ಸ್ವಾಮಿ, ಲಿಂಗಾಯತರು ನಿಮ್ಮಗಳ ರಾಜಕೀಯ ಪಕ್ಷಗಳ ಗುಲಾಮರೆ? ನೀವು ನಮ್ಮನ್ನು ಚುನಾವಣಾ ಸರಕೆಂದು ಭಾವಿಸಿದ್ದೀರಾ? ಅಥವಾ ನಮ್ಮದೇನಾದರೂ ಮಾರಾಟಕ್ಕಿರುವ ಧರ್ಮದ ಅನುಯಾಯಿಗಳೆಂದು ತಿಳಿದಿದ್ದಾರಾ? (ಕಾಂಗ್ರೆಸ್ಸಿಗರಿಗೆ ನಮ್ಮದು ಧರ್ಮವಾದರೆ, ಬಿ. ಜೆ. ಪಿ. ಗರಿಗೆ ನಮ್ಮದೊಂದು ಜಾತಿ).
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಹಿಂದೂ ಹುಲಿ ಬಸನಗೌಡ ಪಾಟೀಲರು ಲಿಂಗಾಯತ ಧರ್ಮವನ್ನು ಹೀಗಳೆಯುತ್ತಾರೆ. ನಿಜಲಿಂಗಾಯತ ಪೂಜ್ಯರನ್ನು ಆವಮಾನಿಸುತ್ತಾರೆ. ತಾವೂ ಹಿಂದೂ ಎನ್ನುತ್ತಾರೆ. ಲಿಂಗಾಯತರ ನಾಯಕರೆಂದು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಯಡಿಯೂರಪ್ಪನವರು ‘ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಕೊಡಬೇಡಿ’ ಎನ್ನುತ್ತಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಾಹೇಬರು, ಕಾಂಗ್ರೆಸ್ಸಿಗರು ನಮಗೆ ನೀಡಿದ ‘ಅಲ್ಪ ಸಂಖ್ಯಾತ ಮಾನ್ಯತೆ’ಯನ್ನು ಅಪಹಾಸ್ಯಮಾಡಿ ‘ಚುನಾವಣೆ ಗಿಮಿಕ್’ ಎಂದು ಅವಮಾನಿಸುತ್ತಾರೆ. ಇನ್ನೊಬ್ಬ ಲಿಂಗಾಯತ ನಾಯಕರಾದ ಬಸವರಾಜ ಬೊಮ್ಮಾಯಿವರು ಲಿಂಗಾಯತರ ಸಹವಾಸ ಬೇಡವೆನ್ನುತ್ತಾರೆ. ಬಸವಣ್ಣನವರನ್ನು ಆಧರಿಸುವ ವೀರಶೈವರನ್ನು ಹೀಗಳೆಯುತ್ತಾರೆ. ನೀವು ಹಿಂದೂ ಧರ್ಮದ ಉಚ್ಚ ಕುಲದವರು ಲಿಂಗಾಯತದೊಂದಿಗೆ ಸೇರಬೇಡಿ ಎನ್ನುತ್ತ ಅವರ ಕಣ್ಣಿಗೆ ಪಟ್ಟಿ ಕಟ್ಟುತ್ತಾರೆ. ಲಿಂಗಾಯತರನ್ನು ಇಬ್ಬಾಗಿಸುತ್ತ ಗುರು – ವಿರಕ್ತರ ಮಧ್ಯದಲ್ಲಿ ಗೋಡೆ ಕಟ್ಟುತ್ತಾರೆ. ತಮಗೆ ಅನಕೂಲವಾಗುವ ಮಠ – ಪೀಠಗಳನ್ನು ಮಾತ್ರ ಬೆಂಬಲಿಸುತ್ತ ಅವರಿಗೆ ತನು, ಮನ, ಧನವನ್ನು ಅರ್ಪಿಸುತ್ತಾರೆ.
ಎಂಟುನೂರು ವರ್ಷಗಳ ತರುವಾಯ ಲಿಂಗಾಯತರಿಗೆ ರಾಜ್ಯ ಸರ್ಕಾರ ನೀಡಿದ್ದ ‘ಅಲ್ಪ ಸಂಖ್ಯಾತ ಧರ್ಮ’ದ ಮಾನ್ಯತೆಯನ್ನು ಅಪಹಾಸ್ಯ ಮಾಡಿ ‘ಧರ್ಮ ಒಡೆದರು’ಎಂಬ ಹಣೆ ಪಟ್ಟಿ ಹಚ್ಚುತ್ತಾರೆ. ಸಮಸಮಾಜದ ಕನಸನ್ನು ಕೈಗೂಡಿಸಿದ ಬಸವಣ್ಣನವರನ್ನೂ ಜಾತಿಗೆ ಸೀಮಿತಗೊಳಿಸಿ ಅವರನ್ನೂ ಅವಮಾನಿಸುತ್ತಾರೆ.
