ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ಛಲವಾದಿ ನಾರಾಯಣಸ್ವಾಮಿ

7 months ago

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡವರಿಗೆ ಮನೆ ಕೊಡಬೇಕು ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಆದರೆ, ಇದನ್ನು ಬಿಟ್ಟು ಪಕ್ಷಕ್ಕಾಗಿ ತಾನೇ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಈ ಕುರಿತು ದಾಖಲೆಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕಾಗಿ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಸ್ಥಳ ಸೇರಿದಂತೆ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿದೆ ಎಂದರು.‌

ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪಡೆದುಕೊಳ್ಳಲಾಗುತ್ತಿದೆ. ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಕಡೆಗಳಲ್ಲಿ ಪಕ್ಷದ ಕಚೇರಿಗಳಿಗಾಗಿ ಸಿಎ ಸೈಟ್‌ಗಳನ್ನು ನೀಡಲಾಗಿದೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಲಕ್ಷಾಂತರ ಮೌಲ್ಯದ ಸೈಟ್ ಕೇವಲ 22 ಲಕ್ಷ ರೂಪಾಯಿಗೆ, ಬಾದಾಮಿಯಲ್ಲಿ 1.22 ಲಕ್ಷ ರೂ,ಗೆ ನೀಡಲಾಗಿದೆ. ಎಸ್‌ಆರ್ ವ್ಯಾಲ್ಯೂನ ಕೇವಲ ಶೇ 5 ರ ಹಣ ನೀಡಿ ಸರ್ಕಾರ ಸೈಟ್‌ಗಳನ್ನು ಕಬಳಿಸುತ್ತಿದೆ ಎಂದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬೆಲೆಬಾಳುವ ಸೈಟ್‌ಗಳನ್ನು ಪಡೆದುಕೊಳ್ಳಲಾಗಿದ್ದು, ಸುಮಾರು 40 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 2 ಕೋಟಿ ರೂ.ಗೆ ಪಡೆದುಕೊಂಡಿರುವುದು ಸರ್ಕಾರವೇ ಭೂಕಬಳಿಕೆ ಮಾಡಿರುವುದನ್ನು ತೋರಿಸುತ್ತದೆ ಎಂದರು.

ನಗರ ಯೋಜನಾ ನಿಯಮಗಳ ಪ್ರಕಾರ ಸಿಎ ಸೈಟ್‌ಗಳನ್ನು ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆ, ಉದ್ಯಾನವನಗಳಿಗಾಗಿ ಮಾತ್ರ ಬಳಸಬೇಕು. ಆದರೆ ರಾಜಕೀಯ ಪಕ್ಷದ ಕಚೇರಿಗಳಿಗೆ ನೀಡುವುದು ನಿಯಮ ಉಲ್ಲಂಘನೆ ಎನ್ನಲಾಗಿದೆ. ಆದಾಗ್ಯೂ ದೇವನಹಳ್ಳಿ ಪಟ್ಟಣದಲ್ಲಿ ಸುಮಾರು 17 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಿಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೀಡಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಆಸ್ತಿಯನ್ನು ಪಕ್ಷದ ಹಿತಕ್ಕಾಗಿ ಬಳಸುತ್ತಿದೆ. ತಕ್ಷಣ ಈ ಸೈಟ್‌ಗಳನ್ನು ಸರ್ಕಾರ ವಾಪಸ್ ಪಡೆಯಬೇಕು, ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Leave a Reply