ದೇಶ ಕಂಡ ಅಪ್ರತಿಮ ಹೋರಾಟಗಾರ ಜಾರ್ಜ್ ಫರ್ನಾಂಡಿಸ್

11 months ago

ಕರ್ನಾಟಕದ ಮಂಗಳೂರಿನಲ್ಲಿ ಹುಟ್ಟಿ, ದೇಶದ ವಾಣಿಜ್ಯ ನಗರ ಮುಂಬೈನಲ್ಲಿ ಕಾರ್ಮಿಕ ನಾಯಕರಾಗಿ ಹೋರಾಟವನ್ನು ಮಾಡುತ್ತಾ 1967ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ತದನಂತರ 1977 ಬಿಹಾರದಲ್ಲಿ ತಮ್ಮ ರಾಜಕೀಯ ಕ್ಷೇತ್ರವನ್ನು ವಿಸ್ತರಿಸಿಕೊಂಡಂತಹ ದೇಶದ ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ನಾಯಕತ್ವವನ್ನು ಪಡೆದಿದ್ದ ಜಾರ್ಜ್ ಫರ್ನಾಂಡಿಸ್ ಅವರ ನೆನಪು ಅನೇಕ ಕಾರಣಗಳಿಗಾಗಿ ಪದೇಪದೇ ಆಗುತ್ತಲೇ ಇರುತ್ತದೆ.

ಜಾರ್ಜ್ ಫರ್ನಾಂಡಿಸ್ ಎಂದರೆ ಅತ್ಯಂತ ಸರಳವಾದ ಬದುಕಿನ ನಿಜ ಅರ್ಥದ ಸಮಾಜವಾದಿ ನಾಯಕ. ಸದಾ ಬಿಳಿ ಜುಬ್ಬಾ ಪೈಜಾಮ, ಸಾಧಾರಣ ಮೊತ್ತದ ಚಪ್ಪಲಿ, ಧರಿಸಿಕೊಂಡು ಜನಸಾಮಾನ್ಯರಂತೆ ತಮ್ಮ ಬದುಕನ್ನ ನಡೆಸಿದ ನಾಯಕ.

ತಾವು ಮಂತ್ರಿಯಾಗಿದ್ದಾಗಲೂ ತಮ್ಮ ಬಟ್ಟೆಯನ್ನು ತಾವೇ ಶುಭ್ರ ಮಾಡಿಕೊಳ್ಳುತ್ತಿದ್ದರು. ತಮ್ಮ ಮನೆಯ ಶೌಚಾಲಯವನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಮಂತ್ರಿ ಆಗಿದ್ದ ಸಂದರ್ಭದಲ್ಲಿ ಪದೇಪದೇ ಬಂಗಲೆಯ ಗೇಟುಗಳನ್ನು ಹಾಕಿ ತೆಗೆಯುವುದನ್ನು ಕಂಡು ಅದು ಸರಿಯೆನಿಸದ ಕಾರಣದಿಂದ ಗೇಟುಗಳನ್ನೆ ಕಿತ್ತು ಹಾಕಿಸಿ ಎಲ್ಲರಿಗೂ ಮುಕ್ತವಾಗಿ ತಮ್ಮ ಮನೆಗೆ ಪ್ರವೇಶವನ್ನ ನೀಡಿದಂತಹ ನಾಯಕ ಇವರು.

ತಾವು ಹೆಚ್ಚು ಪ್ರೀತಿಸುತ್ತಿದ್ದ ನಾಯಿ ತಮ್ಮ ಹಾಸಿಗೆ ಮೇಲೆ ಮಲಗಿದ್ದ ವೇಳೆಯಲ್ಲಿ ಅದನ್ನು ಎಬ್ಬಿಸಿ ನಿದ್ರಾಭಂಗ ಮಾಡಬಾರದೆಂದು ತಾವು ನೆಲದ ಮೇಲೆ ಚಾಪೆಯನ್ನ ಹಾಕಿಕೊಂಡು ಮಲಗುವ ಮೂಲಕ ತಮ್ಮ ಪ್ರೀತಿಯನ್ನು ಮೆರೆದಿರುತ್ತಾರೆ.

