ಯತ್ನಾಳ್ ಹೊರಹಾಕಲು ಬಿಜೆಪಿಯಲ್ಲಿ ವೇದಿಕೆ ಸಜ್ಜು

2 years ago

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಸ್ವಪಕ್ಷೀಯರ ವಿರುದ್ಧ ಪದೇಪದೇ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷ ಮತ್ತು ನಾಯಕರಿಗೆ ಮುಜುಗರ ಉಂಟುಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಹೊರ ಹಾಕಲು ಸಿದ್ಧತೆ ನಡೆದಿದೆ.

ವಿಜಯೇಂದ್ರ‌ ಸೇರಿದಂತೆ ಹಲವು ನಾಯಕರು ದೆಹಲಿಗೆ ತೆರಳಿ ವರಿಷ್ಠರಿಗೆ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ದೂರು ಸಲ್ಲಿಸಿದರೂ ಯಾವುದೇ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಎಲ್ಲಾ ಜಿಲ್ಲಾ ಸಮಿತಿಗಳಿಂದ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ನಿರ್ಣಯ ಅಂಗೀಕಾರ ಮಾಡಿ ವರದಿ ಮೂಲಕ ರಾಜ್ಯ ಸಮಿತಿಗೆ ರವಾನೆ ಮಾಡಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.

ಈ ವರದಿಗಳನ್ನು ಆಧರಿಸಿ ಅವರನ್ನು ಪಕ್ಷದಿಂದ
ಅಮಾನತುಪಡಿಸುವ ಸಾಧ್ಯತೆಯಿದೆ. ನಿರಂತರವಾಗಿ ಪಕ್ಷದ ವಿರುದ್ಧ ಟೀಕೆ ಮಾಡುತ್ತಾ ವಿರೋಧ ಪಕ್ಷದವರಿಗೆ ಅಸ್ತ್ರ ನೀಡುತ್ತಿರುವ ಯತ್ನಾಳ್ ಹೇಳಿಕೆ ಕುರಿತು ಜಿಲ್ಲಾ ಘಟಕಗಳು ನೀಡುವ ವರದಿಯನ್ನು ರಾಜ್ಯ ಬಿಜೆಪಿ ಘಟಕ ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಅಮಾನತು ಮಾಡಲು ಕೇಂದ್ರ ಬಿಜೆಪಿ ನಾಯಕರಿಗೆ ಶಿಫಾರಸ್ಸು ಮಾಡಲು ಚಿಂತನೆ ನಡೆದಿದೆ.

ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಬೇರೆಯವರು ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆಯಿದೆ ಎಂಬುದನ್ನು ಮನಗಂಡು ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಯತ್ನಾಳ್ ಮೂಲಕವೇ ನೀಡಲು ನಾಯಕರು ಸಜ್ಜಾಗಿದ್ದಾರೆ.

ಅಮಾನತು ಮಾಡುವ ಮುನ್ನ ಕಾರಣ ಕೇಳಿ ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ನೋಟಿಸ್‍ಗೆ ಸಮರ್ಪಕ ಉತ್ತರ ಬಾರದಿದ್ದರೆ ಪಕ್ಷದಿಂದ ಅಮಾನತು ಮಾಡಲು ನಿರ್ಣಯವನ್ನು ರಾಜ್ಯಘಟಕ ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ನಾಳೆ ಇತರರು ಕೂಡ ಇದೇ ಹಾದಿ ತುಳಿಯುವ ಸಾಧ್ಯತೆ ಇರುವುದರಿಂದ ಭಿನ್ನಮತ ಉಲ್ಬಣಗೊಳ್ಳುವ ಮೊದಲೇ ಕಡಿವಾಣ ಹಾಕಲು ಯತ್ನಾಳ್ ವಿರೋಧಿ ಬಣ ಮುಂದಾಗಿದೆ.

Leave a Reply