ಜಾತಿಯ ನಿರ್ಮೂಲನೆ
ಮಹಾತ್ಮಾ ಗಾಂಧಿಯವರಿಗೆ ಪ್ರತ್ಯುತ್ತರ ಸಹಿತವಾಗಿ
ಡಾ. ಬಿ.ಆರ್.ಅಂಬೇಡ್ಕರ್, ಎಂ.ಎ., ಪಿಎಚ್.ಡಿ. (ಲಂಡನ್), ಎಲ್.ಎಲ್.ಡಿ.(ಕೊಲಂಬಿಯ), ಡಿ.ಎಸ್ಸಿ., ಡಿ.ಲಿಟ್. (ಉಸ್ಮಾನಿಯಾ), ಬಾರ್-ಆಟ್-ಲಾ.
“ಸತ್ಯವನ್ನು ಸತ್ಯವೆಂದೂ, ಅಸತ್ಯವನ್ನು ಅಸತ್ಯವೆಂದೂ ಅರಿತುಕೋ”
– ಬುದ್ಧ
ವಿಚಾರ ಮಾಡಲೊಲ್ಲದವನು ಮತಾಂಧ
ವಿಚಾರ ಮಾಡಲರಿಯದವನು ಮೂರ್ಖ
ವಿಚಾರ ಮಾಡಲಂಜುವವನು ಗುಲಾಮ
– ಎಚ್. ಡ್ರಮಂಡ್
ಮೊದಲ ಪ್ರಕಟಣೆ: ೧೯೩೬
೧೯೪೪ರ ಮೂರನೆಯ ಆವೃತ್ತಿಯಿಂದ ಮುದ್ರಿಸಲಾಗಿದೆ
ಜಾತಿಯ ನಿರ್ಮೂಲನೆ: ಎರಡನೇ ಮುದ್ರಣಕ್ಕೆ ಮುನ್ನುಡಿ
ಲಾಹೋರದ ಜಾತ್-ಪತ್-ತೋಡಕ್ ಮಂಡಲಕ್ಕಾಗಿ ನಾನು ಸಿದ್ಧಪಡಿಸಿದ್ದ ಭಾಷಣಕ್ಕೆ ಹಿಂದೂ ಜನಸಮುದಾಯದಿಂದ ವಿಸ್ಮಯಕರವಾದ ಆತ್ಮೀಯ ಸ್ವಾಗತ ದೊರೆಯಿತು. ಅದರ ಇಂಗ್ಲಿಷ್ ಆವೃತ್ತಿಯ ಸಾವಿರದೈನೂರು ಪ್ರತಿಗಳು ಪ್ರಕಟವಾದ ಎರಡು ತಿಂಗಳಲ್ಲಿಯೇ ಮಾರಾಟವಾಗಿಹೋದವು. ಗುಜರಾತಿ ಹಾಗೂ ತಮಿಳು ಭಾಷಾಂತರಗಳು ಹೊರಬಂದಿವೆ. ಮರಾಠಿ, ಹಿಂದಿ, ಪಂಜಾಬಿ ಮತ್ತು ಮಲೆಯಾಳಂ ಭಾಷಾಂತರಗಳು ಸಿದ್ಧವಾಗುತ್ತಿವೆ. ಇಂಗ್ಲಿಷ್ ಆವೃತ್ತಿಯ ಬೇಡಿಕೆ ಇನ್ನೂ ತಗ್ಗದೆ ಮುಂದುವರಿಯುತ್ತಿದೆ. ಈ ಬೇಡಿಕೆಯ ಪೂರೈಕೆಗಾಗಿ ಎರಡನೇ ಆವೃತ್ತಿಯನ್ನು ಪ್ರಕಟಿಸುವುದು ಅಗತ್ಯವಾಯಿತು. ಇದನ್ನೊಂದು ನೇರವಾದ ನಿರೂಪಣಾ ಕ್ರಮದಲ್ಲಿ ಅಳವಡಿಸಬೇಕೆಂದು ಕೆಲವರು ಹೇಳಿದರು. ಇತಿಹಾಸ ಹಾಗೂ ಅಭಿವ್ಯಕ್ತಿಗಳ ಪರಿಣಾಮದ ದೃಷ್ಟಿಯಿಂದ ಇದನ್ನು ಮೂಲದಲ್ಲಿ ಇದ್ದ ಭಾಷಣರೂಪದಲ್ಲಿಯೇ ಉಳಿಸಿಕೊಂಡಿದ್ದೇನೆ. ಈ ಆವೃತ್ತಿಯಲ್ಲಿ ಎರಡು ಪರಿಶಿಷ್ಟಗಳನ್ನು ಸೇರಿಸಿದ್ದೇನೆ. ಪರಿಶಿಷ್ಟ I ರಲ್ಲಿ ನನ್ನ ಭಾಷಣದ ವಿಮರ್ಶೆಯಾಗಿ ಹರಿಜನದಲ್ಲಿ ಬಂದ ಶ್ರೀ ಗಾಂಧಿಯವರ ಎರಡು ಲೇಖನಗಳು ಹಾಗೂ ಜಾತ್-ಪತ್-ತೋಡಕ್ ಮಂಡಲದ ಸದಸ್ಯರಾದ ಶ್ರೀ ಸಂತರಾಮರಿಗೆ ಅವರು ಬರೆದ ಪತ್ರಗಳಿವೆ. ಪರಿಶಿಷ್ಟ Iರಲ್ಲಿ ಕೊಡಲಾದ ಶ್ರೀ ಗಾಂಧಿಯವರು ಬರೆದಿರುವ ಲೇಖನಕ್ಕೆ ಉತ್ತರವಾಗಿ ನಾನು ಬರೆದಿರುವ ಪ್ರತ್ಯುತ್ತರ ಪರಿಶಿಷ್ಟ IIರಲ್ಲಿದೆ. ಶ್ರೀ ಗಾಂಧಿಯವರರೊಬ್ಬರೇ ಅಲ್ಲದೆ ಇನ್ನೂ ಹಲವರು ನನ್ನ ಅಭಿಪ್ರಾಯವನ್ನು ಕಟುವಾಗಿ ಟೀಕಿಸಿದ್ದಾರೆ. ಇಂತಹ ಪ್ರತಿಕೂಲದ ವಿಮರ್ಶೆಗಳನ್ನು ಗಮನಿಸಿದಾಗ ಶ್ರೀ ಗಾಂಧಿಯವರಿಗೆ ಮಾತ್ರ ಪ್ರತ್ಯುತ್ತರಿಸುವುದು ಉಚಿತ ಎಂದು ನಿರ್ಧರಿಸಿದ್ದೇನೆ. ಉತ್ತರವನ್ನು ಪಡೆಯಲೇಬೇಕೆಂಬಷ್ಟು ಘನವಾದ ಮಾತನ್ನು ಅವರು ಆಡಿದ್ದಾರೆ ಎಂಬುದು ಇದಕ್ಕೆ ಕಾರಣವಲ್ಲ, ಆದರೆ ಆನೇಕ ಹಿಂದೂಗಳಿಗೆ ಆತನ ಮಾತು ದೇವವಾಣಿಯೆನಿಸಿದೆ. ಆತ ಹೇಳಿಬಿಟ್ಟರೆ ಆ ಮಾತು ಅಲ್ಲಿಗೆ ಮುಗಿದುಹೋಯಿತು. ಮುಂದೆ ಯಾವ ನಾಯಿ ಕೂಡ ಬೊಗಳಬೇಕಾಗಿಲ್ಲ ಎಂದು ಆ ಜನ ಭಾವಿಸುತ್ತಾರೆ. ಆದರೆ ಧರ್ಮಾಧಿಕಾರಿಯನ್ನು ಎದುರಿಸಿ ಆತನೂ ಕೂಡ ದೋಷರಹಿತನಲ್ಲ ಎಂದು ವಾದಿಸಿ, ಸಾಧಿಸುವ ಬಂಡಾಯಗಾರರಿಗೆ ಜಗತ್ತು ತುಂಬ ಋಣಿಯಾಗಿದೆ. ಪ್ರತಿಯೊಂದು ಪ್ರಗತಿಶೀಲ ಸಮಾಜ ತನ್ನ ಕ್ರಾಂತಿಕಾರರಿಗೆ ಕೊಡಬೇಕಾದ ಗೌರವದ ಬಗ್ಗೆ ನಾನು ಚಿಂತಿಸುತ್ತಿಲ್ಲ. ಆದರೆ ತಾವು ಭಾರತದಲ್ಲಿನ ರೋಗಿಗಳೆಂದೂ, ತಮ್ಮ ವ್ಯಾಧಿ ಇತರ ಭಾರತೀಯರ ಆರೋಗ್ಯ ಮತ್ತು ನೆಮ್ಮದಿಗೆ ಅಪಾಯ ಉಂಟುಮಾಡುತ್ತಿದೆಯೆಂದೂ ಹಿಂದೂಗಳು ಅರಿತುಕೊಂಡರೆ ಸಾಕು; ಅದು ನನಗೆ ತೃಪ್ತಿ.
– ಬಿ. ಆರ್. ಅಂಬೇಡ್ಕರ್ (ಪುಟ 31)
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮೂರನೆಯ ಮುದ್ರಣಕ್ಕೆ ಮುನ್ನುಡಿ
ಈ ಪ್ರಬಂಧದ ಎರಡನೆಯ ಆವೃತ್ತಿ ೧೯೩೭ರಲ್ಲಿ ಪ್ರಕಟಗೊಂಡಿತು, ಮತ್ತು ಕೆಲವೇ ಸಮಯದಲ್ಲಿ ಮುಗಿದುಹೋಯಿತು. ಹೊಸ ಆವೃತ್ತಿಯ ಬಗ್ಗೆ ಬೇಡಿಕೆಯಿತ್ತು. ಇಂಡಿಯನ್ ಆ್ಯಂಟಿಕ್ವರಿ ಜರ್ನಲ್ ನಲ್ಲಿ “Castes in India, their Origin and their Mechanism” ‘ಭಾರತದಲ್ಲಿ ಜಾತಿಗಳು, ಅವುಗಳ ಉಗಮ ಮತ್ತು ಕಾರ್ಯವಿಧಾನ ‘- ಎನ್ನುವ ಪ್ರಬಂಧದ ಜೊತೆ ಇದನ್ನು ಸಂಯೋಜಿಸಿ ಹೊರತರುವ ಉದ್ದೇಶ ನನ್ನದಿತ್ತು. ಆದರೆ ಸಮಯಾವಕಾಶದ ಕೊರತೆಯಿಂದಲೂ, ಪ್ರಬಂಧಕ್ಕೆ ಜನರಿಂದ ಒತ್ತಾಯಪೂರ್ವಕ ಬೇಡಿಕೆಯಿದ್ದುದರಿಂದಲೂ, ನಾನು ಇದನ್ನು ಎರಡನೆಯ ಆವೃತ್ತಿಯ ಪುನರ್ಮುದ್ರಣವಾಗಿಸುವುದಕ್ಕಷ್ಟೇ ಸಂತುಷ್ಟನಾಗಿದ್ದೇನೆ.
ಈ ಪ್ರಬಂಧ ಜನಪ್ರಿಯವಾಗಿರುವುದಕ್ಕೆ ಸಂತಸವಾಗುತ್ತಿದೆ. ಹಾಗೂ ಅದು ತನ್ನ ಉದ್ದೇಶಿತ ಗುರಿ ಸಾಕಾರಗೊಳ್ಳಲು ನೆರವಾಗಬಹುದೆಂಬ ನಂಬಿಕೆ ನನ್ನದು.
