ಖಾಸಗಿ ವ್ಯಾಮೋಹ ಬಿಡಿ, ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಿರಿ

10 months ago

ವಿದ್ಯಾರ್ಥಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಕರೆ

ಜಕ್ಕೂರಿನಲ್ಲಿ ನೂತನ ಪದವಿ ಕಾಲೇಜಿಗೆ ಶಂಕುಸ್ಥಾಪನೆ

4 ಕೋಟಿ ವೆಚ್ಚದಲ್ಲಿ ಈಗಾಗಲೇ ಕಟ್ಟಡ ಕೆಲಸ ಆರಂಭ

ಸುಸಜ್ಜಿತ ಕಟ್ಟಡಕ್ಕೆ 10 ಕೋಟಿ ವೆಚ್ಚವಾಗುವ ಸಾಧ್ಯತೆ

ಬ್ಯಾಟರಾಯನಪುರದ ತಾತ್ಕಾಲಿಕ ಕಟ್ಟಡದಲ್ಲಿ ತರಗತಿ ಆರಂಭ

ಬೆಂಗಳೂರು: ಖಾಸಗಿ ಕಾಲೇಜುಗಳಿಗಿಂತಲೂ ಸರ್ಕಾರಿ ಕಾಲೇಜುಗಳಲ್ಲಿ ಅತ್ಯುತ್ತಮ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನುರಿತ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಕರೆ ನೀಡಿದರು.

ಜಕ್ಕೂರು ಶಾಲೆ ಆವರಣದಲ್ಲಿ ನೂತನ ಪದವಿ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ಕೊನೆಯವರೆಗೂ ನಮ್ಮನ್ನು ಕಾಪಾಡುವ ಏಕೈಕ ಆಸ್ತಿ, ಪ್ರತಿಯೊಬ್ಬರ ಯಶಸ್ಸಿನ ಸೂತ್ರ ಶಿಕ್ಷಣ ಮಾತ್ರ. ಹೀಗಾಗಿಯೇ ಸಮಾಜದ ಎಲ್ಲರಿಗೂ ಶಿಕ್ಷಣ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬ್ಯಾಟರಾಯನಪುರ ಕ್ಷೇತ್ರದಾದ್ಯಂತ ಹಲವು ನೂತನ ಸರ್ಕಾರಿ ಶಾಲಾ ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ಈ ಭಾಗದ ಜನ ಖಾಸಗಿ ಶಾಲಾ-ಕಾಲೇಜುಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಬೇಕು ಎಂದರು.

ಪದವಿ ಕಾಲೇಜುಗಳು ಸಾಮಾನ್ಯವಾಗಿ ತಾಲೂಕು ಕೇಂದ್ರದಲ್ಲಿ ಇರುತ್ತವೆ. ಈ ಭಾಗದ ತಾಲೂಕು ಕೇಂದ್ರ ಯಲಹಂಕ. ಹೀಗಾಗಿ ಈ ಭಾಗದಲ್ಲಿ ಪದವಿ ಕಾಲೇಜು ನಿರ್ಮಾಣ ಅಸಾಧ್ಯವಾಗಿತ್ತು. ಆದರೆ, ಇಲ್ಲಿ ತಾಲೂಕು ಕೇಂದ್ರಕ್ಕಿಂತ ಅಧಿಕ ಜನ ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ವರ್ಗದ ಜನಸಾಮಾನ್ಯರಿದ್ದಾರೆ. ಇವರಿಗೆ ಖಾಸಗಿ ಕಾಲೇಜು ದುಬಾರಿ. ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಜಕ್ಕೂರು ಭಾಗಕ್ಕೆ ಪದವಿ ಕಾಲೇಜು ತರಬೇಕು ಎಂಬ ಪ್ರಯತ್ನ ನಡೆದಿತ್ತು. ಈ ಪ್ರಯತ್ನ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ್ ಅವರಿಂದ ಸಾಕಾರವಾಗಿದೆ ಎಂದರು.

ಕಳೆದ ವರ್ಷವೇ ಪದವಿ ಕಾಲೇಜು ಆರಂಭಿಸಲಾಗಿದೆ. ಬ್ಯಾಟರಾಯನಪುರ ಶಾಲೆಯ ನೂತನ ಕಟ್ಟದಲ್ಲಿ ಪದವಿ ತರಗತಿಗಳನ್ನು ನಡೆಸಲಾಗುತ್ತಿದೆ. 56 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆ ಶಾಲೆಯಲ್ಲಿ ಈಗಾಗಲೇ ಕಂಪ್ಯೂಟರ್ ಲ್ಯಾಬ್ ತೆರೆಯಲಾಗಿದ್ದು, 4 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದ ಅಡಿಪಾಯಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ಈ ಕಟ್ಟಡದಲ್ಲಿ ಕನಿಷ್ಠ 50 ಕೊಠಡಿಗಳು, ಲ್ಯಾಬ್ ಸೇರಿದಂತೆ  400 ಆಸನ ಸಾಮರ್ಥ್ಯದ ಆಡಿಟೋರಿಯಮ್ ನಿರ್ಮಿಸುವ ಉದ್ದೇಶ ಇದ್ದು, ಇನ್ನೂ 10 ಕೋಟಿ ಗೂ ಅಧಿಕ ಹಣದ ಅಗತ್ಯವಿದೆ. ಮುಂದಿನ ವರ್ಷ ಶಿಕ್ಷಣ ಇಲಾಖೆ ಹಾಗೂ ಬಿಬಿಎಂಪಿ ಅನುದಾನದ ಮೂಲಕ ಈ ಕಾಲೇಜನ್ನು ಸುಸಜ್ಜಿತವಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರತಿಷ್ಠೆಗಾಗಿ ಅಥವಾ ಘೋಷಣೆಗಾಗಿ ಈ ನೂತನ ಕಾಲೇಜನ್ನು ನಿರ್ಮಿಸಿಲ್ಲ. ಎಲ್ಲಾ ಮಕ್ಕಳೂ ಖಾಸಗಿ ಕಾಲೇಜಿಗೆ ಹೋಗಲು ಸಾಧ್ಯವಿಲ್ಲ. ಬಡ ಮಕ್ಕಳೂ ಸೇರಿದಂತೆ ನಮ್ಮ ಸಮಾಜದ ಎಲ್ಲರೂ ಪದವಿ ಶಿಕ್ಷಣ ಪಡೆಯಬೇಕು. ಎಲ್ಲಾ ಕುಟುಂಬದಲ್ಲೂ ಕನಿಷ್ಟ ಓರ್ವ ವ್ಯಕ್ತಿಯಾದರೂ ಪದವಿ ಶಿಕ್ಷಣ ಪಡೆಯುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ನೂತನ ಪದವಿ ಕಾಲೇಜಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಭಾಗದ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನರೂ ಇದರ ಉಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಖಾಸಗಿ ಶಾಲಾ-ಕಾಲೇಜುಗಳೂ ನಾಚುವಂತೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳೂ ಅತ್ಯತ್ತಮ ಗುಣಮಟ್ಟದ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳನ್ನು ಹೊಂದಿವೆ. ನುರಿತ ಶಿಕ್ಷಕರಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಿಗಾಗಿ ವಿಶಾಲವಾದ ಆಟದ ಮೈದಾನವನ್ನೂ ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಖಾಸಗಿ ಶಾಲಾ ಕಾಲೇಜುಗಳಲ್ಲಿ ಇಷ್ಟೊಂದು ಸುಸಜ್ಜಿತ ಆಟದ ಮೈದಾನಗಳೇ ಇಲ್ಲ. ಹೀಗಾಗಿ ಈ ಭಾಗದ ಜನ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಸರ್ಕಾರಿ ಶಾಲಾ ಕಾಲೇಜುಗಳಲ್ಲೇ ಶಿಕ್ಷಣ ಪಡೆಯಬೇಕು ಎಂದರು.

Leave a Reply