ಬೆಂಗಳೂರು: ʻವಿಶಾಲ ಮೈಸೂರುʼ ಎಂದಿದ್ದ ನಮ್ಮ ನಾಡಿನ ಹೆಸರು ʻಕರ್ನಾಟಕʼ ಎಂದು ಹೆಸರಾಗಲು ನಾಡೋಜ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿಗಳು ಬರೆದ ʻನಮ್ಮ ಕರ್ನಾಟಕʼ ಎನ್ನುವ ಕೃತಿಯ ಪ್ರಭಾವವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ʻಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿ ಮತ್ತು ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯ ನೂರನೇ ಸಂಪುಟದ ವಿಶೇಷ ಸಂಚಿಕೆ ಬಿಡುಗಡೆ ಜೊತೆಗೆ ೯೦ ವರ್ಷಗಳನ್ನು ಪೂರೈಸಿದ ಹಿರಿಯ ವಿದ್ವಾಂಸ ನಾಡೋಜ ಡಾ. ಟಿ.ವಿ ವೆಂಕಟಾಚಲಶಾಸ್ತ್ರೀ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಪದದ ಮೂಲವನ್ನು ಶಾಸನ-ಶಾಸ್ತ್ರೀಯ ಗ್ರಂಥಗಳಾದಿಯಾಗಿ ಅವರು ಹುಡುಕಿದ ಕ್ರಮ ಮಾದರಿಯಾಗಿದೆ ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಹೆಮ್ಮೆಯ ಸಂಗತಿ. ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ನಮ್ಮ ನಾಡು ನುಡಿಗಳ ಹಿರಿಮೆ ಗರಿಮೆಗಳ ಪ್ರವರ್ತಕರಾಗಿ ನಿರಂತರ ಕಂಗೊಳಿಸುತ್ತಾ ಬಂದವರು ಎಂದರು.

ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಲೋಕದ ವಿದ್ವತ್ ಪತ್ರಿಕೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಕನ್ನಡ ಸಾಹಿತ್ಯ ಪತ್ರಿಕೆಯ ೧೦೦ ನೇ ಸಂಪುಟವನ್ನು ನಾಡಿನ ಹಿರಿಯ ವಿದ್ವಾಂಸರಾದ ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ಕೈಯಲ್ಲಿ ಇಂದು ಬಿಡುಗಡೆ ಮಾಡುತ್ತಿರುವುದೇ ಸಂತಸದ ಸಂಗತಿ. ಇನ್ನೂ ವೆಂಕಟಾಚಲಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟಿರುವ ಕೊಡುಗೆ ಅಪಾರ. ಇಂದು ಚಂದ್ರಯಾನ-೩ರ ಬಗ್ಗೆ ನಾವೆಲ್ಲಾ ಹೆಮ್ಮೆ ಪಡುತ್ತೇವೆ. ಆದರೆ ಶಾಸ್ತ್ರೀಗಳು ಬಹಳ ಹಿಂದೆಯೇ ʻಚಂದ್ರನ ಮೇಲೊಂದು ಚಂದದ ಪಯಣʼ ಎನ್ನುವ ಕೃತಿಯನ್ನು ರಚಿಸುವ ಮೂಲಕ ಅಂದೇ ಎಲ್ಲರ ಗಮನ ಸೆಳೆದವರು. ಮುಂದಿನ ದಿನಗಳಲ್ಲಿ ಅವರಿಂದ ನಡುಗನ್ನಡದ ಶಬ್ದಕೋಶ ಆಗಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಬಯಕೆಯಾಗಿದೆ. ಆಗ ಅವರು ಆಧುನಿಕ ಕಿಟಲ್ ಆಗುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಹಿರಿಯ ಲೇಖಕ ಡಾ. ಆರ್. ಲಕ್ಷ್ಮೀನಾರಾಯಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿಗೆ ಎಲ್ಲಿಲ್ಲದ ಮನ್ನಣೆಯಿದೆ. ಅದಕ್ಕೆ ಕಾರಣ ಪರಿಷತ್ತಿನಲ್ಲಿ ಪಾಲಿಸಿಕೊಂಡು ಬಂದಿರುವ ಪರಂಪರೆ. ಆ ಪರಂಪರೆಯನ್ನು ಸಮರ್ಥವಾಗಿ ಇಂದಿಗೂ ನಡೆಸಿಕೊಂಡು ಹೋಗಲಾಗುತ್ತದೆ. ಕನ್ನಡ ಭಾಷೆಯ ಅನೇಕ ಸಾಧಕರನ್ನು ಗುರುತಿಸುವದರ ಜೊತೆಗೆ ಸಾಧಕರಲ್ಲಿ ನಾಡು ನುಡಿಗಾಗಿ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ಆಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯ ನೂರನೇ ಸಂಪುಟದ ವಿಶೇಷ ಸಂಚಿಕೆ ಬಿಡುಗಡೆಮಾಡಿ ಮಾತನಾಡಿದ ನಾಡೋಜ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿ, ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಬದುಕಿದಾಗ ಏನು ಮಾಡಿದ ಎನ್ನುವುದು ಮುಖ್ಯ. ಅದಕ್ಕೆ ನಿತ್ಯವೂ ಚಟುವಟಿಕೆಯಿಂದ ಇದ್ದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಸತ್ಕಥಾ ಸಾಂಗತ್ಯದಲ್ಲಿ ಕಾಲಕ್ಷೇಪ ಮಾಡುತ್ತಿರಬೇಕು. ಆಗ ಸಜ್ಜನರ ಸಂಘದಿಂದ ಪ್ರಭುದ್ದ ವಿಚಾರಗಳು ಹುಟ್ಟಿಕೊಳ್ಳಲು ಸಾಧ್ಯ. ಅದು ಮುಂದೆ ಪ್ರಬುದ್ಧ ಕರ್ನಾಟಕ ನಿರ್ಮಾಣ ವಾಗುವುದಕ್ಕೆ ಕಾರಣವಾಗುವುದು. ʻಪ್ರಬುದ್ಧ ಕರ್ನಾಟಕʼ ಹಾಗೂ ʻಕನ್ನಡ ಸಾಹಿತ್ಯ ಪತ್ರಿಕೆʼ ನಾಡಿನ ಎರಡು ಕಣ್ಣುಗಳಿದ್ದಂತೆ. ಹಳೆಯ ಸಂಚಿಕೆಗಳನ್ನು ಓದುವುದು ಎಂದರೆ ಹೊಸದಾಗಿ ವಿದ್ಯಾಭ್ಯಾಸ ಮಾಡಿದಂತೆ. ನಮ್ಮ ಹಿರಿಯರು ಬರೆದಿರುವುದು ಮುಂದಿನ ಜನಾಂಗಕ್ಕೆ ದಿಕ್ಸೂಚಿ ಎಂದರು.
೨೦೨೨ನೆಯ ಹಾಗೂ ೨೦೨೩ನೆಯ ಸಾಲಿನ ʻಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿʼಯನ್ನು ಮೈಸೂರಿನ ಸಂಶೋಧಕಿ ಡಾ. ವೈ.ಸಿ.ಭಾನುಮತಿ ಅವರಿಗೆ ಮತ್ತು ಬೆಂಗಳೂರಿನ ವಿದ್ವಾಂಸ ಪ್ರೊ.ಜಿ. ಅಶ್ವತ್ಥನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು.