– ಬಿ.ಆರ್.ಅಂಬೇಡ್ಕರ್
೨೨, ಪೃಥ್ವಿರಾಜ್ ರಸ್ತೆ
ನವದೆಹಲಿ
೧ನೇ ಡಿಸೆಂಬರ್ ೧೯೪೪
(ಪುಟ 32)
ಪೀಠಿಕೆ
೧೯೩೫ ಡಿಸೆಂಬರ್ ೧೨ ರಂದು ಜಾತ್-ಪತ್-ತೋಡಕ್ ಮಂಡಲದ ಕಾರ್ಯದರ್ಶಿಗಳಾಗಿದ್ದ ಶ್ರೀ ಸಂತರಾಮರಿಂದ ಈ ಕೆಳಗಿನಂತೆ ಕಾಗದ ಬಂದಿತು:
ಪ್ರಿಯ ಡಾಕ್ಟರ್ ಸಾಹೇಬ್,
ನಿಮ್ಮ ಡಿಸೆಂಬರ್ ೫ನೆಯ ದಿನಾಂಕದ ಕಾಗದಕ್ಕೆ ತುಂಬ ಕೃತಜ್ಞನಾಗಿದ್ದೇನೆ. ನಿಮ್ಮ ಅನುಮತಿಯನ್ನು ಕೇಳದೆ ಅದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿಬಿಟ್ಟಿದ್ದೇನೆ. ಅದಕ್ಕಾಗಿ ನನ್ನನ್ನು ನೀವು ಕ್ಷಮಿಸಬೇಕು. ಹಾಗೆ ಪ್ರಕಟಣೆಗೆ ಕೊಡುವುದರಿಂದ ಅಪಾಯವೇನೂ ಇಲ್ಲವೆಂದು ನನಗೆ ತೋರಿತು. ನೀವೊಬ್ಬ ಮಹಾನ್ ಚಿಂತಕರು, ಜಾತಿಯ ಸಮಸ್ಯೆಯನ್ನು ನಿಮ್ಮಷ್ಟು ಆಳವಾಗಿ ಅಭ್ಯಾಸ ಮಾಡಿದವರು ಇನ್ನೊಬ್ಬರಿಲ್ಲವೆಂದು ನನ್ನ ನಿಶ್ಚಿತವಾದ ಅಭಿಪ್ರಾಯವಾಗಿದೆ. ನಿಮ್ಮ ವಿಚಾರಗಳಿಂದ ನಾನು ಹಾಗೂ ನಮ್ಮ ಮಂಡಲ ತುಂಬ ಲಾಭ ಪಡೆದಿದ್ದೇವೆ. ಅನೇಕ ಸಲ ಕ್ರಾಂತಿಯಲ್ಲಿ ಅದನ್ನು ವಿವರಿಸಿ ಬೋಧಿಸಿದ್ದೇನೆ. ಮತ್ತು ಅನೇಕ ಸಮ್ಮೇಳನಗಳಲ್ಲಿ ಅದರ ಕುರಿತು ಭಾಷಣ ಮಾಡಿದ್ದೇನೆ. ಈಗ ನಿಮ್ಮ ಹೊಸ ಸೂತ್ರದ ಅರ್ಥವನ್ನು ತಿಳಿದುಕೊಳ್ಳಲು ನಾನು ತುಂಬ ಕಾತರದಿಂದಿದ್ದೇನೆ. “ಜಾತಿಗೆ ಆಧಾರವಾದ ಧಾರ್ಮಿಕ ಕಲ್ಪನೆಗಳನ್ನು ನಿರ್ಮೂಲಗೊಳಿಸಿದಾಗ ಮಾತ್ರ ಜಾತಿಯನ್ನು ಮುರಿದುಹಾಕಲು ಸಾಧ್ಯ”ಎಂದು ನೀವು ಹೇಳಿದ್ದೀರಿ. ನಿಮಗೆ ಸಾಧ್ಯವಾದಷ್ಟು ಶೀಘ್ರವಾಗಿ ಈ ಸೂತ್ರವನ್ನು ವಿಸ್ತಾರವಾಗಿ ವಿವರಿಸಿ. ಹಾಗೆ ನೀವು ಮಾಡಿದರೆ ಅದನ್ನು ಎತ್ತಿಕೊಂಡು ಸಭಾ ವೇದಿಕೆಗಳಿಂದಲೂ, ಪತ್ರಿಕೆಗಳಲ್ಲಿಯೂ ಅದರ ಮಹತ್ವವನ್ನು ಬಿಂಬಿಸಲು ನಮಗೆ ಅನುಕೂಲವಾಗುವುದು. ಸದ್ಯಕ್ಕೆ ನನಗೆ ಅದು ಪೂರ್ತಿಯಾಗಿ ಮನನವಾಗಿಲ್ಲ.

ನಮ್ಮ ವಾರ್ಷಿಕ ಸಮ್ಮೇಳನಕ್ಕೆ ನೀವೇ ಅಧ್ಯಕ್ಷರಾಗಬೇಕೆಂದು ನಮ್ಮ ಕಾರ್ಯಕಾರಿ ಸಮಿತಿ ಒತ್ತಾಯ ಮಾಡುತ್ತಿದೆ. ನಿಮ್ಮ ಅನುಕೂಲತೆಗೆ ತಕ್ಕಂತೆ ಕಾರ್ಯಕ್ರಮದ ದಿನಾಂಕಗಳನ್ನು ನಾವು ಬದಲಾಯಿಸಬಲ್ಲೆವು. ಪಂಜಾಬದ ಸ್ವತಂತ್ರ ಹರಿಜನರು ನಿಮ್ಮನ್ನು ಕಂಡು ಅವರ ಯೋಜನೆಗಳ ವಿಷಯದಲ್ಲಿ ನಿಮ್ಮೊಡನೆ ಚರ್ಚಿಸಲು ತುಂಬ ಕಾತರರಾಗಿದ್ದಾರೆ. ಆದುದರಿಂದ ನೀವು ನಮ್ಮ ಕೋರಿಕೆಯನ್ನು ಪರಿಗಣಿಸಿ ಸಮ್ಮೇಳನಾಧ್ಯಕ್ಷರಾಗಿ ಲಾಹೋರಕ್ಕೆ ಬಂದರೆ ಒಂದೇ ಏಟಿಗೆ ಎರಡು ಕಾರ್ಯಗಳೂ ಕೈಗೂಡುವವು. ಬೇರೆ ಬೇರೆ ಅಭಿಪ್ರಾಯಗಳುಳ್ಳ ಹರಿಜನ ನಾಯಕರನ್ನು ನಾವು ಆಮಂತ್ರಿಸುವೆವು. ನಿಮ್ಮ ವಿಚಾರಗಳನ್ನು ಅವರಿಗೆ ವಿವರಿಸುವ ಸಂದರ್ಭ ನಿಮಗೆ ಒದಗುವುದು.

ನಮ್ಮ ಸಹಾಯಕ ಕಾರ್ಯದರ್ಶಿ ಶ್ರೀ ಇಂದ್ರಸಿಂಗ್ ಅವರು ಮಂಡಲದ ಪರವಾಗಿ ಕ್ರಿಸ್‌ಮಸ್ ಸಮಯದಲ್ಲಿ ನಿಮ್ಮನ್ನು ಮುಂಬಯಿಯಲ್ಲೇ ಕಂಡು, ನಿಮಗೆ ವಸ್ತುಸ್ಥಿತಿಯನ್ನೆಲ್ಲ ವಿವರಿಸಿ ನಮ್ಮ ಬಿನ್ನಹವನ್ನು ನೀವು ಒಪ್ಪಿಕೊಳ್ಳಲು ಮನವೊಲಿಸುವುದಕ್ಕಾಗಿ ಬರುವರು.
– ಸಂತರಾಮ
(ಪುಟ 33)
ಈ ಜಾತ್-ಪತ್-ತೋಡಕ್ ಮಂಡಲವೆಂಬುದು ಸವರ್ಣ ಹಿಂದೂ ಸಮಾಜ ಸುಧಾರಕರ ಸಂಸ್ಥೆಯೆಂದೂ, ಹಿಂದೂಗಳಲ್ಲಿ ಜಾತಿಪದ್ಧತಿಯನ್ನು ನಿರ್ಮೂಲಗೊಳಿಸುವುದು ಅದರ ಏಕಮೇವ ಗುರಿಯೆಂದೂ ನನಗೆ ತಿಳಿಸಲಾಗಿತ್ತು. ಸವರ್ಣೀಯ ಹಿಂದೂಗಳು ನಡೆಸುವ ಯಾವ ಚಳುವಳಿಯಲ್ಲಿಯೇ ಆಗಲಿ ನಾನು ಪಾಲುಗೊಳ್ಳಲು ಬಯಸುವುದಿಲ್ಲ. ಇದು ನನ್ನದೊಂದು ನಿಯಮ ಎನ್ನಬಹುದು. ಸಮಾಜ ಸುಧಾರಣೆಯ ವಿಷಯವಾಗಿ ಅವರ ಹಾಗೂ ನನ್ನ ದೃಷ್ಟಿಕೋನಗಳು ಸಂಪೂರ್ಣ ಭಿನ್ನವಾಗಿರುವುದರಿಂದ ಅವರ ಜೊತೆಗೆ ಹೆಜ್ಜೆಯಿಡುವುದು ನನಗೆ ಸಾಧ್ಯವಿಲ್ಲದಾಗಿದೆ. ನಿಜಕ್ಕೂ, ಅಭಿಪ್ರಾಯ ಭೇದಗಳ ಮೂಲಕ ಅವರ ಸಹವಾಸ ಕೂಡ ನನಗೆ ಹಿತಕರವೆನಿಸುವುದಿಲ್ಲ. ಈ ಕಾರಣದಿಂದ ಮಂಡಲದವರು ಮೊದಲ ಸಲ ನನ್ನ ಬಳಿಗೆ ಬಂದಾಗ ನಾನು ಅಧ್ಯಕ್ಷನಾಗಲು ಒಲ್ಲೆನೆಂದು ತಿಳಿಸಿಬಿಟ್ಟೆ. ಆದರೆ ಮಂಡಲದವರು ಬಿಡಲಿಲ್ಲ; ತಮ್ಮ ಸದಸ್ಯರಲ್ಲೊಬ್ಬರನ್ನು ಮುಂಬಯಿಗೆ ಕಳುಹಿಸಿ, ತಮ್ಮ ನಿವೇದನೆಯನ್ನು ಪರಿಗಣಿಸುವಂತೆ ನನ್ನನ್ನು ಒತ್ತಾಯಿಸಿದರು. ಕೊನೆಗೆ ನಾನು ಒಪ್ಪಿಕೊಂಡೆ. ಮಂಡಲದ ಪ್ರಮುಖ ಕಾರ್ಯಸ್ಥಳವಾದ ಲಾಹೋರದಲ್ಲಿ ವಾರ್ಷಿಕ ಸಮ್ಮೇಳನ ಈಸ್ಟರ್ ಹಬ್ಬದಂದು ನಡೆಯುವುದಿತ್ತು. ಆದರೆ ಆನಂತರ ೧೯೩೬ರ ಮೇ ತಿಂಗಳ ಮಧ್ಯಕ್ಕೆ ಅದನ್ನು ಮುಂದೂಡಲಾಯಿತು. ಮಂಡಲದ ಸ್ವಾಗತ ಸಮಿತಿ ಈಗ ಸಮ್ಮೇಳನವನ್ನು ನಡೆಸದಿರಲು ನಿರ್ಧರಿಸಿದೆ. ನನ್ನ ಅಧ್ಯಕ್ಷೀಯ ಭಾಷಣ ಮುದ್ರಣವಾದ ಎಷ್ಟೋ ದಿನಗಳ ನಂತರ ಸಮ್ಮೇಳನ ರದ್ದುಪಡಿಸುವಿಕೆಯ ನೋಟೀಸು ಬಂದಿತು. ಭಾಷಣದ ಪ್ರತಿಗಳು ಈಗ ನನ್ನಲ್ಲಿ ಉಳಿದುಕೊಂಡಿವೆ. ಅಧ್ಯಕ್ಷಪೀಠದಿಂದ ಭಾಷಣ ಮಾಡುವ ಸಂದರ್ಭ ನನಗೆ ತಪ್ಪಿಹೋದುದರಿಂದ ಜಾತಿಪದ್ಧತಿಯ ಸಮಸ್ಯೆಗಳನ್ನು ಕುರಿತ ನನ್ನ ಅಭಿಪ್ರಾಯಗಳನ್ನು ತಿಳಿದುಕೊಳ್ಳುವ ಅವಕಾಶ ಸಾರ್ವಜನಿಕರಿಗೆ ದೊರೆಯಲಿಲ್ಲ. ಜನಸಾಮಾನ್ಯರಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸಲೆಂದೂ, ನನ್ನಲ್ಲಿ ಉಳಿದುಕೊಂಡ ಮುದ್ರಿತಪ್ರತಿಗಳನ್ನು ಹಂಚಿಬಿಡಬೇಕೆಂದೂ ನಾನು ಅವುಗಳನ್ನು ಈಗ ಮಾರುಕಟ್ಟೆಗೆ ಬಿಟ್ಟಿದ್ದೇನೆ. ಲಗತ್ತಿಸಿರುವ ಪುಟಗಳು ನನ್ನ ಭಾಷಣದ ಪೂರ್ಣಪಾಠವನ್ನು ಒಳಗೊಂಡಿವೆ.
ಸಮ್ಮೇಳನದ ಅಧ್ಯಕ್ಷತೆ ನನಗೆ ದಕ್ಕದಂತೆ ಆದುದೇಕೆಂದು ತಿಳಿಯಲು ಸಾರ್ವಜನಿಕರು ಕುತೂಹಲ ಪಡಬಹುದು. ಮೊದಲನೆಯದಾಗಿ ಭಾಷಣದ ಮುದ್ರಣದ ವಿಷಯಕ್ಕೆ ವಿವಾದ ಎದ್ದಿತು. ಅದು ಮುಂಬಯಿಯಲ್ಲಿಯೇ ಅಚ್ಚಾಗಬೇಕೆಂದು ನಾನು ಬಯಸಿದೆ. ಮಿತವ್ಯಯದ ದೃಷ್ಟಿಯಿಂದ ಅದನ್ನು ಲಾಹೋರದಲ್ಲಿ ಮುದ್ರಿಸುವುದು ವಿಹಿತವೆಂದು ಮಂಡಲ ಹೇಳಿತು. ನಾನು ಅದಕ್ಕೊಪ್ಪದೆ ಮುಂಬಯಿಯಲ್ಲಿಯೇ ಮುದ್ರಣವಾಗಬೇಕೆಂದು ಆಗ್ರಹಿಸಿದೆ. ನನ್ನ ಸೂಚನೆಗೆ ಒಪ್ಪದ ಮಂಡಲದ ಅನೇಕ ಸದಸ್ಯರ ಅಂಕಿತವನ್ನೊಳಗೊಂಡ ಒಂದು ಕಾಗದ ಬಂದಿತು. ಅದರಲ್ಲಿಯ ಕೆಲಭಾಗಗಳನ್ನು ಈ ಕೆಳಗೆ ಉದ್ದರಿಸಲಾಗಿದೆ:
27.3.36
ಸನ್ಮಾನ್ಯ ಡಾಕ್ಟರ್‌ಜೀ.
ಈ ತಿಂಗಳ ೨೪ರಂದು ನೀವು ಶ್ರೀ ಸಂತರಾಮರಿಗೆ ಬರೆದ ಕಾಗದವನ್ನು ನಮಗೆ ತೋರಿಸಲಾಗಿದೆ. ಅದನ್ನು ಓದಿ ನಮಗೆ ಸ್ವಲ್ಪ ನಿರಾಶೆ ಆಯಿತು. ಇಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಪೂರ್ಣ ಕಲ್ಪನೆ ಬಹುಶಃ ನಿಮಗೆ ಆಗಿರಲಾರದು. ನಾವು ನಿಮ್ಮನ್ನು ಈ ರಾಜ್ಯಕ್ಕೆ ಬರಮಾಡಿಕೊಳ್ಳುವುದನ್ನು ಪಂಜಾಬದ ಸಮಸ್ತ ಹಿಂದೂಗಳು ವಿರೋಧಿಸಿದ್ದಾರೆ. ಜಾತ್-ಪತ್-ತೋಡಕ್ ಮಂಡಲವು ಅತ್ಯಂತ ಕಟುವಾದ (ಪುಟ 34)
ವಿಮರ್ಶೆಗೆ ಈಡಾಗಿದೆ. ಹಾಗೂ ಎಲ್ಲಾ ಕಡೆಯಿಂದ ಹೀನಾಮಾನವಾದ ಧಿಕ್ಕಾರವನ್ನ ಪಡೆದುಕೊಂಡಿದೆ. ಭಾಯಿ ಪರಮಾನಂದ, ಎಂ.ಎಲ್.ಎ. (ಮಾಜಿ ಅಧ್ಯಕ್ಷ, ಹಿಂದೂ ಮಹಾಸಭಾ), ಮಹಾತ್ಮಾ ಹಂಸರಾಜ, ಡಾ. ಗೋಕುಲಚಂದ್ ನಾರಂಗ್ (ಸ್ವಾಯತ್ತ ಸಂಸ್ಥಾಡಳಿತದ ಮಂತ್ರಿಗಳು), ರಾಜಾ ನರೇಂದ್ರನಾಥ್, ಎಂ.ಎಲ್.ಸಿ., ಮುಂತಾಗಿ ಎಲ್ಲ ಹಿಂದೂ ಮುಖಂಡರು ಮಂಡಲದ ಈ ಕ್ರಮ ತಮಗೆ ಸಮ್ಮತವಿಲ್ಲವೆಂದು ಸಾರಿದ್ದಾರೆ.
ಇಷ್ಟೆಲ್ಲಾ ವಿರೋಧವಿದ್ದರೂ ಶ್ರೀ ಸಂತರಾಮರ ಮುಖಂಡತ್ವದಲ್ಲಿ ಮಂಡಲದ ಕಾರ್ಯಕರ್ತರು ತಮ್ಮ ಸಂಕಲ್ಪವನ್ನು ಬಿಟ್ಟುಕೊಡದೆ ನೀವು ಅಧ್ಯಕ್ಷರಾಗಲೇಬೇಕೆಂದು ಹಟಹಿಡಿದಿದ್ದಾರೆ. ಮಂಡಲದ ಹೆಸರಿಗೆ ಕಳಂಕ ತಗಲಿದೆ.
ಪರಿಸ್ಥಿತಿ ಹೀಗಿರುವುದರಿಂದ ಮಂಡಲಕ್ಕೆ ಸಹಕಾರ ನೀಡುವುದು ತಮ್ಮ ಕರ್ತವ್ಯ. ಒಂದೆಡೆ ಹಿಂದೂಗಳು ನಮ್ಮನ್ನು ಇಷ್ಟೊಂದು ಸಂಕಷ್ಟಕ್ಕೆ ಗುರಿಪಡಿಸುತ್ತಿದ್ದಾರೆ; ಇನ್ನೊಂದೆಡೆ ನೀವು ಕೂಡ ನಿಮ್ಮ ನಿಲುವಿಗೇ ಅಂಟಿಕೊಂಡು ನಮ್ಮ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುವಿರಾದರೆ ಅದರಂತಹ ದುರ್ದೈವ ಇನ್ನೊಂದಿರಲಾರದು.
ನೀವು ಈ ವಿಷಯವನ್ನು ಚೆನ್ನಾಗಿ ಪರಿಶೀಲಿಸಿ. ನಮಗೆಲ್ಲರಿಗೂ ಲೇಸಾಗುವಂತೆ ಮಾಡುವಿರೆಂದು ಹಾರೈಸುತ್ತೇವೆ.
ಈ ಪತ್ರ ನನ್ನನ್ನು ದಿಗಿಲುಗೊಳಿಸಿತು. ಭಾಷಣವನ್ನು ಮುದ್ರಿಸುವ ವಿಷಯದಲ್ಲಿ ಉಂಟಾಗುವ ಕೇವಲ ಕೆಲವು ರೂಪಾಯಿಗಳಿಗಾಗಿ ಮಂಡಲವು ನನ್ನ ಮನಸ್ಸನ್ನು ಏಕೆ ನೋಯಿಸಬೇಕೋ ನನಗೆ ತಿಳಿಯದಾಯಿತು. ಎರಡನೆಯದಾಗಿ, ನಾನು ಅಧ್ಯಕ್ಷನಾಗಿ ಆಯ್ಕೆಗೊಂಡಿರುವೆನೆಂಬುದನ್ನು ಪ್ರತಿಭಟಿಸಿ ಸರ್ ಗೋಕುಲಚಂದ್ ನಾರಂಗ್‌ರಂತಹ ಗೃಹಸ್ಥರು ನಿಜವಾಗಿಯೂ ರಾಜೀನಾಮೆ ನೀಡಿದರು ಎಂಬುದನ್ನು ನಾನು ನಂಬಲಾರೆ. ಏಕೆಂದರೆ ಸರ್ ಗೋಕುಲಚಂದ್ ಅವರು ಸ್ವತಃ ಬರೆದ ಈ ಕೆಳಗಿನ ಕಾಗದ ಅದಾಗಲೇ ನನ್ನ ಕೈಸೇರಿತ್ತು.
5 ಮಾಂಟ್ಗೋಮರಿ ರಸ್ತೆ, ಲಾಹೋರ್, 7.2.36
ಪ್ರಿಯ ಡಾಕ್ಟರ್ ಅಂಬೇಡ್ಕರ್,
ಈಸ್ಟರ್ ಹಬ್ಬದ ಹೊತ್ತಿಗೆ ಲಾಹೋರದಲ್ಲಿ ನಡೆಯುವ ಮುಂದಿನ ವಾರ್ಷಿಕ ಸಮ್ಮೇಳನಕ್ಕೆ ನೀವು ಅಧ್ಯಕ್ಷರಾಗಲು ಒಪ್ಪಿರುವಿರೆಂದು ಜಾತ್-ಪತ್-ತೋಡಕ್ ಮಂಡಲದ ಕಾರ್ಯಕರ್ತರಿಂದ ತಿಳಿದು ನನಗೆ ಸಂತಸವಾಗಿದೆ. ಲಾಹೋರದಲ್ಲಿ ನೀವು ನನ್ನ ಮನೆಯಲ್ಲಿಯೇ ಉಳಿದುಕೊಂಡರೆ ನನಗೆ ತುಂಬ ಸಂತೋಷವಾಗುವುದು.
ಭೇಟಿಯಾದಾಗ ಹೆಚ್ಚಿನ ವಿಷಯ.
ನಿಮ್ಮ ನಂಬಿಕೆಯ.
– ಜಿ.ಸಿ.ನಾರಂಗ್
(ಪುಟ 35)
ವಸ್ತುಸ್ಥಿತಿ ಏನೇ ಇದ್ದಿರಲಿ. ನಾನು ಒತ್ತಾಯಕ್ಕೆ ಮಣಿಯಲಿಲ್ಲ. ಆದರೆ ಭಾಷಣದ ಮುದ್ರಣ ಮುಂಬಯಿಯಲ್ಲಿಯೇ ಆಗಬೇಕೆಂಬ ನನ್ನ ದೃಢವಾದ ನಿಲುಮೆಯನ್ನು ಅರಿತಾಗ ನನ್ನ ಸೂಚನೆಯನ್ನು ಒಪ್ಪುವುದಕ್ಕೆ ಬದಲಾಗಿ ಮಂಡಲದವರು ಈ ವಿಷಯವನ್ನು ಮುಖತಃ ಮಾತಾಡಿ ಮುಗಿಸಲು ಶ್ರೀ ಹರಭಗವಾನರನ್ನು ಮುಂಬಯಿಗೆ ಕಳಿಸುತ್ತಿರುವುದಾಗಿ ನನಗೊಂದು ತಂತಿ ಕಳಿಸಿದರು. ಶ್ರೀ ಹರಭಗವಾನರು ಏಪ್ರಿಲ್ ೯ರಂದು ಮುಂಬಯಿಗೆ ಬಂದರು. ಅವರನ್ನು ಕಂಡು ಮಾತನಾಡಿದಾಗ ಅವರಿಗೆ ಈ ವಿಷಯದಲ್ಲಿ ಏನೂ ಹೇಳುವುದಿರಲಿಲ್ಲವೆಂದು ತೋರಿತು. ಭಾಷಣದ ಮುದ್ರಣ ಮುಂಬಯಿಯಲ್ಲೋ ಲಾಹೋರದಲ್ಲೋ ಎಂಬ ವಿಚಾರ ತಮಗೆ ತಿಳಿದೇ ಇಲ್ಲವೇನೊ ಎಂಬಂತೆ ಅವರು ಅದರ ಬಗ್ಗೆ ಚಕಾರವೆತ್ತಲಿಲ್ಲ. ತನ್ನ ಭಾಷಣದಲ್ಲಿ ಏನೇನಿದೆಯೆಂಬುದನ್ನು ತಿಳಿದುಕೊಳ್ಳಲು ಅವರು ಕಾತರರಾಗಿದ್ದರು. ಭಾಷಣದ ಮುದ್ರಣ ಲಾಹೋರದಲ್ಲಿಯೇ ಆಗಬೇಕೆಂದು ಒತ್ತಾಯ ಮಾಡುವಲ್ಲಿ ಮಂಡಲಕ್ಕೆ ಇದ್ದ ಮೂಲ ಉದ್ದೇಶ ನನಗೆ ಈಗ ಸ್ಪಷ್ಟವಾಗಿ ಮನವರಿಕೆಯಾಯಿತು. ಹಣವನ್ನು ಉಳಿಸುವುದಕ್ಕೆ ಅಲ್ಲ. ನನ್ನ ಭಾಷಣದ ಒಡಲಲ್ಲಿರುವುದನ್ನು ಮುಂಚಿತವಾಗಿ ತಿಳಿದುಕೊಳ್ಳುವುದೇ ಅವರಿಗೆ ಮುಖ್ಯವಾಗಿ ಬೇಕಾಗಿದ್ದುದು. ನಾನು ಈ ಗೃಹಸ್ಥರಿಗೆ ಒಂದು ಪ್ರತಿಯನ್ನು ಕೊಟ್ಟೆನು. ಅದರಲ್ಲಿಯ ಕೆಲಭಾಗಗಳು ಅವರಿಗೆ ರುಚಿಸಲಿಲ್ಲ. ಅವರು ಲಾಹೋರಿಗೆ ಹಿಂತಿರುಗಿದರು. ಲಾಹೋರಿನಿಂದ ಅವರು ಈ ಕೆಳಗಿನ ಕಾಗದವನ್ನು ಬರೆದರು.
ಲಾಹೋರ್, ತಾ. ಎಪ್ರಿಲ್ ೧೪, ೧೯೩೬
ಪ್ರಿಯ ಡಾಕ್ಟರ್ ಸಾಹೇಬ್,
ದಿನಾಂಕ ೧೨ರಂದು ನಾನು ಮುಂಬಯಿಯಿಂದ ಇಲ್ಲಿಗೆ ಮರಳಿ ಬಂದೆ. ಪ್ರವಾಸದಲ್ಲಿ ಐದಾರು ರಾತ್ರಿ ಸತತವಾಗಿ ನಿದ್ದೆಯಿಲ್ಲದೆ ಕಳೆದುದರಿಂದ ನನಗೆ ಆರೋಗ್ಯ ಸರಿಯಿಲ್ಲ. ನಾನು ಇಲ್ಲಿಗೆ ಬಂದ ಮೇಲೆ ನೀವು ಅಮೃತಸರಕ್ಕೆ ಹೋಗಿದ್ದಿರೆಂದು ಕೇಳಿ ತಿಳಿದೆ. ನಾನು ತಿರುಗಾಡುವಷ್ಟು ಹುಷಾರಾಗಿದ್ದಿದ್ದರೆ ಅಲ್ಲಿಗೇ ಬಂದು ನಿಮ್ಮನ್ನು ಕಾಣುತ್ತಿದ್ದೆ. ನಿಮ್ಮ ಭಾಷಣವನ್ನು ಭಾಷಾಂತರಿಸಲೆಂದು ನಾನು ಶ್ರೀ ಸಂತರಾಮರಿಗೆ ಒಪ್ಪಿಸಿದ್ದೇನೆ. ಅವರಿಗೆ ಅದು ತುಂಬಾ ಮೆಚ್ಚುಗೆಯಾಗಿದೆ. ಆದರೆ ೨೫ನೆಯ ದಿನಾಂಕದೊಳಗಾಗಿ ಮುದ್ರಣಕ್ಕೆ ಭಾಷಾಂತರ ಸಿದ್ಧವಾದೀತೆಂದು ಅವರು ಭರವಸೆ ನೀಡಲಾರರು. ಏನೇ ಆಗಲಿ, ಅದಕ್ಕೆ ಸಾಕಷ್ಟು ವ್ಯಾಪಕವಾದ ಪ್ರಚಾರ ದೊರೆತು ಹಿಂದೂಗಳನ್ನು ಕುಂಭಕರ್ಣ ನಿದ್ರೆಯಿಂದ ಹೊಡೆದೆಬ್ಬಿಸುವುದೆಂದು ನಾವು ನಂಬಿದ್ದೇವೆ.
ಮುಂಬಯಿಯಲ್ಲಿ ನಿಮಗೆ ನಾನು ಎತ್ತಿತೋರಿಸಿದ ಭಾಗವನ್ನು ನಮ್ಮ ಕೆಲವರು ಮಿತ್ರರೂ ಓದಿ ಕೊಂಚ ಅಳುಕಿದರು. ಸಮ್ಮೇಳನವು ಯಾವುದೇ ಅಹಿತಕರ ಘಟನೆಯಿಲ್ಲದೆ ಸಮಾಪ್ತವಾಗಬೇಕೆಂದು ಬಯಸುವ ನಾವೆಲ್ಲರೂ ಬೇಡುವುದೇನೆಂದರೆ ಕನಿಷ್ಠ ಪಕ್ಷ “ವೇದ” ಎಂಬ ಪದನಾಮವನ್ನಾದರೂ ಪ್ರಸಕ್ತ ಸಮಯ ಅಲ್ಲಿಂದ ತೆಗೆದು ಹಾಕಬೇಕು. ಇದನ್ನು ನಿಮ್ಮ ಸದ್ವಿವೇಕಕ್ಕೆ ಬಿಡುತ್ತೇನೆ. “ಭಾಷಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ನಿಮ್ಮ ವೈಯಕ್ತಿಕ ಅಭಿಪ್ರಾಯಗಳೇ ಆಗಿದ್ದು ಮಂಡಲ ಅವುಗಳಿಗೆ ಹೊಣೆಯಲ್ಲ” ಎಂಬ ಮಾತನ್ನು ಭಾಷಣದ ಕೊನೆಯಲ್ಲಿ ನೀವು ಸ್ಪಷ್ಟಪಡಿಸುವಿರೆಂದು ನಂಬಿದ್ದೇನೆ. ನನ್ನ ಈ ಹೇಳಿಕೆಯನ್ನು ಪರಿಗಣಿಸುವಿರೆಂದು ಹಾರೈಸುತ್ತೇನೆ. ನಮಗೆ ಈ ಭಾಷಣದ ೧,೦೦೦ ಪ್ರತಿಗಳನ್ನು ಒದಗಿಸಿ. ಅದಕ್ಕೆ ನಾವು ದುಡ್ಡು ಕೊಡುವೆವು. ಈ ಮಾತನ್ನು ನಿಮಗೆ ಈ ದಿನವೇ ತಂತಿಯ ಮೂಲಕ ಕಳಿಸಿದ್ದೇನೆ. ಈ ಕಾಗದದ ಜೊತೆಗೆ ಒಂದು ನೂರು ರೂಪಾಯಿಗಳ ಚೆಕ್ ಇಡಲಾಗಿದೆ. ಅದು ಮುಟ್ಟಿದ ಬಗ್ಗೆ ದಯವಿಟ್ಟು ಸ್ವೀಕೃತಿಯ ಕಾಗದವನ್ನು ಕಳಿಸಿ. ನಿಮ್ಮ ಒಟ್ಟು ಬಿಲ್ಲುಗಳನ್ನು ಸಮಯಾನುಸಾರ ರವಾನಿಸಿ. (ಪುಟ 36)
ಸ್ವಾಗತಸಮಿತಿಯ ಸಭೆಯನ್ನು ಕರೆದಿದ್ದೇನೆ. ಸಭೆಯ ನಿರ್ಣಯವನ್ನು ಕೂಡಲೇ ನಿಮಗೆ ತಿಳಿಸುವೆನು. ಭಾಷಣದ ತಯಾರಿಗಾಗಿ ನೀವು ಬಳಸಿದ ಅಪಾರ ಶ್ರಮಕ್ಕಾಗಿ ಹಾಗೂ ನನ್ನ ಮೇಲೆ ತೋರಿದ ಕೃಪೆಗಾಗಿ ನನ್ನ ಹೃತ್ತೂರ್ವಕ ಧನ್ಯವಾದಗಳನ್ನು ಸ್ವೀಕರಿಸಿ. ನಿಜವಾಗಿಯೂ ನೀವು ನಮ್ಮನ್ನು ದೊಡ್ಡ ಕೃತಜ್ಞತೆಯ ಋಣದಲ್ಲಿರಿಸಿದ್ದೀರಿ.
ವಿ. ಸೂ. : ಭಾಷಣ ಮುದ್ರಿತವಾದೊಡನೆ ಪ್ಯಾನೆಂಜರ್ ಗಾಡಿಯ ಮೂಲಕ ಪ್ರತಿಗಳನ್ನು ಕಳಿಸಿಕೊಡಿ. ಅದರಿಂದ ಪ್ರಕಟಣೆಗಾಗಿ ನಾವು ಪತ್ರಿಕೆಗಳಿಗೆ ಕೊಡಲು ಅನುಕೂಲವಾಗುವುದು.
ನಿಮ್ಮ ನಂಬಿಕೆಯ,
ಹರಭಗವಾನ್
ಈ ಮಾತಿನ ಮೇರೆಗೆ ನಾನು ಒಂದು ಸಾವಿರ ಪ್ರತಿಗಳನ್ನು ಅಚ್ಚು ಮಾಡಲು ಮುದ್ರಕನ ಕೈಗೆ ನನ್ನ ಕೈಬರಹದ ಪ್ರತಿಯನ್ನು ಒಪ್ಪಿಸಿದೆನು. ಮುಂದೆ ಎಂಟು ದಿನಗಳ ನಂತರ ಶ್ರೀ ಹರಭಗವಾನರಿಂದ ಈ ಕೆಳಗಿನಂತೆ ನನಗೆ ಇನ್ನೊಂದು ಕಾಗದ ಬಂದಿತು.
ಪ್ರಿಯ ಡಾ. ಅಂಬೇಡ್ಕರ್.
ನಿಮ್ಮ ತಂತಿ ಹಾಗೂ ಕಾಗದ ಎರಡೂ ತಲುಪಿದವು. ಅದಕ್ಕಾಗಿ ದಯವಿಟ್ಟು ನಮ್ಮ ಧನ್ಯವಾದವನ್ನು ಸ್ವೀಕರಿಸಿ. ನಿಮ್ಮ ಅಪೇಕ್ಷೆಗೆ ಅನುಗುಣವಾಗಿ ಸಮ್ಮೇಳನವನ್ನು ಇನ್ನೊಂದು ಸಲ ಮುಂದೂಡಿದ್ದೇವೆ. ಆದರೆ ಪಂಜಾಬದಲ್ಲಿ ಹವಾಮಾನ ದಿನದಿನಕ್ಕೆ ಬಿಸಿಯೇರುತ್ತಿರುವುದರಿಂದ ೨೫ ಅಥವಾ ೨೬ನೆಯ ದಿನಾಂಕದಂದು ಸಮ್ಮೇಳನ ನೆರವೇರಿಸಿದ್ದರೆ ಒಳ್ಳೆಯದಾಗುತ್ತಿತ್ತೆಂದು ಅನ್ನಿಸುತ್ತದೆ. ಮೇ ತಿಂಗಳ ಮಧ್ಯಕ್ಕೆ ತುಂಬ ಬಿಸಿಲು ಹಾಗೂ ಸೆಕೆ; ಹಗಲು ಹೊತ್ತಿನ ಅಧಿವೇಶನಗಳು ಸುಖಕರ ಅಥವಾ ಹಿತಕರವೆನಿಸಲಿಕ್ಕಿಲ್ಲ. ಏನೇ ಇರಲಿ, ಮೇ ಮಧ್ಯದಲ್ಲಿಯೇ ಸಭೆ ನಡೆಯುವುದಾದರೆ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಭೆ ಸುಖಕರವಾಗುವಂತೆ ನೋಡಿಕೊಳ್ಳುವೆವು.
ಆದರೆ ಒಂದು ಸಂಗತಿಯನ್ನು ನಿಮ್ಮ ಉದಾರ ಗಮನಕ್ಕೆ ನಾವು ತರಲೇಬೇಕಾಗಿದೆ. ಧರ್ಮಾಂತರದ ವಿಷಯವಾಗಿ ನೀವು ನಿಮ್ಮ ದೃಢಸಂಕಲ್ಪವನ್ನು ವ್ಯಕ್ತಪಡಿಸಿದ್ದೀರಿ. ಆ ಅಂಶವನ್ನು ಕುರಿತು ನಮ್ಮ ಜನರಲ್ಲಿ ಕೆಲವರು ಆತಂಕಪಟ್ಟರೆಂದು ನಾನು ನಿಮಗೆ ತಿಳಿಸಿದ್ದೆನಷ್ಟೆ; ಆಗ ಇದು ಮಂಡಲದ ವ್ಯಾಪ್ತಿಗೆ ಒಳಪಟ್ಟ ವಿಷಯವಲ್ಲವೆಂದೂ, ಅಂತಹ ಯಾವ ಮಾತನ್ನಾದರೂ ನಮ್ಮ ವೇದಿಕೆಯ ಮೇಲೆ ನಿಂತು ಆಡುವುದಿಲ್ಲವೆಂದೂ ನೀವು ನನಗೆ ಹೇಳಿದ್ದಿರಿ. ಅದೇ ಕಾಲಕ್ಕೆ ಎಂದರೆ ನಿಮ್ಮ ಭಾಷಣದ ಹಸ್ತಪ್ರತಿಯನ್ನು ನನ್ನ ಕೈಗಿತ್ತಾಗ, ಅದಷ್ಟೇ ನಿಮ್ಮ ಭಾಷಣದ ಮುಖ್ಯಭಾಗವೆಂದೂ, ಸಮಾರೋಪ ಭಾಗದ ಎರಡು ಅಥವಾ ಮೂರು ಪರಿಚ್ಛೇದಗಳನ್ನು ಮಾತ್ರ ಅದಕ್ಕೆ ನೀವು ಜೋಡಿಸುವವರಿದ್ದೀರೆಂದೂ ನನಗೆ ಭರವಸೆ ಕೊಟ್ಟಿರಿ. ನಿಮ್ಮ ಭಾಷಣದ ಮುಂದಿನ ಭಾಗ ನಮ್ಮ ಕೈಸೇರಿದಾಗ ನಮಗೆ ವಿಸ್ಮಯವಾಯಿತು. ಇಷ್ಟು ದೀರ್ಘವಾದರೆ ಈ ಭಾಷಣವನ್ನು ಓದಿ ಮುಗಿಸುವವರು ಎಷ್ಟು ಮಂದಿ? ಇದರ ಜೊತೆಗೆ ಒಂದು ಸಲವಲ್ಲದೆ ಅನೇಕ ಸಲ ಈ ಭಾಷಣದಲ್ಲಿ “ಹಿಂದೂ ಸಮುದಾಯವನ್ನು ತೊರೆದು ಹೋಗುತ್ತೇನೆ”ಎಂದೂ, “ಹಿಂದೂವಾಗಿ (ಪುಟ 37)
ನಾನು ಮಾಡುತ್ತಿರುವ ಕೊನೆಯ ಭಾಷಣವಿದು” ಎಂದೂ ಹೇಳಿದ್ದೀರಿ. ವೇದಗಳ ಮತ್ತು ಹಿಂದೂಗಳ ಇತರ ಧಾರ್ಮಿಕ ಗ್ರಂಥಗಳ ನೀತಿ ಹಾಗೂ ಯುಕ್ತಾಯುಕ್ತ ಪರಿಜ್ಞಾನವನ್ನು ಅನಗತ್ಯವಾಗಿ ಟೀಕಿಸಿದ್ದೀರಿ. ಹಿಂದೂ ಧರ್ಮದ ತಾಂತ್ರಿಕ ವಿಷಯವನ್ನು ವಿವರವಾಗಿ ವಿವೇಚಿಸಿರುವಿರಿ. ಇದು ನೀವು ಪ್ರತಿಪಾದಿಸುವ ವಿಷಯಕ್ಕೆ ಏನೇನೂ ಸಂಬಂಧವಿಲ್ಲ. ಹೀಗಾಗಿ ಭಾಷಣದ ಕೆಲವು ಭಾಗಗಳು ಆಸಂಬದ್ಧವೂ, ಅನವಶ್ಯಕವೂ ಆಗಿವೆ. ನೀವು ಮೊದಲು ನನ್ನ ಕೈಗಿತ್ತ ಹಸ್ತಪ್ರತಿಯಲ್ಲಿ ಎಷ್ಟಿತ್ತೊ ಅಷ್ಟಕ್ಕೇ ನಿಮ್ಮ ಭಾಷಣವನ್ನು ಮುಗಿಸಿದ್ದರೆ ಚೆನ್ನಾಗಿತ್ತು. ಇನ್ನಷ್ಟು ಬೆಳೆಸುವುದು ಅಗತ್ಯವಾಗಿದ್ದರೆ, ಬ್ರಾಹ್ಮಣತ್ವ ಮುಂತಾದುವುಗಳನ್ನು ಕುರಿತು ಬರೆದ ಮಾತುಗಳು ಮಾತ್ರ ಸಾಕಾಗಿತ್ತು. ನಿಮ್ಮ ಭಾಷಣದ ಅಂತಿಮ ಭಾಗವು ಹಿಂದೂ ಧರ್ಮದ ಸಂಪೂರ್ಣ ನಿರ್ಮೂಲನೆಯನ್ನು ಕುರಿತಾಗಿದೆ; ಹಿಂದೂಗಳಿಗೆ ಪವಿತ್ರವಾದ ಗ್ರಂಥಗಳ ನೀತಿಯನ್ನೇ ಅದು ಪ್ರಶ್ನಿಸುತ್ತದೆ. ಹಾಗೂ ನೀವು ಹಿಂದೂ ಸಮುದಾಯವನ್ನು ತೊರೆದು ಹೋಗುವಿರೆಂಬ ಸೂಚನೆಯನ್ನು ಒಳಗೊಂಡಿದೆ. ಇದು ಸುಸಂಬದ್ಧವೆಂದು ನನಗೆ ತೋರುವುದಿಲ್ಲ.
ಆದುದರಿಂದ ಸಮ್ಮೇಳನಕ್ಕೆ ಹೊಣೆಗಾರರಾದ ಸಮಸ್ತ ಜನತೆಯ ಪರವಾಗಿ ನಿಮಗೆ ಅತ್ಯಂತ ನಮ್ರವಾಗಿ ಪ್ರಾರ್ಥಿಸುವುದೇನೆಂದರೆ ಮೇಲೆ ಸೂಚಿಸಿದ ಆಕ್ಷೇಪಾರ್ಹ ಭಾಗವನ್ನು ದಯವಿಟ್ಟು ತೆಗೆದುಹಾಕಬೇಕು. ನನ್ನ ಕೈಗೆ ಕೊಟ್ಟ ಹಸ್ತಪ್ರತಿಯಲ್ಲಿದ್ದಷ್ಟಕ್ಕೇ ಅದನ್ನು ಮುಕ್ತಾಯಗೊಳಿಸಬೇಕು. ಅಥವಾ ಬ್ರಾಹ್ಮಣತ್ವದ ಬಗೆಗೆ ಒಂದೆರಡು ವಾಕ್ಯವೃಂದಗಳನ್ನು ಸೇರಿಸಬಹುದು. ಅನಗತ್ಯವಾಗಿ ತೀವ್ರ ಭಾವನೆಗಳನ್ನು ಕೆರಳಿಸುವಂತಹ ಚುಚ್ಚುನುಡಿಯ ಭಾಷಣವನ್ನು ಮಾಡುವ ವಿವೇಕವನ್ನು ಸಂದೇಹಿಸುತ್ತೇವೆ. ನಮ್ಮಲ್ಲಿ ಅನೇಕರು ನಿಮ್ಮ ಭಾವನೆಗಳಿಗೆ ಸಹಾನುಭೂತಿಯುಳ್ಳವರಾಗಿದ್ದೇವೆ. ಹಿಂದೂಧರ್ಮದ ಜಾತಿಪದ್ಧತಿಯ ನಾಶಕ್ಕೆ ನಿಮ್ಮ ಮುಂದಾಳ್ತನದಲ್ಲಿ ದುಡಿಯಲು ಬಯಸುತ್ತೇವೆ. ನಿಮ್ಮ ಪಂಥಕ್ಕೆ ಬೇಕಾದ ಜನವನ್ನು ಕಲೆ ಹಾಕುವುದಕ್ಕೆ ನೀವು ನಿಶ್ಚಯಿಸಿದ್ದರೆ, ಪಂಜಾಬದಿಂದ ನಿಮ್ಮ ಸುಧಾರಕ ಸೈನ್ಯಕ್ಕೆ ಬಹುಸಂಖ್ಯೆಯ ಜನ ಬರುತ್ತಾರೆ ಎಂದು ನಾನು ಭರವಸೆ ಕೊಡಬಲ್ಲೆ.
ಜಾತಿಪದ್ಧತಿಯ ವಿಷಯವನ್ನು ನೀವು ಕೂಲಂಕಷವಾಗಿ ಅಭ್ಯಾಸ ಮಾಡಿದವರಾದುದರಿಂದ ಈ ಪದ್ಧತಿಯಲ್ಲಿರುವ ಅನಿಷ್ಟಗಳನ್ನು ನಿವಾರಿಸಲು ನೀವು ಮುಂದಾಳಾಗಿ ಬಂದು ನಮಗೆ ನೆರವಾಗುವಿರೆಂದು ನಾವು ಭಾವಿಸಿದ್ದೆವು. ಈ ಮಹಾ ಪ್ರಯತ್ನದಲ್ಲಿ ನೀವು ಕೇಂದ್ರವಾಗಿ ನಿಂತು ಕ್ರಾಂತಿಯನ್ನು ಆರಂಭಿಸುವಿರೆಂದೂ ಆಶಿಸಿದ್ದೆವು. ಆದರೆ ನಾವು ಹೊರಡಿಸಿದಂತಹ ಹೇಳಿಕೆ ಪುನರುಕ್ತಿಗೊಂಡಾಗ ಶಕ್ತಿ ಕಳೆದುಕೊಂಡು ಹಳಸಲು ಪದವಾಗಿಬಿಡುವುದು. ಪರಿಸ್ಥಿತಿ ಹೀಗಿರುವಾಗ ನೀವು ಸಮಗ್ರವಾಗಿ ಈ ವಿಷಯವನ್ನು ಪುನಃ ಆಲೋಚಿಸಬೇಕೆಂದು ಪ್ರಾರ್ಥಿಸುತ್ತೇನೆ. ಬಂಧುಬಾಂಧವರನ್ನೂ, ಧಾರ್ಮಿಕ ಕಲ್ಪನೆಗಳನ್ನೂ ತೊರೆಯಬೇಕಾಗಿ ಬಂದರೂ ಕೂಡ ಜಾತಿಪದ್ಧತಿಯ ನಿರ್ಮೂಲನೆಯ ಗುರಿಯತ್ತ ಪ್ರಾಂಜಲಮನಸ್ಕರಾಗಿ ಹಿಂದೂಗಳು ದುಡಿಯಲು ಸಿದ್ಧರಿರುವುದಾದರೆ ನೀವು ಮುಂಚೂಣಿಯಲ್ಲಿ ನಿಲ್ಲುವುದಾಗಿ ಹೇಳುವುದರ ಮೂಲಕ ನಿಮ್ಮ ಭಾಷಣ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಬೇಕೆಂದು ಬಿನ್ನವಿಸುತ್ತೇನೆ. ಹೀಗೆ ನೀವು ಮಾಡಿದ್ದಾದರೆ ಈ ಪ್ರಯತ್ನದಲ್ಲಿ ನಿಮಗೆ ಪಂಜಾಬದಿಂದ ಬಹು ಸುಲಭವಾಗಿ ಅನುಕೂಲ ಪ್ರತಿಕ್ರಿಯೆ ದೊರೆಯುವುದೆಂದು ನನಗೆ ಭರವಸೆ ಇದೆ.
ಈಗಾಗಲೇ ನಾವು ತುಂಬ ಖರ್ಚಿಗೆ ಒಳಗಾಗಿದ್ದೇವೆ; ಅನಿಶ್ಚಿತ ಪರಿಸ್ಥಿತಿಯಲ್ಲಿ ಬಳಲುತ್ತಿದ್ದೇವೆ. ಈ ಸಂದರ್ಭದಲ್ಲಿ ನೀವು ನಮಗೆ ನೆರವಾದರೆ ನಿಮ್ಮ ಉಪಕಾರವನ್ನು ನೆನಸುತ್ತೇನೆ. ನಾನು ಈ ಮೊದಲು ಸೂಚಿಸಿದಂತೆ ನಿಮ್ಮ ಭಾಷಣವನ್ನು ಮಿತಗೊಳಿಸಿ ನಮ್ಮನ್ನು ಅನುಗ್ರಹಿಸುವುದಾಗಿ ಮರುಟಪಾಲಿನಿಂದ (ಪುಟ 38)
ದಯವಿಟ್ಟು ತಿಳಿಸಿ. ಇದಕ್ಕೆ ವ್ಯತಿರಿಕ್ತವಾಗಿ, ನೀವು ನಿಮ್ಮ ಭಾಷಣವನ್ನು ಯಾವ ಬದಲಾವಣೆಯೂ ಇಲ್ಲದೆ ಇದ್ದಂತೆಯೆ ಅಚ್ಚು ಮಾಡಬೇಕೆಂದು ಹಟಹಿಡಿದ ಪಕ್ಷದಲ್ಲಿ ನಮಗೆ ಸಮ್ಮೇಳನವನ್ನು ನಡೆಸುವುದು ಸಾಧ್ಯವಾಗಲಿಕ್ಕಿಲ್ಲ. ಅಥವಾ ಸಮುಚಿತವಾಗಲಿಕ್ಕಿಲ್ಲ; ಆದುದರಿಂದ ಅದನ್ನು ಅನಿಶ್ಚಿತ ಅವಧಿಯವರೆಗೆ ಮುಂದೂಡುವುದೇ ಲೇಸಾಗಬಹುದು, ಹಾಗೆ ಮಾಡಿದರೆ ಜನತೆಯ ವಿಶ್ವಾಸವನ್ನು ನಾವು ಕಳೆದುಕೊಳ್ಳುತ್ತೇವೆ. ಪುನಃ ಪುನಃ ಮುಂದೂಡುತ್ತಾ ಹೋದರೆ ಇದಕ್ಕಿಂತ ಬೇರೆಯಾದ ಕೆಟ್ಟ ಪರಿಣಾಮವಿಲ್ಲ. ಇದೇನೆ ಇರಲಿ, ಜಾತಿಪದ್ಧತಿಯನ್ನು ಕುರಿತು ಈಗಾಗಲೇ ರಚಿತವಾದ ಎಲ್ಲ ಗ್ರಂಥಗಳಿಗಿಂತಲೂ ಉತ್ತಮವಾಗಿ, ಮುಂದಿನವರಿಗೆ ಒಂದು ಬೆಲೆಯುಳ್ಳ ಪೂವಾರ್ಜಿತ ಆಸ್ತಿಯೆನಿಸುವಂತಹ ಅಪೂರ್ವ ವಿವೇಚನೆಯನ್ನು ಬರೆದು ನೀವು ನಮ್ಮ ಹೃದಯದಲ್ಲೊಂದು ಸ್ಥಾನವನ್ನು ಪಡೆದುಕೊಂಡಿದ್ದೀರಿ. ಅದರ ತಯಾರಿಗಾಗಿ ನೀವು ಪಟ್ಟ ಶ್ರಮವನ್ನು ನೆನೆದು ನಾವು ಎಂದೆಂದೂ ನಿಮಗೆ ಋಣಿಯಾಗಿರುವೆವು.
ನಿಮ್ಮ ಸೌಜನ್ಯತೆಗೆ ಧನ್ಯವಾದಗಳು. ನಿಮಗೆ ಶುಭವನ್ನು ಹಾರೈಸುತ್ತೇವೆ.
ನಿಮ್ಮ ನಂಬುಗೆಯ, ಹರಭಗವಾನ್
ಈ ಪತ್ರಕ್ಕೆ ನಾನು ಕೆಳಗಿನಂತೆ ಉತ್ತರ ಬರೆದೆನು : ೨೭ ಏಪ್ರಿಲ್ ೧೯೩೬
ಪ್ರಿಯ ಶ್ರೀ ಹರಭಗವಾನ್,
ನಿಮ್ಮ ಏಪ್ರಿಲ್ ೨೨ರ ಕಾಗದ ತಲುಪಿತು. ನನ್ನ ಭಾಷಣವನ್ನು ಈಗಿರುವಂತೆ ಮುದ್ರಿಸಲು ನಾನು ಆಗ್ರಹ ಮಾಡಿದರೆ ಜಾತ್-ಪತ್-ತೋಡಕ್ ಮಂಡಲದ ಸ್ವಾಗತ ಸಮಿತಿ ಸಮ್ಮೇಳನವನ್ನು ಅನಿಶ್ಚಿತ ಅವಧಿಗೆ ಮುಂದೂಡಲು ಬಯಸುವುದೆಂಬುದನ್ನು ತಿಳಿದು ನನಗೆ ವಿಷಾದವಾಗುತ್ತದೆ. ಇದಕ್ಕೆ ಉತ್ತರವಾಗಿ ನಾನು ಹೇಳಬಯಸುವುದೇನೆಂದರೆ, ತಮ್ಮ ಅನುಕೂಲಕ್ಕೆ ತಕ್ಕಂತೆ ನನ್ನ ಭಾಷಣವನ್ನು ಕತ್ತರಿಸಬೇಕೆಂದು ಮಂಡಲದವರು ಆಗ್ರಹಪಡಿಸುವುದಾದರೆ ಸಮ್ಮೇಳನವನ್ನು ಪೂರ್ತಿಯಾಗಿ ರದ್ದುಪಡಿಸುವುದೇ ನನಗೆ ಹೆಚ್ಚು ಇಷ್ಟ. ಮುಂದೂಡು ಎಂಬ ಸಂದಿಗ್ಧಪದದ ಬಳಕೆ ನನಗೆ ಸೇರದು. ನನ್ನ ನಿರ್ಧಾರ ನಿಮಗೆ ಸರಿ ಬರಲಿಕ್ಕಿಲ್ಲ. ಸಮ್ಮೇಳನಾಧ್ಯಕ್ಷತೆಯ ಗೌರವಕ್ಕಾಗಿ ಅಧ್ಯಕ್ಷ ಭಾಷಣ ಸಿದ್ಧಪಡಿಸುವಲ್ಲಿ ಪ್ರತಿಯೊಬ್ಬ ಅಧ್ಯಕ್ಷನಿಗಿರುವ ಸ್ವಾತಂತ್ರ್ಯವನ್ನು ನಾನು ಬಿಟ್ಟುಕೊಡಲಾರೆ. ಸಮ್ಮೇಳನಾಧ್ಯಕ್ಷನಿಗೆ ಭಾಷಣವನ್ನು ತಯಾರಿಸುವಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಆತ ಸಮ್ಮೇಳನಕ್ಕೆ ಮಾರ್ಗದರ್ಶನ ಮಾಡುವ ಹೊಣೆ ಹೊತ್ತಿರುತ್ತಾನೆ. ಯಾವುದು ಯೋಗ್ಯ ಹಾಗೂ ಸಮುಚಿತವೆಂಬುದನ್ನು ತಿಳಿದು ನಿರ್ವಹಿಸುವ ಕರ್ತವ್ಯವನ್ನು ಮಂಡಲದ ಮೆಚ್ಚುಗೆಗಾಗಿ ನಾನು ಬಿಟ್ಟುಕೊಡಲಾರೆ. ಇದು ತತ್ವದ ಪ್ರಶ್ನೆಯಾಗಿದೆ. ಆದುದರಿಂದ ಇದರಲ್ಲಿ ಚೌಕಾಸಿ ಮಾಡಿ ರಾಜಿ ಮಾಡಿಕೊಳ್ಳಲು ನಾನು ಸಿದ್ಧನಿಲ್ಲ.
ಸ್ವಾಗತ ಸಮಿತಿಯ ನಿರ್ಣಯ ಸರಿಯೊ ಅಲ್ಲವೊ ಎಂಬ ವಿವಾದಕ್ಕೆ ನಾನು ಇಳಿಯುತ್ತಲೇ ಇರಲಿಲ್ಲ. ಆದರೆ ನನ್ನ ಮೇಲೆ ತಪ್ಪು ಹೊರಿಸುವಂತೆ ತೋರುವ ಕೆಲವು ಕಾರಣಗಳನ್ನು ನೀವು ಒಡ್ಡಿರುವುದರಿಂದ (ಪುಟ 39)
ಅವುಗಳಿಗೆ ನಾನು ಉತ್ತರ ಕೊಡಲೇಬೇಕಾಗಿದೆ. ಮೊದಲನೆಯದಾಗಿ, ಸಮಿತಿಯವರ ಆಕ್ಷೇಪಕ್ಕೆ ಗುರಿಯಾದ ಭಾಷಣದಲ್ಲಿಯ ಅಭಿಪ್ರಾಯಗಳು ಮಂಡಲಕ್ಕೆ ಅನಿರೀಕ್ಷಿತವಾಗಿದ್ದುವೆಂಬ ವಿಚಾರವನ್ನು ನಾನು ಮೊದಲು ಖಂಡಿಸಬೇಕಾಗಿದೆ. ಶ್ರೀ ಸಂತರಾಮರ ಒಂದು ಪತ್ರಕ್ಕೆ ಉತ್ತರ ಕೊಡುತ್ತಾ, “ಜಾತಿಪದ್ಧತಿಯನ್ನು ನಿರ್ನಾಮಗೊಳಿಸುವ ನಿಜವಾದ ವಿಧಾನ ಯಾವುದು? ಅಂತರ್ಜಾತೀಯ ಭೋಜನ ಹಾಗೂ ಅಂತರ್ಜಾತೀಯ ವಿವಾಹ ಇವುಗಳನ್ನು ನಡೆಸುವುದು ಅಲ್ಲ. ಜಾತಿಗೆ ಆಧಾರಭೂತವಾದ ಧಾರ್ಮಿಕ ಕಲ್ಪನೆಯನ್ನು ನಾಶಮಾಡುವುದೇ ಸರಿಯಾದ ಮಾರ್ಗ” ಎಂದು ನಾನು ತಿಳಿಸಿದ್ದೆನು. ಶ್ರೀ ಸಂತರಾಮರು ಇದನ್ನು ದೃಢಪಡಿಸುವರೆಂದು ನಾನು ನಂಬುತ್ತೇನೆ. ಇದು ಹೊಸ ವಿಚಾರವೆಂದು ಹೇಳಿ ಶ್ರೀ ಸಂತರಾಮರು ಆ ಮಾತನ್ನು ವಿವರಿಸಿ ಹೇಳಲು ಕೇಳಿಕೊಂಡರು. ಅವರ ಕೋರಿಕೆಗೆ ಒಪ್ಪಿ, ಒಂದು ವಾಕ್ಯದಲ್ಲಿ ಹಿಂದೆ ಹೇಳಿದ ಮಾತನ್ನು ಈ ಭಾಷಣದಲ್ಲಿ ವಿಸ್ತಾರವಾಗಿ ಪ್ರತಿಪಾದಿಸಬೇಕೆಂದು ನಾನು ಅಂದುಕೊಂಡೆನು. ಹೀಗಿರುವುದರಿಂದ ನನ್ನ ಅಭಿಪ್ರಾಯಗಳು ನಿಮಗೆ ಅನಿರೀಕ್ಷಿತವೆಂದು ಹೇಗೆ ಹೇಳುತ್ತೀರಿ? ನಿಮಗಲ್ಲದಿದ್ದರೆ ನಿಮ್ಮ ಮಂಡಲದ ಮುಖ್ಯ ಚೇತನವಾದ ಹಾಗೂ ಮುಂದಾಳುವಾದ ಶ್ರೀ ಸಂತರಾಮರಿಗಂತೂ ಅವು ಹೊಸ ಅಭಿಪ್ರಾಯಗಳಲ್ಲ. ನಾನು ಹೇಳುವ ಇನ್ನೊಂದು ಹೆಚ್ಚಿನ ಮಾತಿದೆ, ಭಾಷಣದ ಈ ಭಾಗವನ್ನು ಬರೆಯುವುದು ಯುಕ್ತ ಎಂದೆನಿಸಿದ್ದರಿಂದ ಮಾತ್ರ ನಾನು ಬರೆಯಲಿಲ್ಲ; ನನ್ನ ವಾದವನ್ನು ಪೂರ್ಣಗೊಳಿಸುವುದು ಅತ್ಯವಶ್ಯವೆಂದು ನನಗೆ ತೋರಿತು. ಆದುದರಿಂದ ಬರೆದೆ. ನಿಮ್ಮ ಸಮಿತಿಯ ಆಕ್ಷೇಪಕ್ಕೆ ಗುರಿಯಾದ ನನ್ನ ಭಾಷಣದ ಭಾಗವನ್ನು ‘ಅಸಂಬದ್ಧ ಹಾಗೂ ಅನವಶ್ಯಕ’ ವೆಂದು ನೀವು ಆರೋಪಿಸಿರುವುದನ್ನು ಕಂಡು ನಾನು ಚಕಿತನಾದೆ. ನಾನೊಬ್ಬ ವಕೀಲನಾದುದರಿಂದ ಕಾನೂನು ಸಂಬದ್ದತೆಯ ನಿಯಮಗಳೇನೆಂದು ನಿಮ್ಮ ಸಮಿತಿಯ ಸದಸ್ಯರಷ್ಟೇ ಚೆನ್ನಾಗಿ ನಾನೂ ಬಲ್ಲೆನು. ನಿಮ್ಮ ಆಕ್ಷೇಪಕ್ಕೆ ಈಡಾದ ಈ ಭಾಗ ಸಂಪೂರ್ಣ ಸುಸಂಬದ್ಭವಷ್ಟೆ ಅಲ್ಲದೆ ಮಹತ್ವದ್ದೂ ಆಗಿದೆಯೆಂದು ನಾನು ಒತ್ತಿ ಹೇಳುತ್ತೇನೆ. ಜಾತಿಪದ್ಧತಿಯ ನಾಶಕ್ಕೆ ಕೈಕೊಳ್ಳಬೇಕಾದ ಉಪಾಯ ವಿಧಾನಗಳನ್ನು ನಾನು ಚರ್ಚಿಸಿರುವುದು ಇದೇ ಭಾಗದಲ್ಲಿ, ಜಾತಿ ನಿರ್ಮೂಲನಕ್ಕೆ ಯಾವುದು ಸರ್ವೋತ್ಕೃಷ್ಟ ಉಪಾಯವೆಂದು ನಾನು ತೀರ್ಮಾನಿಸಿರುವೆನೊ ಅದು ಬೆರಗುಗೊಳಿಸುವಂಥದ್ದೂ, ಭಯಾನಕವಾದುದೂ, ನೋಯಿಸುವಂಥದೂ ಆಗಿರಬಹುದು. ನನ್ನ ವಿಶ್ಲೇಷಣೆ ತಪ್ಪಾಗಿದೆಯೆಂದು ಹೇಳಲು ನಿಮಗೆ ಹಕ್ಕಿದೆ. ಆದರೆ ಜಾತಿಯ ಸಮಸ್ಯೆಯನ್ನು ಕುರಿತ ಭಾಷಣದಲ್ಲಿ, ಜಾತಿ ನಿರ್ಮೂಲನೆಗೆ ನನ್ನ ಸಲಹೆಗಳೇನೆಂದು ಚರ್ಚಿಸಲು ನನಗೆ ಅವಕಾಶವಿಲ್ಲವೆಂದು ನೀವು ಹೇಳಲಾರಿರಿ.
ಭಾಷಣ ದೀರ್ಘವಾಯಿತೆಂಬುದು ನಿಮ್ಮ ಇನ್ನೊಂದು ಆಕ್ಷೇಪ. ಈ ತಪ್ಪು ನನ್ನಿಂದಾಗಿದೆಯೆಂದು ಭಾಷಣದಲ್ಲಿಯೇ ನಾನು ಒಪ್ಪಿಕೊಂಡುಬಿಟ್ಟಿದ್ದೇನೆ. ಆದರೆ ಇದಕ್ಕೆ ನಿಜವಾಗಿಯೂ ಹೊಣೆ ಯಾರು? ಈ ವ್ಯವಹಾರದಲ್ಲಿ ನೀವು ತಡವಾಗಿ ಸೇರಿಕೊಂಡಿರಿ ಎಂದು ಅನ್ನಿಸುತ್ತದೆ. ಮೊದಲಿನಿಂದಲೂ ಇದ್ದವರಾಗಿದ್ದರೆ ನಿಮಗೆ ಇದರ ಇತಿಹಾಸ ತಿಳಿಯುತ್ತಿತ್ತು. ವಿಸ್ತಾರವಾದೊಂದು ಉಪನ್ಯಾಸವನ್ನು ಸಿದ್ಧಪಡಿಸುವಷ್ಟು ಸಮಯವಾಗಲಿ ಉತ್ಸಾಹವಾಗಲಿ ನನಗೆ ಇರಲಿಲ್ಲ; ಆದುದರಿಂದ ನನಗೆ ಅನುಕೂಲವಾಗುವಂತೆ ಒಂದು ಚಿಕ್ಕ ಉಪನ್ಯಾಸವನ್ನು ಮಾತ್ರ ಬರೆಯಬೇಕೆಂದು ಯೋಚಿಸಿದ್ದೆ. ಆದರೆ ಈ ವಿಷಯವನ್ನು ಸಮಗ್ರವಾಗಿ ವಿವೇಚಿಸಿ ನಿರೂಪಿಸಬೇಕೆಂದು ನನಗೆ ಕೇಳಿದ್ದು ನಿಮ್ಮ ಮಂಡಲ. ಜಾತಿಪದ್ಧತಿಯ ವಿಷಯವಾಗಿ ಪ್ರಶ್ನೆಗಳ ಯಾದಿಯನ್ನು ಕಳಿಸಿದ್ದು ನಿಮ್ಮ ಮಂಡಲವೇ. ಇವು ಮಂಡಲದವರ ಹಾಗೂ ಅದರ ವಿರೋಧಿಗಳ ನಡುವಿನ ವಿವಾದದಲ್ಲಿ ಪುನಃ ಪುನಃ ಏಳುವ ಪ್ರಶ್ನೆಗಳಾಗಿದ್ದು, ಇವುಗಳಿಗೆ ತೃಪ್ತಿಕರವಾಗಿ ಉತ್ತರ (ಪುಟ 40)
ಕೊಡಲು ಮಂಡಲಕ್ಕೆ ಕಷ್ಟವಾಗಿರುವುದರಿಂದ ನನ್ನ ಉಪನ್ಯಾಸದಲ್ಲಿ ಈ ಪ್ರಶ್ನೆಗಳಿಗೆಲ್ಲ ಸಮರ್ಪಕವಾದ ಉತ್ತರಗಳನ್ನು ಆಳವಡಿಸಬೇಕೆಂದು ಕೇಳಿದ್ದೂ ನಿಮ್ಮ ಮಂಡಲವೇ. ಮಂಡಲದ ಈ ಬಯಕೆಯನ್ನು ಈಡೇರಿಸುವ ಪ್ರಯತ್ನದಲ್ಲಿ ನನ್ನ ಉಪನ್ಯಾಸ ಇಷ್ಟೊಂದು ದೀರ್ಘವಾಗಬೇಕಾಯಿತು. ಈ ಹಿನ್ನೆಲೆಯನ್ನು ಗಮನಿಸಿದಾಗ ಉಪನ್ಯಾಸವು ದೀರ್ಘವಾದುದಕ್ಕೆ ನಾನು ಹೊಣೆಗಾರನಲ್ಲವೆಂಬುದನ್ನು ನೀವು ಒಪ್ಪುವುದು ನಿಶ್ಚಿತ.
ಹಿಂದೂಧರ್ಮ ನಾಶವಾಗಬೇಕೆಂದು ನಾನು ಹೇಳಿದರೆ ನಿಮ್ಮ ಮಂಡಲ ಹೀಗೆ ಮೆಟ್ಟಿಬಿದ್ದೀತೆಂದು ನಾನು ನಿರೀಕ್ಷಿಸಿರಲಿಲ್ಲ. ಶಬ್ದಗಳಿಗೆ ಹೆದರುವವರು ಮೂರ್ಖರು ಮಾತ್ರ ಎಂದು ನನ್ನ ಭಾವನೆಯಾಗಿತ್ತು. ಆದರೆ ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆಯಾಗಬಾರದೆಂದು ನಾನು ಧರ್ಮವೆಂದರೇನೆಂದೂ ಧರ್ಮನಾಶವೆಂದರೇನೆಂದೂ ಸ್ಪಷ್ಟಗೊಳಿಸಲು ತುಂಬಾ ಪ್ರಯತ್ನಪಟ್ಟಿದ್ದೇನೆ. ನನ್ನ ಉಪನ್ಯಾಸವನ್ನು ಓದಿದ ಬಳಿಕ ಯಾರಿಗೂ ನನ್ನ ಬಗೆಗೆ ತಪ್ಪು ಕಲ್ಪನೆ ಉಂಟಾಗಲಾರದು. ಸಂಪೂರ್ಣವಾದ ವಿವರಣೆಯೊಡನೆ ಬಂದಿದ್ದರೂ ‘ಧರ್ಮನಾಶ’ ಶಬ್ದಗಳನ್ನು ಕಂಡು ನಿಮ್ಮ ಮಂಡಲ ಗಾಬರಿಗೊಂಡಿತೆಂದರೆ ನಿಮ್ಮ ಮಂಡಲದ ಬಗೆಗೆ ನನಗೆ ಅಷ್ಟೊಂದು ಗೌರವ ಭಾವನೆ ಉಂಟಾಗಲಿಲ್ಲ. ಸುಧಾರಕನೆಂದು ಸ್ಥಾನ ಪಡೆದು ಆ ಸ್ಥಾನದಲ್ಲಿ ನಿಂತು ಮಾಡಬೇಕಾದ ಕರ್ತವ್ಯಗಳನ್ನು ನೆರವೇರಿಸುವುದು ಹಾಗಿರಲಿ, ಹಾಗೆ ಆ ಹೊಣೆಗಾರಿಕೆಯನ್ನು ಕಂಡುಕೊಳ್ಳುವುದಕ್ಕೂ ಹಿಂಜರಿಯುವ ಮನುಷ್ಯ ಎಂತಹ ಸುಧಾರಕ? ಅಂಥವನ ಬಗೆಗೆ ಗೌರವವಾಗಲಿ, ಆಸಕ್ತಿಯಾಗಲಿ ಹುಟ್ಟಲಾರದು.
ನನ್ನ ಉಪನ್ಯಾಸಕ್ಕೆ ಇತಿಮಿತಿಗಳಿರಬೇಕೆಂಬ ಕರಾರಿಗೆ ನಾನೆಂದೂ ಬದ್ದನಾಗಿದ್ದಿಲ್ಲ. ಉಪನ್ಯಾಸದಲ್ಲಿ ಏನೇನು ಇರಬೇಕು ಅಥವಾ ಇರಬಾರದು ಎಂಬುದನ್ನೂ ಮಂಡಲ ನನ್ನೊಡನೆ ಚರ್ಚಿಸಿಲ್ಲ. ಆಯ್ದುಕೊಂಡ ವಿಷಯದಲ್ಲಿ ನನ್ನ ಅಭಿಪ್ರಾಯಗಳನ್ನು ನನ್ನ ರೀತಿಯಲ್ಲಿ ಮಂಡಿಸಲು ನನಗೆ ಸಂಪೂರ್ಣ ಸ್ವಾತಂತ್ರ್ಯವುಂಟೆಂದೇ ನಾನು ನಂಬಿದ್ದೆ. ಏಪ್ರಿಲ್ ೯ರಂದು ನೀವು ಮುಂಬಯಿಗೆ ಬರುವವರೆಗೆ ನನ್ನ ಉಪನ್ಯಾಸವೆಂತಹುದೆಂಬುದು ಮಂಡಲಕ್ಕೆ ತಿಳಿದಿರಲಿಲ್ಲ. ಕೆಳಜಾತಿಯ ಜನರು ಧರ್ಮಾಂತರಗೊಳ್ಳಬೇಕೆಂಬ ನನ್ನ ಅಭಿಪ್ರಾಯಗಳನ್ನು ಪ್ರಚಾರ ಮಾಡುವುದಕ್ಕೆ ನಿಮ್ಮ ವೇದಿಕೆಯನ್ನು ಬಳಸಿಕೊಳ್ಳುವ ಬಯಕೆ ನನಗಿಲ್ಲವೆಂದು ನಿಮಗೆ ಮುಖತಃ ನೀವು ಮುಂಬಯಿಗೆ ಬಂದಾಗ ನಾನೇ ಹೇಳಿದ್ದೆ. ನನ್ನ ಉಪನ್ಯಾಸದಲ್ಲಿ ಆ ವಚನವನ್ನು ಪ್ರಯತ್ನಪೂರ್ವಕವಾಗಿ ನಾನು ಪಾಲಿಸಿದ್ದೇನೆ. “ನಾನು ಇಲ್ಲಿ ಇರುವುದಿಲ್ಲವೆಂದು ವ್ಯಸನಪಡುತ್ತೇನೆ….” ಎಂಬಂತಹ ನೇರವಲ್ಲದ ಸೂಚನಾತ್ಮಕ ಮಾತುಗಳಲ್ಲದೆ ಆ ವಿಷಯವಾಗಿ ಉಪನ್ಯಾಸದಲ್ಲಿ ನಾನು ಏನನ್ನೂ ಹೇಳಿಲ್ಲ. ನನ್ನ ಇಂತಹ ಒಂದು ಅನುಷಂಗಿಕವಾದ ವಾಕ್ಯಕ್ಕೂ ನೀವು ಆಕ್ಷೇಪಿಸುವುದನ್ನು ನೋಡಿದರೆ ನಾನು ನಿಮಗೆ ಈ ರೀತಿ ಪ್ರಶ್ನೆ ಕೇಳಲೇಬೇಕಾಗುತ್ತದೆ. ನಿಮ್ಮ ಸಮ್ಮೇಳನಕ್ಕೆ ಅಧ್ಯಕ್ಷನಾಗಲು ಒಪ್ಪಿಕೊಂಡಾಕ್ಷಣ, ‘ಹೀನಜಾತಿಯವರು ಧರ್ಮಾಂತರ ಮಾಡಬೇಕೆಂಬ’ ನನ್ನ ಅಭಿಪ್ರಾಯಗಳನ್ನು ತಡೆಹಿಡಿಯಲು ಅಥವಾ ಬಿಟ್ಟುಕೊಡಲು ನಾನು ಒಪ್ಪಿಕೊಂಡೆನೆಂದು ತಿಳಿದಿರಾ? ಹಾಗೆ ನೀವು ತಿಳಿದುಕೊಂಡಿದ್ದರೆ ನಿಮ್ಮ ತಪ್ಪಿಗೆ ನಾನು ಯಾವ ರೀತಿಯಿಂದಲೂ ಹೊಣೆಗಾರನಲ್ಲ. ನನಗೆ ಅಧ್ಯಕ್ಷ ಪದವಿಯ ಗೌರವವನ್ನು ಕೊಟ್ಟಿದ್ದಕ್ಕೆ ಪ್ರತಿಯಾಗಿ ನಾನು ಮತಾಂತರದಲ್ಲಿನ ನನ್ನ ಶ್ರದ್ದೆಯನ್ನು ತೊರೆದುಬಿಡಬೇಕೆಂದು ನೀವು ಸ್ವಲ್ಪ ಸೂಚನೆ ಕೊಟ್ಟಿದ್ದರೂ ಸಾಕಾಗಿತ್ತು. ನೀವು ಕೊಡುವ ಗೌರವಕ್ಕಿಂತ ನನ್ನ ಶ್ರದ್ದೆ ನನಗೆ ಹೆಚ್ಚಿನದೆಂದು ನಾನು ನಿಮಗೆ ನಿಃಸಂದಿಗ್ಧವಾದ ಶಬ್ದಗಳಲ್ಲಿ ತಿಳಿಸಿಬಿಡುತ್ತಿದ್ದೆ.
