ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಬೃಹತ್ ಜಾಥಾ

1 year ago

ಯುವ ಸಮೂಹ ದೇಶದ ಆಸ್ತಿ, ಋಣಾತ್ಮಕ ಚಿಂತನೆ ಬೆಳಸಲು ಮುಂದಾಗಿ: ಗಂಗಾಧರಸ್ವಾಮಿ ಜಿ.ಎಂ
  
ದಾವಣಗೆರೆ: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಜನವರಿ 5 ಮತ್ತು 6 ರಂದು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗಳು ನಡೆಯಲಿದ್ದು ಇದರ ಅಂಗವಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ಜನವರಿ 3 ರಂದು ಯುವ ಸಮೂಹದಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.

ದೂಡಾ ಕಚೇರಿಯಲ್ಲಿ ಯುವಜನೋತ್ಸವ ಕಾರ್ಯಕ್ರಮ ಅಂಗವಾಗಿ ವ್ಯಾಪಕ ಜಾಗೃತಿ ಮೂಡಿಸಲು ಸರ್ಕಾರಿ, ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಏರ್ಪಡಿಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಜನೋತ್ಸವ ಸಾಂಸ್ಕೃತಿಕ ಹಬ್ಬ, ಯುವ ಜನತೆ ದೇಶದ ಆಸ್ತಿಯಾಗಿದ್ದು ಯುವಕ, ಯುವತಿಯರಲ್ಲಿ ಋಣಾತ್ಮಕ ಚಿಂತನೆಗಳನ್ನು ಬಿತ್ತಬೇಕಿದೆ. ಸಕಾರಾತ್ಮಕ ಚಿಂತನೆಗಳು ಯುವಜನೋತ್ಸವಗಳಿಂದ ಮೂಡಿ ಬರಲಿದ್ದು ಯುವ ಜನತೆಯನ್ನು ಇದರಲ್ಲಿ ತೊಡಗಿಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪದವಿ ಪೂರ್ವ ಕಾಲೇಜುಗಳ ಪಾತ್ರ ಬಹಳ ಪ್ರಾಮುಖವಾಗಿದೆ ಎಂದರು.

ಜನವರಿ 3 ರಂದು ಬೆಳಗ್ಗೆ 8 ರಿಂದ ಗುಂಡಿ ವೃತ್ತದ ಬಳಿಯಿಂದ ಜಾಥಾ ನಡೆಯಲಿದ್ದು ಪ್ರತಿಯೊಂದು ಕಾಲೇಜಿನಿಂದ ಕನಿಷ್ಠ 100ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗುವಂತೆ ಮಾಡಬೇಕಾಗಿದೆ. ಜೊತೆಗೆ ಒಂದೊಂದು ಕಾಲೇಜಿನಿಂದ ಪ್ರತ್ಯೇಕವಾಗಿ ವಿಷಯಾಧಾರಿತವಾಗಿ ಘೋಷವಾಕ್ಯಗಳ ಫಲಕಗಳನ್ನು ಸಿದ್ದಪಡಿಸಿಕೊಂಡು ಜಾಥಾದಲ್ಲಿ ಭಾಗವಹಿಸಲು ಮತ್ತು ವಿಶೇಷ ವೇಷಭೂಷಣದಲ್ಲಿಯು ವಿದ್ಯಾಥಿಗಳು ಭಾಗವಹಿಸಬಹುದಾಗಿದೆ ಎಂದರು.

ಜಾಥಾ ಮಾರ್ಗ: ಗುಂಡಿ ವೃತ್ತದಿಂದ ವಿದ್ಯಾರ್ಥಿಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪಾಲಿಕೆ ಮುಂಭಾಗದಿಂದ ಎವಿಕೆ ಕಾಲೇಜು ರಸ್ತೆ ಮೂಲಕ ಮೋತಿ ವೀರಪ್ಪ ಕಾಲೇಜಿನ ವರೆಗೆ ಆಗಮಿಸಿ ಮುಕ್ತಾಯವಾಗಲಿದೆ. ಆಯಾ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಹೋಗುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಈ ವೇಳೆ ದೂಡಾ ಆಯುಕ್ತ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಹುಲಿಮನಿ ತಿಮ್ಮಣ್ಣ, ಸಹಕಾರ ಸಂಘಗಳ ಉಪನಿಬಂಧಕ ಮಧು ಶ್ರೀನಿವಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಯುವ ಪ್ರಶಸ್ತಿ ಪುರಸ್ಕೃತ ಮಾಗನಹಳ್ಳಿ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.

Leave a Reply