ಅನಾಥರಿಗೆ ಆಸರೆಯಾದ ಗುರುವಾಯೂರು ಕೃಷ್ಣನೂ ಮತ್ತು ಅನಾಥರ ಮತ ಬಯಸುವ  ಅಯೋಧ್ಯೆಯ ರಾಮನೂ

2 years ago

ನಾನು ಅಥವಾ ನನ್ನ ಸಮಾನ ಮನಸ್ಕ ಮಿತ್ರರಾಗಲಿ ರಾಮನ ಶತೃಗಳಲ್ಲ. ನಮಗೆ ದೇವರ ಬಗ್ಗೆ ದ್ವೇಷವೂ ಇಲ್ಲ, ಪ್ರೀತಿಯೂ ಇಲ್ಲ. ಬಹುತ್ವದ ಭಾರತದಲ್ಲಿ ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿ ಆಡಳಿತ ನಡೆಸುವವರ ಬಗ್ಗೆ ಅವರ ಧರ್ಮಾಧಾರಿತ ಚಟುವಟಿಕೆಗಳ ಬಗ್ಗೆ ನಮ್ಮ ಆಕ್ರೋಶವಿದೆ. ಈ ವಿಚಾರವಾಗಿ ಜನಸಾಮಾನ್ಯರನ್ನು ಎಚ್ಚರಿಸಬೇಕಾದ ಮಾಧ್ಯಮಗಳು  ಉಳ್ಳವರ ಬೂಟು ನೆಕ್ಕುವುದು ಪತ್ರಿಕೋದ್ಯಮ ಎಂದು ಭಾವಿಸಿರುವ ಬಗ್ಗೆ ಜಿಗುಪ್ಸೆ ಮತ್ತು ಅಸಹ್ಯ ಮೂಡಿಸಿದೆ. ಈ ಸಂದರ್ಭದಲ್ಲಿ ನಮಗೆ ನೆನಪಾಗುವುದು ಇಂದಿಗೆ 24 ವರ್ಷಗಳ ಹಿಂದೆ ತೀರಿ ಹೋದ ಪಿ.ಲಂಕೇಶರು ಮಾತ್ರ.

ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಮೆ ಪ್ರತಿಷ್ಠಾಪನೆಯಾದ ನಂತರ ಅಲ್ಲಿನ  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದೇಶವನ್ನು ತೇತ್ರಾಯುಗಕ್ಕೆ ಕೊಂಡೊಯ್ಯುವ ಮಾತನಾಡಿದ್ದಾನೆ. ಅದಕ್ಕೆ ಪೂರಕವಾಗಿ ಜಾರ್ಖಂಡ್ ರಾಜ್ಯದ ಹೈಕೋರ್ಟ್ ಇಂದು  ಮನುಸ್ಮೃತಿಯನ್ನು ಉಲ್ಲೇಖಿಸಿ, ಪತ್ನಿಗೆ ಜೀವನಾಂಶ ನೀಡುವುದನ್ನು ನಿರಾಕರಿಸಿದೆ. ಹಾಗಾದರೆ, ಈಗ ಭಾರತದಲ್ಲಿ ಅಸ್ತಿತ್ವದಲ್ಲಿ ಇರುವುದು ಸಂವಿಧಾನವೋ? ಅಥವಾ  ಮನುಸ್ಮೃತಿಯೋ? ಈ ಬಗ್ಗೆ  ಮಾಧ್ಯಮಗಳು  ತುಟಿಬಿಚ್ಚಿ ಮಾತನಾಡಬೇಕಿದೆ.

ಅಯೋಧ್ಯೆಯಲ್ಲಿ ಅಲ್ಲಿನ  ರಾಮ ದೇವಾಲಯದ ಟ್ರಸ್ಟ್ ಮಾಡಬೇಕಾದ ದೇಗುಲ ನಿರ್ಮಾಣ ಮತ್ತು ಮೂರ್ತಿ ಪ್ರತಿಷ್ಠಾಪನೆಯ ಕಾರ್ಯವನ್ನು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ಸರ್ಕಾರಗಳೆರಡೂ ಅಷ್ಟು ಮುತುವರ್ಜಿ ವಹಿಸಿ ಮಾಡಿದ ಹಿನ್ನೆಲೆಯನ್ನು ಗಮನಿಸಿದರೆ, ಭಾರತದಲ್ಲಿ ಅಸ್ತಿತ್ವದಲ್ಲಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಾ? ಅಥವಾ ಸರ್ವಾಧಿಕಾರಿ ವ್ಯವಸ್ಥೆಯ ಆಡಳಿತವಾ? ಈ ಕುರಿತು  ತಮ್ಮ ನವರಂಧ್ರಗಳನ್ನು ತೆರೆದು ಪತ್ರಕರ್ತರು ಮಾತನಾಡಬೇಕಿದೆ. 

