ಕಾಲ್ತುಳಿತ ಪ್ರಕರಣ ಘಟನಾವಳಿ ನೆನೆಸಿಕೊಂಡು ಕಣ್ಣೀರು ಹಾಕಿದ ಡಿ ಕೆ ಶಿವಕುಮಾರ್

11 months ago

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಯ ಹೊಣೆಗಾರಿಕೆಯನ್ನು ಸರ್ಕಾರವೇ ಹೊರಲಿದೆ ಎಂದು ಹೇಳಿದ ಡಿಸಿಎಂ ಡಿ ಕೆ ಶಿವಕುಮಾರ್ ಘಟನಾವಳಿ ನೆನೆಸಿಕೊಂಡು ಕಣ್ಣೀರು ಹಾಕಿದ್ದಾರೆ.

ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ನಾವು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ದುರ್ಘಟನೆಯಿಂದ ಜೀವಹಾನಿಯಾಗಿದೆ. ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಘನತೆಗೆ ಧಕ್ಕೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ಲೋಪದೋಷ ಸರಿಪಡಿಸಲಾಗುವುದುಇದರಿಂದ ನಾವು ಪಾಠವನ್ನು ಕಲಿಯಬೇಕಿದೆ ಎಂದರು.

ಈ ದುರ್ಘಟನೆ ನಡೆದಿರುವುದು ನಮ್ಮ ಕುಟುಂಬದಲ್ಲೇ ಎಂದು ಭಾವಿಸಿದ್ದೇವೆ. ದುರ್ಘಟನೆಯಲ್ಲಿ ಮೃತಪಟ್ಟವರು ನಮ್ಮ ಮನೆಯವರೇ ಮೃತಪಟ್ಟಿದ್ದಾರೆ ಎಂಬ ನೋವು ರಾಜ್ಯದಲ್ಲಿ ತುಂಬಿದೆ. ಈ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸತ್ತವರು ನಮ್ಮ ಕುಟುಂಬದ ಸದಸ್ಯರು. ಈ ಪರಿಸ್ಥಿತಿಯಲ್ಲಿ ನಾವು ಸಂತಾಪ ಸೂಚಿಸಬೇಕು. ರಾಜಕೀಯ ಮಾಡಬಾರದು ಎಂದು ವಿನಂತಿಸಿದರು.

ಕಾಲ್ತುಳಿತ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ನಿಮ್ಮ ಕೈ ಕೆಳಗೆ ಕೆಲಸ ಮಾಡುವ, ನಿಮಗೆ ರಿಪೋರ್ಟ್ ಮಾಡಿಕೊಳ್ಳುವ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಏನು ಗುಡ್ಡೆ ಹಾಕುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

ಪ್ರಕರಣದ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿರುವ ಅವರು ಕಾರ್ಯಕ್ರಮದ ಬಗ್ಗೆ ಯೋಚನೆ ಮಾಡಿ, ಅದರ ರೂಪುರೇಷೆ ನಿರ್ಧರಿಸಿ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾದ ಜಿಲ್ಲಾಧಿಕಾರಿಗಳೇ ಸರ್ಕಾರದ ತಪ್ಪುಗಳು, ಲೋಪದೋಷಗಳು, ಎಡವಟ್ಟುಗಳು ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಮಾಡಿ ವರದಿ ನೀಡುತ್ತಾರೆ ಅಂದರೆ ಅದನ್ನು ನಂಬಲು ಸಾಧ್ಯವೇ ಎಂದಿದ್ದಾರೆ 

ಜನಸಾಮಾನ್ಯರಿಗೆ ವಂಚನೆ ಮಾಡಿ ಹೆಣಗಳನ್ನ ಉರುಳಿಸಿದ್ದಾಯ್ತು, ಈಗ ನಿಮಗೆ ನೀವೇ ಆತ್ಮ ವಂಚನೆ ಮಾಡಿಕೊಂಡು ಇನ್ನೊಂದು ಪಾಪ ಯಾಕೆ ಕಟ್ಟಿಕೊಳ್ಳುತ್ತೀರಿ?ನ್ಯಾಯಾಂಗ ತನಿಖೆಯಿಂದ ಮಾತ್ರ ಅಮಾಯಕ ಜೀವಗಳಿಗೆ, ಅವರ ಹೆತ್ತವರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾವಿನಲ್ಲೂ ನಿಮ್ಮ ಸಣ್ಣತನ ಪ್ರದರ್ಶನ ಮಾಡುವ ದುಸ್ಸಾಹಸ ಮಾಡಬೇಡಿ ಎಂದಿದ್ದಾರೆ.

Leave a Reply