ಬಸವ ಗುರುವಿನ ಹೆಸರು l ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ-ಲೋಕಕ್ಕೆ
ಬಸವನೆ ಕರ್ತ ಸರ್ವಜ್ಞ
ಸರ್ವಜ್ಞನ ಉಕ್ತಿಯನ್ನು ದೇಶಕ್ಕೆ ಸಾರಲು ನಿರ್ಧರಿಸಿದ ಕರ್ನಾಟಕ ಸರಕಾರದ ನಿರ್ಣಯ ಸರ್ವಸಮ್ಮತ ಸರ್ವಸ್ವಾಗತ.

ಐತಿಹಾಸಿಕ ನಿರ್ಣಯ ಕೈಕೊಂಡ ಸಮಸಮಾಜದ ಸಿದ್ಧಾಂತದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಹಾಗು ಅವರ ಸಚಿವ ಸಂಪುಟದ ಸದಸ್ಯರು ಅಭಿನಂದನಾರ್ಹರು.
ಬಸವಣ್ಣನವರನ್ನು ವಿಶ್ವ ಜನಮಾನದ ಹತ್ತಿರಕ್ಕೆ ತರಲು ಎಡಬಿಡದೆ ಶ್ರಮಿಸುತ್ತಿರುವ ಮಾನ್ಯ ಸಚಿವರುಗಳಾದ ಶ್ರೀ ಎಂ. ಬಿ. ಪಾಟೀಲ, ಶ್ರೀ ಈಶ್ವರ ಖಂಡ್ರೆ, ಶ್ರೀ ಪ್ರಿಯಂಕಾ ಖರ್ಗೆ, ಶ್ರೀ ವಿನಯ ಕುಲಕರ್ಣಿ ಮತ್ತು ಸಂಪುಟದ ಏಕೈಕ ಮಹಿಳಾ ಸಚಿವೆ ಶ್ರಿಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಅಭಿನಂದಿಸಲು ಮುಂದಾದೆವು.

ಬೀದರ, ಕಲ್ಬುರ್ಗಿ, ಯಾದಗಿರಿ, ರಾಯಚೂರು, ದಾವಣಗೇರಿ, ದಾರವಾಡ, ಬೆಂಗಳೂರಿನ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಅಧ್ಯಕ್ಷರು ಮತ್ತು ಜಾ.ಲಿಂ.ಮ ಸಭೆಯ ಬೆಂಗಳೂರಿನಲ್ಲಿ ನೆಲಿಸಿರುವ ಪದಾಧಿಕಾರಿಗಳೊಂದಿಗೆ ಚಿಂತಕರು ಬರಹಗಾರರು ಜತೆಯಾದರು.
ಬೆಳ್ಳಂಬೆಳಗ್ಗೆ ಒಂಬತ್ತು ಘಂಟೆಗೆ ಮಾನ್ಯ ಶಾಸಕ ಮಾಜಿ ಸಚಿವ ಶ್ರೀ ವಿನಯ ಕುಲಕರ್ಣಿಯವರನ್ನು ಕಂಡೆವು. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೊಸ್ಕರ ಅವರು ಮಾಡಿದ ಹೋರಾಟಕ್ಕಾಗಿ ಅವರನ್ನು ಅಭಿನಂದಿಸಿದೆವು. ೨೦೧೮ ರಲ್ಲಿ ಜಸ್ಟಿಸ್ ನಾಗಮೋಹನದಾಸ ವರದಿಯನ್ನು ಸಚಿವ ಸಂಪುಟದ ಒಪ್ಪಿಗೆ ಪಡೆಯುವಲ್ಲಿ ಅವರ ಪಾತ್ರವನ್ನು ನೆನಪಿಸುತ್ತ ಮಾತು ಪ್ರಾರಂಭಿಸಿದೆವು.

ನಂತರ ಮಾನ್ಯ ಸಚಿವ ಶ್ರೀ ಪ್ರಿಯಂಕಾ ಖರ್ಗೆಯವರನ್ನು ಅವರನ್ನು ಕಾಣಲು ಅವರ ನಿವಾಸಕ್ಕೆ ತೆರಳಿದೆವು. ತಮ್ಮ ಎಡಬಿಡದ ಕಾರ್ಯಕ್ರಮದಲ್ಲಿಯೂ ನಮ್ಮ ತಂಡವನ್ನು ಅವರು ಆತ್ಮೀಯವಾಗಿ ಸ್ವಾಗತಿಸಿ ನಮ್ಮ ಎಲ್ಲ ಭಾವನೆಗಳಿಗೆ ಸ್ಪಂದಿಸುವ ಭರವಸೆಯನ್ನು ಇತ್ತರು.
ನಂತರ ಮಾನ್ಯ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರರವರನ್ನು ಕಂಡೆವು. ಅವರ ನುಡಿಗಳು ನಮ್ಮ ಹೃದಯ ಗೆದ್ದವು. ಅವರಾಗಿಯೇ ಕೆಲವು ಹೊಸ ಯೋಜನೆಗಳನ್ನು ಸೂಚಿಸಿದರು.
ನಂತರ ಲಿಂಗಾಯತ ನಾಯಕ ಮಾನ್ಯ ಸಚಿವ ಶ್ರೀ ಎಂ.ಬಿ.ಪಾಟೀಲರನ್ನು ಕಂಡೆವು. ಅವರ ಭೆಟ್ಟಿ ಸುದೀರ್ಘ ಮತ್ತು ಫಲಪ್ರದವಾಗಿತ್ತು. ಮೂರು ಘಂಟೆಯಷ್ಟು ಕಾಲ ಸಚಿವರು ಸಮಯ ನೀಡಿದರು ಮತ್ತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಮರುದಿವಸ ಸೋಮವಾರ ಬೆಳಗ್ಗೆ ವೀರಶೈವ ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿ ಹಾಗು ಮಾನ್ಯ ಸಚಿವ ಶ್ರೀ ಈಶ್ವರ ಖಂಡ್ರೆಯವರನ್ನು ಕಂಡೆವು. ಅವರು ನಮ್ಮನ್ನು ಆದರದಿಂದ ಸ್ವಾಗತಿಸಿ, ನಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.
ಸಚಿವರನ್ನು ಅಭಿನಂದಿಸಿ ಪುಷ್ಪಗುಚ್ಚವ ನೀಡುವುದಷ್ಟೇ ನಮ್ಮ ಯೋಜನೆ ಆಗಿರಲಿಲ್ಲ. ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನಾಗಿ ಘೊಷಣೆ ಮಾಡಿ ಪುಷ್ಪ ಸಮರ್ಪಣೆ ಮಾಡಿದರಷ್ಟೆ ಸಾಲದು, ಅವರನ್ನು ನಿರಂತರವಾಗಿ ನೆನೆಯುವ ಕಾರ್ಯಕ್ರಮಗಳು ಬೇಕು. ಕಾಯಕ, ದಾಸೋಹ ಸಮಾನತೆಯ ತತ್ವಗಳನ್ನು ಆಚರಣೆಗೆ ತರುವ ಮತ್ತು ಅವುಗಳನ್ನು ನಿರಂತರವಾಗಿ ಕಾರ್ಯರೂಪದಲ್ಲಿಡಬೇಕೆಂಬ ಚಿಂತನೆ ನಮ್ಮದಿತ್ತು. ಅವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿದ ಈ ಸರಕಾರವು ಅಭಿನಂದನೆಗೆ ಅರ್ಹ. ಇಂತಹ ಒಂದು ಐತಿಹಾಸಿಕ ನಿರ್ಣಯವು ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲಲು ರಾಜ್ಯದ ಪ್ರತಿಗ್ರಾಮ, ಪ್ರತಿ ಹೋಬಳಿ, ಪ್ರತಿತಾಲೂಕ, ಪ್ರತಿ ಜಿಲ್ಲೆ ಹಾಗು ರಾಜ್ಯದ ರಾಜಧಾನಿಯಲ್ಲಿ ಬಸವಣ್ಣನವರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಸವಣ್ಣನವರ ಆದರ್ಶಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಅಲ್ಲದೆ ಈ ಕೆಳಗಿನ ಸಮರ್ಪಕವಾದ ಬೇಡಿಕೆಯನ್ನು ಸರಕಾರ ಮಾನ್ಯ ಮಾಡಬೇಕು.