ಅನೇಕ ಬಾರಿ ಇವರ ಚಪ್ಪಲಿ ಕಿತ್ತುಹೋದ ಸಂದರ್ಭದಲ್ಲಿ ಅದಕ್ಕೆ ಪಿನ್ನು ಹಾಕಿಕೊಂಡು ಓಡಾಡಿದಂತಹ ಉದಾಹರಣೆಗಳು ಇವೆ. ಇವರಷ್ಟು ದೇಶದಲ್ಲಿ ರೈಲಿನಲ್ಲಿ ಪ್ರಯಾಣವನ್ನ ಮಾಡಿದಂತಹ ಮತ್ತೊಬ್ಬ ನಾಯಕರಿಲ್ಲ. ದೇಶದಾದ್ಯಂತ ಅತಿ ಹೆಚ್ಚು ಸುತ್ತಿರುವ ನಾಯಕರು ಇವರು. ಅದೇ ರೀತಿಯಲ್ಲಿ ಅತಿ ಹೆಚ್ಚು ಪುಸ್ತಕಗಳನ್ನ ಓದಿರುವಂತಹ ನಾಯಕರ ಪೈಕಿ ಇವರು ಮೊದಲಿಗರು ಎನ್ನಬಹುದು.

ಜಾರ್ಜ್ ಫರ್ನಾಂಡಿಸ್ ಅವರಿಗೆ ಹತ್ತಕ್ಕೂ ಹೆಚ್ಚು ಭಾಷೆಗಳು ಬರೆಯಲು ಓದಲು ಬರುತ್ತಿತ್ತು. ಇವರು ಮುಂಬೈನಲ್ಲಿ 1951ರ ಅವಧಿಯಲ್ಲಿ ಅಲ್ಲಿನ ಮುನ್ಸಿಪಲ್ ಸದಸ್ಯರಾಗಿ ಆಡಳಿತ ಭಾಷೆಯನ್ನ ಇಂಗ್ಲೀಷ್ನಿಂದ ಮರಾಠಿಯಲ್ಲಿ ನಡಿಸಬೇಕೆಂದು ಹೋರಾಟವನ್ನು ಮಾಡಿದರು. ಅನೇಕ ಇಂಗ್ಲೀಷ್ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದು ಜೀವನವನ್ನ ನಡೆಸಿದ್ದಾರೆ. ಇವರು ಸ್ವತಹ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಸಾಪ್ತಾಹಿಕಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಜಾರ್ಜ್ ಫರ್ನಾಂಡಿಸ್ ಬಾಲ್ಯದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನ ಮುಗಿಸಿ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ಚರ್ಚ್ ನಲ್ಲಿ ಪಾದ್ರಿ ಆಗಲು ಎರಡು ವರ್ಷಗಳ ಕಾಲ ಶಿಕ್ಷಣವನ್ನು ಅದಕ್ಕೆ ಪಡೆದ ನಂತರ ಇವರ ಮನಸ್ಸಿಗೆ ಇದು ಸರಿ ಹೊಂದದೆ ನೇರವಾಗಿ ಮುಂಬೈಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು. ಈ ಸಂದರ್ಭದಲ್ಲಿ ಇವರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಬಸ್ ಸ್ಟ್ಯಾಂಡಿನಲ್ಲಿ ಮಲಗಿದ್ದಾರೆ. ಟೈಮ್ಸ್ ಪತ್ರಿಕೆಗೆ ಅಂಕಣವನ್ನ ಬರೆದುಕೊಡುವ ಕೆಲಸವನ್ನು ಮಾಡಿದ್ದಾರೆ. ಶೇವಿಂಗ್ ಬ್ಲೇಡ್ ಗಳನ್ನ ಮಾರಾಟ ಮಾಡುವ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಕೆಲವು ತಿಂಗಳು ಎಲ್ಐಸಿ ಏಜೆಂಟರಾಗಿ ದುಡಿದಿದ್ದಾರೆ. ಮಂಗಳೂರಿನಲ್ಲೂ ಸಹ ಇವರು ಆಟೋ ಚಾಲಕರ ಮತ್ತು ಅಸಂಘಟಿತ ಕಾರ್ಮಿಕರ ಪರವಾಗಿ ಹೋರಾಟಗಳನ್ನ ಮಾಡಿ ಲಾಟಿ ಏಟನ್ನು ತಿಂದಿದ್ದಾರೆ.

