ದಾವಣಗೆರೆ ರಾಜ್ಯಮಟ್ಟದ ಯುವಜನೋತ್ಸಕ್ಕೆ ತೆರೆ

1 year ago

ದಾವಣಗೆರೆ: ಎರಡು ದಿನಗಳ ಕಾಲ ದಾವಣಗೆರೆ ನಗರದಲ್ಲಿ ಯುವ ಜನರ ಕಲರವಕ್ಕೆ ಸಾಕ್ಷಿಯಾಗಿದ್ದ ರಾಜ್ಯ ಮಟ್ಟದ ಯುವನಜೋತ್ಸವಕ್ಕೆ ತೆರೆ ಬಿದ್ದಿದೆ. 2 ದಶಕಗಳ ತರುವಾಯ ದಾವಣಗೆರೆ ನಗರಕ್ಕೆ ಯುವಜನೋತ್ಸವ ಏರ್ಪಡಿಸುವ ಸುವರ್ಣ ಅವಕಾಶ ಲಭಿಸಿತ್ತು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಯುವಜನೋತ್ಸವ ಆಯೋಜನೆಗೆ ಸಂಕಲ್ಪ ತೊಟ್ಟು ಕಾರ್ಯಕ್ರಮ ಸ್ಮರಣೀಯವಾಗಿಸುವಲ್ಲಿ ಯಶಸ್ವಿಯಾದರು.

ಯುವಜನೋತ್ಸವವನ್ನು ಪ್ರತಿಯೊಬ್ಬರು ಸಹ ತಮ್ಮ ಮನೆಯ ಕಾರ್ಯಕ್ರಮ ಎನುವಂತೆ ಭಾವಿಸಿ, ಸೀಮಿತ ಆರ್ಥಿಕ ಸಂಪನ್ಮೂಲ ಹಾಗೂ ಅನುದಾನದ ನಡುವೆಯೂ ವಿಜೃಂಭಣೆಯಿಂದ ನಡೆಯಲು ಕಾರಣಕರ್ತರಾಗಿದ್ದಾರೆ. ವೇದಿಕೆ, ಊಟ, ವಸತಿ ಹಾಗೂ ಆತಿಥ್ಯಕ್ಕೆ ಎಲ್ಲಿಯೂ ಚ್ಯುತಿ ಬರದ ಹಾಗೆ ಕಾರ್ಯ ನಿರ್ವಹಿಸಿದ್ದಾರೆ. ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿ ಅಧಿಕಾರ ಹಾಗೂ ಕಾರ್ಯನಿರ್ವಹಣೆ ಹೊಣೆ ಒದಗಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಈ ಹಿಂದೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾಗಿ ಎರಡು ದಶಕಗಳ ಹಿಂದೆ ದಾವಣಗೆರೆ ನಗರಿಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಆಯೋಜಿಸಿದ್ದರು. ಮತ್ತೊಮ್ಮೆ ದಾವಣಗೆರೆ ನಗರಕ್ಕೆ ಯುವಜನೋತ್ಸವ ಆಯೋಜಿಸುವ ಅವಕಾಶ ಒದಗಿ ಬಂದಿದೆ ಎಂದು ತಿಳಿದ ತಕ್ಷಣ ಅವರೊಳಗಿನ ಯುವ ಮನಸ್ಸು ರೋಮಾಂಚನಗೊಂಡಿತ್ತು. ಇವರಿಗೆ ಸಾಥಿಯಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ಯುವಜನೋತ್ಸವ ಆಯೋಜನೆಯ ಹೊಣೆ ಹೊತ್ತರು.

ಇವರ ಆಶಯಕ್ಕೆ ಜೊತೆಯಾಗಿ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜನಪ್ರತಿನಿಧಿಗಳು ಒತ್ತಾಸೆಯಾದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್.ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ರಾಜ್ಯ ಮಟ್ಟದ ಯುವಜನೋತ್ಸವ ಆಯೋಜನೆಗೆ ಸರ್ಕಾರದ ಎಲ್ಲ ನೆರವಿನ ಹಸ್ತ ಚಾಚಿದರು.

