ಶೀಘ್ರದಲ್ಲೇ ಕಂದಾಯ ಅದಾಲತ್ ದಿನಾಂಕ ಘೋಷಣೆ
ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ
ಒಂದೇ ಸೂರಿನ ಅಡಿಯಲ್ಲಿ ಜನಸಾಮಾನ್ಯರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ
ಬೆಂಗಳೂರು: ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸುವ ಸಂಬಂಧ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ದಿನಾಂಕ ಘೋಷಿಸಲಾಗುವುದು. ಒಂದೇ ಸೂರಿನ ಅಡಿಯಲ್ಲಿ ಜನಸಾಮಾನ್ಯರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಮರುಚಾಲನೆ ನೀಡುವ ಸಂಬಂಧ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸಂಬಂಧಿತ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ಆದೇಶದಲ್ಲಿ ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ರಾಜ್ಯಾದ್ಯಂತ ಮತ್ತೊಮ್ಮೆ ಕಂದಾಯ ಅದಾಲತ್ ಆಂದೋಲನವನ್ನು ಕೈಗೊಳ್ಳಬೇಕು. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ನೀಡಬೇಕು ಎಂದು ಸೂಚಿಸಿದರು.
ರಾಜ್ಯಾದ್ಯಂತ ಕಂದಾಯ ಅದಾಲತ್ ಆಂದೋಲನ: ಕಾಲಕಾಲಕ್ಕೆ ಪಹಣಿ ತಿದ್ದುಪಡಿ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರರಿಗೆ ಪ್ರತ್ಯಾಯೋಜಿಸಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಅದರನ್ವಯ, ಈ ಅಧಿಕಾರ ಪ್ರತ್ಯಾಯೋಜನೆಯು ದಿನಾಂಕ 2023ರ ಡಿಸೆಂಬರ್ 31ರಂದು ಮುಕ್ತಾಯಗೊಂಡಿತ್ತು. ಕಂದಾಯ ಅದಾಲತ್ ಕಾರ್ಯಕ್ರಮದಡಿಯಲ್ಲಿ ಆಕಾರ್ಬಂದ್ ಮತ್ತು ಪಹಣಿ ಕಾಲಂ 3 ಮತ್ತು 9ರ ನಮೂದಿನಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ದೋಷಪೂರಿತ ಪಹಣಿಗಳನ್ನು ಸರಿಪಡಿಸಲಾಗುತ್ತಿದ್ದು, 2022-23ನೇ ಸಾಲಿನಲ್ಲಿ ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಹೆಚ್ಚಿನ ಸಂಖ್ಯೆ ಪಹಣಿಗಳನ್ನು ಸರಿಪಡಿಸಿರುವುದು ಕಂಡ ಬಂದಿದೆ. 2022-2023 ಸಾಲಿನ ಪ್ರಗತಿಯನ್ನು ಅವಲೋಕಿಸಲಾಗಿ ಈ ಕಾರ್ಯಕ್ರಮವನ್ನು ಮತ್ತೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಂದಾಯ ಅದಾಲತ್ ಆಂದೋಲನದ ಮೂಲಕ ಪಹಣಿ ತಿದ್ದುವ ಕಾರ್ಯವನ್ನು ಮುಂದುವರೆಸುವುದು ಬಹಳ ಅವಶ್ಯಕವಾಗಿದೆ ಈ ಮೂಲಕ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅನುಕೂಲವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧಿವೇಶನದ ಒಳಗಾಗಿ ಕೊಡಗಿಗೆ ಭೇಟಿ: ಸಭೆಯಲ್ಲಿ ಪ್ರಸ್ತುತ ರಾಜ್ಯಾದ್ಯಂತ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಎಷ್ಟು ಎಂಬ ಬಗ್ಗೆಯೂ ಚರ್ಚೆಯಾಯಿತು. ಈ ವೇಳೆ ಅಂಕಿಅಂಶಗಳನ್ನು ಮುಂದಿಟ್ಟ ಅಧಿಕಾರಿಗಳು ರಾಜ್ಯದಲ್ಲಿ ಒಟ್ಟಾರೆ 1,32,618 ಪ್ರಕರಣಗಳಿದ್ದು, ಈ ಪೈಕಿ ಕೊಡಗಿನಲ್ಲೇ ಸುಮಾರು 60,000ಕ್ಕೂ ಹೆಚ್ಚಿನ ಪ್ರಕರಣಗಳಿವೆ. ಸೋಮವಾರ ಪೇಟೆ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಮಂಜೂರು ಭೂಮಿ ಇದ್ದರೆ, ಉಳಿದ ತಾಲೂಕುಗಳಲ್ಲಿ ಜಮಾ ಬಾಣೆ ಭೂಮಿ ಹೆಚ್ಚಿದೆ. ಹೀಗಾಗಿ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳ ಮಾಹಿತಿಗೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಕೊಡಗಿನಲ್ಲಿ ಅಧಿಕವಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಸ್ಥಳೀಯ ಶಾಸಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ವಿಶೇಷ ಆದ್ಯತೆಯ ಮೇಲೆ ಕೆಲಸ ನಿರ್ವಹಿಸುವ ತುರ್ತು ಇದೆ. ಸಂಬಂಧಿತ ಕಂದಾಯ ಮತ್ತು ಸರ್ವೇ ಇಲಾಖೆ ಹಿರಿಯ ಅಧಿಕಾರಿಗಳು ಈಗಲೇ ಕೊಡಗಿಗೆ ತೆರಳಿ ಸರ್ವೇ ತಯಾರಿ ಕೆಲಸ ಆರಂಭಿಸಬೇಕು. ಮುಂದಿನ ಎರಡು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಬೇಕು. ಅಧಿವೇಶನಕ್ಕೂ ಮುನ್ನ ಸ್ವತಃ ನಾನೂ ಸಹ ಕೊಡಗಿಗೆ ತೆರಳಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ಭೂಮಿ ತಂತ್ರಾಂಶದಲ್ಲಿ 1,89,55,773 ಆರ್ಟಿಸಿ ಇದ್ದು, 80,53,616 ಆರ್ಟಿಸಿಗಳು ಡಿಜಿಟಲೀಕರಣಗೊಳ್ಳುವುದು ಬಾಕಿ ಇದೆ. ಈ ಕೆಲಸವನ್ನು ಶೀಘ್ರದಲ್ಲಿ ಮುಗಿಸಿ, ಸಂಯೋಜಿತ ಪರಿವರ್ತನೆ ಪೋಡಿ ಕೆಲಸವನ್ನೂ ಶೀಘ್ರ ಮುಗಿಸಲು ಪೋಡಿ ಅದಾಲತ್ಗೆ ಚಾಲನೆ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕಂದಾಯ ಆಯುಕ್ತ ಪಿ. ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತ ಮಂಜುನಾಥ್, ಸಚಿವರ ಆಪ್ತ ಕಾರ್ಯದರ್ಶಿ ರವಿ ತಿರ್ಲಾಪುರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