ಮುಂಬೈನಲ್ಲಿ ಇವರಿಗೆ ಡಿ ಮೇಲೋ ಕಾರ್ಮಿಕ ನಾಯಕರ ಸಂಪರ್ಕ ದೊರೆಯುತ್ತದೆ. ಅವರು ಟ್ರೇಡ ಯೂನಿಯನ್ ನಾಯಕರಾಗಿದ್ದರು. ಜಾರ್ಜ್ ಫರ್ನಾಂಡಿಸ್ ಅವರು ಅವರೊಂದಿಗೆ ಸೇರಿ ತಮ್ಮ ಮುಂದಿನ ಹೋರಾಟವನ್ನು ಮುಂಬೈನಲ್ಲಿ ಆರಂಭಿಸಿದರು. ಟ್ಯಾಕ್ಸಿ ಚಾಲಕರ ಮತ್ತು ದೋಣಿ ನಡೆಸುವವರ ಸಂಘಟನೆಗಳನ್ನು ಕಟ್ಟಿ ಅವರ ಹಿತಕ್ಕಾಗಿ ಹೋರಾಟವನ್ನು ಮಾಡಿ ಜನಪ್ರಿಯ ಕಾರ್ಮಿಕ ನಾಯಕರದದರು. ಇವರ ಪರವಾಗಿ ಹೋರಾಟವನ್ನು ಮಾಡಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ. ಇವರ ಹೋರಾಟದ ಫಲವಾಗಿ ಇವರನ್ನು ಸ್ಥಳೀಯ ಸಂಸ್ಥೆ ಮತ್ತು ಲೋಕಸಭಾ ಚುನಾವಣೆಯಲ್ಲೂ ಜನತೆ ಆಯ್ಕೆ ಮಾಡುವ ಮಟ್ಟಕ್ಕೆ ಇವರ ವ್ಯಕ್ತಿತ್ವ ಬೆಳೆದಿತ್ತು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭೂಗತರಾಗಿ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಡೈನಾಮಿಕ್ ಪ್ರಕರಣದಲ್ಲಿ 1976ರಲ್ಲಿ ಅಂತಿಮವಾಗಿ ಕಲ್ಕತ್ತಾದಲ್ಲಿ ಪೊಲೀಸರಿಗೆ ಸಿಕ್ಕಿ ಸೆರೆಮನೆ ವಾಸವನ್ನ ಅನುಭವಿಸಿದರು. 1977ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಇವರು ಜೈಲಿನಲ್ಲಿ ಇದ್ದುಕೊಂಡು ಬಿಹಾರದ ಮುಜಾಫರ್ ಲೋಕಸಭಾ ಲೋಕಸಭಾ ಕ್ಷೇತ್ರದಿಂದ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಮುರಾರ್ಜಿ ದೇಸಾಯಿ ಸಂಪುಟದಲ್ಲಿ ಕೈಗಾರಿಕಾ ಸಚಿವರಾದರು.

ಸದಾ ಕಾಲ ಕಾರ್ಮಿಕರ ಹಿತ ಬಯಸುತ್ತಿದ್ದ ಇವರು ಭಾರತ ದೇಶದಲ್ಲಿ ಬಂಡವಾಳವನ್ನ ಹೂಡಿರುವ ವಿದೇಶಿ ಕಂಪನಿಗಳ ದುರಹಂಕಾರದ ವರ್ತನೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರು. ಇವರ ಆದೇಶಗಳ ಪ್ರಕಾರ ಭಾರತದಲ್ಲಿ ಐಬಿಎಮ್ ಮತ್ತು ಕೋಕೋ ಕೋಲಾ ಸಂಸ್ಥೆಗಳು ಮುಚ್ಚಲ್ಪಟ್ಟವು. ನಂತರದ ದಶಕಗಳಲ್ಲಿ ಅವು ಮತ್ತೆ ಆರಂಭವಾದವು.