೨೦೨೨ ಹಾಗೂ ೨೦೨೩ನೆಯ ಸಾಲಿನ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ದಾವಣಗೆರೆಯ ಸಾಹಿತಿ ಜಿ. ಎಸ್. ಸುಶೀಲಾದೇವಿ ಆರ್. ರಾವ್ ಮತ್ತು ಮೈಸೂರಿನ ಸಾಹಿತಿ ಚಂಪಾವತಿ ಶಿವಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ವಿದ್ವಾಂಸ ಪ್ರೊ.ಜಿ. ಅಶ್ವತ್ಥನಾರಾಯಣ ಅವರು ೭೫ ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಹತ್ತಿರದಿಂದ ಗಮನಿಸುತ್ತ ಬಂದಿದ್ದೇನೆ. ಪರಿಷತ್ತು ಯಾವ ರೀತಿಯಲ್ಲಿ ಬದಲಾವಣೆಗಳು ಕಾಣುತ್ತಿದೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಮನುಷ್ಯನಿಗೆ ಹೊಣೆಗಾರಿಕೆ ಎನ್ನುವದು ಇದ್ದಾಗ ಸಾಧನೆ ಮಾಡಬಹುದು. ಅದೇ ಸಾಧನೆ ಗುರುತಿಸಿಬಿಟ್ಟರೆ ಇನ್ನಷ್ಟು ಜವಾಬ್ದಾರಿಯ ಕೆಲಸಗಳು ಆಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಸಂಶೋಧಕಿ ಡಾ. ವೈ.ಸಿ.ಭಾನುಮತಿ ಮಾತನಾಡಿ, ಮನುಷ್ಯ ಏನಾದರು ಸಾಧನೆ ಮಾಡಬಹುದು, ಅದನ್ನು ಸಮರ್ಥವಾಗಿ ಗುರುತಿಸುವವರು ಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಕನ್ನಡದ ಪ್ರಾಮಾಣಿಕರನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ವೃತ್ತಿ ಪ್ರವೃತ್ತಿಯ ಜೊತೆ ಕಾರ್ಯತ್ಪರತೆ ಇಟ್ಟುಕೊಂಡಾಗ ಬದುಕು ಭಾಗ್ಯವಾಗುವುದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪತ್ರಿಕೆಯ ಸಂಪಾದಕ ಡಾ. ಎಸ್. ಎಲ್. ಶ್ರೀನಿವಾಸಮೂರ್ತಿ ಪತ್ರಿಕೆಯ ಕುರಿತು ಮಾತನಾಡಿದರು. ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು, ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಪ್ರಶಸ್ತಿ ಪುರಸ್ಕೃತರ ವಿವರಣೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಕನ್ನಡದ ಕಣ್ಣು
ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಮತ್ತು ಪ್ರಬುದ್ಧ ಕರ್ನಾಟಕ ಕನ್ನಡದ ಎರಡು ಕಣ್ಣುಗಳು ಎಂದು ನಾಡೋಜ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ವರ್ಣಿಸಿದರು.
ಪ್ರಬುದ್ಧ ಕರ್ನಾಟಕ ಪತ್ರಿಕೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ನಾನು ಪರಿಷತ್ತಿನ ಪತ್ರಿಕೆಯ ಶತಮಾನೋತ್ಸವದಲ್ಲಿಯೂ ಭಾಗವಹಿಸುತ್ತಿರುವುದು ಅದೃಷ್ಟ ಎಂದು ಬಣ್ಣಿಸಿದರು.
ಪರಿಷತ್ ಪತ್ರಿಕೆ ನಳ ಸಂವತ್ಸರದ ಚೈತ್ರಮಾಸದಲ್ಲಿ (ಏಪ್ರಿಲ್ ೧೯೧೬ರಲ್ಲಿ) ಉದಯಿಸಿತು. ಪ್ರೊ.ಎ.ಆರ್.ಕೃಷ್ಣಶಾಸ್ತ್ರಿಗಳು ‘ಪರಿಷತ್ಪತ್ರಿಕೆ’ಯ ಸಂಪಾದಕರಾದಾಗ ಪತ್ರಿಕೆಯ ಸ್ವರೂಪ ಬದಲಾಯಿತು. ಆಗ ಕನ್ನಡ ಭಾಷೆ, ಸಾಹಿತ್ಯ ಚರಿತ್ರೆ, ಸಂಸ್ಕೃತಿ, ಕಾವ್ಯಮೀಮಾಸೆಗೆ ಮಹತ್ವ ದೊರಕಿತು. ಇದು ಕನ್ನಡ ಸಾಹಿತ್ಯ ಕಂಡ ಎಲ್ಲಾ ಸ್ಥಿತ್ಯಂತರಗಳಿಗೆ ಸಾಕ್ಷಿಯಾಯಿತು. ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳ ಅವಧಿಯಲ್ಲಿ ಆದ ಬಹಳ ಮುಖ್ಯ ಬದಲಾವಣೆ ಎಂದರೆ ಇದಕ್ಕೆ ದೊರಕಿದ ಅಖಿಲ ಕರ್ನಾಟಕ ವ್ಯಾಪ್ತಿ. ನಾಡಿನ ವಿವಿಧೆಡೆಯಲ್ಲಿ ಹಂಚಿ ಹೋಗಿದ್ದ ವಿದ್ವಾಂಸರನ್ನು ಕನ್ನಡದ ಕಾರಣಕ್ಕೆ ಒಂದುಗೂಡಿಸಿದ ಹೆಗ್ಗಳಿಕೆ ಪರಿಷತ್ತಿನ ಪತ್ರಿಕೆಗೆ ಸಲ್ಲುತ್ತದೆ. ಪತ್ರಿಕೆ ಕನ್ನಡ ಸಾರಸ್ವತ ಪರಂಪರೆಯಲ್ಲಿ ಎಷ್ಟು ಮುಖ್ಯವಾದ ಪಾತ್ರವನ್ನು ವಹಿಸಿತ್ತು. ಪ್ರೊ.ಎಂ.ವಿ.ಸೀಯವರ ಕೊಡುಗೆಯೂ ಸಾಕಷ್ಟಿದೆ ಎಂದರು.
