ಬೆಂಗಳೂರು: ಅಧಿಕಾರ ಹಂಚಿಕೆ ಕುರಿತಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ತಂತ್ರ ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದು ತಮ್ಮ ಆಪ್ತ ಮಂತ್ರಿಗಳು ಮತ್ತು ಶಾಸಕರೊಂದಿಗೆ ಉಪಹಾರ ಕೂಟ ನಡೆಸಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸಂಪುಟ ಸಭೆಗೆ ತೆರಳುವ ಮುನ್ನ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಡಾ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಕೆ.ವೆಂಕಟೇಶ್, ಜಮೀರ್ ಅಹ್ಮದ್ ಖಾನ್, ಹಿರಿಯ ನಾಯಕ ಬಿಕೆ ಹರಿಪ್ರಸಾದ್, ಕೆ ಎನ್ ರಾಜಣ್ಣ, ಪಿ.ಎಂ. ಅಶೋಕ್, ಪೊನ್ನಣ್ಣ ಸೇರಿದಂತೆ ಹಲವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಈ ಸಭೆಯಲ್ಲಿ ಯಾವುದೇ ಕಾರಣಕ್ಕೂ ಹೈಕಮಾಂಡ್ ಮಾತಿಗೆ ಕಟ್ಟು ಬಿದ್ದು ಅಧಿಕಾರ ಹಸ್ತಾಂತರ ಮಾಡಬಾರದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಹಿಂದುಳಿದ ದಲಿತ ಮತ್ತು ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಅನ್ನು ಬಿಟ್ಟು ಹೋಗುತ್ತವೆ ಎಂದು ಎಚ್ಚರಿಸಿದ್ದಾರೆ.
ಪ್ರಮುಖವಾಗಿ ಮಾಜಿ ಮಂತ್ರಿ ಕೆ ಎನ್ ರಾಜಣ್ಣ ಅಧಿಕಾರ ಹಂಚಿಕೆ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ತಾವು ಮುಖ್ಯಮಂತ್ರಿಯಾಗಿ ಇರಬೇಕು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ನಮ್ಮದೇನು ತಕರಾರು ಇಲ್ಲ. ಆದರೆ ಈಗ ಅಂತಹ ಬದಲಾವಣೆಗಳಿಗೆ ನಾವುಗಳು ಒಪ್ಪುವುದಿಲ್ಲ. ಇದನ್ನು ನೇರವಾಗಿ ಹೈಕಮಾಂಡ್ ನಾಯಕರಿಗೆ ತಿಳಿಸುತ್ತೇವೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ತಾವು ಅವಕಾಶ ಕೊಟ್ಟರೆ ನೀವು ದೆಹಲಿಗೆ ತರಳುವ ಮುನ್ನವೇ ನಾವುಗಳೆಲ್ಲ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಒತ್ತಡ ತಂತ್ರಗಳಿಗೆ ಮಣಿಯದಂತೆ ಮನವಿ ಮಾಡುತ್ತೇವೆ. ಜೊತೆಗೆ ಅಹಿಂದ ಮತಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ನಾಯಕತ್ವ ಬದಲಾವಣೆ ಮಾಡಬಾರದು ಎಂದು ದಾಖಲೆ ಸಮೇತ ವರದಿ ನೀಡುತ್ತೇವೆ. ಇದಕ್ಕೆ ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ವಿವರಿಸುವುದಾಗಿ ತಿಳಿದು ಬಂದಿದೆ.
ಅಧಿಕಾರ ಹಂಚಿಕೆ ಮತ್ತು ಹೈಕಮಾಂಡ್ ಜೊತೆಗಿನ ಚರ್ಚೆಯ ಕುರಿತಾಗಿ ಯಾವುದೇ ನಿಲುವನ್ನು ತಿಳಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ರಾಹುಲ್ ಗಾಂಧಿ ಕೆಲವೊಂದು ಸೂಚನೆಗಳನ್ನು ನೀಡಿದ್ದು, ಅದರ ಅನುಸಾರವಾಗಿ ಮುಂದುವರೆಯುತ್ತಿದ್ದೇನೆ. ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ. ನಾನಾಗಿ ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ನೀವು ಹೋಗುವ ಅಗತ್ಯ ಬಂದರೆ ಹೇಳುತ್ತೇನೆ. ಅಲ್ಲಿಯವರೆಗೆ ಈ ಬಗ್ಗೆ ಯಾವುದೇ ತೀರ್ಮಾನ ಬೇಡ ಎಂದು ಸಲಹೆ ಮಾಡಬಹುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹೀಗಾಗಿ ಈ ಬಗ್ಗೆ ಚರ್ಚೆ ಅನಗತ್ಯ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಐದು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ವಿಚಾರದ ಕುರಿತಾಗಿ ಮಾತನಾಡಲು ನಮಗೆ ಯಾರಿಗೂ ಅಧಿಕಾರ ಇಲ್ಲ. ಈ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಆದರೆ 2028ರ ವರೆಗೂ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ನಾವೆಲ್ಲರೂ ಮುಂದುವರೆಯುತ್ತಿದ್ದೇವೆ ಎಂದು ಹೇಳಿದರು.
ಸದ್ಯ ಉಂಟಾಗಿರುವ ಗೊಂದಲಗಳ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೇಳಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರ ಜೊತೆ ಮಾತನಾಡುವುದಾಗಿ ಹೇಳಿದ್ದು, ಹೈಕಮಾಂಡ್ ಆದಷ್ಟು ಶೀಘ್ರ ಗೊಂದಲಗಳಿಗೆ ತೆರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ನಮ್ಮ ತಂದೆ ಅವರ ಮೇಲೆ ಯಾವ ಆರೋಪಗಳು ಇಲ್ಲ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಆಡಳಿತ ನಡೆಸುತ್ತಿರುವ ಅವರನ್ನು ಯಾವ ಕಾರಣಕ್ಕಾಗಿ ಕೆಳಗಿಳಿಸುತ್ತಾರೆ ಎಂದು ಪ್ರಶ್ನಿಸಿದರು.
ಈಗಾಗಲೇ ನಮ್ಮ ತಂದೆ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಆದರೂ ಕೂಡ ಈ ಬಗ್ಗೆ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಬಾರದಿತ್ತು ಎಂದರು.
ತಮಗೆ ಇರುವ ಮಾಹಿತಿಯಂತೆ ಸರ್ಕಾರ ರಚನೆ ಸಮಯದಲ್ಲಿ ಯಾವುದೇ ಅಧಿಕಾರ ಹಂಚಿಕೆ ಸೂತ್ರ ರಚನೆಯಾಗಿಲ್ಲ. ಈ ಬಗ್ಗೆ ನಮ್ಮ ತಂದೆಯವರಾಗಲಿ ಹಿರಿಯ ಮಂತ್ರಿಗಳಾಗಲಿ ಯಾರೂ ಮಾತನಾಡಿಲ್ಲ. ಹಾಗಿದ್ದರೂ ಕೂಡ ಅಧಿಕಾರ ಹಂಚಿಕೆ ಸೂತ್ರದ ಕುರಿತು ಚರ್ಚೆ ನಡೆಯುತ್ತಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾರನ್ನು ಮಂತ್ರಿ ಮಾಡಬೇಕು ಯಾರನ್ನು ಮಾಡಬಾರದು ಯಾರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎನ್ನುವುದು ಶಾಸಕರು ಮತ್ತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ಮಠಾಧೀಶರ ಮಟ್ಟದಲ್ಲಿ ಆಗುವ ನಿರ್ಧಾರ ಅಲ್ಲ ಎಂದು ಹೇಳಿದರು.




