ಖಾಸಗಿ ಲಾಬಿಗಳಿಂದ ಸರಕಾರಿ ಆಸ್ಪತ್ರೆಗಳನ್ನು ಉಳಿಸಲು ಜನತೆ ಬೀದಿಗಿಳಿಯಬೇಕು : ಡಾ.ಕೃಷ್ಣಪ್ಪ ಕೊಂಚಾಡಿ

2 months ago

ಬೋಂದೆಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಸಿಪಿಐಎಂ ನಿಂದ ಬೃಹತ್ ಮಾನವ ಸರಪಳಿ

ಮಂಗಳೂರು: ಕಾರ್ಪೊರೇಟ್ ಕುಳಗಳು ಆರೋಗ್ಯ ರಂಗಕ್ಕೆ ಪ್ರವೇಶ ಪಡೆದ ತರುವಾಯ ಜನ ಸಾಮಾನ್ಯರಿಗೆ ಅಗತ್ಯ ಚಿಕಿತ್ಸೆಗಳು ಕೈಗೆಟುಕದಷ್ಟು ದುಬಾರಿಯಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಹೇಳಿದರು.

ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು, ಸರಕಾರಿ ಆಸ್ಪತ್ರೆ ಗಳನ್ನು ಬಲಪಡಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಸಿಪಿಐಎಂ ಮಂಗಳೂರು ಉತ್ತರ ಸಮಿತಿ ನಡೆಸಿದ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಗಳಿಗೆ ಪೂರಕವಾಗಿರುವ ಸರಕಾರಗಳು ಈಗ ಸರಕಾರಿ ಆರೋಗ್ಯ ಸೇವೆಗಳನ್ನು ದುರ್ಬಲಗೊಳಿಸುವ, ಪಿಪಿಪಿ ಮಾದರಿಯನ್ನು ಸರಕಾರಿ ಆರೋಗ್ಯ ಸೇವೆಗಳಿಗೆ ಅನ್ವಯಿಸುವ ಅಪಾಯಕಾರಿ ನಡೆಗಳನ್ನು ಪ್ರದರ್ಶಿಸುತ್ತಿದೆ. ಅದರ ಭಾಗವಾಗಿಯೆ ದಕ್ಷಿಣ ಕನ್ನಡ‌ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಧಾರೆಯೆರೆದು ಕೊಡುವ ಆದೇಶ ಹೊರಡಿಸಿದೆ. ಇದರಿಂದಾಗಿ ರೋಗಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವ ಹಕ್ಕಿನಿಂದ ಜನಸಾಮಾನ್ಯರು ಮತ್ತಷ್ಟು ವಂಚಿತರಾಗಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಲಾಬಿಗಳಿಂದ  ಉಳಿಸಲು ಜನತೆ ಬೀದಿಗಿಳಿದು ಹೋರಾಟ ನಡೆಸಬೇಕಿದೆ. ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಸರಕಾರದ ಆದೇಶ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಸಚಿವ ಯು ಟಿ ಖಾದರ್ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಕ್ತಾರರಂತೆ ಮಾತನಾಡುತ್ತಿದ್ದಾರೆ: ಮುನೀರ್ ಕಾಟಿಪಳ್ಳ ಆರೋಪ

ಅನಂತರ ಮಾತನಾಡಿದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಆರೋಗ್ಯ ಸಚಿವ ಯು  ಟಿ ಖಾದರ್ ಅವರು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಕ್ತಾರರಂತೆ ಮಾತನಾಡುತ್ತಿದ್ದಾರೆ.   ಖಾಸಗಿ ಮೆಡಿಕಲ್ ಕಾಲೇಜುಗಳ ಮುಂದೆ ಸರಕಾರಿ ಆಸ್ಪತ್ರೆಗಳನ್ನು ಕುಬ್ಜಗೊಳಿಸಿ, ತನ್ನದೇ ಅರೋಗ್ಯ ಇಲಾಖೆಯನ್ನು ಗೌಣಗೊಳಿಸಿ ಹಗುರವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಚಿವ ಖಾದರ್ ಅವರಿಗೆ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳ ಮೇಲಿರುವ ಕಾಳಜಿ ಸರಕಾರಿ ಆಸ್ಪತ್ರೆಗಳ ಮೇಲಿಲ್ಲ ಎಂದು ಆರೋಪಿಸಿದರು.

ಕಾರ್ಯಕರ್ತರು ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿದರು, ಸರಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಕೈ ಬಿಡುವಂತೆ ಘೋಷಣೆ ಕೂಗಿದರು.

ಸಿಪಿಐಎಂ ಮಂಗಳೂರು ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐಎಂ ಉತ್ತರ ಸಮಿತಿಯ ಪ್ರಮುಖರಾದ ರವಿಚಂದ್ರ ಕೊಂಚಾಡಿ, ಶ್ರೀನಾಥ್ ಕುಲಾಲ್, ಕೃಷ್ಣ ತಣ್ಣೀರು ಬಾವಿ, ನ್ಯಾಯವಾದಿ ಸುನಂದ ಕೊಂಚಾಡಿ, ನೌಷದ್ ಬಾವು ಪಂಜಿಮೊಗರು, ನಿತಿನ್ ಬಂಗೇರ, ಮುಸ್ತಫಾ ಪಂಜಿಮೊಗರು, ಅಶೋಕ್ ಶ್ರೀಯಾನ್, ಶಶಿ ಗುಂಡಳಿಕೆ, ಶಶಿಧರ ಶಕ್ತಿನಗರ, ಪ್ರವೀಣ್ ಕೊಂಚಾಡಿ, ಆಶಾ ಬೋಳೂರು ಮಾನವ ಸರಪಳಿಯ ನೇತೃತ್ವವನ್ನು ವಹಿಸಿದ್ದರು.

Leave a Reply