ಪರಿಷತ್ ಪತ್ರಿಕೆ ಕನ್ನಡದ ಅತ್ಯಂತ ಹಳೆಯ ವಿದ್ವತ್ ಪತ್ರಿಕೆಯಾಗಿದ್ದು ನಾಡಿನ ಎಲ್ಲಾ ಹಿರಿಯ ಮತ್ತು ಕಿರಿಯ ಬರಹಗಾರರ ಲೇಖನಗಳು ಇದರಲ್ಲಿ ಪ್ರಕಟವಾಗಿವೆ. ಕಲೆ, ಸಾಹಿತ್ಯ, ವಿಜ್ಞಾನ, ಇತಿಹಾಸ, ಪುರಾತತ್ವ, ಕಾವ್ಯ ಸೇರಿದಂತೆ ಬಹುತೇಕ ಎಲ್ಲಾ ಜ್ಞಾನ ಶಿಸ್ತುಗಳ ಕುರಿತ ಲೇಖನಗಳು ಇಲ್ಲಿ ಪ್ರಕಟವಾಗಿವೆ. ಅಷ್ಟೇ ಅಲ್ಲ ಎಷ್ಟೋ ಜ್ಞಾನಶಿಸ್ತುಗಳ ಆರಂಭಿಕ ಹೆಜ್ಜೆಗುರುತುಗಳನ್ನು ಕೂಡ ಇಲ್ಲಿ ನೋಡ ಬಹುದು. ಈ ಅರ್ಥದಲ್ಲಿ ಪತ್ರಿಕೆಗೆ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವಗಳಿವೆ. ಈಗ ಬಿಡುಗಡೆಯಾಗಿರುವ ನೂರನೆಯ ಸಂಪುಟದ ಸಂಗ್ರಾಹ್ಯ ಸಂಚಿಕೆ ಮೊದಲ ಐವತ್ತು ಸಂಪುಟಗಳಲ್ಲಿ ಹಿಂದೆ ಪ್ರಕಟವಾಗಿರುವ ಆಯ್ದ ಲೇಖನಗಳನ್ನು ಬಳಸಿಕೊಳ್ಳಲಾಗಿದೆ. ರಾ.ಹ.ದೇಶಪಾಂಡೆ, ಆಲೂರ ವೆಂಕಟರಾವ್, ಟಿ.ಎಸ್.ವೆಂಕಣ್ಣಯ್ಯ, ಎಂ.ಆರ್.ಶ್ರೀನಿವಾಸ ಮೂರ್ತಿ, ಮಾಸ್ತಿ, ತೀ.ನಂ.ಶ್ರೀ, ಕುವೆಂಪು, ಗೋವಿಂದ ಪೈ, ಬೇಂದ್ರೆ, ಅ.ನ.ಕೃ, ಪು.ತಿ.ನ, ಡಿ.ವಿ.ಜಿ, ಬಿ.ಎಂ.ಶ್ರೀ ಹೀಗೆ ಹಲವು ಸಾಹಿತ್ಯ ಲೋಕದ ದಿಗ್ಗಜರ ಲೇಖನಗಳು ಒಟ್ಟಾಗಿ ದೊರಕುತ್ತಿರುವುದು ಸಾಂಸ್ಕೃತಿಕ ಮಹತ್ವದ ಸಂಗತಿಯಾಗಿದೆ ಎಂದು ಪತ್ರಿಕೆಯ ಮಹತ್ವವನ್ನು ವಿವರಿಸಿದರು.