ಹೊಸ ಸಂಸತ್ ಭವನದ ಉಧ್ಘಾಟನೆಗೆ ರಾಷ್ಟ್ರದ ಪ್ರಥಮ ಪ್ರಜೆ ಎನಿಸಿಕೊಂಡ ರಾಷ್ಟ್ರಪತಿಯನ್ನು ಏಕೆ ಆಹ್ವಾನಿಸಲಿಲ್ಲ?  ಸರ್ಕಾರದ ಕಟ್ಟಡವನ್ನು ಉದ್ಘಾಟನೆಗೆ ಹೋಮ, ಪೂಜೆಯ ಅವಶ್ಯಕತೆ ಇತ್ತೆ?  ಪ್ರಧಾನಿ ಹುದ್ದೆಗೆ ಏರಿದ ವ್ಯಕ್ತಿಗೆ ನಾನು ಈ ದೇಶದ ಸಕಲ ಸಮುದಾಯವನ್ನು ಪ್ರತಿನಿಧಿಸುವ ಹುದ್ದೆಯಲ್ಲಿ ಇದ್ದೀನಿ ಎಂಬ ಜ್ಞಾನವಿದ್ದರೆ, ಕನಿಷ್ಠ ಸರ್ವ ಧರ್ಮಗಳ ಗುರುಗಳನ್ನು ಆಹ್ವಾನಿಸುವ  ಪ್ರಜ್ಞೆ ಇರುತ್ತಿತ್ತು.

ಇಂತಹ ಧಾರುಣ ಸ್ಥಿತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಮತ ಕೇಳುವ ರಾಮ  ಅತ್ತ  ಅಯೋಧ್ಯೆಯಲ್ಲಿ ಕ್ರಿಯಾಶೀಲವಾಗಿದ್ದರೆ, ಇತ್ತ ಕೇರಳದ ಗುರುವಾಯೂರಿನ ಕೃಷ್ಣನು ನೂರಾರು ಅನಾಥ ವೃದ್ಧರಿಗೆ ಆಸರೆಯಾಗಿದ್ದಾನೆ.

ಹೆತ್ತ ಮಕ್ಕಳಿಂದ ತ್ಯಜಿಸಲ್ಪಟ್ಟ ಹಿರಿಯ ಜೀವಗಳಿಗೆ ಆಹಾರ, ಆರೋಗ್ಯ, ವಸತಿ ವ್ಯವಸ್ಥೆಯನ್ನು ಅಲ್ಲಿನ ದೇವಸ್ಥಾನದ ಮಂಡಳಿಯು ನೀಡುತ್ತಿದೆ. ಇದೇ ಸ್ಥಿತಿಯನ್ನು ಮಧುರೈ ಮೀನಾಕ್ಷಿ ದೇವಾಲಯದಲ್ಲೂ ನಾವು ನೋಡಬಹುದಾಗಿದೆ. ಬಡವರ ಈ ಭಾರತಕ್ಕೆ ಈಗ ಬೇಕಾಗಿರುವುದು ಸಾವಿರಾರು ಕೋಟಿ ರೂಪಾಯಿಗಳ ದೇವಸ್ಥಾನಗಳಲ್ಲ, ವೃದ್ಧರಿಗೆ, ನಿರಾಶ್ರಿತರಿಗೆ ಮತ್ತು ಅನಾಥರಿಗೆ ವಸತಿ ಮತ್ತು ಊಟದ ವ್ಯವಸ್ಥೆ.

ಕೋಟಿಗಟ್ಟಲೆ ಹಣ ಮತ್ತು ಕೆ.ಜಿ.ಗಟ್ಟಲೆ ಚಿನ್ನವನ್ನು ದೇಗುಲಗಳ ಹುಂಡಿಗೆ ಹಾಕುವ ಮುಠ್ಠಾಳರಿಗೆ ಕನಿಷ್ಠ ಈ ಮಾನವೀಯ ಪ್ರಜ್ಞೆಯನ್ನು ನಾವು ಅವರ ಎದೆಯೊಳಗೆ ಬಿತ್ತಬೇಕಿದೆ.

– ಜಗದೀಶ್ ಕೊಪ್ಪ ಹಿರಿಯ ಪತ್ರಕರ್ತರು

Leave a Reply