ಅ) ಯುವ ಪೀಳಿಗೆಗೆ ಶರಣ ಸಂತತಿಯನ್ನು ಪರಿಚಯಿಸುವ ಕೆಲಸವಾಗಬೇಕು.
ಆ) ಇತ್ತೀಚಿಗೆ ಸಿಕ್ಕ, ಬೆಳಕು ಕಾಣದಿರುವ ಸಾವಿರಾರು ತಾಡೋಲೆಗಳನ್ನು ಪರಿಷ್ಕರಿಸಿ ಪ್ರಕಟಿಸಿ ಜನರ ಮುಂದಿಡಬೇಕು.
ಇ) ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪವು ಸ್ಥಾವರವಾಗದೆ ಜಂಗಮವಾಗಬೇಕು. ಅಲ್ಲಿ ಶರಣ ಸಂದೇಶ ಆಧಾರಿತ ಶಿಕ್ಷಣ ನೀಡಬೇಕು. ಅದೊಂದು ವಿಶ್ವಮಟ್ಟದ ಸಂಶೋಧನಾ ವಿಶ್ವವಿದ್ಯಾಲಯವಾಗಬೇಕು.
ಉ) ವಿಶ್ವಗುರು ಬಸವಣ್ಣನವರ ಪ್ರಾಧಿಕಾರವಾಗಬೇಕು. ಅದಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನ ನೀಡಬೇಕು. ಅದರ ಮುಖಾಂತರ ಲಿಂಗಾಯತಧರ್ಮದ ಮಕ್ಕಳಿಗೆ ಶಿಕ್ಷಣ, ಸಂಶೋಧನೆ, ಉದ್ಯೋಗ, ಕೃಷಿ, ಮಹಿಳಾ ಸಬಲೀಕರಣಕ್ಕೆ ಅನುದಾನ ನೀಡಬೇಕು.
ಊ) ದೇಶದಾದ್ಯಂತ ಹರಡಿರುವ ೭೭೦ ಶರಣ ಸ್ಮಾರಕಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿ, ಅವರಿಂದ ರಚಿತವಾದ ವಚನಗಳನ್ನು ಅಲ್ಲಿ ಪ್ರಚಾರ ಮಾಡಬೇಕು.
ಋ) ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತ ಧರ್ಮವನ್ನಾಗಿಸಲು ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಬೇಕು.
ಎ) ಅಲ್ಪಸಂಖ್ಯಾತ ಧರ್ಮಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು.
ಏ) ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಜನರ ಮನಸ್ಸಿನಿಂದ ದೂರವಾಗಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣಗಳು ಸರಕಾರದ ವತಿಯಿಂದ ನಡೆಯಬೇಕು. ಅಂತಹ ಸಭೆ ಸಮಾರಂಭಗಳಿಗೆ ಸರಕಾರ ಮನ್ನಣೆ ನೀಡಿ, ಸಹಾಯಧನ ನೀಡಬೇಕು.
ಐ) ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರದ ಕೆಲ ವಿಭಾಗಗಳು ನೀಡುತ್ತಿರುವ ಪ್ರಮಾಣ ಪತ್ರದಲ್ಲಿ ವೀರಶೈವ ಲಿಂಗಾಯತ ಎಂದು ಪ್ರಮಾಣೀಕರಿಸುವುದರಿಂದ ಲಿಂಗಾಯತ ಮಕ್ಕಳಿಗೆ ಶಿಕ್ಷಣ ಮತ್ತು ಉದ್ದೋಗ ಪಡೆಯುವಲ್ಲಿ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು.
ಇದರೊಂದಿಗೆ ಲಿಂಗಾಯತ ಸಮಾಜಬಾಂಧವರು ನೀಡುವ ಯಾವುದೆ ಸರ್ವಸಮ್ಮತವಾದ ಬೇಡಿಕೆಗಳನ್ನು ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಲಿ ಎಂಬ ಬೇಡಿಕೆಗಳನ್ನು ಇಡುತ್ತಿದ್ದೇವೆ.
- ಜಿ.ಬಿ.ಪಾಟೀಲ, ಬೆಂಗಳೂರು