೨೦೧೮ರಲ್ಲಿ ಧರ್ಮ ಮಾನ್ಯತೆ ನೀಡಿದ ಸಿದ್ದರಾಮಯ್ಯನವರ ಸೋಲಿಗೆ ಲಿಂಗಾಯತರು ಕಾರಣ ಎನ್ನುತ್ತಾರೆ. ಅಂದು ಭಾ. ಜ. ಪ. ಅಧ್ಯಕ್ಷರಾಗಿದ್ದ ಅಮಿತ್ ಶಾರವರು ಲಿಂಗಾಯತ ಮಠಗಳೆಲ್ಲವನ್ನು ಸುತ್ತಿ ಕೊಡಬೇಕಾದ ಎಲ್ಲವನ್ನು (???) ಕೊಟ್ಟು ಲಿಂಗಾಯತ ಸ್ವಾಮಿಗಳಿಂದಲೇ ಬಸವಣ್ಣನವರನ್ನು ದೂರ ಮಾಡುತ್ತಾರೆ.
ಇತ್ತ ಕಾಂಗ್ರೆಸ್ಸಿನ ಕೆಲ ನಾಯಕರು ಕೂಡ ಉರಿಯುವ ಮನೆಯಲ್ಲಿ ಗಳಹಿರಿಯುವ ಕೆಲಸ ಮಾಡುತ್ತಾರೆ. ಲಿಂಗಾಯತರು ಮುಂದೆ ಬಂದರೆ ಜಗತ್ತೆ ಮುಳುಗುತ್ತದೆ ಎಂಬಂತೆ ವರ್ತಿಸುತ್ತಾರೆ. ಲಿಂಗಾಯತರೆಂದರೆ ಲಿಂಗಧರಿಸಿದ ಸಮಸ್ತರು ಎಂಬುದನ್ನು ಮರೆತು, ಕೇವಲ ಮೇಲ್ವರ್ಗದ ಪಂಚಮಸಾಲಿ, ಬಣಜಿಗ, ಜಂಗಮ, ಸಾದರ, ನೊಣಬ, ರೆಡ್ಡಿ, ಗಾಣಿಗ, ಕುಡುಒಕ್ಕಲಿಗ ಸಮಾಜದವರು ಮಾತ್ರ ಲಿಂಗಾಯತರು ಎನ್ನುತ್ತ ಬಸವಣ್ಣನವರ ಕಲ್ಪನೆಯ ಲಿಂಗಾತತರನ್ನು ಪರಿಗಣಿಸದೆ, ಅವರನ್ನೆಲ್ಲ ಹಿಂದೂಗಳೆಂದು ಪರಿಗಣಿಸಿ ಶರಣರ ಮುಖ್ಯ ಆಶಯಕ್ಕೆ ಕೊಳ್ಳಿ ಇಡುತ್ತಾರೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಲಿಂಗಾಯತವನ್ನೂ ಹಿಂದೂಧರ್ಮದಲ್ಲಿರುವ ಏಣಿಶ್ರೇಣಿ ಜಾತಿಯಲ್ಲಿ ಸೇರಿಸಲು ಇಚ್ಛೆಪಡುತ್ತಾರೆ.
