ಅದೆಷ್ಟು ಜನ ಬಡವರ ಬಂಧುಗಳಿದ್ದಾರೆ?

1 year ago

ಒಂದು ಹೊತ್ತು ಊಟಕ್ಕೂ ಅಲೆದಾಡುವ ಕೋಟಿ ಕೋಟಿ ಜನರಿದ್ದಾರೆ, ಪೌಷ್ಟಿಕಾಂಶದ ಆಹಾರದ ಕೊರತೆಯಿಂದ ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆಯು ಲೆಕ್ಕವಿಲ್ಲ, ವಾಸಕ್ಕೆ ಮನೆ ಇಲ್ಲದ, ಬದುಕಲು ನೆಲೆ ಇಲ್ಲದ, ಅದೆಷ್ಟೋ ಕೋಟಿ ಜನರಿದ್ದಾರೆ. ಆದರೂ ಹುಟ್ಟುಹಬ್ಬದ ಜಾಹಿರಾತುಗಳಲ್ಲಿ ಅದೆಷ್ಟು ನಾಯಕರುಗಳು ಬಡವರ ಬಂಧು ಎಂಬ ಹಣೆಪಟ್ಟಿಯನ್ನ ಹೊತ್ತು ಮೆರೆಯುತ್ತಿದ್ದಾರೆ, ಬಡತನ ನಿವಾರಣೆಯಾಗಿರುವುದು ಅವರಿಗಷ್ಟೇ, ಭವಣೆಯಿಂದ ಬೇಯುತ್ತಿರುವ ಬಡವರಿಗಲ್ಲ.

ಪಂಚಾಯಿತಿ ಸದಸ್ಯರಾಗದ ಅದೆಷ್ಟು ಜಾತಿಯ ಜನರಿದ್ದಾರೆ, ರಾಜಕೀಯ ಸ್ಥಾನಮಾನ ಸಾಮಾಜಿಕ ಬದಲಾವಣೆಗಳನ್ನ ಕಾಣದ, ಆರ್ಥಿಕ ಅನುಕೂಲತೆಗಳನ್ನೇ ಪಡೆಯದ ಕೋಟಿ, ಕೋಟಿ ಜನರಿದ್ದಾರೆ. ಆದರೂ ಸಾಮಾಜಿಕ ನ್ಯಾಯದ ಹರಿಕಾರರೆಂಬ ಹಣೆಪಟ್ಟಿ ಹೊತ್ತ ನಾಯಕರುಗಳ ಜಾಹಿರಾತುಗಳಿಗೆ ಏನು ಕಡಿಮೆ ಇಲ್ಲ, ಸಾಮಾಜಿಕ ನ್ಯಾಯವೆಂದರೆ ಬಹಳಷ್ಟು ಜನರ ಪಾಲಿಗೆ ತಮ್ಮ ಸಂಸಾರಕ್ಕೆ ನ್ಯಾಯವನ್ನು ಒದಗಿಸುವುದು ತಮ್ಮ ಬಂಧುಗಳಿಗೆ ತಮ್ಮ ಹತ್ತಿರದ ಮಂದಿಗೆ ಅವಕಾಶಗಳನ್ನ ಕಲ್ಪಿಸಿ ಕೊಡುವುದೇ ಎಂಬ ಭಾವನೆ ಇದೆ.

ಮನೆಯ ಕಾಂಪೌಂಡಿನ ಬಳಿಗು ಮಾಸಿದ ಬಟ್ಟೆಯ, ಹರಕಲ್ಲು ಚಪ್ಪಲಿಯ, ತಲೆಗೆ ಎಣ್ಣೆ ಕಾಣದ, ಬೆವರು ಹರಿಸಿ ಬದುಕುವ ಜನರನ್ನು ಬಿಟ್ಟುಕೊಳ್ಳದ, ಇವರ ಉಸಿರು ತಾಕಿದರೆ ಏನಾಗುವುದೋ ಎಂದು ಹೆದರಿ, ಮಾರುದ್ದ ದೂರ ನಿಲ್ಲುವ ಅದೆಷ್ಟೋ ಮಂದಿ, ದೀನ, ದಲಿತರ ನಾಯಕರೆಂದು ಜಾಹಿರಾತುಗಳಲ್ಲಿ ಹಣೆಪಟ್ಟಿ ಕಟ್ಟಿಕೊಂಡು ವಿಜೃಂಭಿಸುತ್ತಾರೆ. ತಮ್ಮ ಸ್ಥಾನಮಾನಗಳಿಗೆ ದಕ್ಕೆ ಬಂದಾಗ. ಸ್ಥಾನಮಾನದಲ್ಲಿ ಮುಂಬಡ್ತಿಗಳು ಬೇಕಾದಾಗ ಮತ್ತೆ ನೆನಪಾಗುತ್ತಾರೆ ಬೆವರಿನ ಜನ, ಸುಖದ ದಿನದಲ್ಲಿ ಜೊತೆಯಲ್ಲಿ ಇಟ್ಟುಕೊಳ್ಳುತ್ತಾರೆ ದುಬಾರಿ ಬದುಕಿನ, ಕೈತುಂಬ ಕೊಡುವ ಶಕ್ತಿ ಉಳ್ಳವರ.