1979 ರಲ್ಲಿ ಜನತಾ ಪಕ್ಷದ ಆಂತರಿಕ ಕಚ್ಚಾಟದಿಂದ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರ ಕಳೆದುಕೊಂಡಿತು. ಜಾರ್ಜ್ ಫರ್ನಾಂಡಿಸ್ ಅವರು 1984ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಜಾಫರ್ ಷರೀಫರ ಎದುರು ಸೋಲನ್ನು ಅನುಭವಿಸಿದರು.

1989ರ ಚುನಾವಣೆಯಲ್ಲಿ ಮತ್ತೆ ಇವರು ಬಿಹಾರದಲ್ಲಿ ಮುಜಾಫರ್ ಕ್ಷೇತ್ರದಿಂದ ಆಯ್ಕೆಯಾಗಿ ವಿ.ಪಿ.ಸಿಂಗ್ ಅವರ ಸಂಪುಟದಲ್ಲಿ ಸಚಿವರಾದರು.

ಆರಂಭದಲ್ಲಿ ಲೋಹಿಯಾರವರ ಒಡನಾಟದಲ್ಲಿ ಸಮಾಜವಾದಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಜೊತೆಗೆ ಕಾರ್ಮಿಕ ಸಂಘಟನೆಯನ್ನು ಕಟ್ಟುವಲ್ಲಿ ಹೆಚ್ಚು ಆಸಕ್ತರಾಗಿದ್ದರು. ರೈಲ್ವೆ ಕಾರ್ಮಿಕರ ಹೋರಾಟಗಾರರಾಗಿ 1974ರಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ನಡೆಸಿದರು.

ಎನ್ ಡಿ ಎಂ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಇವರು ನಿರ್ವಹಿಸಿದಂತಹ ಪಾತ್ರವನ್ನು ಬಹಳ ಅಭಿಮಾನದಿಂದ ಇತಿಹಾಸ ಗುರುತಿಸಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಇವರು ತೋರಿದಂತಹ ಧೈರ್ಯ ಮತ್ತು ಈ ಸಂದರ್ಭದಲ್ಲಿ ಇವರು ನಿರ್ವಹಿಸಿದ ಪಾತ್ರ ಇವರ ಗಟ್ಟಿತನವನ್ನು ತೋರಿಸುತ್ತದೆ.

ಜಾರ್ಜ್ ಫರ್ನಾಂಡಿಸ್ ಅವರು ರೈಲ್ವೆ ಸಚಿವರಾಗಿ ವಿ.ಪಿ.ಸಿಂಗ್ ಅವರ ಸಂಪುಟದಲ್ಲಿ ಇದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಜನತೆ ಸದಾ ಕಾಲ ನೆನಪಿಸಿಕೊಳ್ಳುವ ರೀತಿ ಕೊಂಕಣ ರೈಲ್ವೆ ಯೋಜನೆಗೆ ಚಾಲನೆಯನ್ನು ನೀಡಿದರು. ಇದಕ್ಕೆ ಪೂರಕವಾಗಿ ಅಂದು ಕೇಂದ್ರದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ರಾಮಕೃಷ್ಣ ಹೆಗಡೆ ಅವರ ಆಸಕ್ತಿಯು ಸಹ ಪ್ರಮುಖ ಕಾರಣವಾಯಿತು.