‘ಧರ್ಮ ಒಡೆದ ಕಾರಣ ಕಾಂಗ್ರೆಸ್ಸಿಗೆ ಸೋಲಾಯಿತು’ (೨೦೧೮ ರಲ್ಲಿ) ಎಂದು ಕಾಗೆ ಹಾರಿಸುತ್ತಾರೆ. ಆನೆ ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಲಿಂಗಾಯತಕ್ಕೆ ಕಲ್ಲೆಸೆದು, ತಮ್ಮ ವೈಫಲ್ಯಕ್ಕೆ ಲಿಂಗಾಯತರೇ ಹೊಣೆ ಎನ್ನುತ್ತಾರೆ. ಆದರೆ ಆಳುವ ಸರ್ಕಾರಗಳು ಕಳೆದ ನಲ್ವತ್ತು ವರ್ಷಗಳಲ್ಲಿ ಮರಳಿ ಅಧಿಕಾರಕ್ಕೆ ಬಂದಿಲ್ಲವೆಂಬ ಸತ್ಯವನ್ನು ಮುಚ್ಚಿಡುತ್ತಾರೆ. ಸಿದ್ಧರಾಮಯ್ಯನವರ ಬಸವಪರ ನಿಲುವಿನಿಂದಾಗಿಯೇ ೮೫ ಶಾಸಕರು ಚುನಾಯಿತರಾಗಿದ್ದನ್ನು ಮರೆಮಾಚಿ ತಮ್ಮ ಸೋಲಿಗೆ ಅವರ ಜನಪ್ರಿಯ ಯೋಜನೆಗಳನ್ನೇ ದೂರುತ್ತಾರೆ. ತಾವು ಅಂದು ಸೋಲುಂಡಿದ್ದು ತಮ್ಮ ವೈಯುಕ್ತಿಕ ವೈಫಲ್ಯ ಮತ್ತು ತಮ್ಮ ಪಕ್ಷದಲ್ಲಿರುವ ಕೆಲ ಬಲಾಢ್ಯ ನಾಯಕರ ಒಳ ಒಪ್ಪಂದದಿಂದಾಗಿ ಎಂಬ ಕಾರಣ ಮರೆಮಾಚುತ್ತಾರೆ.
ನಿಜಲಿಂಗಾಯತರು ಸತ್ಯದ ಪರವಾಗಿದ್ದಾರೆ. ಇವನಾರವ ಇವನಾರವ ಎನ್ನದೆ ಸಮಸಮಾಜವನ್ನು ಬಯಸುವ ಪಕ್ಷವನ್ನು ಅವರು ಬೆಂಬಲಿಸುತ್ತಾರೆ. ಇವರು ಕಾಂಗ್ರೆಸ್ಸಿಗೆ ಹತ್ತಿರ ಎಂದು ಕಾಣಲು ಬಸವಣ್ಣನವರ ಸಮಾಜವಾದಿ ಸಿದ್ಧಾಂತ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗಿರುವುದರಿಂದ. ಇತ್ತ ಭಾ.ಜ.ಪಕ್ಷವು “ಒಂದು ಧರ್ಮ, ಒಂದು ದೇಶ, ಒಬ್ಬ ನಾಯಕ” ತಮ್ಮ ಸಿದ್ಧಾಂತ ಎನ್ನುತ್ತದೆ. ಆದರೆ ಲಿಂಗಾಯತವು ಪ್ರಜಾಸತ್ತಾತ್ಮಕ ಆಡಳಿತ ಬಯಸುತ್ತದೆ. ಎಲ್ಲರೂ ಸಮಾನರು ಎನ್ನುತ್ತದೆ. ಸಹ ಬಾಳ್ವೆ, ಸಮಾನತೆ, ಸಹಕಾರ, ಮೌಢ್ಯರಹಿತ ಸಮಾಜದ ಆಶಯ ಲಿಂಗಾಯತದ ಸಿದ್ಧಾಂತ. ಲಿಂಗಾಯತದ ಪ್ರಮುಖ ಸಿದ್ಧಾಂತವಾದ ‘ದಾಸೋಹ’ ‘ಬಂಡವಾಳಶಾಹಿಯ’ ವ್ಯತಿರಿಕ್ತವಾಗಿದೆ. ಶರಣರು ಬಂಡವಳಶಾಹಿಯ ವಿರುದ್ಧವಾಗಿದ್ದರು.
ಲಿಂಗಾಯತ ಮತ್ತು ಹಿಂದೂ ಧರ್ಮದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ‘ಹಿಂದೂ ನಾವೆಲ್ಲ ಒಂದು’ ಹೇಳುವುದನ್ನು ಲಿಂಗಾಯತರು ನಂಬುವುದಿಲ್ಲ. ಕಾರಣ ನಿಮ್ಮ ಸಿದ್ಧಾಂತ ಅದಲ್ಲ. ಕಣ್ಣಿಗೆ ಬಟ್ಟೆಕಟ್ಟಿ ಬಾವಿಗೆ ತಳ್ಳುವ ತಂತ್ರ ಎಂಬ ಭಾವನೆ ತರಿಸುತ್ತದೆ. ಶರಣರು ಹೇಳಿಲ್ಲವೆ ‘ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ’ ಎಂದು. ಮೇಲಾಗಿ ಈ ಪಕ್ಷದ ನಿಯಂತ್ರಕರು ಮತ್ತು ವರಿಷ್ಠ ನಾಯಕರು ಇದೆ ಸಿದ್ಧಾಂತದವರು.
