಬಾಕಿ ಉಳಿದಿರುವ ಪ್ರಕರಣಗಳ ಪೈಕಿ, ಗರಿಷ್ಠ ಪ್ರಕರಣಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವುದನ್ನು ಗಮನಿಸಿ ಈ ಪ್ರಕರಣಗಳನ್ನುಸರ್ಕಾರ ಆದ್ಯತೆಯಿಂದ ಕೈಗೆತ್ತಿಕೊಂಡು ಇವುಗಳ ವಿಲೇಗೆ ವಿಶೇಷ ಪ್ರಯತ್ನ ಆರಂಭಿಸಿದೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 4937 ಪ್ರಕರಣಗಳು ಬಾಕಿ ಇದ್ದು, ಇವುಗಳಲ್ಲಿ ಬಹುತೇಕ ಅಂದರೆ 4154 ಪ್ರಕರಣಗಳು 1 ವರ್ಷಕ್ಕೂ ಮೇಲ್ಪಟ್ಟು ಇರುವ ಪ್ರಕರಣಗಳಾಗಿದ್ದು, ಇವುಗಳನ್ನು 20 ವರ್ಷಗಳವರೆಗಿನ ಸಮಯದಿಂದ ವಿಲೇ ಮಾಡದೆ ಬಾಕಿ ಇರಿಸಿಕೊಳ್ಳಲಾಗಿದೆ ಎಂದರು.
ಇವುಗಳ ವಿಲೇಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡದೆ ಬಾಕಿ ಇರಿಸಲಾಗಿದೆ. ಇಂತಹ ಎಲ್ಲಾ ಪ್ರಕರಣಗಳನ್ನು ಗುರುತಿಸಿ, ಸಂಪೂರ್ಣವಾಗಿ ಆನ್ಲೈನ್ ಕಂದಾಯ ನ್ಯಾಯಾಲಯ ವ್ಯವಸ್ಥೆಗೆ ತಂದು ಪಾರದರ್ಶಕವಾಗಿ ಪ್ರಕರಣ ಇತ್ಯರ್ಥಗೊಳಿಸುವಂತೆ ಸುಧಾರಣೆ ತರಲಾಗಿದೆ. ಆನ್ಲೈನ್ ಪದ್ಧತಿಯಿಂದ ಬಾಕಿ ಅವಧಿ, ಪ್ರಗತಿ, ಆದೇಶ ಮತ್ತು ಅನುಷ್ಠಾನ ಇವೆಲ್ಲವು ಸರಳ ಸುಲಲಿತ ಮತ್ತು ಸುಲಭಗೊಳಿಸಲಾಗಿದೆ ಎಂದರು.
ಮುಂದುವರೆದು 20 ವರ್ಷಗಳಿಂದ ಬಾಕಿಯಿರುವ ಈ ಪ್ರಕರಣಗಳನ್ನು ವಿಲೇ ಮಾಡಲೇಬೇಕೆಂಬ ಸಂಕಲ್ಪ ಮಾಡಿರುವ ಸರ್ಕಾರ ಇದಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಒಂದು ಬಾರಿಯ ಕ್ರಮವಾಗಿ 9 ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ. ಬಾಕಿ ಇರುವ ಹಳೆಯ ಪ್ರಕರಣಗಳನ್ನು ವಿಶೇಷ ಜಿಲ್ಲಾಧಿಕಾರಿಗಳಿಗೆ ಹಂಚಿಕೆ ಮಾಡಿ, ಸಂಘಟಿತವಾಗಿ ಪ್ರಕರಣಗಳ ವಿಲೇಗೆ ಹೆಜ್ಜೆಯನ್ನು ಇಟ್ಟಿದೆ ಎಂದರು.