ಜಾರ್ಜ್ ಫರ್ನಾಂಡಿಸ್ ಅವರು ಬದುಕಿನಲ್ಲಿ ಸದಾ ಕಾಲ ಪ್ರಾಮಾಣಿಕವಾಗಿ ಮತ್ತು ಸರಳತೆಯಿಂದ ಒಬ್ಬ ದೊಡ್ಡ ಹೋರಾಟಗಾರರಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

ಇವರ ಅನೇಕ ರಾಜಕಾರಣದ ನಿರ್ಧಾರಗಳು ನಿಲುವುಗಳು ಚರ್ಚೆಗೆ ಅವಕಾಶಗಳನ್ನ ನೀಡಿದರು ಸಹ ಇವರು ಎಲ್ಲಿಯೂ ಸಹ ಸ್ವಾರ್ಥಕ್ಕಾಗಿ ಯಾವ ನಿಲುವುಗಳನ್ನು ತೆಗೆದುಕೊಂಡಿರಲಿಲ್ಲ.

ಜಾರ್ಜ್ ಫರ್ನಾಂಡಿಸ್ ಅವರ ಸಹೋದರರಾದ ಮೈಕಲ್ ಫರ್ನಾಂಡಿಸ್ ಕರ್ನಾಟಕದ ಪ್ರಮುಖ ಕಾರ್ಮಿಕ ನಾಯಕರು. ಇವರ ಮತ್ತೊಬ್ಬ ಸಹೋದರರಾಗಿದ್ದ ಲಾರೆನ್ಸ್ ಫರ್ನಾಂಡಿಸ್ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತುಂಬಾ ಹಿಂಸೆಯನ್ನ ಅನುಭವಿಸಿದರು. ಇವರು ಸಹ ಬೆಂಗಳೂರಿನ ಮಹಾಪೌರರಾಗಿ ಸೇವೆಯನ್ನು ಸಲ್ಲಿಸಿದ್ದರು.

ಜಾರ್ಜ್ ಫರ್ನಾಂಡಿಸ್ ಅವರಿಗೂ ಕರ್ನಾಟಕಕ್ಕೂ ತುಂಬಾ ಆತ್ಮೀಯತೆ ಇತ್ತು. ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಜೆ ಹೆಚ್ ಪಟೇಲ್ ಅವರು ಇವರ ಆತ್ಮೀಯ ಸ್ನೇಹಿತರು. 1999 ರಲ್ಲಿ ಜೆ ಎಚ್ ಪಟೇಲರು ಜಾರ್ಜ್ ಫರ್ನಾಂಡಿಸ್ ಅವರು ಪ್ರಧಾನಮಂತ್ರಿಯಾಗಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಜೊತೆ ಕರ್ನಾಟಕದಲ್ಲಿ ಮೈತ್ರಿಯನ್ನು ಮಾಡಿಕೊಂಡಿದ್ದರು. ಬಿಜೆಪಿಯೊಂದಿಗೆ ತಮ್ಮ ನಿಲುವಿನಲ್ಲಿ ಭಿನ್ನಾಭಿಪ್ರಾಯವಿದ್ದರೂ ಸ್ನೇಹಿತನಿಗಾಗಿ ಸಿದ್ಧಾಂತದೊಂದಿಗೆ ರಾಜಿಯನ್ನ ಮಾಡಿಕೊಂಡಿದ್ದರು. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಮತ್ತೊಬ್ಬ ಹಿರಿಯ ಕಾರ್ಮಿಕ ನಾಯಕರಾಗಿದ್ದ ಎಸ್ ವೆಂಕಟರಾಮ್ ಅವರು ಜಾರ್ಜ್ ಫರ್ನಾಂಡಿಸ್ ಅವರ ಜೊತೆಯಲ್ಲಿ ಹಲವಾರು ರಾಜ್ಯಗಳಲ್ಲಿ ಹೋರಾಟಗಳನ್ನು ನಡೆಸಿದ್ದಾರೆ. ಇವರಿಬ್ಬರ ಸ್ನೇಹ ಬಹಳ ದೊಡ್ಡದು. ಎಸ್ ವೆಂಕಟರಾಮ್ ಅವರು ಕರ್ನಾಟಕದಲ್ಲಿ ಅನೇಕ ನಾಯಕರುಗಳನ್ನ ಬೆಳೆಸಿದ್ದಾರೆ. ಹಲವಾರು ಸಂಘಟನೆಗಳ ಸ್ಥಾಪನೆಗೆ ಕಾರಣರಾಗಿದ್ದಾರೆ. ಇಂದಿಗೂ ಸಹ ಎಸ್ ವೆಂಕಟರಾಮ್ ಅವರ ಹೆಸರನ್ನು ಅನೇಕ ಕಾರ್ಮಿಕ ನಾಯಕರು ಮತ್ತು ಸಮಾಜವಾದಿಗಳು ಅವರ ಹೋರಾಟ ಮತ್ತು ವ್ಯಕ್ತಿತ್ವಕ್ಕಾಗಿ ತಮ್ಮ ಭಾಷಣಗಳಲ್ಲಿ ಉಲ್ಲೇಖಿಸುತ್ತಾರೆ.

ಜಾರ್ಜ್ ಫರ್ನಾಂಡಿಸ್ ಅವರು ಜನತಾಪಕ್ಷ ಮತ್ತು ಜನತಾದಳದ ನಾಯಕರಾಗಿ ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತರ ರೀತಿಯಲ್ಲಿ ಎಲ್ಲರೊಂದಿಗೆ ಬೆರೆತು ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಉಳಿದುಕೊಂಡು ಸ್ನೇಹಿತರ ವಾಹನಗಳಲ್ಲಿ ತಮ್ಮ ಪ್ರಯಾಣವನ್ನ ನಡೆಸುತ್ತಿದ್ದರು.

ಹಲವಾರು ಭಾಷೆಗಳನ್ನ ಬಲ್ಲವರಾಗಿದ್ದ ಇವರು ಕನ್ನಡ ಭಾಷೆಯನ್ನ ಸುಂದರವಾಗಿ ಮಾತನಾಡುತ್ತಿದ್ದರು. ಇವರ ಕನ್ನಡದ ಭಾಷಣವೂ ಸಹ ಕೇಳುಗರಿಗೆ ತುಂಬಾ ಆಸಕ್ತಿದಾಯಕವಾಗಿರುತ್ತಿತ್ತು.

ಜಾರ್ಜ್ ಫರ್ನಾಂಡಿಸ್ ಒಟ್ಟಾರೆಯಾಗಿ ಈ ದೇಶ ಕಂಡಂತಹ ಒಬ್ಬ ದೊಡ್ಡ ಹೋರಾಟಗಾರ. ಕಾರ್ಮಿಕ ಕ್ಷೇತ್ರದಲ್ಲಿ ಇವರದೇ ಆದಂತಹ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾರೆ. ಒಬ್ಬ ನಾಯಕ ತನ್ನ ಹೋರಾಟದ ಮೂಲಕ ಯಾವ ರೀತಿಯಲ್ಲಿ ವಿಸ್ತಾರಗೊಳ್ಳಬಹುದು ಎಂಬುದಕ್ಕೆ ಇವರ ರಾಜಕೀಯ ಪ್ರಯಾಣವೇ ನಿದರ್ಶನವಾಗಿದೆ. ಒಟ್ಟು ಎಂಟು ಬಾರಿ ಲೋಕಸಭಾ ಸದಸ್ಯರಾಗಿ, ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿ ಸುದೀರ್ಘವಾಗಿ ದೇಶದ ರಾಜಕಾರಣದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದಾರೆ. 2019ರಲ್ಲಿ ಇವರು ನಿಧನರಾಗುವ ಸಂದರ್ಭದಲ್ಲಿ ಇವರಿಗೆ ಅಲ್ಜೈಮರ್ ಎಂಬ ಮರೆವಿನ ಕಾಯಿಲೆಗೆ ಗುರಿಯಾಗಿದ್ದರು. ಇವರಿಗೆ ನೆನಪಿನ ಶಕ್ತಿ ಸಂಪೂರ್ಣವಾಗಿ ಹಾಳಾಗಿತ್ತು.

– ಕೆ ಎಸ್ ನಾಗರಾಜ್ ಬೆಂಗಳೂರು

Leave a Reply