ಬಸನಗೌಡರಾಗಲಿ, ಯಡಿಯೂರಪ್ಪನವರಾಗಲಿ, ಶೆಟ್ಟರರವರಾಗಲಿ ಅಥವಾ ಬೊಮ್ಮಾಯಿವರಾಗಲಿ ನಮ್ಮ ವಿರೋಧಿಗಳಲ್ಲ. ಅವರು ನಮ್ಮ ಸೈದ್ಧಾಂತಿಕ ವಿರೋಧಿಗಳಷ್ಟೇ. ಅದರಂತೆ ನಿಜಲಿಂಗಾಯತರಾದ ಸಿದ್ದರಾಮಯ್ಯನವರು, ಎಂ. ಬಿ. ಪಾಟೀಲ ಮತ್ತಿತರರು ಅವರು ನಿಜ ಲಿಂಗಾಯತರಾಗಿದ್ದಕ್ಕೆ ಪ್ರೀತಿಸುತ್ತೇವೆ. ಅವರ ಸಿದ್ಧಾಂತ ಮತ್ತು ಬಸವಣ್ಣನವರ ಬಗ್ಗೆ ಅವರಿಗಿದ್ದ ಪ್ರೀತಿಗಾಗಿ ಅವರನ್ನು ಆಧರಿಸುತ್ತೇವೆ.
ಲಿಂಗಾಯತರು ಸರ್ವ ಸ್ವತಂತ್ರರು. ಬಿಜ್ಜಳ ರಾಜನನ್ನೆ ಧಿಕ್ಕರಿಸಿದ ಸ್ವಾಭಿಮಾನಿಗಳು. ನೀವು ಅವರನ್ನು ‘ಗುಲಾಮರೆಂತಾಗಲಿ’, ‘ಕೊಳ್ಳುವ ಸರಕೆಂತಾಗಲಿ ಭಾವಿಸಬೇಡಿ’. ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಒಂದು ಮಾತನ್ನು ನೆನಸಿಕೊಳ್ಳುತ್ತ ಲೇಖನ ಮುಗಿಸುತ್ತೇನೆ. “ಆರಂಭದಲ್ಲಿ ಬಸವೇಶ್ವರನಿಗೆ ಸಹಾಯವಾದವರು ಪ್ರಮುಖ ಸಮಾಜದರವಲ್ಲ. ಅವನಿಗೆ ಸಹಾಯವಾದವರು ಒಬ್ಬ ಅಗಸ, ಒಬ್ಬ ಕಿನ್ನರಿ ಬಾರಿಸುವವ, ಒಬ್ಬ ಮುದ್ದಲಿಗ, ಒಬ್ಬ ಒಡ್ಡರ ನಾಯಕ, ಒಬ್ಬ ನಾಪಿತ, ಹೊಲೆಯ, ಡೋರ, ಕಟ್ಟಿಗೆ ಮಾರಿ ಜೀವಿಸುವನೊಬ್ಬ, ದೇಶತ್ಯಾಗ ಮಾಡಿದ ಒಬ್ಬ ಸ್ತ್ರೀ, ಇಂಥವರೆ ಇದ್ದಾರೆ. ಕ್ರೈಸ್ತನಿಗೆ ಮೊದಲ ಅನುಯಾಯಿಗಳಾದವರು ಇಂಥವರೆ, ಮಹಮ್ಮದ, ಬುದ್ಧ, ಇವರ ಸ್ಥಿತಿಯಾದರೂ ಹೀಗೆ ಇದೆ. ಮೇಲಿನ ತರಗತಿಯ ಸಮಾಜದವರು ಇಂಥ ಮಹಾತ್ಮರನ್ನೂ ಆರಂಭದಲ್ಲಿ ಪೀಡಿಸುತ್ತಾರೆ” ಎಂದು ನೂರು ವರ್ಷಗಳ ಹಿಂದೆ ಬರೆಯುತ್ತಾರೆ.
ಏಣಿ ಶ್ರೇಣಿ ಬಯಸುವ, ಮನು ಸಿದ್ಧಾಂತದ ಬಿ.ಜೆ.ಪಿ.ಗರಾದ ಗೌಡ್ರುಗಳೆ, ಸಾಹುಕಾರರೆ ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಸ್ವಾಮಿ. ನಿಜವಾಗಲೂ ನಿಮಗೆ ನಾವು ಬೇಕಾಗಿದ್ದಲ್ಲಿ ಲಿಂಗಾಯತಕ್ಕೆ ಧರ್ಮ ಮಾನ್ಯತೆ ನೀಡಿ. ನಂತರ ನಮ್ಮ ಬಗ್ಗೆ ಯೋಚಿಸಿ.
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




