ಜನವರಿ 5, 6 ರಂದು ಎಂಬಿಎ ಮೈದಾನದಲ್ಲಿ ವೈವಿಧ್ಯಮಯ ರಾಜ್ಯ ಮಟ್ಟದ ಯುವಜನೋತ್ಸವ
ದಾವಣಗೆರೆ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜನವರಿ 5 ಮತ್ತು 6 ರಂದು ನಗರದ ಬಾಪೂಜಿ ಎಂಬಿಎ ಮೈದಾನದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ಶುಕ್ರವಾರ ಗುಂಡಿ ವೃತ್ತದಿಂದ ಸಾವಿರಾರು ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಜಾಥಾ ಕಾರ್ಯಕ್ರಮ ನಡೆಯಿತು.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಣಾಧಿಕಾರಿ ಡಾ.ಸುರೇಶ್ ಬಿ ಇಟ್ನಾಳ್ ಮೋತಿ ವೀರಪ್ಪ ಕಾಲೇಜು ಮುಂಭಾಗದ ಗುಂಡಿ ವೃತ್ತದಲ್ಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿ ದಾವಣಗೆರೆ ನಗರ ಹಾಗೂ ಜಿಲ್ಲೆಯ ಯುವಕ-ಯುವತಿಯರು ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾನಪದ ನೃತ್ಯ, ಜಾನಪದ ಗೀತೆ, ವಿಜ್ಞಾನ ವಸ್ತುಪ್ರದರ್ಶನ, ಕವನ ರಚನೆ, ಕಥೆ ಬರೆಯುವುದು, ಚಿತ್ರಕಲೆ, ಘೋಷಣ ಸ್ಪರ್ಧೆಗಳ ಜೊತೆಗೆ ಸಂಜೆ ನಡೆಯುವ ಮಣಿಕಾಂತ್ ಕದ್ರಿಯವರ ಸಂಗೀತ ಕಾರ್ಯಕ್ರಮ ವೀಕ್ಷಣೆ ಮಾಡುವ ಮೂಲಕ ಸದುಪಯೋಗ ಮಾಡಿಕೊಳ್ಳಲು ಕರೆ ನೀಡಿದರು.
ಜಾಥಾದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿವಿಧ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ನೀರನ್ನು ಉಳಿಸಿ ಭೂಮಿಯನ್ನು ರಕ್ಷಿಸಿ, ‘ಸ್ವಚ್ಚ ಮತ್ತು ಹಸಿರು ಅದು ನಮ್ಮ ಕನಸು’ ಮತ್ತು ‘ಉಸಿರಾಡಲು ಪ್ರೀತಿಸಿ, ಮರಗಳನ್ನು ಉಳಿಸಿ’ ‘ಮಾಲಿನ್ಯವನ್ನು ಉಳಿಸಿ, ಬದುಕಲು ಪ್ರಾರಂಭಿಸಿ’ ವಿದ್ಯಾರ್ಥಿನಿಯರು ‘ಹಣದಾಸೆಗೆ ಬಳಿಯಾಗದೆ ಯೋಚಿಸಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಿ’ ಎಂದು ಕೂಗುತ್ತಾ ಸಾಗಿದರು.
ಕಾಲ್ನಡಿಗೆ ಜಾಥಾದಲ್ಲಿ ಅತ್ಯುತ್ತಮವಾಗಿ ಸಂಘಟಿಸಿದ ಉತ್ತಮ ತಂಡಕ್ಕೆ ಅಭಿನಂದನಾ ಪತ್ರವನ್ನು ಶಾಸಕ ಬಿ.ಪಿ ಹರೀಶ್ ವಿತರಿಸಿ, ಯುವಕರು ಯುವಜನೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅದರ ಅನುಕೂಲತೆಗಳ ಬಗ್ಗೆ ತಿಳಿದುಕೊಂಡು ದೇಶದ ಪ್ರಗತಿಗೆ ಪೂರಕವಾಗಿ ಶ್ರಮಿಸಬೇಕು ಎಂದರು.
ಪೊಲೀಸ್ ತಂಡದ ಎಲ್ಲಾ ಸಿಬ್ಬಂದಿ ಕಾಲ್ನಡಿಗೆಯಲ್ಲಿ ತಮ್ಮ ಶಿಸ್ತಿನ ಸಿಪಾಯಿಗಳಂತೆ ನಡೆದುಕೊಂಡು ರಸ್ತೆ ಸುರಕ್ಷತೆಯ ಅರಿವು ಮೂಡಿಸಿದರು. ಜಾಥಾ ಗುಂಡಿ ವೃತ್ತದಿಂದ ವಿದ್ಯಾರ್ಥಿಭವನ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಮಹಾನಗರಪಾಲಿಕೆ ಮುಂಭಾಗದಿಂದ ಎವಿಕೆ ರಸ್ತೆಯ ಮೂಲಕ ಮೋತಿ ವೀರಪ್ಪ ಕಾಲೇಜಿನ ಆವರಣ ತಲುಪಿತು. ಜಾಥಾದಲ್ಲಿ 75 ವರ್ಷದ ಹಿರಿಯ ವ್ಯಕ್ತಿ ನಾಗರಾಜ್ ಭಾಗವಹಿಸಿ ಎಲ್ಲಾರ ಮೆಚ್ಚುಗೆಗೆ ಪಾತ್ರರಾದರು.
ಕಾಲ್ನಡಿಗೆ ಜಾಥಾದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಸಿಪಿಓ ಮಲ್ಲಾನಾಯ್ಕ್, ಡಿಡಿಪಿಯು ಕರಿಸಿದ್ದಪ್ಪ, ಡಿಡಿಪಿಐ ಕೊಟ್ರೇಶ್, ಡಿಆರ್ಸಿಎಸ್ ಮಧುಶ್ರೀನಿವಾಸ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ, ಯುವ ಪ್ರಶಸ್ತಿ ಪುರಸ್ಕೃತ ಮಾಗಾನಹಳ್ಳಿ ಮಂಜುನಾಥ್ ಮತ್ತು ನಗರದ ಪದವಿಪೂರ್ವ, ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರಿ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.




