ಕುತೂಹಲಕ್ಕೆ ಕಾರಣವಾದ ಕೆ ಎಚ್ ಮುನಿಯಪ್ಪ – ಸತೀಶ್ ಜಾರಕಿಹೊಳಿ ಭೇಟಿ

1 year ago

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿರುವ ಜಾತಿ ಗಣತಿ ವರದಿ ಸೇರಿದಂತೆ ಹಲವು ಕಾರಣಗಳಿಂದ ತೆರೆ ಮರೆಗೆ ಸರಿದಿದ್ದ ಅಧಿಕಾರ ಹಂಚಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಹಠಾತ್ ವಿದ್ಯಮಾನವೊಂದರಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಕೆ.ಎಚ್. ಮುನಿಯಪ್ಪ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಇವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಈ ವೇಳೆ, ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಂ ಬದಲಾವಣೆಯಾದಲ್ಲಿ, ಯಾರಿಗೆ ಅವಕಾಶ ಸಿಗಬೇಕು ಎಂಬ ಬಗ್ಗೆ ಇಬ್ಬರು ನಾಯಕರು ಗಂಭೀರ ಸಮಾಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಕೆ‍ಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ ಜಾರಕಿಹೊಳಿ ಅವರು, ಎಡಗೈ ಪಂಗಡವನ್ನು ಪ್ರತಿನಿಧಿಸುವ ಸಚಿವರ ವಿಶ್ವಾಸಗಳಿಸುವತ್ತ ಹೆಜ್ಜೆ ಇಟ್ಟಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಲಾವಣೆಗೆ ಹೈಕಮಾಂಡ್‌ ಮುಂದಾದರೆ ತಮ್ಮನ್ನು ಬೆಂಬಲಿಸುವಂತೆ ಮುನಿಯಪ್ಪ ಅವರನ್ನು ಕೋರಿದ್ದಾರೆ ಎನ್ನಲಾಗಿದೆ.

ಈ ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಸಮುದಾಯದ ಬಲಗೈನವರಿಗೇ ಹೆಚ್ಚಿನ ಮನ್ನಣೆ ದೊರೆಯುತ್ತಿದೆ ಎಂದು ಹೇಳಿದ ಮುನಿಯಪ್ಪ ಅವರು, ನಾನು 7 ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ನಿಷ್ಠಾವಂತ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ. ರಾಜ್ಯದಲ್ಲಿ ಮುಂದೆ ದಲಿತರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವುದಾದರೆ ನನಗೆ ತಮ್ಮ ಬೆಂಬಲ ಇರಬೇಕು. ಕೆಪಿಸಿಸಿ ಸ್ಥಾನದ ವಿಚಾರದಲ್ಲಿ ನಿಮ್ಮ ಜತೆ ನಿಲ್ಲುವೆ ಎಂದು ಬೇಡಿಕೆ ಇಟ್ಟರುವುದಾಗಿ ಮೂಲಗಳಿಂದ ತಿಳಿದುಬಂದಿದೆ. 

ಈ ವಿಚಾರದಲ್ಲಿ ನನ್ನ ಸಹಮತವಿದೆ. ಪರಿಶಿಷ್ಟ ಜಾತಿ ಪಂಗಡ ಪ್ರತಿನಿಧಿಸುವ ಎಲ್ಲ ಸಚಿವರು ಶಾಸಕರು ಒಗ್ಗಟ್ಟು ಪ್ರದರ್ಶಿಸೋಣ. ಸಮಯ ಬಂದಾಗ ಅವಕಾಶದ ಸದುಪಯೋಗಕ್ಕೆ ಪ್ರಬಲ ಬೇಡಿಕೆ ಮಂಡಿಸೋಣ. ನಮ್ಮ ಜತೆಗೆ ಇರಿ ಎಂದು ಸತೀಶ ಜಾರಕಿಹೊಳಿ ಕೋರಿದರು ಎನ್ನಲಾಗಿದೆ.

ಮುನಿಯಪ್ಪ ಸ್ಪಷ್ಟೀಕರಣ: ಈ ಕುರಿತು ಪ್ರತಿಕ್ರಿಯಿಸಿರುವ ಕೆ.ಎಚ್.ಮುನಿಯಪ್ಪ, ನಮ್ಮ ನಿವಾಸಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ರವರು ಉಪಹಾರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೆಲವು ರಸ್ತೆಗಳಿಗೆ ಹಣ ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಸಿದ್ದೇವೆ. ವಿನಃ ಬೇರೆ ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.

ಈಗಾಗಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಇದ್ದಾರೆ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಎಲ್ಲಾ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ,ಆರ್ಥಿಕ ಸಮಾನತೆ ಕೊಡುವುದು ಕಾಂಗ್ರೆಸ್ ಪಕ್ಷದ ಬದ್ಧತೆಯಾಗಿದೆ. ನಾನೆ ಹೇಳಿದ್ದೆ ಧರ್ಮಸಿಂಗ್ ನಂತರ ಅತ್ಯಂತ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕು ಎಂದಿದ್ದೆ ಎಂದರು.

ತದನಂತರ ಮೊದಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗ ನಮ್ಮ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಿದ್ದಾಗ ಆಕಸ್ಮಿಕವಾಗಿ ಸೋತರು ಕೂಡ ಅವರಿಗೆ ಡಿಸಿಎಂ ಮಾಡಬೇಕೆಂದು ನಾನೇ ಒತ್ತಾಯ ಮಾಡಿದ್ದು. ದಲಿತರಲ್ಲಿ ಯಾರಿಗಾದರು ಕೊಡಬೇಕೆಂದಿದೆ. ಆದರೆ ಅದರ ಸಮಯ ಇನ್ನೂ ಬಂದಿಲ್ಲ ಎಂಬುದು ಕಾಣುತ್ತಿದೆ. ಏಕೆಂದರೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇರುವುದರಿಂದ ನಮ್ಮ ಹೈಕಮಾಂಡ್ ಯಾವ ಸಮಯದಲ್ಲಿ ಏನು ನಿರ್ಧಾರ ಮಾಡಬೇಕು. ಕೆಪಿಸಿಸಿ ವಿಚಾರವಿರಲಿ, ಮುಖ್ಯಮಂತ್ರಿ ವಿಚಾರವಿರಲಿ ಅವರೇ ನೋಡುತ್ತಾರೆ ಎಂದರು.

Leave a Reply