ಸುಮಾರು 10-20 ವರ್ಷಗಳ ಹಳೇ ಪ್ರಕರಣಗಳಾಗಿರುವುದರಿಂದ ಅನೇಕ ಪ್ರಕರಣಗಳಲ್ಲಿ ಪ್ರತಿವಾದಿಗಳು ದೊರೆಯುತ್ತಿಲ್ಲ ಅಥವಾ ವಿಳಾಸ ಸರಿಯಿಲ್ಲ ಎಂಬುದನ್ನು ಗಮನಿಸಿದ ಮಾನ್ಯ ಸಚಿವರು ಇದಕ್ಕಾಗಿ ಗ್ರಾಮಆಡಳಿತಾಧಿಕಾರಿಗಳಿಂದ ವಿಚಾರಣಾ ನೊಟೀಸ್ಗಳನ್ನು ಜಾರಿಮಾಡಲು ಸೂಚಿಸಿದರು. ವಿಶೇಷ ಬಾಕಿ ಪ್ರಕರಣ ವಿಲೇ ಅಭಿಯಾನವಾಗುತ್ತಿರುವುದರಿಂದ ಕಕ್ಷಿದಾರರು/ಪ್ರತಿವಾದಿಗಳಸಂಬಂಧಿಸಿದ ಕಛೇರಿಯನ್ನು ಸಂಪರ್ಕಿಸಿ, ಅವರ ಇತ್ತೀಚಿನ ವಿಳಾಸ ನೀಡಬೇಕೆಂದು ಮತ್ತು ನ್ಯಾಯಾಲಯ ವಿಚಾರಣೆಗೆ ತಪ್ಪದೆಹಾಜರಾಗಿ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿದರು.
ಪ್ರಕರಣದ ಹಾಲಿ ಸ್ಟೇಟಸನ್ನು RCCMS (https://rccms.karnataka.gov.in) ನಲ್ಲಿ ತಿಳಿದುಕೊಳ್ಳಬಹುದು. ಸಾರ್ವಜನಿಕರು ಸಹಕರಿಸಿದರೆ 10-20 ವರ್ಷಗಳ ಬಾಕಿ ಪ್ರಕರಣಗಳನ್ನು ಸರ್ಕಾರವೇ ಜವಾಬ್ದಾರಿ ವಹಿಸಿಕೊಂಡು 4-5 ತಿಂಗಳುಗಳಲ್ಲಿ ವಿಲೇಗೊಳಿಸಲಾಗುವುದು ಎಂದು ತಿಳಿಸಿದರು.
ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದು ಇದು ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಜನರ ವಿಶ್ವಾಸವನ್ನು ಕುಂದಿಸಿರುತ್ತದೆ. ನ್ಯಾಯದಾನ ವಿಳಂಬವಾಗುವುದರಿಂದ ಭೂ ವ್ಯಾಜ್ಯಗಳು ಹೆಚ್ಚಾಗುತ್ತದೆ. ಅಲ್ಲದೆ ಭೂಮಿಯ ಮಾಲಿಕತ್ವ ಗೊಂದಲದ ಗೂಡಾಗಿ ನೆಮ್ಮದಿಯ ಜೀವನಕ್ಕೆ ಕಂಟಕವಾಗುತ್ತದೆ. ಇವುಗಳನ್ನು ನಿವಾರಿಸಿ, ಜನಗಳಿಗೆ ಕಾಲ ಮಿತಿಯಲ್ಲಿ ನ್ಯಾಯ ಒದಗಿಸಿ, ವಿಳಂಬ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಆಡಳಿತ ಸುಧಾರಣೆಗೊಳಿಸಿ, ಜನಪರ ಆಡಳಿತ ಒದಗಿಸುವ ಕ್ರಮವಾಗಿದೆ ಎಂದರು.
ಭೂವ್ಯಾಜ್ಯಗಳಿಂದ ಭೂ ಗ್ಯಾರಂಟಿಯ ಕಡೆಗೆ ಸಾಗಲು ಈ ಹತ್ತಾರು ವರ್ಷಗಳ ಬಾಕಿ ಪ್ರಕರಣಗಳ ವಿಲೇ ಜನಗಳಿಗೆ ಸಹಾಯವಾಗುವುದರಿಂದ, ವಿಚಾರಣೆ ಹಂತದಲ್ಲಿ ಭಾಗವಹಿಸಿ ಸಹಕರಿಸುವುದು ಅತ್ಯಗತ್ಯ ಹಾಗೂ ವಿಶೇಷ ಜಿಲ್ಲಾಧಿಕಾರಿಗಳ ಈ ಜವಾಬ್ದಾರಿಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.