ಮಹಿಳೆಯರ ಮೇಲಿನ ದೌರ್ಜನ್ಯದ, ಶೋಷಣೆಯ ಹಲವಾರು ಮೊಕದ್ದಮೆಗಳನ್ನು ನ್ಯಾಯಾಲಯಗಳಲ್ಲಿ ಎದುರಿಸುತ್ತಿರುವ ಅದೆಷ್ಟೋ ಮಂದಿ ಮಹಿಳೆಯರ ಸಬಲೀಕರಣದ ನಾಯಕರೆಂಬ ಹಣೆಪಟ್ಟಿಯನ್ನ ಹೊತ್ತು ಜಾಹಿರಾತುಗಳಲ್ಲಿ ಕೈ ಮುಗಿದು ನಿಂತಿದ್ದಾರೆ. ಇಷ್ಟೊಂದು ಮಂದಿ ಮಹಿಳೆಯರ ಪರವಾಗಿ ಚಿಂತಿಸುವವರಿದ್ದರೂ ಅತ್ಯಾಚಾರಗಳು, ಶೋಷಣೆಗಳು ನಿಲ್ಲುತ್ತಲೇ ಇಲ್ಲ.

ಜಾತಿ, ಉಪಜಾತಿ, ಮುಂದುವರೆದು ಒಳಜಾತಿ ಎಲ್ಲದಕ್ಕೊಂದು ಮಠಗಳ ಕಟ್ಟಿಕೊಟ್ಟು, ಅದಕ್ಕೆ ತಾವೇ ನಾಯಕರಾಗಿ ಸಮಾವೇಶಗಳ ಏರ್ಪಡಿಸಿ ಅಬ್ಬರಿಸಿ, ಮಾತನಾಡುತ್ತ ಜಾತಿಯ ಸಂಕುಚಿತ ಸಂಕೋಲೆಯಲ್ಲಿ ಬಂಧಿಯಾದವರು ಅದೆಷ್ಟೋ ಮಂದಿ ಜಾಹಿರಾತುಗಳಲ್ಲಿ ಜಾತ್ಯತೀತರೆಂಬ ಹಣೆಪಟ್ಟವನ್ನ ಹೊತ್ತು ಮೆರೆಯುತ್ತಾರೆ. ಇಷ್ಟೊಂದು ಜಾತ್ಯತೀತ ನಾಯಕರಿದ್ದರು ದೇವಾಲಯಗಳಿಗೆ ಶೋಷಿತರಿನ್ನು ಮುಕ್ತವಾಗಿ ಹೋಗಲು ಅಂಜಿಕೆ ತಪ್ಪಿಲ್ಲ.

ಪತ್ರಿಕೆಗಳಲ್ಲಿ ಪ್ರಕಟಣೆ ಕಂಡು  ಸಂತೋಷ ಪಡಬೇಕಷ್ಟೇ ಇವರುಗಳ. ಅದಕ್ಕೆ ಇರಬೇಕು ಮಾಧ್ಯಮದವರು ಜಾಹಿರಾತಿನ ಮೂಲೆಯೊಂದರಲ್ಲಿ ಪ್ರಕಟಿಸಿರುತ್ತಾರೆ. ಜಾಹಿರಾತಿನಲ್ಲಿರುವ ಎಲ್ಲ ಸಂಗತಿಗಳಿಗೆ ನಾವು ಹೊಣೆಗಾರರಲ್ಲವೆಂದು!

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply