ಬೆಲೆ ಏರಿಕೆ ತಡೆಗಟ್ಟಲು ಆರ್ಥಿಕ ಸಲಹೆಗಳು ಇದ್ದಲ್ಲಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಿ

1 year ago

ರಾಜ್ಯದ ಬಿಜೆಪಿ ಅಧ್ಯಕ್ಷರಾದ ಶ್ರೀ ವಿಜಯೇಂದ್ರರವರು 15 ಬಾರಿ ಮುಂಗಡಪತ್ರವನ್ನು ಮಂಡಿಸಿ ಹದಿನಾರನೇ ಮುಂಗಡಪತ್ರವನ್ನು ಮಂಡಿಸಲಿರುವ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ಮುಂಗಡ ಪತ್ರದ ಬಗ್ಗೆ ಆದ್ಯತೆಗಳ ಬಗ್ಗೆ ತಿಳಿಸಿರುವ ವಿಚಾರಗಳನ್ನ ಗಮನಿಸಿದಾಗ ಹಿರಿಯರ ಒಂದು ಮಾತು ನೆನಪಿಗೆ ಬರುತ್ತದೆ 10 ಹೆತ್ತವಳಿಗೆ ಒಂದು ಹೆರದವಳಿಂದ ಉಪದೇಶದ ಮಾತು ಎಂಬ ರೀತಿಯಲ್ಲಿ ಇವರ ಪತ್ರವಿದೆ.

ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರು ಅರ್ಥ ಸಚಿವರಾಗಿ ಮುಂಗಡ ಪತ್ರವನ್ನು ಮಂಡಿಸುವ ಸಂದರ್ಭದಲ್ಲಿ ಜಿಎಸ್‌ಟಿಯು ಇರಲಿಲ್ಲ, ಅಂತಹ ಸಂದರ್ಭದಲ್ಲಿ ಆರ್ಥಿಕ ಶಿಸ್ತಿನ ಮುಂಗಡಪತ್ರವನ್ನ ಮಂಡಿಸಿ ಗಮನ ಸೆಳೆದಿದ್ದರು.

ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇವರು ಹಲವಾರು ರೀತಿಯ ಕ್ರಾಂತಿಕಾರಿ ನಿಲುವುಗಳ ಮೂಲಕ ಮುಂಗಡಪತ್ರವನ್ನು ಮಂಡಿಸಿ ಆಗಲು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದರು.

2013ರಿಂದ ಎರಡು ಸಾವಿರದ ಹದಿನೆಂಟರವರೆಗೆ ಅವರು ಮಂಡಿಸಿದ ಮುಂಗಡಪತ್ರವೂ ಸಹ ರಾಜ್ಯದ ಪ್ರಗತಿಗೆ ಮತ್ತು ಸಾಮಾಜಿಕ ನ್ಯಾಯಕ್ಕೆ ಪೂರಕವಾದಂತಹ ಮುಂಗಡಪತ್ರವಾಗಿತ್ತು.

ಈಗಲೂ ಸಹ ಅವರು ಎಷ್ಟೇ ಆರ್ಥಿಕ ಸಮಸ್ಯೆಗಳಿದ್ದರೂ ಅಭಿವೃದ್ಧಿಗೆ ಮತ್ತು ಸಾಮಾಜಿಕ ನ್ಯಾಯಕ್ಕೆ ಸ್ವಲ್ಪವೂ ಹಿನ್ನಡೆಯಾಗದಂತೆ ಸಮಯೋಚಿತವಾದ ಮುಂಗಡಪತ್ರವನ್ನು ಮಂಡಿಸುತ್ತಲೇ ಇದ್ದಾರೆ.

ರಾಜ್ಯದಲ್ಲಿ ಬಡವರಿಗಾಗಿ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಕಲ್ಪಿಸಿಕೊಂಡು ಮಾತನಾಡುವ ಬಿಜೆಪಿಯ ನಾಯಕರು ತಮ್ಮ ಅನುಭವ ಮತ್ತು ಜ್ಞಾನದ ಭಂಡಾರವನ್ನು ಕೇಂದ್ರ ಸರ್ಕಾರಕ್ಕೆ ಸಲಹೆಗಳ ಮೂಲಕ ನೀಡುವುದು ಅತ್ಯಂತ ಅವಶ್ಯಕವಾಗಿದೆ.

2014ರಲ್ಲಿ ಕೇವಲ 53 ಲಕ್ಷ ಕೋಟಿ ರೂಪಾಯಿಗಳ ದೇಶದ ಸಾಲ ಕಳೆದ ಹತ್ತು ವರ್ಷದ ಅವಧಿಯಲ್ಲಿ 200 ಲಕ್ಷ ಕೋಟಿ ದಾಟಿ ಮುನ್ನುಗ್ಗುತ್ತಿದೆ ಎಂದರೆ ಯಾರಿಗೆ ಉಪದೇಶ ಬೇಕಿದೆ ಎಂಬುದನ್ನು ಮೊದಲು ಅರಿತುಕೊಳ್ಳಿ.

ರೂಪಾಯಿಯ ಮೌಲ್ಯ ಡಾಲರ್ ಮುಂದೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸದ್ಯದಲ್ಲಿಯೇ ಶತಕವನ್ನ ಬಾರಿಸುವ ದಾರಿಯಲ್ಲಿ ಸಾಗಿದೆ. ಈ ಹಿನ್ನೆಲೆಯಲ್ಲಿ ರೂಪಾಯಿಯ ಮೌಲ್ಯವನ್ನು ಕುಸಿಯದಂತೆ ತಡೆಯಲು ಯಾವುದಾದರೂ ಜ್ಞಾನದ ಭಂಡಾರ ತಮ್ಮಲ್ಲಿ ಹೊಂದಿದ್ದರೆ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಿ.

ದೇಶದಲ್ಲಿ ಪ್ರತಿದಿನವೂ ಹಲವಾರು ಕಡೆಗಳಲ್ಲಿ ಸಾಲದ ಸುಳಿಗೆ ಸಿಕ್ಕಂತಹ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಸಾಮೂಹಿಕ ಆತ್ಮಹತ್ಯೆಯ ಹಾದಿಯನ್ನ ಹಿಡಿದಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಕಾರಣವಾದಂತ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಬಿಜೆಪಿ ನಾಯಕರಲ್ಲಿ ಯಾವುದಾದರೂ ಪಾಂಡಿತ್ಯಪೂರ್ಣವಾದ ಸಲಹೆಗಳಿದ್ದರೆ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಿ.

ಬ್ಯಾಂಕುಗಳಲ್ಲಿ ನಿಗದಿತ ಮೊತ್ತದ ಹಣ ತಮ್ಮ ಉಳಿತಾಯ ಖಾತೆಗಳಲ್ಲಿ ಇಲ್ಲ ಎಂಬ ಕಾರಣಕ್ಕೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಬಾರಿ ತಮ್ಮ ಖಾತೆಗಳನ್ನ ನಿರ್ವಹಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ 35 ಸಾವಿರ ಕೋಟಿ ರೂಪಾಯಿಗಳ ದಂಡವನ್ನ ವಸೂಲಿ ಮಾಡಿರುವ ಕೇಂದ್ರ ಸರ್ಕಾರದಿಂದ ಪಾಠ ಹೇಳಿಸಿಕೊಳ್ಳಬೇಕಿದೆಯೇ?

ದೇಶದಲ್ಲಿ ನಿರುದ್ಯೋಗದ ಪ್ರಮಾಣ ಪ್ರತಿ ವರ್ಷವೂ ವರ್ಷದಿಂದ ವರ್ಷಕ್ಕೆ ಅದರಲ್ಲೂ ವಿದ್ಯಾವಂತ ಯುವ ಜನಾಂಗದ ಸಂಖ್ಯೆ ಏರಿಕೆಯಾಗುತ್ತಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕೊಡುವಂತಹ ಜ್ಞಾನವಂತಿಕೆ ಬಿಜೆಪಿ ನಾಯಕರಿಗೆ ಇದ್ದರೆ, ಕೇಂದ್ರಕ್ಕೆ ಕಳುಹಿಸಿಕೊಡಲಿ.

ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಡುಗೆ ಅನಿಲ ಜೊತೆಗೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿದೆ, ಬಡವರು ಪ್ರತಿ ತಿಂಗಳು ತಮ್ಮ ಸಂಸಾರಗಳನ್ನ ಸಾಗಿಸಲು ಪರಿ ತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ಯಾವುದಾದರು ಆರ್ಥಿಕತೆಯ ಸಲಹೆಗಳು ಇದ್ದಲ್ಲಿ, ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಿ.

2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಮೊದಲು ರಾಜ್ಯದ ಸಾಲದ ಪ್ರಮಾಣ ಎಷ್ಟು ಇತ್ತು, ಅದರಲ್ಲೂ ವಿಶೇಷವಾಗಿ, 2019 ರಿಂದ 2023ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬಿಜೆಪಿ ಅವಧಿಯಲ್ಲಿ ಮಾಡಿರುವ ಸಾಲವೆಷ್ಟು ಎಂಬುದನ್ನ ಬಹಿರಂಗಪಡಿಸಿ.

2023ರ ಮುನ್ನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ರಾಜ್ಯದಲ್ಲಿ ವಿವಿಧ ಇಲಾಖೆಯಲ್ಲಿ ಕಾಮಗಾರಿಗಳನ್ನು ಮಾಡಿರುವ ಗುತ್ತಿಗ ದಾರರ ಬಿಲ್ಲುಗಳು ಎಷ್ಟು ಬಾಕಿ ಇತ್ತು, ಎಷ್ಟು ಲಕ್ಷ ಕೋಟಿಗಳಿಗೆ ಯೋಜನೆಗಳನ್ನು ರೂಪಿಸಿದ್ದೀರಿ, ಎಷ್ಟು ಹಣವನ್ನು ಬಿಡುಗಡೆ ಮಾಡಿದ್ದೀರಿ, ಉಳಿಸಿಕೊಂಡಿದ್ದ ಹಣವೆಷ್ಟು ಎಂಬುದನ್ನು ಮೊದಲು ಬಹಿರಂಗಪಡಿಸಿ.

ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಲು ಬಿಜೆಪಿಯವರು ಕಾರಣ ಅವರು ಸಹಸ್ರಾರು ಕೋಟಿ ರೂಪಾಯಿಗಳ ಬಿಲ್ ಗಳನ್ನ ಪಾವತಿ ಮಾಡದೆ ಬಿಟ್ಟು ಹೋಗಿದ್ದ ಕಾರಣದಿಂದ ಸಾರಿಗೆ ಇಲಾಖೆಯು ಸೇರಿದಂತೆ ಅನೇಕ ಇಲಾಖೆಗಳಲ್ಲಿ ಹಾಲಿ ಸರ್ಕಾರ ಆ ಸಾಲಗಳನ್ನು ತುಂಬಿಸಬೇಕಾಯಿತು.

ಗ್ಯಾರೆಂಟಿ ಯೋಜನೆಗಳಿಂದ ಯಾವ ಅಭಿವೃದ್ಧಿಯು ನಿಂತಿರುವುದಿಲ್ಲ, ಬೆಂಗಳೂರು ನಗರದಲ್ಲಿ ನೂರಾರು ರಸ್ತೆಗಳಲ್ಲಿ ಕಾಂಕ್ರೀಟ್ ರಸ್ತೆಗಳಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯುತ್ತಿದೆ. ರಾಜ್ಯದಲ್ಲಿ ಆಸ್ಪತ್ರೆಗಳು ನಿರ್ಮಾಣವಾಗುತ್ತಿದೆ. ಶಾಲೆ ಕಟ್ಟಡಗಳು ನಿರ್ಮಾಣವಾಗಿದೆ. ನೀರಾವರಿ ಯೋಜನೆಗಳು ಪ್ರಗತಿಯಲ್ಲಿದೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಸರ್ಕಾರಿ ನೌಕರರ ಸಂಬಳವೂ ಕಾಲಕಾಲಕ್ಕೆ ಬರುತ್ತಿವೆ. ಜೊತೆಗೆ ಬೆಂಗಳೂರು ನಗರವು ಸೇರಿದಂತೆ ಅನೇಕ ನಗರಗಳಲ್ಲಿ ನೂರಾರು ವರ್ಷಗಳಿಂದ ಕೆಟ್ಟು ನಿಂತಿದ್ದ ಕುಡಿಯುವ ನೀರಿನ ಸಂಪರ್ಕದ ಮಾರ್ಗಗಳು ಮತ್ತು ಒಳಚರಂಡಿ ವ್ಯವಸ್ಥೆಯ ಕೊಳವೆ ಬದಲಾಯಿಸಿ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಸಾಮಾಜಿಕ ನ್ಯಾಯ, ಸಮಾನತೆ, ಸರ್ವ ಜನರ ಬದುಕಿನ ಕಲ್ಯಾಣ ಕಾಂಗ್ರೆಸ್ ಸರ್ಕಾರದ ಮತ್ತು ಸಿದ್ದರಾಮಯ್ಯನವರ ಮುಂಗಡಪತ್ರದ ಆಶಯಗಳಾಗಿದೆ. ಈ ಹಿನ್ನೆಲೆಯಲ್ಲಿ ಮುಂಗಡಪತ್ರ ಇವೆಲ್ಲಕ್ಕೂ ಬದ್ಧವಾಗಿರುತ್ತದೆ. ಉಪದೇಶ ಮಾಡುವ ಮೊದಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆಯ ಪಾಲನ್ನು ಸರಿಯಾದ ರೀತಿಯಲ್ಲಿ ಕೊಡುವಂತೆ ಕೇಂದ್ರಕ್ಕೆ ಪತ್ರವನ್ನು ಬರೆಯಿರಿ. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯ 5700 ಕೋಟಿಗಳ ಅನುದಾನದ ಮಾತು ಪತ್ರದಲ್ಲಿದೆ. ಅದನ್ನು ತರುವ ನಿಟ್ಟಿನಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ, ನಬಾರ್ಡ್ ಸಾಲದ ಮೊತ್ತವನ್ನ ಕಡಿತಗೊಳಿಸಿರುವುದನ್ನು ಮತ್ತೆ ನೀಡುವಂತೆ ಪತ್ರವನ್ನು ಬರೆಯಿರಿ. ರಾಜ್ಯದ ರೈಲ್ವೆ ಯೋಜನೆಗಳಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಅನುದಾನವನ್ನ ಕೊಡಿಸಿಕೊಡಿ‌. ಜೊತೆಗೆ, ಟೋಲ್ ಗಳಲ್ಲಿ ಪ್ರತಿ ವರ್ಷವೂ ಶುಲ್ಕವನ್ನು ಏರಿಸುತ್ತಿರುವುದರ ಬಗ್ಗೆ ಗಮನವನ್ನು ಹರಿಸಿ ಪ್ರಯಾಣಿಕರಿಗೆ ದುಬಾರಿಯಾಗದಂತೆ ಎಚ್ಚರಿಕೆಯನ್ನು ವಹಿಸುವಂತೆ ಅವರಿಗೂ ಪತ್ರವನ್ನು ಬರೆಯಿರಿ.

ಆರೋಗ್ಯಪೂರ್ಣವಾದ ಮತ್ತು ಪೂರ್ವಗ್ರಹ ಪೀಡಿತವಲ್ಲದ ಸಲಹೆಗಳನ್ನ ನೀಡಲು ಎಲ್ಲರೂ ಸ್ವತಂತ್ರರು, ಅದನ್ನು ಗೌರವಯುತವಾಗಿ ಸ್ವೀಕರಿಸಬೇಕಾದದ್ದು ಪ್ರಜಾಪ್ರಭುತ್ವದ ಆಶಯ, ಆದರೆ ಪೂರ್ವಗ್ರಹ ಪೀಡಿತವಾಗಿ ದುರುದ್ದೇಶದಿಂದ ಟೀಕಿಸುವ ನೆಪದಲ್ಲಿ ವ್ಯಂಗ್ಯದಿಂದ ಕೂಡಿದ ಅರ್ಥವಿಲ್ಲದ, ಆಳವಾದ ಅನುಭವವಿಲ್ಲದ ಮಾತುಗಳಿಂದ ಕೂಡಿರುವ ಪತ್ರಗಳಿಗೆ ಮಹತ್ವವನ್ನು ಕೊಡುವ ಅವಶ್ಯಕತೆ ಇಲ್ಲ.

– ಕೆ ಎಸ್ ನಾಗರಾಜ್ ಬೆಂಗಳೂರು

Leave a Reply