ಯುವಜನೋತ್ಸವ ಆಯೋಜನೆಯ ಕ್ರಿಯಾಶಕ್ತಿಯಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಹಗಲಿರುಳು ಕಾರ್ಯನಿರ್ವಹಿಸಿದರು. ನಾವಿಕನಾಗಿ ಪ್ರತಿಯೊಂದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮೂಡಿಬರಲು ಕಾರಣರಾದರು. ಇವರೊಂದಿಗೆ ಜಿ.ಪಂ.ಸಿಇಓ ಡಾ.ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಸಹ ಶ್ರಮಿಸಿದರು. ಇದರೊಂದಿಗೆ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸಹ ಪ್ರಾಮಾಣಿಕವಾಗಿ ಯುವಜನೋತ್ಸವ ಯಶಸ್ವಿಗೆ ದುಡಿದಿದರು.

ನಗರದ ಬಾಪೂಜಿ ಬಾಪೂಜಿ ಎ.ಬಿ.ಎ ಮೈದಾನದಲ್ಲಿ ಆಯೋಜಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ಧರಾಮಯ್ಯನವರು ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿದರು. ನಂತರ 7 ಸಮಾನಂತರ ವೇದಿಕೆಯಲ್ಲಿ ರಾಜ್ಯದ ಬೀದರ್ ನಿಂದ ಚಾಮರಾಜನಗರ, ಉಡುಪಿಯಿಂದ ಕೋಲಾರದವರೆಗಿನ 31 ಜಿಲ್ಲೆಗಳಿಂದ ಆಗಮಿಸಿದ ಯುವ ಪ್ರತಿಭೆಗಳು ತಮ್ಮ ಕಲೆಗಳನ್ನು ಅನಾವರಣಗೊಳಿಸಿದರು. ಘೋಷಣಾ ಸ್ಪರ್ಧೆ, ಕವನ ರಚನೆ, ಚಿತ್ರಕಲೆ, ಕಥೆ ಬರವಣಿಗೆ, ವಿಜ್ಞಾನ ಮೇಳ, ಜನಪದ ಗೀತೆ ಹಾಗೂ ಜನಪದ ನೃತ್ಯ ಪ್ರಕಾರಗಳ ಸ್ಪರ್ಧೆಗಳು ನಡೆದವು. ಇಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದ ಯುವಜನೊತ್ಸವದಲ್ಲಿ ಪಾಲ್ಗೊಳ್ಳುವರು. 

ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ಆಯೋಜಿಸಿದ್ದ ವಾಕಥಾನ್ ಹಾಗೂ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ (ಹಾಯಿದೋಣಿ) ಕ್ರೀಡೆಗಳು ನಗರದ ಜನತೆ ವಿನೂತನ ಅನುಭವ ನೀಡಿದವು. ಮಣಿಕಾಂತ್ ಕದ್ರಿ ಸಂಗೀತ ಸಂಜೆ ಕಾರ್ಯಕ್ರಮ ಜನರ ಮನರಂಜಿಸಿತು. ಯುವಜನೋತ್ಸವದಲ್ಲಿ ಆಗಮಿಸಿದ ಸ್ಪರ್ಧಿಗಳು ಹಾಗೂ ಗಣ್ಯ ಮಾನ್ಯರು ದಾವಣಗೆರೆ ನಗರದ ಅತಿಥ್ಯಕ್ಕೆ ಮನಸೋತರು. ಸಾರಿಗೆ, ವಸತಿ, ಊಟ ಎಲ್ಲದರಲ್ಲೂ ಅಚ್ಚುಕಟ್ಟುತನ ಕಂಡುಬಂದಿತು. ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮ ಭದ್ರತೆಗಾಗಿ 1500 ಪೊಲೀಸರನ್ನು ನೇಮಿಸಲಾಗಿತ್ತು.

Leave a Reply