ಸಂವಿಧಾನ ಉಳಿದು, ಪ್ರಜಾಪ್ರಭುತ್ವ ಗಟ್ಟಿಯಾದರೆ ದುಡಿಯುವವರಿಗೆ ಅವಕಾಶ: ಸಿದ್ದರಾಮಯ್ಯ

2 years ago

ಅಸಮಾನತೆ ದೈವ ಸೃಷ್ಟಿ ಅಲ್ಲ. ಮನುಷ್ಯ ಸೃಷ್ಟಿ

ಸಮಾಜದಲ್ಲಿ ಯಾರಿಗೆ ಅವಕಾಶಗಳು ಸಿಕ್ಕಿತೋ ಅವರು ಬಹುಜನರನ್ನು ಅವಕಾಶ ವಂಚಿತರನ್ನಾಗಿ ಮಾಡಿದರು

ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಅಸಮಾನತೆಗೆ ತುತ್ತಾದರು

ಕೋಲಾರ: ನಮ್ಮ ಸಂವಿಧಾನ ಉಳಿದು, ಪ್ರಜಾಪ್ರಭುತ್ವ ಗಟ್ಟಿಯಾದರೆ ಮಾತ್ರ ದುಡಿಯುವವರಿಗೆ ಬದುಕಿನ ಅವಕಾಶಗಳು ದಕ್ಕುತ್ತವೆ. ಇದನ್ನು ಜನ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಆದಿಮ‌ ಸಾಂಸ್ಕೃತಿಕ ಕೇಂದ್ರದ ಹುಣ್ಣಿಮೆ ಹಾಡು-200 ರ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಮಾತನಾಡಿದ ಅವರು, ಆದಿಮ ಸಾಂಸ್ಕೃತಿಕ ಚಳವಳಿ ಮೂಲಕ ಬದಲಾವಣೆಯ ಕೇಂದ್ರ ಆಗುತ್ತದೆ ಎಂಬ ಭಾವನೆ ನನ್ನದು. ಸಮ ಸಮಾಜ ಮತ್ತು ಮಾನವೀಯತೆಯ ಸಮಾಜವನ್ನು ಗಟ್ಟಿಗೊಳಿಸಬೇಕಾದ ಸಂದರ್ಭ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಅಸಮಾನತೆ ದೈವ ಸೃಷ್ಟಿ ಅಲ್ಲ. ಮನುಷ್ಯ ಸೃಷ್ಟಿ. ಸಮಾಜದಲ್ಲಿ ಯಾರಿಗೆ ಅವಕಾಶಗಳು ಸಿಕ್ಕಿತೋ ಅವರು ಬಹುಜನರನ್ನು ಅವಕಾಶ ವಂಚಿತರನ್ನಾಗಿ ಮಾಡಿದರು. ಇದರಿಂದ ಅಸಮಾನತೆ ಸೃಷ್ಟಿಯಾಯಿತು. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಅಸಮಾನತೆಗೆ ತುತ್ತಾದರು ಎಂದರು.

ಅಸಮಾನತೆಗೆ ತುತ್ತಾದವರು ಪ್ರಜಾತಂತ್ರದ ಸೌಧವನ್ನು ದ್ವಂಸ ಮಾಡ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದರು. ನಮ್ಮದು ಚಲನೆ ರಹಿತ ಜಾತಿ ವ್ಯವಸ್ಥೆ. ಆದ್ದರಿಂದ ಬುದ್ದನ ಕಾಲದಿಂದಲೂ ಜಾತಿ ವ್ಯವಸ್ಥೆ ವಿರುದ್ಧ ಪ್ರಜ್ಞೆ ಮೂಡಿಸಿದರೂ ಇನ್ನೂ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಲೇ ಇದೆ ಎಂದರು.

ಪಟ್ಟಭದ್ರರು ಬಹಳ ಕೆಟ್ಟ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಸವಾದಿ ಶರಣರು 800 ವರ್ಷಗಳ ಹಿಂದೆಯೇ “ಇವ ನಮ್ಮವ ಇವ ನಮ್ಮವ” ಎಂದು ಕರೆದರೂ ಇವತ್ತಿಗೂ “ಇವನಾರವ ಇವನಾರವ” ಎನ್ನುವ ವ್ಯವಸ್ಥೆಯೇ ಮುಂದುವರೆದಿದೆ ಎಂದರು.

ಸ್ವಾರ್ಥರು, ಅಧಿಕಾರಕ್ಕೆ ಅಂಟಿಕೊಳ್ಳುವವರು ಪಟ್ಟಭದ್ರರ ವ್ಯವಸ್ಥೆ ಜತೆಗೆ ರಾಜಿ ಮಾಡಿಕೊಳ್ಳುತ್ತಾರೆ. ಇದರಿಂದ ಸಮಾಜ ಸಾಕಷ್ಟು ನೋವು ತಿನ್ನುತ್ತದೆ. ಕಟ್ಟ ಕಡೆಯ ಮನುಷ್ಯನಿಗೆ ದಕ್ಕಬೇಕಾದ ಪಾಲನ್ನು ದಕ್ಕದಂತೆ ಮಾಡುತ್ತದೆ ಎಂದರು.

ಕಾಯಕ ಮಾಡುವವರು ಅವಕಾಶಗಳಿಂದ ವಂಚಿತರಾಗುತ್ತಾರೆ. ಯಾರು ಕಾಯಕ ಜೀವಿಗಳಲ್ಲವೋ ಅವರು ಸಂಪತ್ತನ್ನು ಅನುಭವಿಸುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಿ ಆಗಬೇಕು. ಉತ್ಪಾದನೆಯನ್ನು ಸಮವಾಗಿ ಹಂಚಿಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಶೋಷಣೆ ಮುಕ್ತ ಸಮಾಜ ಸೃಷ್ಟಿಯಾಗುತ್ತದೆ. ನಾನು ಮತ್ತು ನಮ್ಮ ಸರ್ಕಾರ ಶೋಷಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.

ಇದೇ ವೇಳೆ ‘ಆದಿಮ ನಡೆದು ಬಂದ ಹಾದಿಯನ್ನು ದಾಖಲಿಸಿರುವ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರುಗಳಾದ ನಂಜೇಗೌಡರು, ಕೊತ್ತನೂರು ಮಂಜುನಾಥ್, ಅನಿಲ್ ಕುಮಾರ್, ಮಾಜಿ ಸಭಾಪತಿ ಸುದರ್ಶನ್, ಮಾಜಿ ಸಚಿವರಾದ ಶ್ರೀನಿವಾಸ ಗೌಡ ಮತ್ತು ಆದಿಮ ಸಾಂಸ್ಕೃತಿಕ ಸಂಘಟನೆಯ ಪದಾಧಿಕಾರಿಗಳು, ಪೋಷಕರು ಮತ್ತು ದಲಿತ ಚಳವಳಿಯ ಹೋರಾಟಗಾರರು ಹಾಜರಿದ್ದರು.

Leave a Reply