ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯ

4 months ago

ಬೆಳಗಾವಿ: ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಎಂದು ವಿಧಾನಸಭೆಯಲ್ಲಿ ಘೋಷಿಸಿರುವ ಸಿಎಂ ಸಿದ್ದರಾಮಯ್ಯ, 2023 ರಂತೆ 2028 ರಲ್ಲಿಯೂ ಜನಾರ್ಶೀವಾದದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಾಪದಲ್ಲಿ ಸರ್ಕಾರದ ಭವಿಷ್ಯ ಕುರಿತಂತೆ ವಿಪಕ್ಷಗಳು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಬೇಕು ಎಂದರು.

ಗಾದೆ ಮಾತೆನಂತೆ ಉರಿಯುವುದರ ಮೇಲೆ ಉಪ್ಪು ಹಾಕಬಾರದೆಂಬ ಎಂಬ ಗಾದೆ ಮಾತಿದೆ. ವಿರೋಧ ಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು ಎಂದರು.

ವಿರೋಧಪಕ್ಷದವರು ಏನೇ ಪ್ರಚೋದನೆ ಮಾಡಿದರೂ, ನಮ್ಮ ಶಾಸಕರಾರೂ ಪ್ರಚೋದಿತರಾಗುವುದಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರಬೇಕೆಂದು ಜನರು ಆಶೀರ್ವಾದ ಮಾಡಿ ಕಳಿಸಿದ್ದಾರೆ. 140 ಶಾಸಕರು ನಮ್ಮೊಂದಿಗಿದ್ದಾರೆ. ವಿರೋಧಪಕ್ಷದವರು ಇದರಲ್ಲಿ ಹುಳಿ ಹಿಂಡುವ ಅಗತ್ಯವಿಲ್ಲ ಎಂದರು.

2023ರಲ್ಲಿ ಜನ ಆಶೀರ್ವಾದ ಮಾಡಿದಂತೆ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಜನರ ನಾಡಿಮಿಡಿತ ಸರ್ಕಾರಕ್ಕೆ ತಿಳಿದಿದೆ. ಕರ್ನಾಟಕದ ಜನ ಬಿಜೆಪಿಗೆ ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡು ಬಾರಿ ಅಧಿಕಾರ ನಡೆಸಿದರೂ, ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. 2008 , 2018 ರಲ್ಲಿ ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಹುದ್ದೆ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಮಾತು ಅಂತಿಮವಾಗಿರುತ್ತದೆ. ಆದರೆ ಬಿಜೆಪಿಯ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತ ಸಾಧಿಸಿಲ್ಲ. ಬಿಜೆಪಿಯವರಿಗೆ ಅಸೂಯೆ ಕಾಡುತ್ತಿದೆ ಎಂದು ಟೀಕಿಸಿದರು.

ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಹಾಗೂ ಮತ್ತೆ ಚುನಾವಣೆ ಎದುರಿಸಿ 2028 ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. 2013 ರಲ್ಲಿ 2023 ರಲ್ಲಿಯೂ  ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಿದ್ದಾರೆ, ಆದರೆ ಬಿಜೆಪಿಯವರಿಗೆ ಒಮ್ಮೆಯೂ ಜನಾದೇಶ ದೊರೆತಿಲ್ಲ ಹಾಗೂ ಭವಿಷ್ಯದಲ್ಲಿಯೂ ದೊರೆಯುವುದಿಲ್ಲ. ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದೆ ಎಂದು ತಿರುಗೇಟು ನೀಡಿದರು.

‘ನಾನು’ ಹೋದರೆ ಹೋದೇನು” ಅಂತ ಕನಕದಾಸರು ಹೇಳಿದ್ದರು. “ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ”. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ ಎಂದರು.

Leave a Reply