೧೪ನೆಯ ದಿನಾಂಕದ ನಿಮ್ಮ ಕಾಗದದ ತರುವಾಯ ಬಂದ ಈ ನಿಮ್ಮ ಇನ್ನೊಂದು ಕಾಗದ ನನಗೆ (ಪುಟ 41)
ವಿಸ್ಮಯ ಉಂಟುಮಾಡಿದೆ. ಆ ಎರಡು ಪತ್ರಗಳನ್ನು ಯಾರೇ ಓದಿದರೂ ಅವರಿಗೆ ಇದೇ ಭಾವನೆಯುಂಟಾಗುವುದು. ಸ್ವಾಗತ ಸಮಿತಿ ಒಮ್ಮಿಂದೊಮ್ಮೆಲೆ ಹೀಗೆ ಯಾಕೆ ಎದುರುಬಿದ್ದಿತೋ ನನಗೆ ತಿಳಿಯದಾಗಿದೆ. ೧೪ನೆಯ ದಿನಾಂಕ ನೀವು ಪತ್ರ ಬರೆದಾಗ ಸಮಿತಿಯ ಮುಂದೆ ಇದ್ದ ನನ್ನ ಉಪನ್ಯಾಸದ ಹಸ್ತಪ್ರತಿಗೂ, ಸಮಿತಿಯು ವಿರುದ್ಧಾಭಿಪ್ರಾಯವನ್ನು ತಾಳುವುದಕ್ಕೆ ಕಾರಣವೆಂದು ಹೇಳಲಾದ ಮುದ್ರಿತ ಪ್ರತಿಗೂ ವಸ್ತುತಃ ಏನೇನೂ ವ್ಯತ್ಯಾಸವಿಲ್ಲ. ಮೊದಲ ಪ್ರತಿಯಲ್ಲಿ ಇಲ್ಲದ ಒಂದಾದರೂ ಹೊಸ ವಿಚಾರವನ್ನು ಅಂತಿಮ ಪ್ರತಿಯಲ್ಲಿ ನೀವು ಎತ್ತಿ ತೋರಲಾರಿರಿ. ಎರಡರಲ್ಲಿಯೂ ಅವೇ ವಿಚಾರಗಳಿವೆ. ಅಂತಿಮ ಪ್ರತಿಯಲ್ಲಿ ಆ ವಿಚಾರಗಳನ್ನು ಹೆಚ್ಚು ವಿವರವಾಗಿ ನಿರೂಪಿಸಲಾಗಿದೆ. ಇಷ್ಟೇ ವ್ಯತ್ಯಾಸ. ಭಾಷಣದಲ್ಲಿ ಆಕ್ಷೇಪಾರ್ಹವಾದುದು ಏನಾದರೂ ಇದ್ದಿದ್ದರೆ ೧೪ನೆಯ ದಿನಾಂಕದ ನಿಮ್ಮ ಪತ್ರದಲ್ಲಿಯೇ ನೀವು ಅದನ್ನು ಹೇಳಬಹುದಾಗಿತ್ತು. ನೀವು ಹೇಳಲಿಲ್ಲ. ಅದಕ್ಕೆ ಪ್ರತಿಯಾಗಿ ನೀವು ಒಂದು ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಿಬಿಡಿ ಎಂದು ತಿಳಿಸಿದಿರಿ. ನೀವು ಸೂಚಿಸಿದ ಶಾಬ್ದಿಕ ಬದಲಾವಣೆಗಳನ್ನು ಸ್ವೀಕರಿಸುವ ಇಲ್ಲವೆ ಬಿಡುವ ಸ್ವಾತಂತ್ರ್ಯವನ್ನೂ ನನಗೆ ವಹಿಸಿದಿರಿ. ಆ ಮೇರೆಗೆ ನಾನು ಒಂದು ಸಾವಿರ ಪ್ರತಿಗಳನ್ನು ಮುದ್ರಿಸಿ ತರಿಸಿದೆ. ಈಗ ಅವು ನನ್ನಲ್ಲೇ ಉಳಿದಿವೆ. ಅದಾದ ಎಂಟು ದಿನಗಳ ನಂತರ ನೀವು ಇನ್ನೊಂದು ಕಾಗದ ಬರೆದು, ನೀವು ನನ್ನ ಉಪನ್ಯಾಸವನ್ನು ಆಕ್ಷೇಪಿಸುವುದಾಗಿಯೂ ಅದನ್ನು ತಿದ್ದಿ ಕೊಡದಿದ್ದರೆ ಸಮ್ಮೇಳನವನ್ನು ರದ್ದುಗೊಳಿಸುವುದಾಗಿಯೂ ತಿಳಿಸಿರುತ್ತೀರಿ. ಉಪನ್ಯಾಸದಲ್ಲಿ ಯಾವ ಬದಲಾವಣೆ ಮಾಡುವುದೂ ಸಾಧ್ಯವಿಲ್ಲವೆಂದು ನಿಮಗೆ ತಿಳಿದಿರಬೇಕಾಗಿತ್ತು. “ಒಂದು ಅಲ್ಪವಿರಾಮದ ಚಿಹ್ನೆಯನ್ನು ಕೂಡ ಬದಲಾಯಿಸಲಾರೆ. ಈ ಭಾಷಣವನ್ನು ಪುನರ್‌ಪರಿಶೀಲಿಸಲು ಅವಕಾಶವೀಯಲಾರೆ. ನಾನು ಬರೆದುಕೊಟ್ಟಂತೆ ಅದನ್ನು ನೀವು ಸುಮ್ಮನೆ ಸ್ವೀಕರಿಸತಕ್ಕದ್ದು” ಎಂದು ಮುಂಬಯಿಯಲ್ಲಿ ನಿಮಗೆ ನಾನು ಹೇಳಿದ್ದೆ. ಈ ಉಪನ್ಯಾಸದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆಲ್ಲ ನಾನೇ ಪೂರ್ಣ ಹೊಣೆಗಾರನಾಗಿದ್ದೇನೆ. ಅವು ಸಮ್ಮೇಳನಕ್ಕೆ ಒಪ್ಪಿಗೆಯಾಗದೇ ಹೋದ ಪಕ್ಷದಲ್ಲಿ, ಸಮ್ಮೇಳನವು ಆ ಅಭಿಪ್ರಾಯಗಳನ್ನು ಖಂಡಿಸುವ ಗೊತ್ತುವಳಿಯೊಂದನ್ನು ಅಂಗೀಕರಿಸಿದರೂ ಸರಿ; ನನ್ನ ಆಕ್ಷೇಪವಿಲ್ಲ. ಈ ಮಾತನ್ನು ನಾನು ನಿಮಗೆ ತಿಳಿಸಿದ್ದೆ. ನನ್ನ ಅಭಿಪ್ರಾಯಗಳಿಂದ ನಿಮ್ಮ ಮಂಡಲಕ್ಕೆ ಯಾವುದೇ ತೊಂದರೆಯಾಗಬಾರದೆಂದೂ, ನಿಮ್ಮ ಸಮ್ಮೇಳನದ ಜೊತೆಗೆ ನನಗೆ ತೀರ ನಿಕಟವಾದ ಸಂಬಂಧ ಬೇಡವೆಂದೂ, ತುಂಬ ಕಾಳಜಿಪೂರ್ವಕವಾಗಿ ವಿಚಾರಿಸಿ ನಾನು ಹೀಗೂ ತಿಳಿಸಿದ್ದೆ, “ಈ ಉಪನ್ಯಾಸವನ್ನು ಸಮ್ಮೇಳನಾಧ್ಯಕ್ಷರ ಭಾಷಣವೆಂದು ಗ್ರಹಿಸದೆ, ಸಮ್ಮೇಳನದ ಉದ್ಘಾಟನಾ ಭಾಷಣವೆಂದೇ ಇಟ್ಟುಕೊಳ್ಳಿ, ಅಧ್ಯಕ್ಷರಾಗಲು ಮಂಡಲ ಇನ್ನು ಯಾರನ್ನಾದರೂ ಕರೆತರಲಿ”. ಹೀಗೆಲ್ಲ ಇರುವಾಗ ೧೪ನೆಯ ದಿನಾಂಕದಂದು ನಿರ್ಣಯ ಕೈಕೊಳ್ಳುವುದಕ್ಕೆ ನಿಮ್ಮ ಸಮಿತಿಗೆ ಇದ್ದಷ್ಟು ಅನುಕೂಲ ಇನ್ನಾರಿಗೂ ಇದ್ದಿರಲಾರದು. ನಿಮ್ಮ ಸಮಿತಿ ಹಾಗೆ ನಿರ್ಣಯ ಕೈಕೊಳ್ಳಲಿಲ್ಲ. ಅಷ್ಟರಲ್ಲಿ ಮುದ್ರಣಕ್ಕೆ ವೆಚ್ಚ ಮಾಡಬೇಕಾಯಿತು. ನಿಮ್ಮ ಸಮಿತಿ ಸ್ವಲ್ಪ ದೃಢವಾಗಿ ಇದ್ದಿದ್ದರೆ ಅದನ್ನು ಉಳಿಸಬಹುದಾಗಿತ್ತು.
ನನ್ನ ಉಪನ್ಯಾಸದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೂ ನಿಮ್ಮ ಸಮಿತಿಯ ನಿರ್ಣಯಕ್ಕೂ ಏನೂ ಸಂಬಂಧವಿಲ್ಲವೆಂದು ನನಗೆ ಖಾತ್ರಿಯಾಗಿದೆ. ಅಮೃತಸರದ ಸಿಕ್ಖ್ ಪ್ರಚಾರ ಸಮ್ಮೇಳನದಲ್ಲಿ ಭಾಗವಹಿಸಿದೆನೆಂಬುದೇ ನಿಮ್ಮ ಸಮಿತಿಯ ನಿರ್ಣಯಕ್ಕೆ ಬಹುಮಟ್ಟಿಗೆ ಕಾರಣವೆಂದು ತಿಳಿಯಲು ನನಗೆ ಆಧಾರಗಳಿವೆ. ಹಾಗಲ್ಲವಾದರೆ ೧೪ನೆಯ ದಿನಾಂಕ ಒಪ್ಪಿದ ಸಮಿತಿ ೨೪ರಂದು ಒಮ್ಮಿಂದೊಮ್ಮೆಲೇ ವಿರುದ್ಧಾಭಿಪ್ರಾಯಕ್ಕೆ ಬಂದದ್ದೇಕೆ? ಇದಕ್ಕೆ ತೃಪ್ತಿಕರವಾದ ಬೇರೆ ಯಾವ ವಿವರಣೆಯೂ ಸಾಧ್ಯವಿಲ್ಲ. ಈ ವಾದವನ್ನು ಇನ್ನು ನಾನು ಬೆಳಸಲಿಚ್ಛಿಸುವುದಿಲ್ಲ. ನನ್ನ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ಸಮ್ಮೇಳನ (ಪುಟ 42)
ರದ್ದಾಗಿದೆಯೆಂದು ಕೂಡಲೆ ಪ್ರಕಟಿಸಲು ನಿಮಗೆ ನಾನು ಬಿನ್ನವಿಸಲೇಬೇಕಾಗಿದೆ. ಇಡಿಯ ವ್ಯವಹಾರ ಹದಗೆಟ್ಟುಹೋಗಿದೆ. ಈಗ ನೀವು ನನ್ನ ಉಪನ್ಯಾಸವನ್ನು ಇದ್ದಕ್ಕಿದ್ದಂತೆಯೇ ಒಪ್ಪಿಕೊಂಡರೂ ಕೂಡ, ನಾನು ಅಧ್ಯಕ್ಷನಾಗಲು ಒಪ್ಪಲಾರೆನು. ಉಪನ್ಯಾಸ ರಚನೆಗೆ ನಾನು ಮಾಡಿದ ಪರಿಶ್ರಮವನ್ನು ತಾವು ಮೆಚ್ಚಿದ್ದಕ್ಕಾಗಿ ನನ್ನ ಅಭಿನಂದನೆಗಳು. ಆ ಶ್ರಮದಿಂದ ಇತರರಿಗೆ ಲಾಭವಾಗಲಿ ಬಿಡಲಿ, ನನಗಂತೂ ಲಾಭವಾಗಿದೆ. ಇಂತಹ ಶ್ರಮವನ್ನು ವಹಿಸುವಷ್ಟು ಶಕ್ತಿ ನನ್ನ ಆರೋಗ್ಯಕ್ಕೆ ಇಲ್ಲದ ಸಮಯದಲ್ಲಿ ಅದನ್ನು ನಿರ್ವಹಿಸುವ ಪ್ರಸಂಗ ಒದಗಿತಲ್ಲ ಎಂಬುದಷ್ಟೆ ನನ್ನ ವ್ಯಥೆ.
ನಿಮ್ಮ ನಂಬುಗೆಯ
ಬಿ. ಆರ್. ಅಂಬೇಡ್ಕರ್
ಮಂಡಲ ನನ್ನ ಅಧ್ಯಕ್ಷತೆಯನ್ನು ಏಕೆ ರದ್ದುಗೊಳಿಸಿತು ಎಂಬುದು ಈ ಪತ್ರ ವ್ಯವಹಾರದಿಂದ ಸ್ಪಷ್ಟವಾಗುತ್ತದೆ. ತಪ್ಪು ಯಾರದೆಂಬುದನ್ನು ಓದುಗರು ತಾವೇ ನಿರ್ಣಯಿಸುವರು. ಸಮ್ಮೇಳನಾಧ್ಯಕ್ಷನ ಅಭಿಪ್ರಾಯಗಳು ತಮಗೆ ಒಪ್ಪಿಗೆಯಾಗಲಿಲ್ಲವೆಂದು ಸ್ವಾಗತ ಸಮಿತಿಯವರು ಸಮ್ಮೇಳನವನ್ನೇ ರದ್ದುಗೊಳಿಸಿದ ಪ್ರಸಂಗ ಇದೇ ಮೊದಲನೆಯದೆಂದು ನಾನು ಭಾವಿಸುತ್ತೇನೆ. ಅದು ಹೌದೊ ಅಲ್ಲವೊ ಏನೇ ಇರಲಿ, ಸವರ್ಣ ಹಿಂದೂಗಳ ಸಮ್ಮೇಳನಕ್ಕೆ ಅಧ್ಯಕ್ಷನಾಗಲು ನನಗೆ ವಿನಂತಿ ಬಂದುದು ನನ್ನ ಜೀವಮಾನದಲ್ಲಿ ಇದೇ ಮೊದಲನೆಯ ಸಲ. ಅದು ಹೀಗೆ ವಿರಸದಲ್ಲಿ ಮುಕ್ತಾಯವಾದುದಕ್ಕಾಗಿ ನಾನು ವಿಷಾದಿಸುತ್ತೇನೆ. ಆದರೆ, ಒಂದು ಕಡೆ ಸುಧಾರಕರಾದ ಸವರ್ಣ ಹಿಂದೂಗಳಿದ್ದಾರೆ. ಅವರಿಗೆ ತಮ್ಮ ಕರ್ಮಠ ಹಿಂದೂ ಬಾಂಧವರ ಸಂಬಂಧವನ್ನು ಕಳೆದುಕೊಳ್ಳಲು ಮನಸ್ಸಿಲ್ಲ. ಇನ್ನೊಂದೆಡೆಗೆ ಸ್ವಾಭಿಮಾನದ ಅಸ್ಪೃಶ್ಯರಿದ್ದಾರೆ. ಸುಧಾರಣೆಯಾಗಲೇಬೇಕೆಂದು ಹಟ ಹಿಡಿಯುವುದಲ್ಲದೆ ಬೇರೆ ಮಾರ್ಗ ಅವರಿಗಿಲ್ಲ. ಈ ಎರಡು ಬಣಗಳ ನಡುವೆ ವಿರಸವಲ್ಲದೆ ಇನ್ನೇನನ್ನು ನಿರೀಕ್ಷಿಸಲಾದೀತು?
ಬಿ. ಆರ್. ಅಂಬೇಡ್ಕರ್
ರಾಜ್ಯಗೃಹ, ದಾದರ್, ಮುಂಬಯಿ
೧೫ ಮೇ, ೧೯೩೬
(ಪುಟ 43)
- ಡಾ.ಬಿ.ಆರ್.ಅಂಬೇಡ್ಕರ್
- ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, 2015, ಪುಟ ಸಂಖ್ಯೆ 28 – 43




