ಗಾಂಧಿ ವಿಚಾರಧಾರೆಗಳು ಸರಕಾರ ಮತ್ತು ಆಡಳಿತದ ಮೂಲ ತತ್ವಗಳು: ಸಂತೋಷ ಲಾಡ್

12 months ago

ಧಾರವಾಡ: ಮಹಾತ್ಮ ಗಾಂಧೀಜಿ ಅವರು ಬದುಕಿದ ರೀತಿ, ಹೋರಾಟದ ಗತಿ ಮತ್ತು ಅವರು ಬೋಧಿಸಿ, ಪಾಲಿಸಿದ ತತ್ವ, ಜೀವನ ಸಂದೇಶಗಳು ಇಂದಿನ ಸರಕಾರಗಳ ಮತ್ತು ಆಡಳಿತದ ಮೂಲ ತತ್ವಗಳಾಗಿವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಧಾರವಾಡ ಕುಮಾರೇಶ್ವರ ನಗರದ ವ್ಯಾಪ್ತಿಯ ಧಾರವಾಡ ಹೊಸ ಕೇಂದ್ರ ಬಸ್ ನಿಲ್ದಾಣ ಹತ್ತಿರದಲ್ಲಿ ಧಾರವಾಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಗಾಂಧಿ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತ, ಜೀವನ ಸಂದೇಶಗಳನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮುದಾಯಕ್ಕೆ ನಿರಂತರವಾಗಿ ತಲುಪಿಸಲು ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಗಾಂಧೀಜಿ ಅವರನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಯುವ ಸಮೂಹಕ್ಕೆ ಪರಿಣಾಮಕಾರಿಯಾಗಿ ಪರಿಚಯಿಸಲು, ಅವರ ಜೀವನ ಸಂದೇಶಗಳನ್ನು ತಲುಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರ, ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಿಸಲು ತಿರ್ಮಾನಿಸಿ, ನಮ್ಮ ಸರಕಾರದ 2016-17 ನೇ ಸಾಲಿನ ಬಜೆಟ್‍ ನಲ್ಲಿ ಸಿಎಂ ಗಾಂಧಿ ಭವನ ನಿರ್ಮಾಣದ ಕುರಿತು ಘೋಷಿಸಿದ್ದರು ಎಂದರು.

ಗಾಂಧಿ ಭವನ ನಿರ್ಮಾಣಕ್ಕಾಗಿ ಪ್ರತಿ ಜಿಲ್ಲೆಗೆ ಉಚಿತವಾಗಿ ಅಗತ್ಯ ನಿವೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದರು. ವಾರ್ತಾ ಇಲಾಖೆಯಿಂದ ಗಾಂಧಿ ಭವನ ನಿರ್ಮಿಸಲು ರೂ. 3 ಕೋಟಿ ಅನುದಾನ ಸಹ ಬಿಡುಗಡೆ ಮಾಡಲಾಗಿತ್ತು. ಅದರಂತೆ ಧಾರವಾಡ ಗಾಂಧಿ ಭವನ ಅತೀ ಸುಂದರವಾಗಿ ರೂಪುಗೊಂಡಿದೆ ಎಂದರು.

ಗಾಂಧಿಭವನವನ್ನು ಗಾಂಧಿ ತತ್ವಗಳ ಪ್ರಚಾರ ಕೇಂದ್ರವಾಗಿ ರೂಪಿಸಲು ಕ್ರಮವಹಿಸಲಾಗುವುದು. ವಿದ್ಯಾರ್ಥಿಗಳಿಗೆ ಇದೊಂದು ಶೈಕ್ಷಣಿಕ ಪ್ರವಾಸದ ಸ್ಥಳವಾಗಿ, ವಿಚಾರ ಸಂಕಿರಣ, ಗಾಂಧಿ ಕಾರ್ಯಕ್ರಮಗಳಿಗೆ ನೀಡುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಕ್ರಮವಹಿಸಲಿದೆ. ಭವನದ ನಿರ್ವಹಣೆ ಹೊಣೆಯನ್ನು ಮಹಾನಗರಪಾಲಿಕೆ ಅಥವಾ ಇತರ ಏಜನ್ಸಿಗಳಿಗೆ ವಹಿಸುವ ಕುರಿತು ಸಮಿತಿ ಚರ್ಚಿಸಲಿದೆ ಎಂದರು.

ಗಾಂಧಿಭವನದಲ್ಲಿನ ಗೋಡೆ ಚಿತ್ರಗಳು, ಚಿತ್ರಪಟಗಳು, ಗಾಂಧೀಜಿ ಅವರ ದಂಡಿಯಾತ್ರೆ ಪ್ರತಿಮೆಗಳು ಸೇರಿದಂತೆ ವಿವಿಧ ಆಕೃತಿಗಳು ಸುಂದರವಾಗಿ ರೂಪಿತವಾಗಿವೆ. ಗಾಂಧಿಭವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೆ ಇಲ್ಲಿನ ಮಾಹಿತಿಗಳು ಗಾಂಧಿಯವರನ್ನು ಆತ್ಮೀಯವಾಗಿ ಪರಿಚಯಿಸುತ್ತವೆ ಎಂದರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಗಾಂಧಿಭವನದ ನಿರ್ಮಾಣದ ಬಗ್ಗೆ, ಛಾಯಾಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ ಗಾಂಧಿ ಭವನದ ನಿರ್ಮಾಣದ ಹಿನ್ನೆಲೆ ಹಾಗೂ ಗಾಂಧಿ ಭವನದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿ, ಗಾಂಧಿ ಭವನದ ವಿವಿಧ ಹಾಲ್, ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಬೆಳಗಾವಿ ಉಪನಿರ್ದೇಶಕ ಗುರುನಾಥ ಕಡಬೂರ, ಧಾರವಾಡ ವಾರ್ತಾ ಸಹಾಯಕ ಅಧಿಕಾರಿ ಡಾ.ಸುರೇಶ ಹಿರೇಮಠ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ, ಕೆ.ಆರ್.ಡಿ.ಐ.ಎಲ್. ಕಾರ್ಯಪಾಲಕ ಇಂಜಿನಿಯರ್ ಸುಜಾತಾ ಕಾಳೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಡಾ.ಶಶಿಧರ ಚನ್ನಪ್ಪಗೌಡರ, ಧಾರವಾಡ ತಹಶಿಲ್ದಾರ ಡಾ.ಡಿ.ಎಚ್.ಹೂಗಾರ, ಗಾಂಧಿ ಅನುಯಾಯಿಗಳಾದ ಡಾ.ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶ್ರೀಶೈಲ ಕಮತರ ಸೇರಿದಂತೆ ಸಾರ್ವಜನಿಕರು, ಗಾಂಧಿ ಅಭಿಮಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply