ವಸತಿ ಸಚಿವರ ಆಪ್ತ ಕಾರ್ಯದರ್ಶಿ ಜೊತೆ ಮಾತನಾಡಿದ್ದು ನಾನೇ: ಬಿ ಆರ್ ಪಾಟೀಲ್

10 months ago

ಬೆಂಗಳೂರು: ಮನೆ ಮತ್ತು ನಿವೇಶನ ಪಡೆಯಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ಲಂಚ ನೀಡಬೇಕು ಎಂಬ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರ ಆರೋಪ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿ ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ.

ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಹಾಗೂ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಹೇಳಿಕೆ ಇಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿರುವ ನಡುವೆಯೇ ಮತ್ತೊಮ್ಮೆ ಬಿ.ಆರ್.ಪಾಟೀಲ್ ತಮ್ಮ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.

ನಾವು ಜನಪರ ಆಡಳಿತ ಕೊಡ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದು. ಆದರೆ, ಹೀಗಾಗಬಾರದಿತ್ತು. ವಸತಿ ಸಚಿವರ ಆಪ್ತ ಕಾರ್ಯದರ್ಶಿ ಜೊತೆ ಮಾತನಾಡಿದ್ದು ನಾನೇ. ಅದು ನಾನೇ ಮಾತನಾಡಿದ ಆಡಿಯೊ. ಎಲ್ಲ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿತ್ತು. ನಾವೂ ಜನಪರ ಆಡಳಿತ ಕೊಡುತ್ತೇವೆ ಎಂದು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಎಂದರು.

ನಮ್ಮ ಕ್ಷೇತ್ರ ವ್ಯಾಪ್ತಿಯ 5-6 ಪಂಚಾಯಿತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನು ತೆಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಕ್ಕೆ ಮನೆಗಳು ಹಂಚಿಕೆ ಆಗಿಲ್ಲ. ನಾನು ನಾಲ್ಕು ಪತ್ರಗಳನ್ನು ಕೊಟ್ಟಿದ್ದೆ. ನನ್ನ ಕ್ಷೇತ್ರಕ್ಕೆ ಮನೆಗಳನ್ನು ಕೊಡಿ ಎಂದು ಪತ್ರ ಕೊಟ್ಟರೂ ಮನೆಗಳನ್ನು ಕೊಟ್ಟಿರಲಿಲ್ಲ. ಪಂಚಾಯಿತಿ ಅಧ್ಯಕ್ಷರು ನಾನು ಕೊಟ್ಟ ಪತ್ರಗಳನ್ನೇ ಕೊಟ್ಟು ಮನೆಗಳನ್ನು ತಂದಿದ್ದಾರೆ. ಮುಖ್ಯಮಂತ್ರಿ ಕರೆದು ಮಾಹಿತಿ ಕೇಳಿದರೆ ಹೋಗಿ ಮಾಹಿತಿ ಕೊಡುತ್ತೇನೆ ಎಂದರು.

ನಾನು ಹೇಳಿರುವುದರಲ್ಲಿ ತಪ್ಪಿಲ್ಲ. ಸತ್ಯವನ್ನೇ ಹೇಳಿದ್ದೇನೆ. ನನ್ನ ಹೊಟ್ಟೆ ಕೆಟ್ಟಿತ್ತು. ಔಷಧಿ ತೆಗೆದುಕೊಂಡಿದ್ದೇನೆ ಎಂದು ಪ್ರಸ್ತುತ ಸನ್ನಿವೇಶಕ್ಕೆ ಬಿ.ಆರ್.ಪಾಟೀಲ್ ಸಮರ್ಥನೆ ನೀಡಿದ್ದಾರೆ.

ಬಿಜೆಪಿಯವರೇನೂ ಸಾಚಾಗಳಲ್ಲ. ಭ್ರಷ್ಟಾಚಾರದಿಂದಾಗಿ ರಾಜ್ಯವನ್ನು ಹದಗೆಡಿಸಿ ಹೋಗಿರುವವರೇ ಅವರು ಎಂದರು.

ಡಿಸಿಎಂ ಡಿ ಕೆ ಶಿವಕುಮಾರ್ ಅಸಮಾಧಾನ: ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರ ಈ ಆರೋಪದ ಬಗ್ಗೆ  ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿ.ಆರ್.ಪಾಟೀಲ್ ಅವರ ಹೇಳಿಕೆಯನ್ನು ತಾವು ಖಂಡಿಸುತ್ತಿದ್ದು, ಮುಖ್ಯಮಂತ್ರಿ ಹಾಗೂ ತಾವು ಅವರಿಗೆ ಈ ವಿಚಾರವಾಗಿ ಸೂಕ್ತ ತಿಳುವಳಿಕೆ ನೀಡುವುದಾಗಿ ತಿಳಿಸಿದರು.

ಅವರ ಹೇಳಿಕೆ ಮತ್ತು ನಡವಳಿಕೆ ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದೆ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದರು.

ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುತ್ತಿದೆ. ಗ್ರಾ.ಪಂ. ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡುತ್ತದೆ. 1.50 ಲಕ್ಷ ರೂ. ಅನುದಾನ ನೀಡುವುದಕ್ಕೆ ಯಾವ ಮಂತ್ರಿ ಲಂಚ ಕೇಳಲು ಸಾಧ್ಯ? ಎಂದು ಕೇಳಿದರು.

ಬಿ.ಆರ್.ಪಾಟೀಲ್ ಯಾವ ಹಂತದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಆ ರೀತಿ ಯಾವುದೇ ಭ್ರಷ್ಟಾಚಾರ ನಡೆಯುತ್ತಿಲ್ಲ. ಮುಖ್ಯಮಂತ್ರಿ ಹಾಗೂ ತಾವು ಬಿ.ಆರ್.ಪಾಟೀಲರಿಗೆ ಸ್ಪಷ್ಟವಾಗಿ ಈ ಬಗ್ಗೆ ಏನು ಹೇಳಬೇಕೋ ಅದನ್ನು ಹೇಳುತ್ತೇವೆ ಎಂದರು.

ಗರಂ ಆದ ಹೈಕಮಾಂಡ್: ಈ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಗರಂ ಆಗಿದೆ. ಬೆಳವಣಿಗೆ ಕುರಿತಂತೆ ಸಮಗ್ರ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸುರ್ಜೆವಾಲ ವಿದೇಶ ಪ್ರವಾಸದಲ್ಲಿದ್ದು, ಅಲ್ಲಿಂದಲೇ ಹೈಕಮಾಂಡ್ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಮತ್ತು ವಸತಿ ಸಚಿವರನ್ನು ಸಂಪರ್ಕಿಸಿದ ಅವರು, ವಿದ್ಯಮಾನದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಹೈಕಮಾಂಡ್ ಗೆ ವರದಿಯೊಂದನ್ನು ಸಲ್ಲಿಸುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.

Leave a Reply